Home ಬ್ರೇಕಿಂಗ್ ಸುದ್ದಿ ಚನ್ನಪಟ್ಟಣ : ಮೈತ್ರಿ ಅಭ್ಯರ್ಥಿ ಘೋಷಣೆ ಮಾಡದಿದ್ದರೆ ಪಕ್ಷ ಬಿಡುವ ಮುನ್ಸೂಚನೆ ಕೊಟ್ಟ ಸಿಪಿವೈ!

ಚನ್ನಪಟ್ಟಣ : ಮೈತ್ರಿ ಅಭ್ಯರ್ಥಿ ಘೋಷಣೆ ಮಾಡದಿದ್ದರೆ ಪಕ್ಷ ಬಿಡುವ ಮುನ್ಸೂಚನೆ ಕೊಟ್ಟ ಸಿಪಿವೈ!

0

ಹಾಗೂ ಹೀಗೂ ಕುಟುಂಬ ರಾಜಕಾರಣಕ್ಕೆ ಹೆಸರುವಾಸಿಯಾಗಿರುವ ಜೆಡಿಎಸ್ ಪಕ್ಷ ಚನ್ನಪಟ್ಟಣ ಉಪಚುನಾವಣೆಗೆ ಅನಸೂಯಾ ಮಂಜುನಾಥ್ ಹೆಸರು ಸೂಚಿಸುವ ಮೊದಲೇ ಸಿಪಿ ಯೋಗೇಶ್ವರ್ “ನಾನೇ ಮೈತ್ರಿ ಅಭ್ಯರ್ಥಿ” ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಆ ಮೂಲಕ ಹೆಚ್.ಡಿ.ಕುಮಾರಸ್ವಾಮಿಯವರ ಎಲ್ಲಾ ತಂತ್ರಗಾರಿಕೆಗೆ ಸಿಪಿ ಯೋಗೇಶ್ವರ್ ಎಳ್ಳು ನೀರು ಬಿಟ್ಟಿದ್ದಾರೆ.

ಶುಕ್ರವಾರ ಸಂಜೆಯ ವೇಳೆಗೆ ಚನ್ನಪಟ್ಟಣದಲ್ಲಿ ಸುದ್ದಿಗೋಷ್ಟಿ ನಡೆಸಿ ಈ ಬಗ್ಗೆ ಮಾತನಾಡಿದ ಯೋಗೇಶ್ವರ್, “ಎಚ್‌ ಡಿ ಕುಮಾರಸ್ವಾಮಿ ಅವರು ನನ್ನನ್ನೆ ಸ್ಪರ್ಧೆ ಮಾಡುವಂತೆ ಹೇಳಿದ್ದಾರೆ. ನನ್ನ ಸ್ಪರ್ಧೆಯಲ್ಲಿ ಯಾವುದೇ ಅನುಮಾನವಿಲ್ಲ. ನಾನೇ ಮೈತ್ರಿ ಅಭ್ಯರ್ಥಿ, ಅಧಿಕೃತವಾಗಿ ಘೋಷಣೆಯೊಂದೇ ಬಾಕಿಯಿದೆ. ಕುಮಾರಸ್ವಾಮಿಯವರೇ ಬಂದು ಇದನ್ನು ಘೋಷಣೆ ಮಾಡಬೇಕು” ಎಂದು ಹೆಚ್ ಡಿ ಕುಮಾರಸ್ವಾಮಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಹಾಗೆ ನೋಡೋಕೆ ಹೋದರೆ ಇದು ಯೋಗೇಶ್ವರ್ ತಂತ್ರಗಾರಿಕೆ ಎನ್ನುವುದಕ್ಕಿಂತ, ಕುಮಾರಸ್ವಾಮಿಯವರ ಯೋಚನೆಗೆ ಹಾಕಿದ ಬ್ರೇಕ್ ಎಂದರೂ ತಪ್ಪಿಲ್ಲ. ಹೆಚ್.ಡಿ.ಕುಮಾರಸ್ವಾಮಿ ಈಗಾಗಲೇ ಗ್ರಾಮಾಂತರ ಸಂಸದ ಸಿಎನ್ ಮಂಜುನಾಥ್ ದಂಪತಿಗಳ ಸಮೇತ ಕೇಂದ್ರ ಬಿಜೆಪಿ ನಾಯಕರ ಭೇಟಿ ಮಾಡಿದ್ದು, ದೇವೇಗೌಡರ ಮಗಳು ಅನಸೂಯಾ ಮಂಜುನಾಥ್ ಅವರನ್ನ ಅಭ್ಯರ್ಥಿ ಮಾಡಲು ದುಂಬಾಲು ಬಿದ್ದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಸಂಸತ್ ಚುನಾವಣೆಗೂ ಮುನ್ನ ಸಿಪಿ ಯೋಗೇಶ್ವರ್ ಗೆ ಮುಂದಿನ ಚನ್ನಪಟ್ಟಣ ಅಭ್ಯರ್ಥಿ ನೀವೇ ಎಂಬ ಭರವಸೆ ನೀಡಿದ ಕುಮಾರಸ್ವಾಮಿ, ಈಗ ತನ್ನ ಕಣ್ತಪ್ಪಿಸಿ ಕೇಂದ್ರ ನಾಯಕರೊಂದಿಗೆ ಲಾಬಿ ನಡೆಸಿರುವುದು ಸಧ್ಯ ಯೋಗೇಶ್ವರ್ ಕೆಂಗಣ್ಣಿಗೆ ತುತ್ತಾದಂತಾಗಿದೆ. ಹೀಗಾಗಿ ನೇರ ಕುಮಾರಸ್ವಾಮಿಯವರ ಬಾಯಿಂದಲೇ ನನ್ನನ್ನು ಮೈತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಬೇಕು ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಅವರು ಎನ್‌ ಡಿಎ ಮೈತ್ರಿಯಿಂದ ಗೆದ್ದು ಕೇಂದ್ರ ಮಂತ್ರಿಯಾಗಿದ್ದಾರೆ. ಬಹಳ ಎತ್ತರದ ಸ್ಥಾನಕ್ಕೆ ಹೋಗಿದ್ದಾರೆ. ಅವರು ಚನ್ನಪಟ್ಟಣಕ್ಕೆ ಬಾರದೇ ಇದ್ದರೆ ನಾನು ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನೆ ಕಾಣುತ್ತಿರಲಿಲ್ಲ. ಚನ್ನಪಟ್ಟಣ ಜನ ನನ್ನನ್ನ ಕೈ ಬಿಡುತ್ತಿರಲಿಲ್ಲ. ನೀವು ಬಂದ ಮೇಲೆ ನಮ್ಮ ಸಮುದಾಯ ನಿಮ್ಮ ಕೈ ಹಿಡಿದು ಎರಡು ಬಾರಿ ಗೆಲ್ಲಿಸಿದೆ. ಹಾಗಾಗಿ ಕುಮಾರಸ್ವಾಮಿ ಅವರೇ ಬಂದು ನಮ್ಮ ಚುನಾವಣೆ ಮಾಡಬೇಕು ಎಂದು ಸಿಪಿವೈ ಹೇಳಿದ್ದರ ಹಿಂದೆ ಕುಮಾರಸ್ವಾಮಿಯವರ ಹಿಂಬಾಗಿಲ ರಾಜಕಾರಣವನ್ನು ಪತ್ರಿಕಾಗೋಷ್ಠಿಯ ಮೂಲಕ ಪರೋಕ್ಷವಾಗಿ ತಿವಿದಿದ್ದಾರೆ.

ನಿನ್ನೆಯ ಸಿಪಿ ಯೋಗೇಶ್ವರ್ ಪತ್ರಿಕಾಗೋಷ್ಠಿಯ ನಂತರ ಕುಮಾರಸ್ವಾಮಿಗೆ ಅಭ್ಯರ್ಥಿ ಘೋಷಣೆ ಮಾಡದೇ ವಿಧಿ ಇಲ್ಲ ಎನ್ನುವಂತಾಗಿದೆ. ಹೇಗಿದ್ದರೂ ಕುಮಾರಸ್ವಾಮಿ ಕರ್ನಾಟಕದಲ್ಲೇ ಇದ್ದಾರೆ. ಇನ್ನೆರೆಡು ದಿನ ಏನಿಲ್ಲವೆಂದರೂ ಬೆಂಗಳೂರು ಕಾರ್ಯಕ್ರಗಳೇ ಇವೆ. ಹೀಗಿರುವಾಗ ಅಭ್ಯರ್ಥಿ ಘೋಷಣೆ ಮಾಡದಿದ್ದರೆ ಸಿಪಿ ಯೋಗೇಶ್ವರ್ ಯಾವ ಸಮಯದಲ್ಲೂ ಕುಮಾರಸ್ವಾಮಿಗೆ ತಿರುಗಿ ಬೀಳುವ ಸಾಧ್ಯತೆ ಇದೆ.

ಅಂದಹಾಗೆ ಸಿಪಿ ಯೋಗೇಶ್ವರ್ ಗೆ ಚನ್ನಪಟ್ಟಣ ತನ್ನ ಪ್ರಮುಖ ಕಾರ್ಯಕ್ಷೇತ್ರವಾಗಿದೆ. ಕುಮಾರಸ್ವಾಮಿ ಅಥವಾ ಇನ್ಯಾರೇ ಘಟಾನುಘಟಿ ನಾಯಕರ ಹೊರತಾಗಿ ಇಲ್ಲಿ ಕಣ್ಮುಚ್ಚಿಕೊಂಡು ಗೆಲ್ಲುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಸಿಪಿ ಯೋಗೇಶ್ವರ್ ಗೆ ಕುಮಾರಸ್ವಾಮಿ ಬೇರಾವುದೇ ಆಮಿಷ ತೋರಿಸಿದರೂ ಸಿಪಿ ಯೋಗೇಶ್ವರ್ ಬಂಡಾಯ ಏಳಬಹುದು. ಸಧ್ಯದ ಪರಿಸ್ಥಿತಿಯಲ್ಲಿ ಕುಮಾರಸ್ವಾಮಿ ಕಡೆಯಿಂದ ಅಧಿಕೃತ ಅಭ್ಯರ್ಥಿ ಘೋಷಣೆ ಮಾಡದೇ ಇದ್ದರೆ ಬಂಡಾಯವೊಂದೇ ಸಿಪಿ ವೈ ಅವರ ಮುಂದಿರುವ ದಾರಿಯಾಗಿದೆ.

ಇತ್ತ ಕಾಂಗ್ರೆಸ್ ಕೂಡ ಈ ವರೆಗೆ “ಅಚ್ಚರಿಯ ಅಭ್ಯರ್ಥಿ”ಯ ಹೇಳಿಕೆ ನೀಡುತ್ತಿದ್ದರೂ ಎಲ್ಲೆಡೆ ಊಹಾಪೋಹದ ಅಭ್ಯರ್ಥಿಗಳೇ ಬಂದು ಹೋಗುತ್ತಿದ್ದಾರೆ. ಅಕಸ್ಮಾತ್ ಕುಮಾರಸ್ವಾಮಿ ಬಿಜೆಪಿ ನಾಯಕರ ಒಲಿಸಿ ಬೇರಾರನ್ನೇ ಚನ್ನಪಟ್ಟಣಕ್ಕೆ ತಂದು ನಿಲ್ಲಿಸಿದರೆ “ಕಾಂಗ್ರೆಸ್ ಪಕ್ಷದ ಅಚ್ಚರಿಯ ಅಭ್ಯರ್ಥಿ ಸಿಪಿ ಯೋಗೇಶ್ವರ್” ಆದರೂ ಆಶ್ಚರ್ಯವಿಲ್ಲ.

ಹೌದು. ಸಿಪಿ ಯೋಗೇಶ್ವರ್ ಗೆ ಡಿಕೆ ಬ್ರದರ್ಸ್ ನಡುವೆ ಅಂತಹ ಯಾವುದೇ ವಯಕ್ತಿಕ ದ್ವೇಷವಿಲ್ಲ. ಕುಮಾರಸ್ವಾಮಿ ಏನೋ ಕಂಡಕಂಡಲ್ಲಿ ಡಿಕೆ ಸುರೇಶ್ ಮತ್ತು ಡಿಕೆ ಶಿವಕುಮಾರ್ ಅವರ ಮೇಲೆ ಕೆಂಡಕಾರುತ್ತಿದ್ದರೆ, ಇತ್ತ ಯೋಗೇಶ್ವರ್ ಇದರಿಂದ ಅಂತರವೇ ಕಾಯ್ದುಕೊಂಡಿದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷ ಸಿಪಿ ಯೋಗೇಶ್ವರ್ ಅವರನ್ನು ಸಂಪರ್ಕಿಸಿದೆ ಎಂಬ ಸುದ್ದಿಯೂ ಈಗ ಚನ್ನಪಟ್ಟಣದಲ್ಲಿ ಎಲ್ಲೆಡೆ ರಾಜಕೀಯದ ಬಿಸಿ ಚರ್ಚೆಗೆ ವೇದಿಕೆಯಾಗಿದೆ. ಅದರ ಒಂದು ಭಾಗವೇ ನಿನ್ನೆಯ ಸಿಪಿ ಯೋಗೇಶ್ವರ್ ಅವರ ಪತ್ರಿಕಾಗೋಷ್ಠಿ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.

ಅದೂ ಅಲ್ಲದೇ ಯೋಗೇಶ್ವರ್ ಗೆ ಕಾಂಗ್ರೆಸ್ ಪಕ್ಷ ಹೊಸತೇನೂ ಅಲ್ಲ. ಕಾಂಗ್ರೆಸ್ ನಲ್ಲಿ ಇದ್ದಷ್ಟು ದಿನ ಹಲವು ಹುದ್ದೆಗಳನ್ನು ಅನುಭವಿಸಿದ್ದರು. ಈ ಬಾರಿ ಕಾಂಗ್ರೆಸ್ ಗೆ ಬಂದರೆ ಒಳ್ಳೆಯ ಸ್ಥಾನಮಾನದ ಭರವಸೆ ಕೊಡುವ ಬಗ್ಗೆಯೂ ಕಾಂಗ್ರೆಸ್ ನಲ್ಲಿ ಮಾತುಕತೆ ನಡೆದಿದೆ ಎನ್ನಲಾಗಿದೆ. ಅಂತೂ ಶುಕ್ರವಾರದ ಯೋಗೇಶ್ವರ್ ಪತ್ರಿಕಾಗೋಷ್ಠಿ ಕುಮಾರಸ್ವಾಮಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

You cannot copy content of this page

Exit mobile version