ದೆಹಲಿ: ಧಾರ್ಮಿಕ ದ್ವೇಷವನ್ನು ಹರಡುತ್ತಿದ್ದ ಮಾಧ್ಯಮ ಸಂಸ್ಥೆಗಳಾದ ಜೀ ನ್ಯೂಸ್ ಮತ್ತು ಟೈಮ್ಸ್ ನೌ ನವಭಾರತ್ ವಿರುದ್ಧ ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಆ್ಯಂಡ್ ಡಿಜಿಟಲ್ ಸ್ಟ್ಯಾಂಡರ್ಡ್ಸ್ ಅಥಾರಿಟಿ (ಎನ್‌ಬಿಡಿಎಸ್‌ಎ) ಕ್ರಮ ಕೈಗೊಂಡಿದೆ.
ಈ ಕುರಿತು ಎನ್‌ಬಿಡಿಎಸ್‌ಎ ಆದೇಶಗಳನ್ನು ಹೊರಡಿಸಿದೆ. ಈ ಸಂಸ್ಥೆಗಳು ಪ್ರಸಾರ ಮಾಡಿದ ವರದಿಗಳನ್ನು ಸ್ಪಷ್ಟವಾದ ಇಸ್ಲಾಮೋಫೋಬಿಕ್ (ಇಸ್ಲಾಂ ಭಯವನ್ನು ಹುಟ್ಟಿಸುವ) ಎಂದು ಟೀಕಿಸಲಾಗಿದೆ. ಈ ಸಂಸ್ಥೆಗಳು ಪ್ರಸಾರ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿವೆ ಎಂದು ಆದೇಶಗಳಲ್ಲಿ ತಿಳಿಸಲಾಗಿದೆ. ದ್ವೇಷ ಭಾಷಣದ ವರದಿಗಳನ್ನು ಕೂಡಲೇ ತೆಗೆದುಹಾಕುವಂತೆ (Delete) ಆದೇಶಿಸಿದೆ.
ದೇಶದ ಮುಸ್ಲಿಂ ಸಮುದಾಯದ ವಿರುದ್ಧ ಈ ಸಂಸ್ಥೆಗಳು ಧಾರ್ಮಿಕ ದ್ವೇಷವನ್ನು ಹರಡುತ್ತಿವೆ ಎಂದು ಸಂಶೋಧಕರು ಮತ್ತು ಪತ್ರಕರ್ತರಾದ ಇಂದ್ರಜಿತ್ ಘೋರ್ಪಡೆ ಅವರು ಕಳೆದ ವರ್ಷ ನೀಡಿದ ದೂರಿನ ಆಧಾರದ ಮೇಲೆ ಈ ಆದೇಶವನ್ನು ನೀಡಲಾಗಿದೆ.
ಜೀ ನ್ಯೂಸ್ ಸರಣಿಯಾಗಿ ಪ್ರಸಾರ ಮಾಡಿದ ‘ಮೆಹಂದೀ ಜಿಹಾದ್ ಪರ್ ದೇ ದಾನಾ-ದಾನ್’, ‘ಲಾಠಿ ಸೆ ಲೈಸ್ ರಹೆಂಗೆ, ಜಿಹಾದಿಯೋಂ ಕೋ ರೊಕೆಂಗೆ’, ಮತ್ತು ಟೈಮ್ಸ್ ನೌ ನವಭಾರತ್ ಪ್ರಸಾರ ಮಾಡಿದ ‘ಲವ್ ಜಿಹಾದ್’ ನಂತಹ ವರದಿಗಳ ವಿರುದ್ಧ ಅವರು ದೂರು ನೀಡಿದ್ದರು.