Home ರಾಜ್ಯ ಹಾಸನ ಹಾಸನ ಜಿಲ್ಲಾ ರಾಜಕಾರಣದ ಘನತೆಯನ್ನು ಮರುಸ್ಥಾಪಿಸುವ ಕೆಲಸ ಗೋಪಾಲಸ್ವಾಮಿ ಅವರಿಂದ ಆಗಲಿ: ಕೆ.ವಿ.ಪ್ರಭಾಕರ್ ಕರೆ

ಹಾಸನ ಜಿಲ್ಲಾ ರಾಜಕಾರಣದ ಘನತೆಯನ್ನು ಮರುಸ್ಥಾಪಿಸುವ ಕೆಲಸ ಗೋಪಾಲಸ್ವಾಮಿ ಅವರಿಂದ ಆಗಲಿ: ಕೆ.ವಿ.ಪ್ರಭಾಕರ್ ಕರೆ

0

ಹಾಸನ ಅ 5: ಕಾರ್ಮಿಕ ಮುಖಂಡರಾಗಿ ರಾಜಕಾರಣಕ್ಕೆ ಬಂದು ಎಲ್ಲರ ಹೃದಯಗಳನ್ನೂ ಗೆಲ್ಲುವ ಶಕ್ತಿ ಇರುವ ಗೋಪಾಲಸ್ವಾಮಿ ಅವರು ಹಾಸನ‌ ಜಿಲ್ಲಾ ರಾಜಕಾರಣದ ಘನತೆಯನ್ನು ಮರುಸ್ಥಾಪಿಸುವ ಕೆಲಸವನ್ನೂ ಮಾಡಲಿ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯ ಪಟ್ಟರು.

ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಂ.ಎ.ಗೋಪಾಲಸ್ವಾಮಿ ಅವರ 55ನೇ ಹುಟ್ಟು ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಕಬ್ಬಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.

ಒಬ್ಬ ಕ್ರೀಡಾ ಪಟುವಿಗೆ ಇರಬೇಕಾದ ಕ್ರೀಡಾ ಮನೋಭಾವ ಮತ್ತು ಬದ್ಧತೆ ಎರಡೂ ಗೋಪಾಲಸ್ವಾಮಿ ಅವರಿಗಿದೆ. ಪ್ರತಿಯೊಬ್ಬರನ್ನೂ ಅತ್ಯಂತ ಆತ್ಮೀಯವಾಗಿ ನಡೆಸಿಕೊಳ್ಳುವ ಸಜ್ಜನಿಕೆಯೇ ಗೋಪಾಲಸ್ವಾಮಿ ಅವರ ವ್ಯಕ್ತಿತ್ವದ ಶಕ್ತಿ ಎಂದರು.

ತಾವು ಪ್ರತಿನಿಧಿಸುವ ಕ್ಷೇತ್ರದ ಜನರ ಮತ್ತು ಸಮಾಜದ ಘನತೆಯನ್ನು ಹೆಚ್ಚಿಸುವುದು ಉತ್ತಮ ರಾಜಕಾರಣಿಯ ಲಕ್ಷಣ. ಈ ಲಕ್ಷಣಗಳು ಗೋಪಾಲಸ್ವಾಮಿ ಅವರಲ್ಲಿವೆ. ಹೀಗಾಗಿ ಹಾಸನ ಜಿಲ್ಲಾ ರಾಜಕಾರಣದ ಘನತೆಯನ್ನು ಮರು ಸ್ಥಾಪಿಸುವುದು ಹಾಗೂ ಹಾಸನ ಜಿಲ್ಲೆಯ ರಾಜಕಾರಣದ ಇತಿಹಾಸ ಮತ್ತು ವರ್ತಮಾನಕ್ಕೆ ಅಂಟಿರುವ ಕಳಂಕವನ್ನು ಅಳಿಸಿ ಹಾಸನದ ಜನತೆಯ ಸ್ವಾಭಿಮಾನವನ್ನು ಎತ್ತಿ ಹಿಡಿಯುವ ಶಕ್ತಿ ಗೋಪಾಲಸ್ವಾಮಿ ಅವರುಗಿದೆ. ಈ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ ಎನ್ನುವ ಭರವಸೆ ನನಗಿದೆ ಎಂದರು.

ನಾನೇ ಎಂದು ಎದೆ ಎತ್ತಿ ನಿಂತ ಹೆಮ್ಮರಗಳೆಲ್ಲಾ ಜೋರು ಮಳೆಗೆ ನೆಲಕ್ಕೆ ಬೀಳುತ್ತವೆ. ಆದರೆ ಗರಿಕೆ ಹುಲ್ಲನ್ನು ಯಾವ ಮಳೆ, ಬಿರುಗಾಳಿಯೂ ಉರುಳಿಸಲು ಸಾಧ್ಯವಿಲ್ಲ. ರಾಜಕಾರಣದಲ್ಲೂ ಅಷ್ಟೆ. ಗೋಪಾಲಸ್ವಾಮಿ ಅವರು ಗರಿಕೆ ಹುಲ್ಲಿನಷ್ಟೇ ಸರಳ ಮತ್ತು ಸಜ್ಜನಿಕೆಯನ್ನು ರೂಢಿಸಿಕೊಂಡಿದ್ದಾರೆ ಎಂದರು.

ಪಕ್ಷ ನಿಷ್ಠೆ ಮತ್ತು ಜನ‌ನಿಷ್ಠೆಯನ್ನು ಪಾಲಿಸುವ ಗೋಪಾಲಸ್ವಾಮಿ ಅವರು ಗೆದ್ದೆತ್ತಿನ ಬಾಲ ಹಿಡಿದು ಹೋಗುವವರಲ್ಲ. ಕಾರ್ಮಿಕ ಮುಖಂಡರಾಗಿ ರಾಜಕಾರಣಕ್ಕೆ ಪ್ರವೇಶ ಪಡೆದವರು. ಅತ್ಯಂತ ಸಾಮಾನ್ಯ ಶ್ರಮಿಕ ಕುಟುಂಬದಿಂದ ಬಂದು ಶ್ರವಣಬೆಳಗೊಳದ ಜನತೆಯ ಹೃದಯ ಗೆದ್ದಿದ್ದಾರೆ ಎಂದರು.

ಜೆಡಿಎಸ್ ನ ಭದ್ರ ಕೋಟೆಯಲ್ಲಿ ವಿಧಾನ ಪರಿಷತ್ ಗೆ ಗೆದ್ದು ಬಂದರು. ಬಳಿಕ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಎರಡೂವರೆ ಸಾವಿರ ಹಚ್ವುವರಿ ಮತ ಬಿದ್ದಿದ್ದರೆ ಗೆದ್ದು ಬರುತ್ತಿದ್ದರು. ಹೀಗಾಗಿ ಶ್ರವಣ ಬೆಳಗೊಳದ ಜನತೆ ಗೋಪಾಲಸ್ವಾಮಿ ಅವರ ಕೈ ಬಿಡಲಿಲ್ಲ. ಜೊತೆಯಲ್ಲಿದ್ದ ಕೆಲವರ ಆಟದಿಂದ ಗೋಪಾಲಸ್ವಾಮಿ ಸೋತರು ಎಂದು ವಿವರಿಸಿದರು.

ಗೋಪಾಲಸ್ವಾಮಿ ಅವರು ತಮ್ಮ ಹುಟ್ಟು ಹಬ್ಬಕ್ಕೆ ಯಾವುದೋ ರೆಸಾರ್ಟ್ ನಲ್ಲಿ ಪಾರ್ಟಿ ಮಾಡಿ ಆಚರಿಸಿಕೊಳ್ಳುವ ಬದಲಿಗೆ ಕಬ್ಬಡಿ ಪಂದ್ಯಾವಳಿ ಆಯೋಜಿಸಿರುವುದೇ ಇವರ ಕಾಳಜಿಗಳನ್ನು ಹೇಳುತ್ತದೆ.

ಆಸ್ಪತ್ರೆಗಳು ಮತ್ತು ಬಾರ್ ಗಳು ಆರೋಗ್ಯವಂತ ಸಮಾಜದ ಲಕ್ಷಣಗಳಲ್ಲ. ಕ್ರೀಡಾಂಗಣಗಳು, ಮೈದಾನಗಳು ಆರೋಗ್ಯವಂತ ಮತ್ತು ಸದೃಡ ಸಮಾಜದ ಲಕ್ಷಣ ಎಂದರು.

You cannot copy content of this page

Exit mobile version