ದೆಹಲಿ: ದೇಶ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿರುವಾಗ ಲೋಕಸಭೆಯ ವಿರೋಧ ಪಕ್ಷದ ನಾಯಕ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಬಳಿ ದಯವಿಟ್ಟು ಮಣಿಪುರಕ್ಕೆ ಇನ್ನಾದರೂ ಭೇಟಿ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ನಿನ್ನೆ (ಆ.15) ದೆಹಲಿಯಲ್ಲಿ ಕೆಲವು ಮಣಿಪುರ ಪ್ರಜೆಗಳನ್ನು ಭೇಟಿಯಾಗಿರುವ ರಾಹುಲ್ ಗಾಂಧಿ ಅವರ ಅಳಲುಗಳಿಗೆ ಕಿವಿಯಾಗಿದ್ದಾರೆ. ಭೇಟಿಯ ನಂತರ ರಾಹುಲ್ ಈ ಕುರಿತು ಟ್ವೀಟ್ ಮಾಡಿದ್ದು, ಗಲಭೆ ಪೀಡಿತ ಮಣಿಪುರಕ್ಕೆ ಭೇಟಿ ನೀಡಿ ಶಾಂತಿಯುತ ಪರಿಹಾರಕ್ಕೆ ಶ್ರಮಿಸುವಂತೆ ರಾಹುಲ್ ಗಾಂಧಿ ಮತ್ತೊಮ್ಮೆ ಪ್ರಧಾನಿ ಬಳಿ ಕೇಳಿಕೊಂಡಿದ್ದಾರೆ.
ಕಳೆದ ಒಂದು ವರ್ಷದಿಂದ ಮಣಿಪುರವು ಮೈತೇಯಿ ಮತ್ತು ಕುಕೀ ಜನಾಂಗಗಳ ನಡುವಿನ ಸಂಘರ್ಷಕ್ಕೆ ಸಾಕ್ಚಿಯಾಗಿದ್ದ, ಈ ಗಲಭೆಯಲ್ಲಿ 200ಕ್ಕೂ ಹೆಚ್ಚು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಗಲಭೆ ಪೀಡಿತ ಪ್ರದೇಶಕ್ಕೆ ರಾಹುಲ್ ಗಾಂಧಿ ಈಗಾಗಲೇ ಮೂರು ಬಾರಿ ಭೇಟಿ ನೀಡಿದ್ದು, ಅಲ್ಲಿನ ಜನರು ಪ್ರಧಾನಿಯವರು ಬಂದು ತಮ್ಮ ಸಂಕಷ್ಟಗಳನ್ನು ಆಲಿಸಲಿ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ದಯವಿಟ್ಟು ಮೋದಿಯವರು ಮಣಿಪುರಕ್ಕೆ ಭೇಟಿ ನೀಡಿ ಇಲ್ಲಿನ ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಈಗಾಗಲೇ ಹಲವು ಬಾರಿ ಮನವಿ ಮಾಡಿದ್ದಾರೆ. ಆದರೆ ಅಸ್ಸಾಮ್ ತನಕ ಹೋಗಿದ್ದ ಮೋದಿಯವರು ಪಕ್ಕದ ಮಣಿಪುರಕ್ಕೆ ಹೋಗುವ ಮನಸ್ಸನ್ನು ಮಾಡಿಲ್ಲ
ಮಣಿಪುರದ ಜನರನ್ನು ದೆಹಲಿಯಲ್ಲಿ ಭೇಟಿಯಾದ ನಂತರ ರಾಹುಲ್ ಅವರು ತಮ್ಮ X ಖಾತೆಯಲ್ಲಿ “ನಾವು ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿರುವಾಗ ಮಣಿಪುರದ ಜನರು ತಮ್ಮ ಸ್ವಾತಂತ್ರ್ಯ ಕಳೆದುಕೊಂಡು ಅತಂತ್ರರಾಗಿದ್ದಾರೆ. ನಾವು ಅವರ ಸಂಕಷ್ಟಗಳ ಕುರಿತು ಮಾತನಾಡೋಣ” ಎಂದಿದ್ದಾರೆ.
ಅಲ್ಲಿನ ಜನರ ಸಂಕಷ್ಟವನ್ನು ಪರಿಹರಿಸಿ ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಒಟ್ಟಾಗಿ ದುಡಿಯಬೇಕು. ಪ್ರಧಾನಿ ನರೇಂದ್ರ ಮೋದಿಯವರು ಮಣಿಪುರಕ್ಕೆ ಭೇಟಿ ನೀಡಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ತಾವು ಭೇಟಿ ಮಾಡಿದ ಜನರು ತಮ್ಮ ಮೇಲೆ ದಾಳಿಯಾಗಬಹುದೆನ್ನುವ ಭಯ ವ್ಯಕ್ತಪಡಿಸಿದ ಕಾರಣ ರಾಹುಲ್ ಆ ವ್ಯಕ್ತಿಗಳ ಕೈಗಳ ಚಿತ್ರವನ್ನಷ್ಟೇ ಹಂಚಿಕೊಂಡಿದ್ದಾರೆ.