ಹೋರಾಟ ಮಾಡುವವರನ್ನು ಸುಮ್ಮನಿರಿಸುವುದು, ಬಾಯಿ ಮುಚ್ಚಿಸುವುದು ಹೇಗೆಂದು ಕಾರ್ಪೋರೇಟ್ ಜಗತ್ತಿಗೆ ಚೆನ್ನಾಗಿ ಗೊತ್ತಿದೆ. ಅದು ಹಿಂದೆಂದಿಗಿಂತ ಈಗ ಸುಲಭವಾಗುತ್ತಿದೆ. ಹಣ, ಮಾಧ್ಯಮ, ಅಧಿಕಾರ ಎಲ್ಲವೂ ಅವರ ಕೈಯಲ್ಲೇ ಇದೆ...ಕಾಡು ಹೆಜ್ಜೆಯ ಜಾಡು ಹಿಡಿದು ಅಂಕಣದಲ್ಲಿ ಪ್ರಸಾದ್ ರಕ್ಷಿದಿ.
ಇಷ್ಟೆಲ್ಲ ವಿದ್ಯಮಾನಗಳು ನಡೆಯುತ್ತಿರುವಾಗ ಆನೆಗಳು ದೊಡ್ಡ ಪ್ರಮಾಣದಲ್ಲಿ ಜನವಸತಿಗಳತ್ತ ನುಗ್ಗಿಬಂದ ಅಥವಾ ಧಾಳಿಮಾಡಿದ ಘಟನೆಗಳು ನಡೆದಿರಲಿಲ್ಲ. ಹಾರಂಗಿ ಮತ್ತು ಹೇಮಾವತಿ ಜಲಾಶಯಗಳಿಂದ ಆನೆದಾರಿ ವಿಭಾಗಿಸಲ್ಪಟ್ಟು ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನಲ್ಲಿ ಮತ್ತು ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ಉತ್ತರ ಭಾಗದಲ್ಲಿ ನೆಲೆನಿಂತ ಆನೆಗಳು ಅಲ್ಲಲ್ಲಿ ಉಪಟಳ ಪ್ರಾರಂಭಿಸಿದ್ದವು ಮಾತ್ರವಲ್ಲ ಸಂತತಿಯನ್ನೂ ಹೆಚ್ಚಿಸಿಕೊಂಡಿದ್ದವು.
ಉಳಿದ ಕಡೆಗಳಲ್ಲಿ ಮಂಗ, ಕಾಟಿ ಮತ್ತು ಕಾಡುಹಂದಿಗಳು ತೊಂದರೆ ಮಾಡುತ್ತಿದ್ದವು. ಇದು ಘಟ್ಟದ ಮೇಲೆ ಮಾತ್ರವಲ್ಲ ಕರಾವಳಿಯ ಮಲೆನಾಡಿನ ಭಾಗಗಳಲ್ಲಿಯೂ ವ್ಯಾಪಕವಾಗಿ ಇತ್ತು.
ಆನೆ ಧಾಳಿಯ ಬಗ್ಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾದದ್ದು ಬೆಂಗಳೂರಿನ ಹೊರವಲಯ, ಹಾಗೂ ಮೈಸೂರು ನಗರಕ್ಕೇ ಆನೆಗಳು ನುಗ್ಗಿ ಬಂದಾಗ. ಮೈಸೂರು ನಗರಕ್ಕೆ ನುಗ್ಗಿದ ಆನೆ ಒಬ್ಬನನ್ನು ಸಾಯಿಸಿದಾಗ ನಗರಗಳ ಜನ ಬೆಚ್ಚಿ ಬಿದ್ದಿದ್ದರು. ಮತ್ತು ಮಾಧ್ಯಮಗಳೂ ಅದಕ್ಕೆ ವ್ಯಾಪಕ ಪ್ರಚಾರವನ್ನೂ ಕೊಟ್ಟವು. ಅದರ ಆನಂತರ ಈ ದುರಂತಗಳಿಗೆ ಕಾರಣ ಹುಡುಕಿ ಪರಿಹಾರ ಕಂಡು ಕೊಳ್ಳುವುದಕ್ಕಿಂತ, ಜನರ ಆಕ್ರೋಶವನ್ನು ತಪ್ಪಿಸಿಕೊಳ್ಳಲು ಮನುಷ್ಯನ ಜೀವಕ್ಕೆ ಬೆಲೆ ಕಟ್ಟಿ ಸ್ಥಳದಲ್ಲಿ ಪರಿಹಾರದ ಚೆಕ್ ಕೊಟ್ಟು ಫೋಟೋಕ್ಕೆ ಫೋಸ್ ಕೊಡುವ ಪರಿಪಾಠ ಪ್ರಾರಂಭವಾಯಿತು. ಜೀವ ಹಾನಿ ಆದಂತೆಲ್ಲ ನಿಧಾನವಾಗಿ ಪರಿಹಾರದ ಮೊತ್ತವನ್ನು ಹೆಚ್ಚಿಸಲಾಯಿತೇ ಹೊರತು ಸಮಸ್ಯೆಯ ಮೂಲ ಕಾರಣಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಯಾವ ರಾಜಕೀಯ ಪಕ್ಷವೂ ಮಾಡಲಿಲ್ಲ .
ಇದಕ್ಕೆ ಕಾರಣಗಳಿವೆ.
ಇದರ ಹಿಂದೆ ಬಹಳ ದೊಡ್ಡ ರಾಜಕಾರಣವಿದೆ, ಎಲ್ಲಾ ಸಂಪತ್ತು ಇರುವುದು ಮನುಷ್ಯನ ಉಪಭೋಗಕ್ಕಾಗಿ ಎಂದು ಹೇಳುವ ಮನುಷ್ಯನ ಅಪಾರವಾದ ದುರಾಸೆಯಿದೆ. ಆಧುನಿಕತೆಯ ಹೆಸರಿನಲ್ಲಿ ಹುಟ್ಟು ಹಾಕಲಾಗಿರುವ “ಕನ್ಸೂಮರಿಸಂ” ಎಂದು ಕರೆಯಲಾಗುವ ಕೊಳ್ಳುಬಾಕ ಸಂಸ್ಕೃತಿಯಿದೆ. ಇದೆಲ್ಲದರ ಹಿಂದೆ ಇಂದು ಇಡೀ ಪ್ರಪಂಚವನ್ನೇ ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ ಕಾರ್ಪೋರೇಟ್ ಜಗತ್ತಿದೆ.
ಇದರ ವಿರುದ್ಧ ಹೆಚ್ಚಿನ ರಾಜಕೀಯ ಪಕ್ಷಗಳು ಹೋರಾಟ ಮಾಡಲಾರವು. ಹೋರಾಟ ಮಾಡುವವರನ್ನು ಸುಮ್ಮನಿರಿಸುವುದು, ಬಾಯಿ ಮುಚ್ಚಿಸುವುದು ಹೇಗೆಂದು ಈ ಶಕ್ತಿಗಳಿಗೆ ಹಿಂದೆಂದಿಗಿಂತ ಸುಲಭವಾಗುತ್ತಿದೆ. ಹಣ, ಮಾಧ್ಯಮ, ಅಧಿಕಾರ ಎಲ್ಲವೂ ಅವರ ಕೈಯಲ್ಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲ ಕಡೆಯೂ ಮೊದಲು ಸೂರೆಯಾಗುವುದು ಬಡ ಮತ್ತು ಈಗ ತಾನೇ ಒಂದಷ್ಟು ಚೇತರಿಸಿಕೊಂಡಿರುವ ದೇಶಗಳು. ಭಾರತವೂ ಇದೇ ಗುಂಪಿನಲ್ಲಿ ಇದೆ.
ಈ ಎಲ್ಲ ದೇಶಗಳಲ್ಲಿರುವ ನೀರು, ಅರಣ್ಯ, ಖನಿಜ ಎಲ್ಲವೂ ಈ ಕಾರ್ಪೋರೇಟ್ ಧನಿಗಳ ಅನುಕೂಲಕ್ಕಾಗಿ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಇದೆಲ್ಲದರ ಒಟ್ಟು ಮೊತ್ತದ ಫಲಶ್ರುತಿಯಾಗಿ ನಮ್ಮ ಸರ್ಕಾರಗಳ ನೀತಿ ನಿರೂಪಣೆಗಳು ಇರುತ್ತವೆ. ಕೆಲವು ಸಲ ಅವು ಮಂದಗಾಮಿಯಾಗಿರ ಬಹುದು ಅಷ್ಟೇ.. ಆದರೆ ಈಗಂತೂ ಪ್ರಪಂಚದ ಎಲ್ಲ ಕಡೆಗಳಲ್ಲಿಯೂ ತೀವ್ರಗಾಮಿ ಸರ್ಕಾರಗಳೇ ಮುನ್ನೆಲೆಗೆ ಬರುತ್ತಿವೆ. ಇದನ್ನು ವಿರೋಧಿಸಿದವರನ್ನು ದೇಶದ್ರೋಹಿ, ಜನವಿರೋಧಿ, ಅಭಿವೃದ್ಧಿ ವಿರೋಧಿ ಎಂದು ಹಣೆಪಟ್ಟಿ ಹಚ್ಚಿ ಅದುಮಲಾಗುತ್ತಿದೆ.
ಇಂತಹ ಒಂದು ವ್ಯವಸ್ಥೆಗೆ ಭ್ರಷ್ಟಾಚಾರವೂ ಒಂದು ಅನುಕೂಲದ ಅಸ್ತ್ರ. ಆದ್ದರಿಂದ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಲೇ ಅದನ್ನು ಸಾಂಸ್ಥೀಕರಣ ಗೊಳಿಸಲಾಗುತ್ತದೆ. ಭ್ರಷ್ಟಾಚಾರದ ಮೂಲಕವೇ ಒಂದು ಅತಿದೊಡ್ಡ “ಅಭಿವೃದ್ಧಿ ಯೋಜನೆ” ಯನ್ನು ಜಾರಿಗೊಳಿಸುವುದು. ಅದರಲ್ಲಿ ಮತ್ತೆ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ ಜನರಿಗೆ ನಾನಾ ರೀತಿಯ ಆಮಿಷಗಳನ್ನು ಒಡ್ಡಿ ಇಡೀ ಜನ ಸಮೂಹವನ್ನು ಭ್ರಷ್ಟಗೊಳಿಸುತ್ತಾ ಅವರು ಈ ಯೋಜನೆಗಳ ವಿರುದ್ಧ ನಿಲ್ಲದಂತೆ ಮಾಡುವುದು…ಇವೆಲ್ಲವೂ ಸೇರಿವೆ.
ಇದಕ್ಕೆ ಬಹಳ ಸ್ಪಷ್ಟವಾದ ಉದಾಹರಣೆಯೆಂದರೆ ಎತ್ತಿನ ಹೊಳೆ ನದೀ ತಿರುವು ಯೋಜನೆ. ಸರ್ಕಾರದ ಯಾವುದೇ ಅಭಿವೃದ್ಧಿ ಯೋಜನೆಗೆ ಮೊದಲನೆಯ ಹಂತವೇ ಭೂಸ್ವಾಧೀನ. ಇದರಲ್ಲಿ ಹಲವು ಬಗೆಯ ಭೂಮಿಗಳಿವೆ. ಸರ್ಕಾರದ ಸ್ವಾಧೀನದಲ್ಲೇ ಇರುವ ಅರಣ್ಯ ಮತ್ತು ಕಂದಾಯ ಭೂಮಿಗಳು, ಹಾಗೂ ವಿವಿಧ ಸರ್ಕಾರಿ ಸಾರ್ವಜನಿಕ ಸಂಸ್ಥೆಗಳಲ್ಲಿರುವ ಭೂಮಿ, ಕೃಷಿಕರಲ್ಲಿರುವ ಕಂದಾಯ ಭೂಮಿ.
ಇದಕ್ಕಾಗಿ ಒಂದು ಪ್ರಕ್ರಿಯೆಯನ್ನೇ ಹುಟ್ಟು ಹಾಕಲಾಗಿದೆ.
ಪ್ರಸಾದ್ ರಕ್ಷಿದಿ
ರಂಗಕರ್ಮಿ, ಪರಿಸರ ಲೇಖಕ,