ಬೆಂಗಳೂರು: ʼನನ್ನ ಗಂಡ ನನ್ನ ಮೇಲಿನ ಕಾಳಜಿಗಿಂತ ಹೆಚ್ಚ ಕಾಳಜಿಯನ್ನು ತಮ್ಮ ಮುದ್ದಿನ ಬೆಕ್ಕಿನ ಮೇಲೆ ತೋರಿಸುತ್ತಾರೆ,ʼ ಎಂದು ಆರೋಪಿಸಿ ಪತ್ನಿ ಗಂಡನ ವಿರುದ್ಧ ದಾಖಲಿಸಿರುವ ಕ್ರೌರ್ಯ ಪ್ರಕರಣದ ಮುಂದಿನ ಎಲ್ಲಾ ತನಿಖೆಗಳನ್ನು ಕರ್ನಾಟಕ ಹೈಕೋರ್ಟ್ ಡಿಸೆಂಬರ್ 12, ಗುರುವಾರ ತಡೆಹಿಡಿಯಿತು
ಐಪಿಸಿ ಸೆಕ್ಷನ್ 498 ಎ ಪ್ರಕಾರ ಇದು ಅಪರಾಧವಲ್ಲ ಎಂಬುದನ್ನು ಕಂಡುಕೊಂಡ ನ್ಯಾಯಾಲಯ, ಇಂತಹ ಕ್ಷುಲ್ಲಕ ಪ್ರಕರಣಗಳು ಈಗಾಗಲೇ ವಿಳಂಬವಾಗಿರುವ ನ್ಯಾಯ ವ್ಯವಸ್ಥೆಯನ್ನು ಮತ್ತಷ್ಟೂ ವಿಳಂಬ ಮಾಡುತ್ತದೆ ಎಂದು ಒತ್ತಿಹೇಳಿತು. ಅರ್ಜಿದಾರರು ಪತಿ, ಅತ್ತೆ ಮತ್ತು ಮಾವ ಆರೋಪಿಗಳಾಗಿದ್ದಾರೆ. ಪ್ರತಿವಾದಿ ನಂ. 2 ಮಹಿಳೆ ದೂರುದಾರರಾಗಿದ್ದು, ಅವರ ಪತಿ ಅರ್ಜಿದಾರ-ಆರೋಪಿ ನಂ. 1.
ದೂರು ಮತ್ತು ಇತರ ದಾಖಲೆಗಳನ್ನು ಗಮನಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ, ”ದೂರು ಮದುವೆ ಮತ್ತು ಒಟ್ಟಿಗೆ ವಾಸಿಸುವ ಬಗೆಗಿದೆ. ಆದರೆ ಈ ಆರೋಪದ ತಿರುಳು ಗಂಡನ ಮನೆಯಲ್ಲಿ ಸಾಕಿದ ಬೆಕ್ಕಿನ ಜಗಳದ ಮೇಲೆ ಆಧಾರವಾಗಿದೆ. ಪತಿ ಬೆಕ್ಕಿನ ಆರೈಕೆ ಮಾತ್ರ ಮಾಡುತ್ತಾರೆ ಎಂಬ ಆರೋಪ ಇಬ್ಬರ ನಡುವೆ ಇರುವ ಜಗಳವಾಗಿದೆ ಎಂದು ದೂರಿನ ಹೆಚ್ಚಿನ ಪ್ಯಾರಾಗಳಲ್ಲಿ ವಿವರಿಸಲಾಗಿದೆ, ಆದ್ದರಿಂದ ಸಮಸ್ಯೆಯು ವರದಕ್ಷಿಣೆ ಬೇಡಿಕೆಯ ಮೇಲೆ ಅಥವಾ ವರದಕ್ಷಿಣೆಯ ಬೇಡಿಕೆಗೆ ಸಂಬಂಧಿಸಿದ್ದು ಅಥವಾ ಪತಿ ನಡೆಸುವ ಕ್ರೌರ್ಯಕ್ಕೆ ಸಂಬಂಧಿಸಿದ್ದು ಅಲ್ಲ. ಸಮಸ್ಯೆ ಏನೆಂದರೆ, ಈ ಸಾಕು ಬೆಕ್ಕು ಮತ್ತು ಆ ಬೆಕ್ಕು ಪತ್ನಿಯ ಮೇಲೆ ಅನೇಕ ಬಾರಿ ನಡೆಸಿದ ದಾಳಿ ಅಥವಾ ಪರಚುವುದು ಆಗಿದೆ,” ಎಂದು ಹೇಳಿದ್ದಾರೆ
“ನ್ಯಾಯಾಲಯದ ಪರಿಗಣಿತ ದೃಷ್ಟಿಯಲ್ಲಿ ಈ ಬಗ್ಗೆ IPC ಯ ಸೆಕ್ಷನ್ 498A ಅಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕಾಗಿ ವಿಚಾರಣೆಯನ್ನು ಆರಂಭಿಸುವುದು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗಿದೆ. ಅಪರಾಧವು 498A IPC ಯ ಅಡಿಯಲ್ಲಿ ಶಿಕ್ಷಾರ್ಹವಾಗಲು ಅಗತ್ಯವಾದ ಯಾವುದೇ ಅಂಶಗಳು ಕೈಯಲ್ಲಿರುವ ಪ್ರಕರಣಗಳಲ್ಲಿ ಇರುವುದಿಲ್ಲ. ಇಂತಹ ಕ್ಷುಲ್ಲಕ ಪ್ರಕರಣಗಳು ಇಂದು ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಬ್ಲಾಕ್ ಮಾಡಿವೆ ಮತ್ತು ಪ್ರಸ್ತುತ ಪ್ರಕರಣದಲ್ಲಿ ತನಿಖೆಗೆ ಅನುಮತಿ ನೀಡಿದರೆ ಅದು ಈಗಾಗಲೇ ಮುಚ್ಚಿಹೋಗಿರುವ ನ್ಯಾಯ ವ್ಯವಸ್ಥೆಗೆ ಮತ್ತೊಂದು ಪ್ರಕರಣವನ್ನು ಸೇರಿಸಿದಂತೆ,” ಎಂದು ಜಸ್ಟಿಸ್ ನಾಗಪ್ರಸನ್ನ ಹೇಳಿದ್ದಾರೆ.
ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಾಲಯ, ” ಆದ್ದರಿಂದ ಮುಂದಿನ ವಿಚಾರಣೆಯ ದಿನಾಂಕದವರೆಗೆ ಅರ್ಜಿದಾರರ ಎಲ್ಲಾ ತನಿಖೆಗಳಿಗೆ ಮಧ್ಯಂತರ ತಡೆ ಇರುತ್ತದೆ ” ಎಂದು ನಿರ್ದೇಶನ ನೀಡಿತು.