ಹಾಸನ: ನೀರಾವರಿ ಯೋಜನೆಗಳು ಸೇರಿದಂತೆ ರೈತರ ಸಮಸ್ಯೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿರುವ ರಾಜ್ಯ ಸರ್ಕಾರದ ವಿರುದ್ಧ ರಾಜ್ಯವ್ಯಾಪ್ತಿ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ರೈತ ಸಂಘದ ಉತ್ತರ ಕರ್ನಾಟಕ-ಕಲ್ಯಾಣ ಕರ್ನಾಟಕ ವಿಭಾಗದ ನಾಯಕ ವಾಸುದೇವ್ ಮೇಟಿ ಎಚ್ಚರಿಕೆ ನೀಡಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರ ಕುಂದುಕೊರತೆಗಳನ್ನು ನೇರವಾಗಿ ತಿಳಿದುಕೊಳ್ಳುವ ಉದ್ದೇಶದಿಂದ ರಾಜ್ಯದ 30 ಜಿಲ್ಲೆಗಳ ಪ್ರತಿಯೊಂದು ತಾಲೂಕಿನಲ್ಲಿ ಪ್ರವಾಸ ಕೈಗೊಂಡು ರೈತರನ್ನು ಭೇಟಿ ಮಾಡಲಾಗುತ್ತಿದೆ. ಅದರ ಭಾಗವಾಗಿ ಮೊದಲ ಬಾರಿಗೆ ಹಾಸನ ಜಿಲ್ಲೆಗೆ ಭೇಟಿ ನೀಡಲಾಗಿದೆ. ರಾಜ್ಯದ ಮುಖ್ಯಮಂತ್ರಿ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು, ನೀರಾವರಿ ಯೋಜನೆಗಳ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ ತೀವ್ರವಾಗಿದೆ ಎಂದು ಆರೋಪಿಸಿದರು. ತುಂಗಭದ್ರಾ ನದಿಯಲ್ಲಿ ವರ್ಷಗಳಿಂದ 32 ಟಿಎಂಸಿ ಮಣ್ಣು ತುಂಬಿಕೊಂಡಿದ್ದರೂ, ಅದರ ಪರ್ಯಾಯವಾಗಿ ಜಲಾಶಯ ನಿರ್ಮಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಘೋಷಿಸಿದ್ದರು. ಆದರೆ ಇದುವರೆಗೆ ಯಾವುದೇ ಅನುದಾನ ಒದಗಿಸಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5,350 ಕೋಟಿ ರೂ. ಅನುದಾನ ನಿಗದಿ ಮಾಡಿದ್ದರೂ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ಕಾರಣಕ್ಕೆ ಅಥವಾ ರೈತರಿಗೆ ಮೋಸ ಮಾಡುವ ಉದ್ದೇಶದಿಂದ ಆ ಹಣವನ್ನು ಬಳಸದೇ ಕೇಂದ್ರ ಸರ್ಕಾರವೇ ಹಿಂದಕ್ಕೆ ಪಡೆಯುವಂತಾಗಿದೆ. ಹೀಗಾಗಿ ಇದನ್ನು ರಾಜ್ಯದ ರೈತರು ತೀವ್ರವಾಗಿ ಖಂಡಿಸುತ್ತಿದ್ದಾರೆ ಎಂದರು. ಅಧಿವೇಶನದಲ್ಲಿ ಹೋರಾಟ ನಡೆಸಿದಾಗ ಕೇಂದ್ರ ತಂಡ ಪರಿಶೀಲನೆ ನಡೆಸಿದ್ದು, ಸುಮಾರು 75 ಸಾವಿರ ಕೋಟಿ ರೂ. ವೆಚ್ಚ ಎಂದು ಅಂದಾಜಿಸಲಾಗಿದೆ. ಈ ಯೋಜನೆಯಲ್ಲಿ ಕೇಂದ್ರ ಸರ್ಕಾರ ಶೇ.60 ಮತ್ತು ರಾಜ್ಯ ಸರ್ಕಾರ ಶೇ.40 ರಷ್ಟು ಅನುದಾನ ನೀಡಬೇಕಾಗಿದ್ದರೂ, ರಾಜ್ಯ ಸರ್ಕಾರ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಉತ್ತರ ಕರ್ನಾಟಕದಲ್ಲಿ ಏಳು ನದಿಗಳು ಹರಿದರೂ ಒಂದಕ್ಕೂ ಸರ್ಕಾರ ಒಂದು ನಯಪೈಸೆಯ ಅನುದಾನ ನೀಡಿಲ್ಲ. ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಒಂದು ದಿನವೂ ಕ್ಷೇತ್ರ ಪ್ರವಾಸ ಕೈಗೊಂಡಿಲ್ಲ. ಬೆಂಗಳೂರು ನಗರಕ್ಕೆ ಮಾತ್ರ ಸೀಮಿತರಾಗಿರುವ ಅವರು ನೀರಾವರಿ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿರುವುದರಿಂದ ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಇನ್ನೂ ಬೆಳೆ ಪರಿಹಾರ ಸರಿಯಾಗಿ ದೊರಕುತ್ತಿಲ್ಲ, ಬೆಳೆ ವಿಮೆ ಹಣವೂ ರೈತರಿಗೆ ತಲುಪುತ್ತಿಲ್ಲ. ಉಳಿದ ಹಣಕ್ಕಾಗಿ ಒತ್ತಾಯಿಸಿದರೆ ಸುಳ್ಳು ಉತ್ತರ ನೀಡಲಾಗುತ್ತಿದೆ. ಮೆಕ್ಕೆಜೋಳ ಹಾಗೂ ಭತ್ತ ಖರೀದಿ ಕೇಂದ್ರಗಳನ್ನು ಸರ್ಕಾರ ತೆರೆಯದೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕೃಷಿ ಸಚಿವರು ಮೆಕ್ಕೆಜೋಳ ಖರೀದಿಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಹೇಳಿರುವುದು ರಾಜ್ಯ ಸರ್ಕಾರದ ಜವಾಬ್ದಾರಿ ತಪ್ಪಿಸುವ ನಿಲುವನ್ನು ತೋರಿಸುತ್ತದೆ ಎಂದು ಟೀಕಿಸಿದರು.
ಈ ಎಲ್ಲ ಕಾರಣಗಳಿಂದ ಮುಂದಿನ ದಿನಗಳಲ್ಲಿ ನೀರಾವರಿ ಯೋಜನೆಗಳು ಹಾಗೂ ರೈತರ ಸಮಸ್ಯೆಗಳ ಕುರಿತು ರಾಜ್ಯವ್ಯಾಪ್ತಿ ಆಂದೋಲನ ಅನಿವಾರ್ಯವಾಗಲಿದೆ ಎಂದು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಸಂಗಣ್ಣ ಬಾಗಿವಾಡಿ, ಎಸ್.ಕೆ. ಪೂಜಾರ್, ಜಿಲ್ಲಾ ಅಧ್ಯಕ್ಷ ಮಂಜುನಾಥ್, ಹಾಸನ ತಾಲೂಕು ಅಧ್ಯಕ್ಷ ದೇವೇಗೌಡ, ಹೊಳೆನರಸೀಪುರ ತಾಲೂಕು ಅಧ್ಯಕ್ಷ ದಯಾನಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
