ಗೀತಾ ನಾರಾಯಣ್ ಅವರ ಒಂದು ಬೆಳಗಿನ ಕವಿತೆ.. ತಪ್ಪದೇ ಓದಿ
ಎಂದಾದರೂ ಒಬ್ಬನೇ ನನ್ನ ಊರಿಗೆ ಬಂದಾಗ!!
ನನ್ನ ಮನೆಯ ಅಂಗಳದ ಕಡೆ ಕಣ್ ಹಾಯಿಸಿ ನಡೆದು ಬಿಡು ಗೆಳೆಯ
ನೀ ಕಟ್ಟಿ ಹೋದ ತೋರಣ
ಹಸಿರಾಗಿಯೇ ಇಹುದು!!!
ಅದೇ ತುಳಸಿಯ ಕಟ್ಟೆ
ಹಳೆಯ ಬಾವಿ
ಪಕ್ಕದ ಕಲ್ಲು ಹಾಸು
ಎಲ್ಲವೂ ಮಾಮೂಲಿ
ಅದೇಕೋ? ಕಾಣೆ?
ಗುಲ್ ಮೊಹರ್ ಈ ವರ್ಷ ಚಿಗುರಿಲ್ಲ ಅಷ್ಟೇ!!!
ಮನೆಯ ಒಳಗೆ ಇನ್ನೇನಿದೆ
ಒಡಕು ಕನ್ನಡಿ
ಮುಖವೇ ಕಾಣುವುದಿಲ್ಲ
ದಿಂಬಿನ ಕೆಳಗೊಂದು ದಿನಚರಿಯ ಪುಸ್ತಕ
ಆಗೊಮ್ಮೆ ಈಗೊಮ್ಮೆ ಗೀಚಿದ ಕೆಲವು ಸಾಲುಗಳು
ಒಂದಿಷ್ಟು ಗಝಲ್ ಕ್ಯಾಸೆಟ್ ಗಳು
ಮನೆಯ ತುಂಬೆಲ್ಲಾ ಜೇಡ ಬಲೆ ಹೆಣೆದಿದೆ
ಬರುವ ಉಗಾದಿ ವೇಳೆಗೆ ತೆಗೆದು ಸ್ವಚ್ಛ ಮಾಡಬೇಕೆಂದಿದ್ದೇನೆ
ನಿನಗಿನ್ನೂ ಇಷ್ಟವಾದರೆ
ಅಂಗಳದ ಬದಿಯ ಮೆಟ್ಟಿಲೇರಿ ಟೆರೇಸಿಗೆ ಬಂದುಬಿಡು
ಅಲ್ಲಿ ಮಡಿಸದ ಹಾಸದ ಚಾದರವಿದೆ
ನಾ ಅಲ್ಲೇ ಮಲಗುವುದು ಕಣ್ ಬಿಟ್ಟುಕೊಂಡು
ಮೊನ್ನೆ ಮರೆಯಾದ ಚೆಂದಿರನ ಬೈಯ್ಯುತ್ತಾ
ಚುಕ್ಕಿಗಳ ಎಣಿಸಿ ಸೋತು
ಮಗ್ಗುಲ ಬದಲಿಸಿದೆ
ಅದೇಕೋ ನಿನ್ನ ನೆನಪಾಯ್ತು
ಸಾಧ್ಯವಾದರೆ ಗುಲ್ಮೊಹರ್ ಗೆ ನೀರು ಹಾಕುತ್ತೇನೆ.
