ಪರ್ಯಾಯ ವ್ಯವಸ್ಥೆ ಇಲ್ಲದೆ ನೂರಾರು ಗ್ರಾಮಗಳು ಸಂಕಷ್ಟದಲ್ಲಿ; ಬಸ್ ಎಕ್ಸ್‌ಚೇಂಜ್ ವ್ಯವಸ್ಥೆಗೆ ಒತ್ತಾಯ
ಹೊಸನಗರ ತಾಲೂಕಿನ ಹುಲಿಕಲ್ ಘಾಟ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಕುಸಿತದ ಹಿನ್ನೆಲೆ ಜಿಲ್ಲಾಡಳಿತ ಮಾರ್ಗವನ್ನು ಅನಿರ್ದಿಷ್ಟಾವಧಿಗೆ ಬಂದ್ ಮಾಡಿರುವುದರಿಂದ ಮಲೆನಾಡಿನ ನೂರಾರು ಗ್ರಾಮಗಳ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಈ ಬೆಳವಣಿಗೆಯಿಂದ ಶಿವಮೊಗ್ಗ, ಸಾಗರ, ತೀರ್ಥಹಳ್ಳಿ ಹಾಗೂ ಮಾಸ್ತಿಕಟ್ಟೆ ಭಾಗದ ಜನರು ದೈನಂದಿನ ಸಂಚಾರದಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಹುಲಿಕಲ್ ಘಾಟ್ ಮಾರ್ಗದಲ್ಲಿ ಕಳೆದ ಒಂದು ವರ್ಷದಿಂದಲೇ ಮಣ್ಣು ಕುಸಿತ ಸಮಸ್ಯೆ ಉಂಟಾಗುತ್ತಿದ್ದು, ಈಗಾಗಲೇ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಇತ್ತೀಚಿನ ಕುಸಿತದಿಂದ ರಸ್ತೆ ಸಂಪೂರ್ಣ ಹಾನಿಗೊಂಡಿದ್ದು, ಎಲ್ಲಾ ರೀತಿಯ ವಾಹನ ಸಂಚಾರಕ್ಕೂ ತಡೆ ವಿಧಿಸಲಾಗಿದೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ಮಾರ್ಗವನ್ನು ತೆರೆಯುವ ಸಾಧ್ಯತೆ ಇಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಾರ್ಗ ಬಂದ್‌ನಿಂದ ಶಿವಮೊಗ್ಗದಿಂದ ಮಾಸ್ತಿಕಟ್ಟೆ, ತೀರ್ಥಹಳ್ಳಿ ಮೂಲಕ ಕುಂದಾಪುರ ಹಾಗೂ ಉಡುಪಿ ಕಡೆಗೆ ಸಂಚರಿಸುತ್ತಿದ್ದ ಸರ್ಕಾರಿ ಮತ್ತು ಖಾಸಗಿ ಬಸ್ ಸೇವೆಗಳು ಸ್ಥಗಿತಗೊಂಡಿವೆ. ಇದರಿಂದ ಹಲವಾರು ಗ್ರಾಮಗಳಿಗೆ ನೇರ ಬಸ್ ಸಂಪರ್ಕ ಕಡಿತಗೊಂಡಿದ್ದು, ಪ್ರಯಾಣಿಕರು ಕೊಲ್ಲೂರು ಮಾರ್ಗವನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪರ್ಯಾಯ ಮಾರ್ಗವು ಹೆಚ್ಚಿನ ದೂರ ಮತ್ತು ಸಮಯವನ್ನು ತೆಗೆದುಕೊಳ್ಳುತ್ತಿರುವುದರಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದಲ್ಲದೆ, ಹೇರ್‌ಪಿನ್ ತಿರುವಿನ ಸಮೀಪ ಉಂಟಾದ ಭೂಕುಸಿತದಿಂದ ದೇವಸ್ಥಾನದ ಮುಂಭಾಗದಲ್ಲಿ ಬಸ್ ತಿರುಗಿಸಲು ಸ್ಥಳಾವಕಾಶ ಇಲ್ಲದಂತಾಗಿದೆ. ದೇವಸ್ಥಾನದ ಕೆಳಭಾಗಕ್ಕೆ ತೆರಳಲು ಮೆಟ್ಟಿಲುಗಳೇ ಏಕೈಕ ಮಾರ್ಗವಾಗಿದ್ದು, ವೃದ್ಧರು ಹಾಗೂ ಅನಾರೋಗ್ಯಪೀಡಿತರಿಗೆ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಸ್ಥಳೀಯರು ಮತ್ತು ತಜ್ಞರು ತಾತ್ಕಾಲಿಕ ಪರಿಹಾರವಾಗಿ ಬಸ್ ಎಕ್ಸ್‌ಚೇಂಜ್ ವ್ಯವಸ್ಥೆಯನ್ನು ಜಾರಿಗೆ ತರಲು ಆಗ್ರಹಿಸಿದ್ದಾರೆ. ಉಡುಪಿ/ಕುಂದಾಪುರ ಹಾಗೂ ಶಿವಮೊಗ್ಗ/ಮಾಸ್ತಿಕಟ್ಟೆ ಕಡೆಯಿಂದ ಪ್ರತ್ಯೇಕ ಬಸ್‌ಗಳನ್ನು ನಿಯೋಜಿಸಿ, ಹುಲಿಕಲ್ ಸಮೀಪ ಪ್ರಯಾಣಿಕರನ್ನು ಪರಸ್ಪರ ಬದಲಾಯಿಸುವ ವ್ಯವಸ್ಥೆ ರೂಪಿಸಿದರೆ ಜನರಿಗೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ಸಂಬಂಧ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಕಾಮಗಾರಿ ಪೂರ್ಣಗೊಳ್ಳುವವರೆಗೆ ಕನಿಷ್ಠ ದಿನಕ್ಕೆ ನಾಲ್ಕು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಯೋಜಿಸುವಂತೆ ಒತ್ತಾಯಿಸಿದ್ದಾರೆ. ತಕ್ಷಣ ಪರ್ಯಾಯ ಸಂಚಾರ ವ್ಯವಸ್ಥೆ ಕಲ್ಪಿಸದಿದ್ದರೆ ಮಲೆನಾಡಿನ ಜನಜೀವನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.
