ಅಲ್ಲಮನ “ಮದ್ದಳೆ”ಯ ಶಬುದವಿಲ್ಲಿ ಉಸಿರಾಡುತ್ತಿದೆ
ಅದೆಷ್ಟು ಹದಮಳೆ,ಮೆದುಮಳೆ,ಅಬ್ಬರದ ಮಳೆಗಾಲ ಗಳು ಬಂದುಹೋದರು ಅವಳ ಹೆಜ್ಜೆಯ ಚಹರೆಗಳು ಅಳಿದಿಲ್ಲ
ಅಚ್ಚಬಿಳಿಯ ಪತಂಗಗಳ ಹಿಂಡು ನಿಂತುಹೋದ ತಟನಿಯ ಮೇಲೆ ಹಾರುತ್ತಲೇ ಹರಿವ ಉದಕದ ಪರಿಮಳಕ್ಕೆ ಕಾಯುತ್ತಿವೆ. ದೊಡ್ಡದೊಂದು ಮಾರುತ ಸಾಕಲ್ಲ ಏಕಾಗ್ರತೆಯ ಕದಡಲು..
ಯಾವ ಸಿಹಿಯ ಪರಿಮಳವೂ ಹೂಗಂಧಕ್ಕೆ ಹೊಂದಲಾರದು!!
ಅಲ್ಲಮ ನಡೆದ ಹಾದಿಯಲ್ಲಿನ ಶೂನ್ಯಕ್ಕೆ ಹೂಮುಡಿವ ಕೂರ್ಮೆಯ ಅಮಲು…
ಒಲವೆಲ್ಲವ ಕೊಡವಿ ಬರಿದಾಗಿ ಹೊರಟ ದಿನ ಹುಣ್ಣಿಮೆಗೆ ಭವಿಷ್ಯವಿಲ್ಲ; ಮದ್ದಳೆಯ ಲಯದ ಅಲೆಗಳು
ಹೊಸಹಾದಿಹಿಡಿದು ಮೌನವನ್ನೇ ಸವಿಯುತ್ತಿವೆ…..
ಸಿಂಗಾರದಂಬರಗಳೇನು ಬೇಕಿಲ್ಲದ ಅದೇ ಅವಳಿಗೆ ಎಂಬ
ಪುರಾವೆಗಳನ್ನು ಅಗೆದಗೆದು ಹೊರಚೆಲ್ಲುವ ಅನಿವಾರ್ಯವಿಲ್ಲ.
ಕ್ಷಾಮದ ಬಗೆಬಗೆಯ ಅಸ್ಥಿರತೆಯನೆಲ್ಲ ಸೃಷ್ಟಿಸಿಯಾದ ಮೇಲೆ ಹೃದಯಕ್ಕೆ ಪ್ರೀತಿ ಬಳಿಯಬೇಕಿಲ್ಲ
ತನ್ನಷ್ಟಕ್ಕೆ ಪ್ರಖರಗೊಳ್ಳುವ ಚಿತ್ತಬೆರಗಿಗೆ ಮಧುಕೇಶ್ವರನ ಗುಡಿಯಲ್ಲಿ ತಬ್ಬಲಿಯಾಗಿ ಅಲೆದ ಪ್ರೇಮವನ್ನು ಹೊತ್ತೊಯ್ಯುವತ್ತಲೇ ಧ್ಯಾನ…
ಮದ್ದಳೆಯ ಶಬುದವ ನಿರಾಕರಿಸಿ ನಡೆಯುವಾಗ
ಒಲುಮೆಯ ಅನುಭೂತಿ ಅನಾಥವಾಗದೆ ಕದಳಿಯಲ್ಲಿ ಬಯಲಾಯ್ತು…
ಗೀತಾ ನಾರಾಯಣ್
