ಹಾಸನ : ದಲಿತ ಮಹಿಳೆಯರು ಮತ್ತು ಯುವಕನ ಮೇಲೆ ಹಲ್ಲೆ ನಡೆಸಿ ಜಾತಿ ದೌರ್ಜನ್ಯ ಎಸಗಿರುವವರನ್ನು ಕೂಡಲೇ ಬಂಧಿಸಿ, ನೊಂದ ದಲಿತರಿಗೆ ರಕ್ಷಣೆ ನೀಡಿ ನ್ಯಾಯ ದೊರಕಿಸಬೇಕೆಂದು ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿ ಕರ್ನಾಟಕದಿಂದ ಡಿಸಿ ಕಛೇರಿ ಆವರಣದಲ್ಲಿ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ದಲಿತ ಹಿರಿಯ ಮುಖಂಡ ಹೆಚ್.ಕೆ. ಸಂದೇಶ್ ಮಾತನಾಡಿ, ಹಾಸನ ತಾಲ್ಲೂಕು, ಕಟ್ಟಾಯ ಹೋಬಳಿಯ ಚನ್ನಂಗಿಹಳ್ಳಿ ಗ್ರಾಮದ ಕಮಲಮ್ಮ ಮತ್ತು ಆಕೆಯ ತಂಗಿ ರಾಜಮ್ಮ ಎಂಬ ದಲಿತ ಮಹಿಳೆಯರ ಮೇಲೆ ಅಣ್ಣೆಗೌಡ ಮತ್ತು ಆತನ ಮಗ ಹರೀಶ್ ಎಂಬುವವವರು ವ್ಯಕ್ಯ ದೊಣ್ಣೆ ಯಿಂದ ಹಲ್ಲೆ ನಡೆಸಿದ್ದಾನೆ.
ತಾಯಿ ಮತ್ತು ಚಿಕ್ಕಮ್ಮನ ಮೇಲೆ ಹಲ್ಲೆ ನಡೆಸುತ್ತಿದ್ದನ್ನು ಬಿಡಿಸಲು ಹೋದ ಕಿರಣ್ ಕುಮಾರ್ ಎಂಬ ದಲಿತ ಯುವಕನ ಮೇಲೂ ಹಲ್ಲೆ ನಡೆಸಿ ಜಾತಿ ದೌರ್ಜನ್ಯ ನಡೆಸಲಾಗಿದೆ ಎಂದು ದೂರಿದರು. ಕಮಲಮ್ಮ ಎಂಬ ದಲಿತ ಮಹಿಳೆ ಅದೇ ಗ್ರಾಮದ ನಂಜೇಗೌಡರ ಜಮೀನನ್ನು ವಾರಕ್ಕೆ ಪಡೆದಿದ್ದು ದಿನಾಂಕ 2025 ಜುಲೈ 22ರ ಸಂಜೆ 4.30 ಗಂಟೆಗೆ ಸಮಯದಲ್ಲಿ ದನ ಮೇಯಿಸಿಕೊಂಡು ಬರಲು ಜಮೀನಿಗೆ ಹೋಗಿದ್ದ ಸಂದರ್ಭದಲ್ಲಿ ಆ ಜಮೀನಿನಲ್ಲಿ ಸೌದೆ ಹಾಕಿದ್ದ ಅಣ್ಣೆಗೌಡ ಎಂಬುವ ವ್ಯಕ್ತಿಯನ್ನು ಸೌದೆಯನ್ನು ಎತ್ತಿಕೊಳ್ಳಿ ಎಂದು ಕೇಳಿದಕ್ಕೆ ಅಣ್ಣೆಗೌಡನು ಕಮಲಮ್ಮನನ್ನು ಹೊಡೆದು ಲೈಂಗಿಕ ದೌರ್ಜನ್ಯ ನಡೆಸಲು ಎಳೆದಾಡಿದ್ದು, ಅದನ್ನ ತಡೆಯಲು ಮುಂದಾಗಿದ್ದಕ್ಕೆ ಮನ ಬಂದAತೆ ದೊಡ್ಡೆಯಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆ ಮಾಡಿದದ್ದನ್ನು ತಿಳಿದು ಕಮಲಮ್ಮನ ತಂಗಿ ರಾಜಮ್ಮ ಅಣ್ಣೆಗೌಡನ ಮನೆ ಬಳಿ ಹೋಗಿ ಪ್ರಶ್ನಿಸಿದ್ದಕ್ಕೆ ಕೀಳು ಜಾತಿಯವಳು ನನ್ನ ಮನೆಯ ಹತ್ತಿರ ಬಂದಿದ್ದೀಯ ಎಂದು ಅಣ್ಣೆಗೌಡನು ರಾಜಮ್ಮನ ಪಕಾಳಕ್ಕೆ ಬಲವಾಗಿ ಹೊಡೆದು ದೊಣ್ಣೆಯಿಂದ ಹಲ್ಲೆನಡೆಸಿದ್ದಾನೆ. ಅಷ್ಟೇಗೌಡರ ಮಗ ಹರೀಶ ಎಂಬುವವನೂ ಜೊತೆಗೆ ಸೇರಿಕೊಂಡು ಹೊಡೆದಿದ್ದಾನೆ ಎಂದರು. ಚಿಕ್ಕಮ್ಮನನ್ನು ಹೊಡೆಯುತ್ತಿದ್ದುದನ್ನು ಕಂಡು ಜಗಳ ಬಿಡಿಸಲು ಹೋದ ಕಮಲಮ್ಮನ ಮಗನಾದ ಕಿರಣ್ ಕುಮಾರ್ ಎಂಬ ಯುವಕನ ಮೇಲೆಯೂ ಎರಗಿ ಹೊಡೆದಿದ್ದಾರೆ. ನಂತರ ಅಣ್ಣೆಗೌಡನಿಂದ ಹಲ್ಲೆಗೊಳಗಾಗಿ ನಿತ್ರಾಣಗೊಂಡಿದ್ದ ಕಮಲಮ್ಮನನ್ನು ಅದೇ ದಿನ ಸಂಜೆ 7 ಗಂಟೆ ಸುಮಾರಿಗೆ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಬಗ್ಗೆ ಆಸ್ಪತ್ರೆಯಲ್ಲಿ ಎಂ.ಎಲ್.ಸಿ. ಮಾಡಲಾಗಿದೆ. ಮರುದಿನ ಕಮಲಮ್ಮನ ತಂಗಿ ರಾಜಮ್ಮ ಹಲ್ಲೆ ನಡೆಸಿರುವ ಬಗ್ಗೆ ಗೊರೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಹೇಳಿದರು.
ದಲಿತ ಮಹಿಳೆಯರು ಮತ್ತು ಯುವಕನ ಮೇಲಿನ ಈ ಅಮಾನವೀಯ ಜಾತಿ ದೌರ್ಜನ್ಯ ಮತ್ತು ಹಲ್ಲೆಯನ್ನು ದಲಿತ ಹಕ್ಕುಗಳ ಸಮಿತಿ- ಕರ್ನಾಟಕ ತೀವ್ರವಾಗಿ ಖಂಡಿಸುತ್ತದೆ. ತಪ್ಪಿತಸ್ಥ ಅಣ್ಣೇಗೌಡ ಹಾಗು ಹರೀಶ್ ಎಂಬುವವರನ್ನು ಕೂಡಲೆ ಪೊಲೀಸರು ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. ನೊಂದ ದಲಿತ ಮಹಿಳೆಯರು, ಯುವಕ ಮತ್ತು ಕುಟುಂಬಕ್ಕೆ ರಕ್ಷಣೆ ಹಾಗು ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಹಾಸನದಲ್ಲಿ ದಿನೇ ದಿನೇ ದಲಿತರ ಮೇಲೆ ಈ ರೀತಿಯ ಜಾತಿ ದೌರ್ಜನ್ಯ, ಹಲ್ಲೆಗಳು ಹೆಚ್ಚುತ್ತಿರುವುದನ್ನು ತಡೆಗಟ್ಟಲು ಕಠಿಣ ಕ್ರಮ ವಹಿಸಬೇಕೆಂದು ಈ ಮೂಲಕ ಮನವಿ ಮಾಡುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಸಮಿತಿ ಕರ್ನಾಟಕ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಯ ಮುಖಂಡರಾದ ಧರ್ಮೇಶ್, ಎಂ.ಜಿ. ಪೃಥ್ವಿ, ಟಿ.ಆರ್. ವಿಜಯಕುಮಾರ್, ರಮೇಶ್, ಅರವಿಂದ್ ಇತರರು ಉಪಸ್ಥಿತರಿದ್ದರು.