Sunday, May 5, 2024

ಸತ್ಯ | ನ್ಯಾಯ |ಧರ್ಮ

ಹೆಚ್ಚಾದ ಹಿಂದುತ್ವದ ಅಮಲು; ಹೆಸರುಗಳೇ ಬದಲು

ಇಲ್ಲಿ ಇರುವುದು ಕೇವಲ ಇಂಡಿಯಾ ಮತ್ತು ಭಾರತ ಎನ್ನುವ ಪದಗಳ ಬದಲಾವಣೆಯ ಆಟ ಮಾತ್ರ ಅಲ್ಲ. ಅದರ ಹಿಂದೆ ಹಿಂದೂ ರಾಷ್ಟ್ರದ ಸ್ಥಾಪನೆ, ಹಿಂದುತ್ವವಾದದ ಅನುಷ್ಠಾನ ಮತ್ತು ಆಚರಣೆ ಅಡಗಿದೆ. ಇಂತಹ ಸಂವಿಧಾನ ವಿರೋಧಿ ಇತಿಹಾಸ ಘಾತುಕ ತಂತ್ರಗಳನ್ನು ವಿರೋಧಿಸಿ ಜನರಲ್ಲಿ ಜಾಗೃತಿಯನ್ನುಂಟು ಮಾಡುವ ಕೆಲಸವನ್ನು ಪ್ರಗತಿಪರರು, ಪ್ರತಿಪಕ್ಷಗಳು ತೀವ್ರವಾಗಿ ಮಾಡಲೇಬೇಕಿದೆ -ಶಶಿಕಾಂತ ಯಡಹಳ್ಳಿ, ಪತ್ರಕರ್ತರು

ಈ ಹಿಂದುತ್ವವಾದಿಗಳ ಹಿಡನ್ ಅಜೆಂಡಾಗಳೆಲ್ಲಾ ಒಂದೊಂದಾಗಿ ಕಾರ್ಯಗತವಾಗುತ್ತಲೇ ಇವೆ. ಅದರ ಭಾಗವಾಗಿಯೇ ರೂಪಗೊಂಡಿದ್ದು 2020 ರ ರಾಷ್ಟ್ರೀಯ ಶಿಕ್ಷಣ ನೀತಿ (NEP). ಇದರ ಹಿಂದಿರುವ ಉದ್ದೇಶ ಹಿಂದುತ್ವವಾದಕ್ಕೆ ಪೂರಕವಾದ ವಿಷಯಾಧಾರಿತ ಪಠ್ಯಗಳನ್ನು ಶಾಲಾ ಮಕ್ಕಳಿಗೆ ಬೋಧಿಸುವ ಮೂಲಕ ಮುಂದಿನ ತಲೆಮಾರನ್ನು ಹಿಂದೂರಾಷ್ಟ್ರ ಸ್ಥಾಪನೆಗೆ ಹಾಗೂ ಮನುವಾದದ ಅನುಷ್ಟಾನಕ್ಕೆ ಸಿದ್ಧಗೊಳಿಸುವುದು.

ಈ ಆಶಯಕ್ಕೆ ಪೂರಕವಾಗಿ ಈಗಿರುವ ಪಠ್ಯಕ್ರಮಗಳನ್ನು  ಬದಲಾಯಿಸಿ ಪುನರ್ ರಚಿಸಲು ದಿನೇಶ್ ಸಕಲಾನಿಯವರ ಅಧ್ಯಕ್ಷತೆಯ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (NCERT)  ಸಿ.ಐ.ಐಸಾಕ್ ಎನ್ನುವ ಸಂಘಿ ಸಂತಾನದ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚನೆ ಮಾಡಿತ್ತು. ಸಂಘ ಪರಿವಾರದವರ ಕೂಟವಾದ ಈ ಸಮಿತಿ ಈಗ ಕೆಲವು ಶಿಪಾರಸ್ಸುಗಳನ್ನು ಮಾಡಿ ಹಿಂದುತ್ವವಾದಕ್ಕೆ ತಮ್ಮ ನಿಷ್ಠೆಯನ್ನು ತೋರಿಸಿದೆ.  

“ಹನ್ನೆರಡನೇ ತರಗತಿಯವರೆಗಿನ ಎಲ್ಲಾ ಪಠ್ಯಗಳಲ್ಲಿ ಇರುವ ಇಂಡಿಯಾ ಎನ್ನುವ ಹೆಸರನ್ನು ಬದಲಿಸಿ ಭಾರತ ಎನ್ನುವ ಹೆಸರನ್ನು ಸೇರಿಸಬೇಕು” ಎಂದು ಈ ಸಮಿತಿ ಶಿಪಾರಸ್ಸು ಮಾಡಿದೆ. ಭಾರತದ ಸಂವಿಧಾನದಲ್ಲಿ ಇಂಡಿಯಾ ಅಂದರೆ ಭಾರತವೆಂದು ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಸಂವಿಧಾನವನ್ನು ಹಂತಹಂತವಾಗಿ ಬದಲಿಸಲು ಬದ್ಧವಾಗಿರುವ ಸಂಘಿ ಸರಕಾರವು ಇಂಡಿಯಾವನ್ನು ಅಳಿಸಿ ಕೇವಲ ಭಾರತವನ್ನು ಉಳಿಸಿಕೊಂಡು ತನ್ನ ಉಗ್ರ ರಾಷ್ಟ್ರೀಯವಾದವನ್ನು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿದೆ.

ಯಾವಾಗ ಕೆಲವಾರು ಪ್ರತಿಪಕ್ಷಗಳು ಒಂದಾಗಿ ಇಂಡಿಯಾ ಹೆಸರಲ್ಲಿ ಅಲೈಯನ್ಸ್ ರಚಿಸಿಕೊಂಡವೋ ಆಗಿನಿಂದಾ ಈ ಇಂಡಿಯಾ ಶಬ್ದದ ಮೇಲೆಯೇ ಸಂಘ ಪರಿವಾರಕ್ಕೆ ಅಲರ್ಜಿ ಉಂಟಾಗಿದೆ. ಜಿ20 ಶೃಂಗ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ  ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲು ಪ್ರೆಸಿಡೆಂಟ್ ಆಫ್ ಭಾರತ್ ಎಂದು ನಮೂದಿಸಿದ್ದೇ ಇದಕ್ಕೆ ಸಾಕ್ಷಿಯಾಗಿದೆ. 

ಹೀಗಾಗಿ.. ಇಂಡಿಯಾ ಬದಲು ಭಾರತ ಎನ್ನುವುದನ್ನೇ ಪ್ರಚಾರಕ್ಕೆ ತರಲು ಬಿಜೆಪಿ ಪಕ್ಷ ಕಾರ್ಯನಿರತವಾಗಿದೆ. ಅದರ ಭಾಗವಾಗಿಯೇ ಶಾಲಾ ಕಾಲೇಜುಗಳ ಪಠ್ಯಗಳಲ್ಲಿ ಇಂಡಿಯಾ ಪದವನ್ನು ತೆಗೆದುಹಾಕಿ ಭಾರತ ಶಬ್ದ ಬಳಸಲು ಸಮಿತಿ ಶಿಪಾರಸ್ಸು ಮಾಡಿದೆ. ಅನುಷ್ಟಾನಕ್ಕೆ  ತರುವುದು ಬಾಕಿ ಇದೆ. 

ಇದಕ್ಕೆ ಪ್ರತಿಯಾಗಿ ಪ್ರತಿಪಕ್ಷಗಳು ತಮ್ಮ ಗುಂಪಿನ ಹೆಸರನ್ನು ಭಾರತ ಎಂದು ಬದಲಾಯಿಸಿಕೊಂಡರೆ ಈ ಹಿಂದುತ್ವವಾದಿಗಳು ಈ ದೇಶಕ್ಕೆ ಜಂಬೂದ್ವೀಪ ಇಲ್ಲವೇ ಆರ್ಯಾವರ್ತ ಎಂದು ನಾಮಕರಣ ಮಾಡುತ್ತಾರಾ? ಎಂದು ಪ್ರತಿಪಕ್ಷಗಳು ಲೇವಡಿ ಮಾಡಿವೆ. 

“ಭಾರತ ಎನ್ನುವುದು ಪುರಾತನ ಹೆಸರು, ಪುರಾಣಗಳಲ್ಲೂ ಈ ಹೆಸರು ಉಲ್ಲೇಖವಾಗಿದೆ. ಆದ್ದರಿಂದ ಇದೇ ಹೆಸರನ್ನು ಎಲ್ಲ ತರಗತಿಯ ಪಠ್ಯಪುಸ್ತಕಗಳಲ್ಲೂ ಬಳಸಬೇಕೆಂದು ಶಿಪಾರಸ್ಸು ಮಾಡಲು ನಮ್ಮ ಸಮಿತಿಯು ಸರ್ವಸಮ್ಮತಿಯಿಂದ ನಿರ್ಧರಿಸಿದೆ” ಎಂದು ಈ ಸಮಿತಿಯ ಅಧ್ಯಕ್ಷ ಸಿ.ಐ.ಇಸಾಕ್ ತಮ್ಮ ಶಿಪಾರಸ್ಸನ್ನು ಸಮರ್ಥಿಸಿಕೊಳ್ಳುವ ಮೂಲಕ ಇಂಡಿಯಾ ಅಂದರೆ ಭಾರತ ಎನ್ನುವ ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ. ಇಷ್ಟೇ ಅಲ್ಲದೇ “ಪಠ್ಯಕ್ರಮದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆ ಅಳವಡಿಸಬೇಕು, ಹಿಂದೂ ವಿಜಯವನ್ನು ಪಠ್ಯಗಳಲ್ಲಿ ಪ್ರಮುಖವಾಗಿ ದಾಖಲಿಸಬೇಕು, ಮೊಗಲರು ಹಾಗೂ ಸುಲ್ತಾನರ ವಿರುದ್ದ ಹಿಂದೂ ವಿಜಯವನ್ನು ಉಲ್ಲೇಖಿಸಬೇಕು” ಎಂದೆಲ್ಲಾ ಹಿಂದುತ್ವವಾದಿ ನಿಲುವಿನ ಶಿಪಾರಸ್ಸುಗಳನ್ನು ಇಸಾಕ್ ನೇತೃತ್ವದ ಸಮಿತಿ ಶಿಪಾರಸ್ಸು ಮಾಡಿದೆ ಎಂದು ಇಸಾಕ್ ರವರೇ ಘೋಷಿಸಿದ್ದಾರೆ.

ಇದರಲ್ಲಿ ಅಚ್ಚರಿ ಏನಿಲ್ಲ. ಸಂಘ ಪರಿವಾರದ ಅಜೆಂಡಾ ಇರೋದೆ ಹೀಗೆ. ಈ ಇಸಾಕ್ ಎನ್ನುವ ಭಾರತೀಯ ಇತಿಹಾಸ ಸಂಶೋಧನಾ ಪರಿಷತ್ತಿನ ಸದಸ್ಯನ ಬೇರು ಇರುವುದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ. ನಾಲ್ಕು ದಶಕದಿಂದಲೂ ಸಂಘ ಪರಿವಾರದ ಅಂಗವಾದ ಎಬಿವಿಪಿ ಜೊತೆಗೆ ಕೆಲಸ ಮಾಡಿದ್ದಾರೆ. ಇವರ ಹಿಂದುತ್ವವಾದಿ ನಿಷ್ಠೆಗೆ ಪ್ರತಿಯಾಗಿ ಬಿಜೆಪಿ ಸರಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಈ ಇಸಾಕ್ ಹಿನ್ನೆಲೆ ಹೀಗಿರುವಾಗ ಅವರಿಂದ ಇದಕ್ಕಿಂತಾ ಬೇರೆ ರೀತಿಯ ಶಿಪಾರಸ್ಸನ್ನು ನಿರೀಕ್ಷಿಸಲು ಹೇಗೆ ಸಾಧ್ಯ? 

ಪ್ರೊ. ದಿನೇಶ್ ಪ್ರಸಾದ್ ಸಕಲಾನಿ

ಇಸಾಕ್ ನಂತಹ ಮತಾಂಧ ಇತಿಹಾಸಕಾರರ ಮೂಲಕ ಚರಿತ್ರೆಯನ್ನೇ ತಮ್ಮ ಆಶಯಕ್ಕೆ ತಕ್ಕಂತೆ ಬದಲಾಯಿಸಲು ಆರೆಸ್ಸೆಸ್ ಸಂಘವು ಬಿಜೆಪಿ ಸರಕಾರದ ಮೂಲಕ ಪ್ರಯತ್ನಿಸುತ್ತಿದೆ. ತಿರುಚಲಾದ ಇತಿಹಾಸವನ್ನು ಮಕ್ಕಳ ಮೆದುಳಿಗೆ ತುಂಬಿ  ಇವರು ಪಠ್ಯದಲ್ಲಿ ಹೇಳಿದ್ದೇ ಸತ್ಯ ಎಂದು ಮುಂದಿನ ತಲೆಮಾರನ್ನು ನಂಬಿಸುವ ಕೆಲಸವನ್ನು ಈ ಹಿಂದುತ್ವವಾದಿಗಳು ಹಂತ ಹಂತವಾಗಿ ಮಾಡುತ್ತಿದ್ದಾರೆ. ಸಂವಿಧಾನವನ್ನೇ ಬದಲಾಯಿಸುವ, ದುರ್ಬಲಗೊಳಿಸುವ ಹಾಗೂ ಅಂತಿಮವಾಗಿ ಮನುವಾದಿ ಪ್ರೇರಿತ ಸಂವಿಧಾನವನ್ನು ಜಾರಿಗೆ ತರುವ ಹುನ್ನಾರ ಈ ಎಲ್ಲಾ ಪ್ರಯತ್ನಗಳ ಹಿಂದಿದೆ.  

ಇಲ್ಲಿ ಇರುವುದು ಕೇವಲ ಇಂಡಿಯಾ ಮತ್ತು ಭಾರತ ಎನ್ನುವ ಪದಗಳ ಬದಲಾವಣೆಯ ಆಟ ಮಾತ್ರ ಅಲ್ಲ. ಅದರ ಹಿಂದೆ ಹಿಂದೂ ರಾಷ್ಟ್ರದ ಸ್ಥಾಪನೆ, ಹಿಂದುತ್ವವಾದದ ಅನುಷ್ಠಾನ ಮತ್ತು ಆಚರಣೆ ಅಡಗಿದೆ. ಇಂತಹ ಸಂವಿಧಾನ ವಿರೋಧಿ ಇತಿಹಾಸ ಘಾತುಕ ತಂತ್ರಗಳನ್ನು ವಿರೋಧಿಸಿ ಜನರಲ್ಲಿ ಜಾಗೃತಿಯನ್ನುಂಟು ಮಾಡುವ ಕೆಲಸವನ್ನು ಪ್ರಗತಿಪರರು, ಪ್ರತಿಪಕ್ಷಗಳು ತೀವ್ರವಾಗಿ ಮಾಡಲೇಬೇಕಿದೆ. ಪಠ್ಯಗಳ ಮೂಲಕ ನಮ್ಮ ಮಕ್ಕಳ ಮನಸ್ಸಲ್ಲಿ ಕೋಮುವಿಷ ಬೆರೆಸುವ ಹಾಗೂ ಅನ್ಯ ಧರ್ಮ ದ್ವೇಷವನ್ನು ಬೆಳೆಸುವ ಹಿಂದುತ್ವವಾದಿಗಳ ಹುನ್ನಾರವನ್ನು ಬಯಲುಗೊಳಿಸಬೇಕಿದೆ. ಇಲ್ಲದೇ ಹೋದರೆ ಬಂಧುತ್ವವನ್ನು ಪ್ರತಿಪಾದಿಸುವ ಈ ದೇಶ ಹಿಂದುತ್ವವಾದಿಗಳ ಪಾಲಾಗುತ್ತದೆ. ಸಮಾನತೆಯನ್ನು ಸಾರುವ ಸಂವಿಧಾನ ಅಳಿದು ಅಸಮಾನತೆಯನ್ನು ಆರಾಧಿಸುವ ಮನುವಾದಿ ಸಂವಿಧಾನ ಹಿಂದೂರಾಷ್ಟ್ರದ ಆತ್ಮವಾಗುತ್ತದೆ. ಹೀಗೇನಾದರೂ ಆದಲ್ಲಿ ವರ್ಗ ವರ್ಣಗಳ ಅಸಮಾನತೆಯಲ್ಲಿ ನೊಂದುಕೊಳ್ಳುವ ಮುಂದಿನ ತಲೆಮಾರುಗಳು ಇಂದಿನವರನ್ನು ಶಪಿಸುವ ಕಾಲ ಬರುವುದರಲ್ಲಿ ಸಂದೇಹವೇ ಇಲ್ಲ.

ನಮಗೆ ಇಂಡಿಯಾವೂ ಇರಲಿ, ಭಾರತವೂ ಇರಲಿ. ಸಂವಿಧಾನ ರಚನೆಯ ಆಶಯಗಳು ಎಂದೂ ಬದಲಾಗದಿರಲಿ. ನಮ್ಮ ಈ ಬಹುತ್ವದ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಲಿ. 

ಶಶಿಕಾಂತ ಯಡಹಳ್ಳಿ

ಪತ್ರಕರ್ತರು, ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಜಾತಿ ಧರ್ಮದ ಹಂಗಿಲ್ಲದ ಇತಿಹಾಸದ ಓದು

Related Articles

ಇತ್ತೀಚಿನ ಸುದ್ದಿಗಳು