Home ಕೋಮುವಾದ ಬಾಂಗ್ಲಾದೇಶ ಹಿಂಸಾಚಾರಕ್ಕೆ ಧ್ವನಿ, ಭಾರತದಲ್ಲಿನ ಜಾತಿ ಹತ್ಯೆಗಳಿಗೆ ಮೌನ? ; ಬಾಲಿವುಡ್ ಸೆಲೆಬ್ರಿಟಿಗಳ ಬೂಟಾಟಿಕೆ ಮತ್ತೆ...

ಬಾಂಗ್ಲಾದೇಶ ಹಿಂಸಾಚಾರಕ್ಕೆ ಧ್ವನಿ, ಭಾರತದಲ್ಲಿನ ಜಾತಿ ಹತ್ಯೆಗಳಿಗೆ ಮೌನ? ; ಬಾಲಿವುಡ್ ಸೆಲೆಬ್ರಿಟಿಗಳ ಬೂಟಾಟಿಕೆ ಮತ್ತೆ ಚರ್ಚೆಗೆ

0

ಬಾಂಗ್ಲಾದೇಶದಲ್ಲಿ ಹಿಂದೂ ಕಾರ್ಮಿಕ ದೀಪು ಚಂದ್ರ ದಾಸ್ ಅವರ ಗುಂಪು ಹತ್ಯೆಯನ್ನು ಖಂಡಿಸಿ ಭಾರತೀಯ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ನಡುವೆಯೇ, ಭಾರತದೊಳಗೆ ನಡೆಯುತ್ತಿರುವ ಜಾತಿ ಆಧಾರಿತ ಮರ್ಯಾದಾ ಹತ್ಯೆಗಳು ಮತ್ತು ದೌರ್ಜನ್ಯಗಳ ಬಗ್ಗೆ ಅವರ ಮೌನ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂ ದೀಪು ಚಂದ್ರ ದಾಸ್ ಹತ್ಯೆಯನ್ನು ಅಮಾನವೀಯ ಕೃತ್ಯ ಎಂದು ಖಂಡಿಸಿದ ಬಾಲಿವುಡ್ ಹಾಗೂ ದಕ್ಷಿಣ ಭಾರತದ ಹಲವು ನಟ-ನಟಿಯರು, ಅಲ್ಪಸಂಖ್ಯಾತರ ರಕ್ಷಣೆಯ ವಿಚಾರವನ್ನು ಎತ್ತಿಹಿಡಿದಿದ್ದರು. ಆದರೆ ಇದೇ ವೇಳೆ, ಭಾರತದೊಳಗೆ ದಲಿತರು ಮತ್ತು ಕೆಳಜಾತಿಯವರ ಮೇಲೆ ನಡೆಯುತ್ತಿರುವ ಹೀನಾಯ ಹಿಂಸಾಚಾರಗಳು, ಮರ್ಯಾದೆ ಹತ್ಯೆಗಳು ರಾಷ್ಟ್ರಮಟ್ಟದಲ್ಲಿ ಸೆಲೆಬ್ರಿಟಿಗಳ ಗಮನ ಸೆಳೆಯದಿರುವುದು ಬಾಲಿವುಡ್ ಸೆಲೆಬ್ರಿಟಿಗಳ ಬೂಟಾಟಿಕೆಯ ಕಣ್ಣೊರೆಸುವಿಕೆಯ ಬೆತ್ತಲು ಮಾಡಿದೆ.

ಹುಬ್ಬಳ್ಳಿಯ ಮರ್ಯಾದಾ ಹತ್ಯೆ ಪ್ರಕರಣ
ಇದಕ್ಕೆ ಸ್ಪಷ್ಟ ಉದಾಹರಣೆಯಾಗಿ ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆದ ಮಾನ್ಯ ಎಂಬ ಯುವತಿಯ ಮರ್ಯಾದಾ ಹತ್ಯೆ ಪ್ರಕರಣವನ್ನು ಉಲ್ಲೇಖಿಸಲಾಗುತ್ತಿದೆ. ಅಂತರಜಾತಿ ವಿವಾಹ ಮಾಡಿಕೊಂಡಿದ್ದ ಕಾರಣಕ್ಕೆ ಮಾನ್ಯಳನ್ನು ಆಕೆಯ ಕುಟುಂಬಸ್ಥರೇ ಹತ್ಯೆಗೈದಿದ್ದು ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಪ್ರಕರಣದಲ್ಲಿ ಆಕೆಯ ಪತಿ ವಿವೇಕಾನಂದ ಮತ್ತು ಅವರ ಕುಟುಂಬದ ಮೇಲೂ ಹಲ್ಲೆ, ಬೆದರಿಕೆ ಹಾಗೂ ಸಾಮಾಜಿಕ ಬಹಿಷ್ಕಾರ ನಡೆದಿರುವ ಆರೋಪಗಳು ಕೇಳಿಬಂದಿವೆ.

ಸ್ಥಳೀಯ ಪೊಲೀಸ್ ಮೂಲಗಳ ಪ್ರಕಾರ, ಈ ಹತ್ಯೆಯ ಹಿಂದಿನ ಪ್ರಮುಖ ಕಾರಣ ಜಾತಿ ಅಸಹಿಷ್ಣುತೆ ಎಂಬುದು ತನಿಖೆಯಿಂದ ಹೊರಬಂದಿದೆ. ಆದರೆ ಈ ಅಮಾನವೀಯ ಘಟನೆಯು ದೇಶವ್ಯಾಪಿ ಸೆಲೆಬ್ರಿಟಿಗಳ ಪ್ರತಿಕ್ರಿಯೆ ನೀಡದೇ ಉಳಿದಿರುವುದು ಗಮನಾರ್ಹ.

ಜಾತಿ ಹಿಂಸಾಚಾರ – ನಿರಂತರ ಸತ್ಯ
ಮಾನ್ಯ ಪ್ರಕರಣ ಒಂದೇ ಅಲ್ಲ. ದೇಶದ ಹಲವು ರಾಜ್ಯಗಳಲ್ಲಿ ಅಂತರಜಾತಿ ವಿವಾಹ, ಪ್ರೀತಿ ಅಥವಾ ಸ್ವತಂತ್ರ ಆಯ್ಕೆ ಮಾಡಿಕೊಂಡ ಯುವಕರು ಮರ್ಯಾದೆ ಹತ್ಯೆ, ದೇವಾಲಯ ಪ್ರವೇಶ ನಿಷೇಧ, ಹಲ್ಲೆ, ಸಾಮಾಜಿಕ ದೌರ್ಜನ್ಯ, ಜಾತಿಯ ಕಾರಣಕ್ಕೆ ನಡೆಯುವ ಬಹಿಷ್ಕಾರದಂತಹ ಅಮಾನವೀಯಕ್ಕೆ ಒಳಗಾಗುತ್ತಿರುವ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗಿಯೇ ವರದಿಯಾಗುತ್ತಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಪ್ರಕಾರವೂ, ದಲಿತರ ಮೇಲಿನ ಅಪರಾಧಗಳು ಗಣನೀಯವಾಗಿ ಹೆಚ್ಚುತ್ತಿರುವುದು ಆತಂಕಕಾರಿ ಅಂಶವಾಗಿದೆ.

ಸೆಲೆಬ್ರಿಟಿಗಳ ನಿಲುವು ಪ್ರಶ್ನೆಗೆ
ಬಾಲಿವುಡ್ ನಟಿ ಜಾಹ್ನವಿ ಕಪೂರ್ ‘ಇದೊಂದು ಅನಾಗರಿಕ ಮತ್ತು ಅಮಾನವೀಯ ಘಟನೆಯಾಗಿದೆ.ಇನ್ನೂ ಸಹ ನಿಮಗೆ ಈ ಅಮಾನವೀಯ ಗುಂಪು ಹತ್ಯೆಯ ಬಗ್ಗೆ ತಿಳಿದಿಲ್ಲದಿದ್ದರೆ, ಅದರ ಬಗ್ಗೆ ಸುದ್ದಿಗಳನ್ನ , ವೀಡಿಯೋವನ್ನು ನೋಡಿ, ಅದರ ಬಗ್ಗೆ ಪ್ರಶ್ನೆಗಳನ್ನ ಕೇಳಿ.ಇದೆಲ್ಲದರ ಹೊರತಾಗಿಯೂ ನಿಮಗೆ ಇಂತಹ ಘಟನೆಯ ಬಗ್ಗೆ ಸ್ವಲ್ಪವೂ ಕೋಪ ಬರದಿದ್ದರೆ, ಇದನ್ನ ನಿಜವಾಗಿಯೂ ಬೂಟಾಟಿಕೆ ಅಂತಾನೆ ಹೇಳಬಹುದು.ನಮ್ಮ ಸ್ವಂತ ಸಹೋದರ ಸಹೋದರಿಯರನ್ನ ಬೇರೆ ದೇಶಗಳಲ್ಲಿ ಹತ್ಯೆ ಮಾಡಲಾಗುತ್ತಿದೆ ಮತ್ತು ನಾವು ಏನು ಸಹ ಆಗಿಲ್ಲ ಎಂಬಂತೆ ಇರುತ್ತೇವೆ,’ ಅಂತ ನಟಿ ತಮ್ಮ ಪ್ರತಿಕ್ರಿಯೆಯಲ್ಲಿ ಕಟುವಾಗಿ ಟೀಕಿಸಿದ್ದಾರೆ.

ಮತ್ತೋರ್ವ ನಟಿ ಕಾಜಲ್ ಅಗರ್ವಾಲ್ ಸಹ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿ ತಮ್ಮ ಇನ್‌ಸ್ಟಾಗ್ರಾಮ್ ಕಥೆಯಲ್ಲಿ ‘ಎಲ್ಲರ ಕಣ್ಣುಗಳು ಈಗ ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಮೇಲೆ’ ಎಂಬ ಅರ್ಥ ಕೊಡುವ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.

ನಟಿ ಮತ್ತು ಮಾಜಿ ಸಂಸದೆ ಜಯಪ್ರದಾ ‘ಈ ಕ್ರೂರ ಘಟನೆ ನನ್ನ ಮನಸ್ಸಿಗೆ ತುಂಬಾನೇ ನೋವುಂಟು ಮಾಡಿದೆ’ ಅಂತ ಪೋಸ್ಟ್ ಮಾಡಿದ್ದಾರೆ.’ಇದು ಸಾಮಾನ್ಯವಾದ ಹಿಂಸೆಯಲ್ಲ, ಇದು ಗುಂಪು ಹತ್ಯೆ, ಇದು ಹಿಂದೂ ಧರ್ಮದ ಮೇಲಿನ ದಾಳಿ, ನಮ್ಮ ದೇವಾಲಯಗಳನ್ನು ಕೆಡವಲಾಗುತ್ತಿದೆ, ಮಹಿಳೆಯರ ಮೇಲೆ ದಾಳಿ ನಡೆಯುತ್ತಿದೆ, ನಾವು ಎಷ್ಟು ದಿನ ಮೌನವಾಗಿರಬೇಕು? ನಾವು ಜಾತ್ಯತೀತತೆಯ ಹೆಸರಿನಲ್ಲಿ ಮೌನವಾಗಿದ್ದೇವೆ, ನಾವು ನಮ್ಮ ಧ್ವನಿ ಎತ್ತಬೇಕು, ಅಲ್ಲಿನ ಜನರಿಗೆ ಸಹಾಯ ಮಾಡಬೇಕು… ನಾವೆಲ್ಲರೂ ಒಟ್ಟಾಗಿ ಅವರಿಗೆ ನ್ಯಾಯವನ್ನು ಪಡೆಯಲು ಪ್ರಯತ್ನಿಸಬೇಕು,’ ಅಂತ ಕಾಮೆಂಟ್ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಭಾವ ಹೊಂದಿರುವ ಚಿತ್ರರಂಗದ ತಾರೆಯರು ಅಂತರರಾಷ್ಟ್ರೀಯ ಘಟನೆಗಳಿಗೆ ತಕ್ಷಣ ಪ್ರತಿಕ್ರಿಯಿಸುವುದಾದರೂ, ದೇಶದೊಳಗಿನ ಜಾತಿ ಆಧಾರಿತ ಹಿಂಸಾಚಾರಗಳ ವಿಷಯದಲ್ಲಿ ಮೌನ ವಹಿಸುವುದು ಇಬ್ಬಗೆಯ ನೀತಿಯಂತೆ ಕಾಣುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಮಾತ್ರವಲ್ಲದೆ ಭಾರತದ ಮಾಧ್ಯಮಗಳು ಅಂತರರಾಷ್ಟ್ರೀಯ ವಿಚಾರಗಳ ಬಗ್ಗೆ ಸೆಲೆಬ್ರಿಟಿಗಳ ಅಭಿಪ್ರಾಯ ದಾಖಲಿಸುವುದರ ಜೊತೆಗೆ ಭಾರತದೊಳಗಿನ ಜಾತಿ ದೌರ್ಜನ್ಯ, ಅಸಹಿಷ್ಣುತೆ ಬಗ್ಗೆಯೂ ಕನ್ನಡಿ ಹಿಡಿಯಬೇಕು ಎಂದು ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗಿದೆ.

“ಮಾನವ ಹಕ್ಕುಗಳ ಹೋರಾಟ ಗಡಿಗಳಲ್ಲಿ ನಿಲ್ಲಬಾರದು. ಅಷ್ಟೇ ತೀವ್ರವಾಗಿ ದೇಶದೊಳಗಿನ ದೌರ್ಜನ್ಯಗಳನ್ನೂ ಖಂಡಿಸಬೇಕು” ಎಂದು ದಲಿತ ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಸಾಮಾಜಿಕ ಜವಾಬ್ದಾರಿ ಅಗತ್ಯ
ವಿಶ್ಲೇಷಕರ ಅಭಿಪ್ರಾಯದಂತೆ, ಸೆಲೆಬ್ರಿಟಿಗಳ ಧ್ವನಿ ಕೇವಲ ರಾಜಕೀಯ ಅಥವಾ ಅಂತರರಾಷ್ಟ್ರೀಯ ವಿಚಾರಗಳಿಗೆ ಮಾತ್ರ ಸೀಮಿತವಾಗದೆ, ಭಾರತದೊಳಗಿನ ಜಾತಿ ವ್ಯವಸ್ಥೆ, ಅಸಮಾನತೆ ಮತ್ತು ಹಿಂಸಾಚಾರಗಳ ವಿರುದ್ಧವೂ ಸಮಾನವಾಗಿ ಎದ್ದೇಳಬೇಕು. ಇಲ್ಲವಾದಲ್ಲಿ ಮಾನವೀಯತೆ ಮತ್ತು ನ್ಯಾಯದ ಬಗ್ಗೆ ಅವರ ನಿಲುವು ಪ್ರಶ್ನೆಗೆ ಒಳಗಾಗುವುದು ಅನಿವಾರ್ಯ.

ಬಾಂಗ್ಲಾದೇಶದ ಗುಂಪು ಹತ್ಯೆ ಖಂಡನೆ ಅಗತ್ಯವೇ ಸರಿ. ಆದರೆ ಅದೇ ಸಮಯದಲ್ಲಿ, ಭಾರತದ ನೆಲದಲ್ಲಿ ನಡೆಯುತ್ತಿರುವ ಮರ್ಯಾದೆ ಹತ್ಯೆಗಳು ಮತ್ತು ಜಾತಿ ದೌರ್ಜನ್ಯಗಳ ವಿರುದ್ಧ ಮೌನ ಮುರಿಯುವ ಅಗತ್ಯವೂ ಅಷ್ಟೇ ತೀವ್ರವಾಗಿದೆ ಎಂಬುದು ಈಗ ಸಾರ್ವಜನಿಕ ಚರ್ಚೆಯ ಕೇಂದ್ರಬಿಂದು ಆಗಿದೆ.

You cannot copy content of this page

Exit mobile version