“ಕಾಶ್ಮೀರದಲ್ಲಿ, ನಾವು ಹೆಚ್ಚಿನ ಸಮಸ್ಯೆ ಪರಿಹರಿಸುವಲ್ಲಿ ಉತ್ತಮ ಕೆಲಸ ಮಾಡಿದ್ದೇವೆ. 370 ನೇ ವಿಧಿಯನ್ನು ತೆಗೆದುಹಾಕುವುದು ಒಂದು ದೊಡ್ಡ ಹೆಜ್ಜೆ ಎಂದು ನಾನು ಭಾವಿಸುತ್ತೇನೆ. ನಂತರ, ಕಾಶ್ಮೀರದಲ್ಲಿ ಬೆಳವಣಿಗೆ, ಆರ್ಥಿಕ ಚಟುವಟಿಕೆ ಮತ್ತು ಸಾಮಾಜಿಕ ನ್ಯಾಯವನ್ನು ಪುನಃಸ್ಥಾಪಿಸುವುದು ಎರಡನೇ ಮಹತ್ವದ ಹೆಜ್ಜೆಯಾಗಿತ್ತು. ಇನ್ನು ಪಾಕಿಸ್ತಾನ ಕದ್ದ ನೆಲವನ್ನು ಹಿಂತಿರುಗಿಸಿದರೆ ಕಾಶ್ಮೀರದ ಸಮಸ್ಯೆ ಬಗೆಹರಿದಂತೆ” ಎಂದು ವಿದೇಶಾಂಗ ಸಚಿವ ಜೈ ಶಂಕರ್ ಹೇಳಿದ್ದಾರೆ.
ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆ, 370 ನೇ ವಿಧಿ ತೆಗೆದು ಹಾಕಿರುವುದು, ಮತದಾನದ ಹೆಚ್ಚಳ ಹಾಗೂ ಆರ್ಥಿಕ ಸ್ಥಿತಿ ಮರುಸ್ಥಾಪನೆ ಕುರಿತಂತೆ ಲಂಡನ್ನ ಚಾಥಮ್ ಹೌಸ್ ಚಿಂತಕರ ಛಾವಡಿಯಲ್ಲಿ ಮಾತನಾಡಿದ ಜೈಶಂಕರ್, ಮೂರನೇ ವ್ಯಕ್ತಿಯ ಹಸ್ತಕ್ಷೇಪವನ್ನು ತಿರಸ್ಕರಿಸಿದರು. ಭಾರತದ ವಿಧಾನವನ್ನು ಸಮರ್ಥಿಸಿಕೊಂಡರು, ಪರಿಸ್ಥಿತಿಯನ್ನು ಸ್ವತಂತ್ರವಾಗಿ ನಿಭಾಯಿಸಲು ಈಗಾಗಲೇ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಈಗ ನಾವು ಪಾಕಿಸ್ತಾನವು ಕದ್ದ ಕಾಶ್ಮೀರದ ಭಾಗವನ್ನು ಹಿಂದಿರುಗಿಸುವಿಕೆಗಾಗಿ ಕಾಯುತ್ತಿದ್ದೇವೆ, ಅದು ನಡೆದರೆ ಕಾಶ್ಮೀರದ ಸಮಸ್ಯೆ ಬಗೆಹರಿದಂತಾಗುತ್ತದೆ. ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವೆ ಶ್ವೇತಭವನದಲ್ಲಿ ನಡೆದ ಚರ್ಚೆಯ ನಂತರ, ಭಾರತ ಮತ್ತು ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಅಗತ್ಯವನ್ನು ಒಪ್ಪಿಕೊಂಡಿವೆ ಎಂದು ಜೈಶಂಕರ್ ದೃಢಪಡಿಸಿದರು.
ಚೀನಾದೊಂದಿಗಿನ ಭಾರತದ ಸಂಬಂಧ, ರೂಪಾಯಿಯ ಅಂತರರಾಷ್ಟ್ರೀಕರಣ, ಜಾಗತಿಕ ಆರ್ಥಿಕತೆಯಲ್ಲಿ ಯುಎಸ್ ಡಾಲರ್ ಪಾತ್ರ ಮತ್ತು ಈ ವಿಷಯದ ಬಗ್ಗೆ ಬ್ರಿಕ್ಸ್ ದೇಶಗಳ ನಿಲುವು ಸೇರಿದಂತೆ ಹಲವಾರು ಇತರ ವಿಷಯಗಳನ್ನು ಜೈಶಂಕರ್ ಪ್ರಸ್ತಾಪಿಸಿದರು.