Home Uncategorized ಹೊಸ ಕ್ರಿಮಿನಲ್‌ ಕಾನೂನುಗಳ ಜಾರಿ: ʼಬುಲ್ಡೋಜರ್‌ ನ್ಯಾಯʼ ಎಂದ ಖರ್ಗೆ

ಹೊಸ ಕ್ರಿಮಿನಲ್‌ ಕಾನೂನುಗಳ ಜಾರಿ: ʼಬುಲ್ಡೋಜರ್‌ ನ್ಯಾಯʼ ಎಂದ ಖರ್ಗೆ

0

ನವದೆಹಲಿ: ಕಳೆದ ಲೋಕಸಭೆಯಲ್ಲಿ 146 ಸಂಸದರನ್ನು ಅಮಾನತು ಮಾಡುವ ಮೂಲಕ ಒತ್ತಾಯಪೂರ್ವಕವಾಗಿ ಈ ಹೊಸ ಮೂರು ಕ್ರಿಮಿನಲ್ ಕಾನೂನುಗಳನ್ನು ಅಂಗೀಕರಿಸಲಾಗಿದೆ. ಇದು ದೇಶದಲ್ಲಿ ಸಂಸದೀಯ ವ್ಯವಸ್ಥೆಯನ್ನು ನಾಶಪಡಿಸುವ ‘ಬುಲ್ಡೋಜರ್ ನ್ಯಾಯ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

ದೇಶದ ಕ್ರಿಮಿನಲ್‌ ನ್ಯಾಯ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆ ತರುವ ಉದ್ದೇಶದಿಂದ ಹೊಸ ಮೂರು ಕ್ರಿಮಿನಲ್‌ ಅಪರಾಧ ಕಾನೂನುಗಳು ಇಂದಿನಿಂದ ಜಾರಿಗೆ ಬಂದಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಮಲ್ಲಿಕಾರ್ಜುನ ಖರ್ಗೆ ಹಿಂದಿ ಭಾಷೆಯಲ್ಲಿ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಸಂಸದೀಯ ವ್ಯವಸ್ಥೆಯಲ್ಲಿ ಈ ‘ಬುಲ್ಡೋಜರ್ ನ್ಯಾಯ’ ಮೇಲುಗೈ ಸಾಧಿಸಲು ‘ಇಂಡಿಯಾ’ ಬಣ ಬಿಡುವುದಿಲ್ಲ’ಎಂದು ಅವರು ಪ್ರತಿಪಾದಿಸಿದ್ದಾರೆ.

‘ಚುನಾವಣೆಯಲ್ಲಿ ರಾಜಕೀಯ ಮತ್ತು ನೈತಿಕ ಆಘಾತ ಅನುಭವಿಸಿದ ಬಳಿಕ ಮೋದಿ ಜೀ ಮತ್ತು ಬಿಜೆಪಿ ಸಂವಿಧಾನವನ್ನು ಗೌರವಿಸುವ ರೀತಿ ನಾಟಕ ಮಾಡುತ್ತಿದ್ದಾರೆ. ಸತ್ಯವೇನೆಂದರೆ, ಇಂದು ಜಾರಿಗೆ ಬರುತ್ತಿರುವ ಮೂರು ಕ್ರಿಮಿನಲ್‌ ಅಪರಾಧ ಕಾನೂನುಗಳು ಲೋಕಸಭೆಯಲ್ಲಿ 146 ಸಂಸದರನ್ನು ಅಮಾನತು ಮಾಡಿ ಒತ್ತಾಯಪೂರ್ವಕವಾಗಿ ಮತ್ತು ಅಸಂವಿಧಾನಿಕವಾಗಿ ಜಾರಿಗೆ ತಂದವುಗಳಾಗಿವೆ’ ಎಂದಿದ್ದಾರೆ.

ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ 2023 ಹೊಸದಾಗಿ ಅನುಷ್ಠಾನಗೊಂಡಿರುವ ಕಾಯ್ದೆಗಳಾಗಿವೆ. 163 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ದಂಡ ಸಂಹಿತೆ, 126 ವರ್ಷಗಳ ಹಿಂದಿನ ಅಪರಾಧ ದಂಡಪ್ರಕ್ರಿಯಾ ಸಂಹಿತೆ ಮತ್ತು 151 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ಸಾಕ್ಷ್ಯ ಕಾಯ್ದೆಯ ಬದಲಿಗೆ ಈ ಮೂರು ಕಾನೂನುಗಳು ಜಾರಿಗೆ ಬಂದಿವೆ. ಸಮಾಜದ ವಾಸ್ತವಾಂಶ ಮತ್ತು ಅಪರಾಧಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ಕಾರ್ಯವಿಧಾನವನ್ನು ಹೊಸ ಕಾನೂನುಗಳ ಮೂಲಕ ಒದಗಿಸಲಾಗುತ್ತದೆ ಎಂದು ಈ ಕಾನೂನುಗಳ ಕುರಿತು ಎನ್‌ಡಿಎ ಸಮರ್ಥಿಸಿಕೊಂಡಿದೆ.

ಹೊಸ ಕಾನೂನುಗಳು ಶೀಘ್ರ ನ್ಯಾಯ ಒದಗಿಸಲು ಆದ್ಯತೆ ನೀಡುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ʼಸೋಮವಾರದಿಂದ, ಎಲ್ಲ ಹೊಸ ಎಫ್‌ಐಆರ್‌ಗಳನ್ನು ಬಿಎನ್‌ಎಸ್ ಅಡಿಯಲ್ಲಿ ದಾಖಲಿಸಲಾಗುತ್ತದೆ. ಈ ಹಿಂದೆ ದಾಖಲಾದ ಪ್ರಕರಣಗಳನ್ನು ಹಳೆಯ ಕಾನೂನುಗಳ ಅಡಿಯಲ್ಲಿ ವಿಚಾರಣೆಯನ್ನು ಮುಂದುವರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

You cannot copy content of this page

Exit mobile version