Home ಅಪರಾಧ ಕೇರಳ: ಜಾತಿ ನಿಂದನೆಗೆ ಬೇಸತ್ತು ಡೆಂಟಲ್ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ; ಇಬ್ಬರು ಪ್ರೊಫೆಸರ್‌ಗಳ ಅಮಾನತು

ಕೇರಳ: ಜಾತಿ ನಿಂದನೆಗೆ ಬೇಸತ್ತು ಡೆಂಟಲ್ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ; ಇಬ್ಬರು ಪ್ರೊಫೆಸರ್‌ಗಳ ಅಮಾನತು

0

ತಿರುವನಂತಪುರಂ: ಕಾಲೇಜು ಪ್ರಾಧ್ಯಾಪಕರು ನಡೆಸುತ್ತಿದ್ದರೆನ್ನಲಾದ ಜಾತಿ ನಿಂದನೆ ಮತ್ತು ನಿರಂತರ ಮಾನಸಿಕ ಕಿರುಕುಳಕ್ಕೆ ಬೇಸತ್ತು ದಂತವೈದ್ಯಕೀಯ ವಿದ್ಯಾರ್ಥಿಯೊಬ್ಬ ಕಾಲೇಜು ಕಟ್ಟಡದ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ತಿರುವನಂತಪುರಂ ಜಿಲ್ಲೆಯ ಉಜಮಲಕ್ಕಲ್ ನಿವಾಸಿ ನಿತಿನ್ ರಾಜ್ (22) ಮೃತಪಟ್ಟ ವಿದ್ಯಾರ್ಥಿ.

ಕಣ್ಣೂರು ಡೆಂಟಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವ್ಯಾಸಂಗ ಮಾಡುತ್ತಿದ್ದ ನಿತಿನ್, ಏಪ್ರಿಲ್ 10ರಂದು ಮಧ್ಯಾಹ್ನ ಕಾಲೇಜು ಕಟ್ಟಡದ ಮೇಲಿನಿಂದ ಜಿಗಿದು ಗಂಭೀರವಾಗಿ ಗಾಯಗೊಂಡಿದ್ದನು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಆತ್ಮಹತ್ಯೆಗೂ ಮುನ್ನ ನಿತಿನ್ ತನ್ನ ಸ್ನೇಹಿತರಿಗೆ ಕಳುಹಿಸಿರುವ ಆಡಿಯೋ ಸಂದೇಶ ಮತ್ತು ಕುಟುಂಬಸ್ಥರ ಆರೋಪಗಳು ಪ್ರಕರಣಕ್ಕೆ ಗಂಭೀರ ತಿರುವು ನೀಡಿವೆ. ನಿತಿನ್ ಬಡ ಕುಟುಂಬಕ್ಕೆ ಸೇರಿದವನಾಗಿದ್ದ ಮತ್ತು ಕಪ್ಪು ಮೈಬಣ್ಣ ಹೊಂದಿದ್ದ ಎಂಬ ಕಾರಣಕ್ಕೆ ಪ್ರಾಧ್ಯಾಪಕರು ಆತನನ್ನು ಗುರಿಯಾಗಿಸಿಕೊಂಡು ಅವಮಾನಿಸುತ್ತಿದ್ದರು ಎಂದು ಕುಟುಂಬಸ್ಥರು ದೂರಿದ್ದಾರೆ.

“ಒಬ್ಬ ಪ್ರಾಧ್ಯಾಪಕ ತರಗತಿಯಲ್ಲಿ ಎಲ್ಲರ ಮುಂದೆ ನನ್ನ ತಮ್ಮನನ್ನು ‘ಸ್ಲಮ್ ಡಾಗ್’ ಎಂದು ಕರೆದಿದ್ದ. ಸ್ಟಾಫ್ ರೂಂಗೆ ಕರೆಸಿಕೊಂಡು ಆತನಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಹಾಗೂ ಪರೀಕ್ಷೆಯಲ್ಲಿ ಫೇಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು” ಎಂದು ಮೃತನ ಸಹೋದರಿ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಈ ಘಟನೆಯು ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ಎಚ್ಚೆತ್ತ ಕಾಲೇಜು ಆಡಳಿತ ಮಂಡಳಿಯು ದಂತ ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ.ಕೆ. ರಾಮ್ ಮತ್ತು ಸಹ ಪ್ರಾಧ್ಯಾಪಕಿ ಕೆ.ಟಿ. ಸಂಗೀತ ನಂಬಿಯಾರ್ ಅವರನ್ನು ಅಮಾನತುಗೊಳಿಸಿ ಆಂತರಿಕ ತನಿಖೆಗೆ ಆದೇಶಿಸಿದೆ. ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗವು ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದು, ಒಂದು ವಾರದೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಪೊಲೀಸ್ ಕಮಿಷನರ್‌ಗೆ ಸೂಚಿಸಿದೆ.

ಈ ನಡುವೆ, ನಿತಿನ್ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

You cannot copy content of this page

Exit mobile version