ಕೇಂದ್ರ ಸರ್ಕಾರ ಆಹಾರ ಉತ್ಪನ್ನಗಳ ಮೇಲಿನ ಜಿಎಸ್ ಟಿ (GST) ದರವನ್ನು ಶೇ.5 ಕ್ಕೆ ಇಳಿಸಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಂದಿನಿ ಹಾಲಿನ ದರವನ್ನು ಇಳಿಕೆ ಮಾಡಲು ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ ನಿರ್ಧರಿಸಿದೆ. ಹೊಸ ದರವನ್ನು ಇಂದಿನಿಂದಲೇ ಜಾರಿಗೆ ತರಲು ಒಕ್ಕೂಟ ನಿರ್ಧರಿಸಿದೆ.
ಕೇಂದ್ರ ಸರ್ಕಾರ ಆಹಾರ ಉತ್ಪನ್ನಗಳ ಮೇಲಿದ್ದ ತೆರಿಗೆ ಹೊರೆಯನ್ನು ಶೇ. 12 ರಿಂದ ಶೇ.5 ಕ್ಕೆ ಇಳಿಸಲಾಗಿದೆ. ಹೀಗಾಗಿ ನಂದಿನಿಯ ವಿವಿಧ ಉತ್ಪನ್ನಗಳ ಮೇಲಿದ್ದ ಬೆಲೆ ಕಡಿಮೆಯಾಗಲಿದ್ದು, ಇಂದಿನಿಂದಲೇ ಉತ್ಪನ್ನಗಳ ಮೇಲಿದ್ದ ಪರಿಸ್ಕೃತ ದರ ಜಾರಿಯಾಗಲಿದೆ ಎಂದು ಒಕ್ಕೂಟ ತಿಳಿಸಿದೆ.
ಪನ್ನೀರ್ ಮತ್ತು ಗುಡ್ ಲೈಫ್ ಹಾಲಿನ ಮೇಲೆ ಹಿಂದೆ ಶೇಕಡಾ 5ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಆದರೆ ಇದೀಗ ಇವುಗಳನ್ನು ಸಂಪೂರ್ಣವಾಗಿ ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ತುಪ್ಪ, ಬೆಣ್ಣೆ, ಚೀಸ್, ಪನ್ನೀರ್ ಮತ್ತು ಇತರ ಕುರಕಲು ತಿಂಡಿಗಳ ಜಿಎಸ್‌ಟಿ ದರವನ್ನು ಶೇಕಡಾ 12ರಿಂದ ಶೇಕಡಾ 5ಕ್ಕೆ ಇಳಿಸಲಾಗಿದೆ. ಆದರೆ ಹಾಲು ಹಾಗೂ ಮೊಸರಿನ ಮೇಲಿದ್ದ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಹಾಲು ಮತ್ತು ಹಾಲು ಉತ್ಪನ್ನಗಳ ದರಗಳಲ್ಲಿ ಇಳಿಕೆ ಕಂಡು ಬಂದಿದೆ. 1000 ಮಿ.ಲಿ ತುಪ್ಪದ ದರ ಹಳೆಯದಾಗಿ ₹650 ಇದ್ದು, ಈಗ ₹610 ಕ್ಕೆ ಇಳಿಸಲಾಗಿದೆ. 500 ಗ್ರಾಂ ಬೆಣ್ಣೆಯ ದರ ₹305 ರಿಂದ ₹286 ಕ್ಕೆ ಕಡಿಮೆಯಾಗಿದೆ. 1000 ಗ್ರಾಂ ಪನ್ನೀರ್ ಹಳೆಯದಾಗಿ 425 ರೂ. ಇದ್ದು, ಈಗ 408 ರೂ. ಕ್ಕೆ ಸಿಗಲಿದೆ.
ಗುಡ್ ಲೈಫ್ ಹಾಲಿನ ದರ 70ರಿಂದ 68 ರೂ. ಕ್ಕೆ ಇಳಿಕೆಯಾಗಿದೆ. ಸಂಸ್ಕರಿಸಿದ ಚೀಸ್ ಹಳೆಯ ದರ 530 ಇದ್ದು, ಹೊಸದಾಗಿ 497 ರೂ. ಕ್ಕೆ ಮಾರಾಟವಾಗುತ್ತಿದೆ. ಐಸ್‌ಕ್ರೀಮ್ ಫ್ಯಾಮಿಲಿ ಪ್ಯಾಕ್ ದರ 645ರಿಂದ 574 ರೂ. ಕ್ಕೆ ಇಳಿಕೆ ಕಂಡಿದೆ. ಅದೇ ರೀತಿ, ಐಸ್‌ಕ್ರೀಮ್ ವೆನಿಲಾ ಟಬ್ 200 ರಿಂದ 178 ರೂ. ಕ್ಕೆ ಲಭ್ಯವಾಗಿದೆ.
ಇನ್ನು ಐಸ್‌ಕ್ರೀಮ್ ಚಾಕಲೇಟ್ ಸಂಡೇ ದರ 115ರಿಂದ 102 ರೂ. ಕ್ಕೆ ಇಳಿಕೆಯಾಗಿದೆ. ಮ್ಯಾಂಗೋ ನ್ಯಾಚುರಲ್ಸ್ ಐಸ್‌ಕ್ರೀಮ್ 35ರಿಂದ 31 ರೂ. ಕ್ಕೆ ಲಭ್ಯ. ಖಾರಾ ಉತ್ಪನ್ನಗಳು 60ರಿಂದ 56 ರೂ. ಕ್ಕೆ, ಮಫಿನ್‌ಗಳು 50ರಿಂದ 45 ರೂ. ಕ್ಕೆ ಇಳಿಕೆಯಾಗಿದೆ.
ನಂದಿನಿ ನೀರಿನ (1000 ಮಿ.ಲಿ) ದರ 20ರಿಂದ 18 ರೂ. ಕ್ಕೆ ತಗ್ಗಿಸಲಾಗಿದೆ. ಜಾಮೂನು ಮಿಶ್ರಣ 80 ರಿಂದ 71ರೂ. ಕ್ಕೆ, ಬಾದಾಮ್ ಹಾಲಿನ ಪುಡಿ (200 ಗ್ರಾಂ) 120 ರಿಂದ 107 ರೂ. ಕ್ಕೆ ಇಳಿಕೆಯಾಗಿದೆ.
ಕುಕೀಸ್ (100 ಗ್ರಾಂ) ದರ 35ರಿಂದ 31 ರೂ. ಕ್ಕೆ ತಗ್ಗಿಸಿದ್ದು, ರೈಸ್ ಕ್ರಿಸ್ಪಿ ಮಿಲ್ಕ್ ಚಾಕೋ (80 ಗ್ರಾಂ) 65ರಿಂದ 58 ರೂ. ಕ್ಕೆ ಇಳಿಕೆಯಾಗಿದೆ. 200 ಗ್ರಾಂ ಕೇಕ್‌ಗಳ ದರ ಕೂಡ 110 ರಿಂದ ರೂ. 98 ಕ್ಕೆ ಇಳಿಕೆಯಾಗಿದೆ.