ಚಿಕ್ಕಬಳ್ಳಾಪುರ: ಮುಂಬರುವ 2028 ರ ವಿಧಾನಸಭಾ ಚುನಾವಣೆಯಲ್ಲಿ ಸನಾತನ ಹಿಂದೂ ಧರ್ಮವನ್ನು ರಕ್ಷಣೆ ಮಾಡುವವರೇ ರಾಜ್ಯದ ನೇತೃತ್ವ ವಹಿಸಬೇಕು ಎಂದು ಹೇಳುವ ಮೂಲಕ, ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಾವು ಮುಖ್ಯಮಂತ್ರಿಯಾಗುವ ವಿಶ್ವಾಸವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಈಶಾ ಕೇಂದ್ರದ ಬಳಿ ಹರಿಕೃಷ್ಣ ಫೌಂಡೇಷನ್ ಆಯೋಜಿಸಿದ್ದ ಗೋದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಯತ್ನಾಳ್, ಕರ್ನಾಟಕದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾದರಿಯ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಆಶಿಸಿದರು. ಇದೇ ಸಂದರ್ಭದಲ್ಲಿ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ಹೆಸರನ್ನು ಪ್ರಸ್ತಾಪಿಸದೆ, “ವಿಧಾನಸಭೆಯೊಳಗೆ ಜೋಕರ್‌ಗಳನ್ನು ಕಾಣುವಂತಾಗಿದೆ” ಎಂದು ವ್ಯಂಗ್ಯವಾಡಿದರು.
ಸಂವಿಧಾನದಲ್ಲಿ ರಾಮ ಮತ್ತು ಗೋ ರಕ್ಷಣೆ
ಡಾ. ಬಿ.ಆರ್. ಅಂಬೇಡ್ಕರ್ ಅವರು ಗೋ ಸಂಪತ್ತು ರಕ್ಷಣೆ ಮಾಡಬೇಕು ಎಂದು ಸಂವಿಧಾನದಲ್ಲಿ ಸೇರಿಸಿದ್ದಾರೆ. ಅಂಬೇಡ್ಕರ್ ಬರೆದ ಸಂವಿಧಾನದ ಮೂಲ ಪ್ರತಿಯ ಮುಖಪುಟದಲ್ಲಿ ರಾಮ, ಲಕ್ಷ್ಮಣ, ಸೀತೆ, ಮತ್ತು ಹನುಮಂತ ಅವರ ಚಿತ್ರವಿದೆ ಎಂದು ಯತ್ನಾಳ್ ಹೇಳಿದರು. “ಗೋ ರಕ್ಷಣೆ ಮಾಡಬೇಕು ಎಂದು ನಮ್ಮ ಸನಾತನ ಧರ್ಮ ಹೇಳುತ್ತದೆ. ಆದರೆ ನಮ್ಮ ದೇಶದಲ್ಲಿ ಗೋ ಹಂತಕರ ಸರ್ಕಾರಗಳು ಮತ್ತು ಸ್ವಾಮೀಜಿಗಳನ್ನು ಅಪಮಾನ ಮಾಡುವ ಸರ್ಕಾರಗಳು ಬರುತ್ತಿವೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.