ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸ್ವದೇಶಿ (ಸ್ಥಳೀಯ) ಉತ್ಪನ್ನಗಳನ್ನು ಉತ್ತೇಜಿಸುವ ತಮ್ಮ ಕರೆಯನ್ನು ಮತ್ತೆ ಮಂಡಿಸಿದರು. ನಾಗರಿಕರು ಸ್ವಾವಲಂಬನೆಯತ್ತ ಸಾಗುವಂತೆ ಮತ್ತು ವಿದೇಶಿ ನಿರ್ಮಿತ ವಸ್ತುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವಂತೆ ಒತ್ತಾಯಿಸಿದರು.
ದೂರದರ್ಶನದ ಸಂದೇಶದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಹೆಮ್ಮೆಯಿಂದ ಹೇಳಿ, ನಾನೂ ಸ್ವದೇಶಿ ಖರೀದಿಸುತ್ತೇನೆ” ಎಂದು ಹೇಳಿದರು.
ತಮ್ಮ ಭಾಷಣದ ಸಮಯದಲ್ಲಿ, ಬಾಚಣಿಗೆಯಂತಹ ದಿನನಿತ್ಯದ ವಸ್ತುಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆಯೇ ಅಥವಾ ವಿದೇಶದಲ್ಲಿ ತಯಾರಿಸಲಾಗುತ್ತದೆಯೇ ಎಂದು ಜನರಿಗೆ ಸಾಮಾನ್ಯವಾಗಿ ತಿಳಿದಿರುವುದಿಲ್ಲ ಎಂದು ಅವರು ಗಮನಸೆಳೆದರು. ಯುನೈಟೆಡ್ ಸ್ಟೇಟ್ಸ್ ಮತ್ತು H-1B ವೀಸಾ ಶುಲ್ಕ ಹೆಚ್ಚಳದೊಂದಿಗೆ ನಡೆಯುತ್ತಿರುವ ಸುಂಕದ ಉದ್ವಿಗ್ನತೆಯ ನಡುವೆ ಅವರ ಈ ಹೇಳಿಕೆ ಮಹತ್ವ ಪಡೆದಿವೆ.
ಕಳೆದ ತಿಂಗಳು, ಅಮೆರಿಕವು ಭಾರತೀಯ ಉತ್ಪನ್ನಗಳ ಮೇಲೆ 50% ಸುಂಕವನ್ನು ವಿಧಿಸಿತು, ನಂತರ ಇತ್ತೀಚೆಗೆ ಟ್ರಂಪ್ ಹೊಸ H-1B ವೀಸಾ ಅರ್ಜಿಗಳ ಮೇಲೆ ಭಾರಿ USD 100,000 (ರೂ. 88 ಲಕ್ಷಕ್ಕೂ ಹೆಚ್ಚು) ಶುಲ್ಕವನ್ನು ವಿಧಿಸುವ ನಿರ್ಧಾರವನ್ನು ತೆಗೆದುಕೊಂಡರು.
ಅಮೆರಿಕದೊಂದಿಗೆ ಹೆಚ್ಚುತ್ತಿರುವ ವ್ಯಾಪಾರ ಮತ್ತು ಸುಂಕದ ಉದ್ವಿಗ್ನತೆಯ ಮಧ್ಯೆ ಪ್ರಧಾನಿ ಮೋದಿ ಅವರ ಹೇಳಿಕೆಗಳು ಬಂದಿವೆ, ಆದರೆ ಅವರು ಎಲ್ಲೂ ಸಹ ಅಮೇರಿಕಾ ಸುಂಕ ಹೆಚ್ಚಳದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಿಲ್ಲ.
ನಾವು ಭಾರತದಲ್ಲಿ ತಯಾರಾದ ಉತ್ಪನ್ನಗಳನ್ನು, ನಮ್ಮ ದೇಶದ ಯುವಕರ ಕಠಿಣ ಪರಿಶ್ರಮದಿಂದ ತಯಾರಿಸಿದ ಉತ್ಪನ್ನಗಳನ್ನು, ನಮ್ಮ ಪುತ್ರರು ಮತ್ತು ಪುತ್ರಿಯರ ಬೆವರು ಹರಿಸುವ ಉತ್ಪನ್ನಗಳನ್ನು ಖರೀದಿಸಬೇಕು” ಎಂದು ಪ್ರಧಾನಿ ಮೋದಿ ಹೇಳಿದರು.
ತಮ್ಮ ಭಾಷಣದ ಸಮಯದಲ್ಲಿ, ಪ್ರಧಾನಿ ಮೋದಿ ಭಾರತದ ಸ್ವಾತಂತ್ರ್ಯ ಚಳವಳಿಯ ಪರಂಪರೆಯನ್ನು ಉಲ್ಲೇಖಿಸಿ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸ್ವದೇಶಿ ವಹಿಸಿದ ಪ್ರಮುಖ ಪಾತ್ರವನ್ನು ನಾಗರಿಕರಿಗೆ ನೆನಪಿಸಿದರು. “ಸ್ವದೇಶಿಯ ಮಂತ್ರವು ನಮ್ಮ ಸ್ವಾತಂತ್ರ್ಯ ಚಳವಳಿಗೆ ಬಲವನ್ನು ನೀಡಿತು; ಇಂದು, ಅದು ನಮ್ಮ ಸಮೃದ್ಧಿಯ ಅನ್ವೇಷಣೆಗೆ ಶಕ್ತಿ ತುಂಬುತ್ತದೆ” ಎಂದು ಅವರು ಹೇಳಿದರು.
“ಎಲ್ಲಾ ರಾಜ್ಯ ಸರ್ಕಾರಗಳು ‘ಆತ್ಮನಿರ್ಭರ ಭಾರತ’ ಮತ್ತು ಸ್ವದೇಶಿ ಅಭಿಯಾನಕ್ಕೆ ಕೈಜೋಡಿಸುವಂತೆ ಮತ್ತು ತಮ್ಮ ರಾಜ್ಯಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಹೂಡಿಕೆಗೆ ವಾತಾವರಣವನ್ನು ಸೃಷ್ಟಿಸುವಂತೆ ನಾನು ಒತ್ತಾಯಿಸುತ್ತೇನೆ… ರಾಷ್ಟ್ರ ಮತ್ತು ರಾಜ್ಯಗಳು ಒಟ್ಟಾಗಿ ಕೆಲಸ ಮಾಡಿದಾಗ, ‘ಆತ್ಮನಿರ್ಭರ ಭಾರತ’ದ ಕನಸು ನನಸಾಗುತ್ತದೆ” ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದರು.