ಮೈಸೂರು: ಬಿಹಾರ ವಿಧಾನಸಭಾ ಚುನಾವಣೆ ಮುಗಿದ ನಂತರ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳು ನಡೆದು ಅಲ್ಲೋಲ ಕಲ್ಲೋಲ ಸೃಷ್ಟಿಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭವಿಷ್ಯ ನುಡಿದರು.
ಭಾನುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್‌ನ ಶಾಸಕರೇ ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತದೆ ಎಂದು ಹೇಳುತ್ತಿದ್ದಾರೆ. ಈ ನವೆಂಬರ್ ಕ್ರಾಂತಿಗೂ ಮತ್ತು ಜಾತಿಗಣತಿ ಕ್ರಾಂತಿಗೂ ಸಂಬಂಧವಿದೆ ಎಂಬಂತೆ ಚರ್ಚೆಗಳು ನಡೆಯುತ್ತಿವೆ” ಎಂದು ವಿಜಯೇಂದ್ರ ಹೇಳಿದರು.
ಪಕ್ಷದ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಬೇಡಿ, ಅದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳುತ್ತಾರೆ. ಆದರೆ, ಹೈಕಮಾಂಡ್ ಎಲ್ಲಿಯೂ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿಲ್ಲ. ಬದಲಾವಣೆಯ ಸೂಕ್ಷ್ಮತೆಯನ್ನು ಅರಿತೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದರು. ಆಗ ಮಲ್ಲಿಕಾರ್ಜುನ ಖರ್ಗೆ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರೂ ಅಡ್ರೆಸ್‌ಗೇ ಇರಲಿಲ್ಲ ಎಂದು ವಿಜಯೇಂದ್ರ ಟೀಕಿಸಿದರು.
ಜಾತಿಗಣತಿ ಬಗ್ಗೆ ಆತುರದ ನಿರ್ಧಾರ
ಜಾತಿಗಣತಿಯ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, “ದೇಶಾದ್ಯಂತ ಜಾತಿಗಣತಿ ಮಾಡುತ್ತೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿದ ಬಳಿಕವೂ ರಾಜ್ಯದಲ್ಲಿ ಈ ರೀತಿ ಗೊಂದಲ ಸೃಷ್ಟಿ ಮಾಡುವ ಅಗತ್ಯವಿರಲಿಲ್ಲ. ರಾಜ್ಯ ಸರ್ಕಾರ ಯಾವುದೇ ಪೂರ್ವ ತಯಾರಿ ಇಲ್ಲದೇ ಆತುರದ ನಿರ್ಧಾರ ತೆಗೆದುಕೊಂಡಿದೆ ಎಂಬುದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಪ್ರತಿಕ್ರಿಯೆಗಳಿಂದಲೇ ಗೊತ್ತಾಗುತ್ತದೆ” ಎಂದರು.
ಈ ಸಮೀಕ್ಷೆಯಿಂದ ಗೊಂದಲಗಳೇ ಹೆಚ್ಚಾಗಿವೆ. 60 ಪ್ರಶ್ನೆಗಳನ್ನು ಜನರ ಮುಂದಿಡಲಾಗಿದೆ ಮತ್ತು ವಿಶೇಷ ಚೇತನರನ್ನು ಗಣತಿ ಕಾರ್ಯಕ್ಕೆ ನಿಯೋಜಿಸಿರುವುದಕ್ಕೆ ಟೀಕೆಗಳು ವ್ಯಕ್ತವಾಗುತ್ತಿವೆ. ಸಿದ್ದರಾಮಯ್ಯನವರಿಗೆ ಈ ಕುರಿತು ಇಷ್ಟೊಂದು ಆತುರ ಏಕೆ ಎಂದು ಅವರು ಪ್ರಶ್ನಿಸಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಬೇಕು ಎಂಬುದು ನಮ್ಮ ಪಕ್ಷದ ನಿಲುವಾಗಿದ್ದು, ಯಾರಿಗೂ ಅನ್ಯಾಯವಾಗಬಾರದು ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.
ಧರ್ಮದಲ್ಲಿ ರಾಜಕಾರಣದ ಷಡ್ಯಂತ್ರ
ಯಾರೂ ಧರ್ಮವನ್ನು ಒಡೆಯುವ ಕೆಲಸ ಮಾಡಬಾರದು. ಬದಲಾಗಿ ಧರ್ಮವನ್ನು ರಕ್ಷಿಸಬೇಕು ಎಂದು ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು. ನಗರದ ಕೆ.ಆರ್. ಮೊಹಲ್ಲಾದ ಹುಲ್ಲಿನಬೀದಿಯಲ್ಲಿ ಗುರುಮಲ್ಲೇಶ್ವರ ದಾಸೋಹ ಮಠ ಮತ್ತು ವಿದ್ಯಾರ್ಥಿನಿಲಯದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ರಾಜಕಾರಣದಲ್ಲಿ ಧರ್ಮ ಇರಬೇಕು. ಆದರೆ ಕೆಲವರು ಧರ್ಮದಲ್ಲಿ ರಾಜಕಾರಣ ತರುವ ಮೂಲಕ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ವೀರಶೈವ ಲಿಂಗಾಯತ ಸಮಾಜವನ್ನು ವಿಭಜಿಸುವ ಮೂಲಕ ಹಿಂದೂ ಧರ್ಮವನ್ನು ಒಡೆಯುವ ಕೆಲಸ ನಡೆಯುತ್ತಿದೆ ಎಂದು ದೂರಿದ ಅವರು, ಇಂದು ವೀರಶೈವ ಲಿಂಗಾಯತ ಸಮಾಜಕ್ಕೆ ಹಿನ್ನಡೆಯಾಗುತ್ತಿದ್ದರೂ ಮತ್ತೆ ಪುಟಿದೇಳಲಿದೆ ಮತ್ತು ಇತರ ಸಮುದಾಯಗಳಿಗೂ ಆಶ್ರಯ ನೀಡಿ ಹಿಂದೂ ಸಮಾಜವನ್ನು ಸುಭದ್ರಗೊಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.