Monday, April 29, 2024

ಸತ್ಯ | ನ್ಯಾಯ |ಧರ್ಮ

ಜಾತಿ ಧರ್ಮದ ಹಂಗಿಲ್ಲದ ಇತಿಹಾಸದ ಓದು

ರಾಜ, ಮಹಾರಾಜರುಗಳು ಒಂದು ಅಧಿಕಾರದ ಕೇಂದ್ರದಿಂದ ನಾಡನ್ನು ಮುನ್ನಡೆಸುವಾಗ ಆ ಕಾಲದಲ್ಲಿ ಆಗಿರುವ ಸರಿ, ತಪ್ಪುಗಳನ್ನು ವರ್ತಮಾನದಲ್ಲಿರುವ ನಾವು ಅಧ್ಯಯನ ಮಾಡುವಾಗ ಬಹಳ ಎಚ್ಚರಿಕೆಯಿಂದ ಕಾಲ ಧರ್ಮದ ವ್ಯತ್ಯಾಸಗಳ ಹಿನ್ನೆಲೆಯಲ್ಲಿ ವಿಮರ್ಶೆ ಮಾಡಬೇಕಿದೆ. ಮುಂದುವರಿದು ಅವುಗಳನ್ನು ಜಾತಿ, ಧರ್ಮಗಳ ಕನ್ನಡಕ ಕಳಚಿ, ರಾಜ ಮತ್ತು ಪ್ರಜೆ, ಆಳುವವರು ಮತ್ತು ಆಳಿಸಿಕೊಂಡವರು ಎನ್ನುವ ನೆಲೆಯಿಂದಲೂ ನೋಡುವುದು ಅಗತ್ಯ ಎನಿಸುತ್ತದೆ. ಇದು ವರ್ತಮಾನದ ತಿಳುವಳಿಕೆ ಮತ್ತು ಭವಿಷ್ಯದ ದೃಷ್ಟಿಯಿಂದ ಹೆಚ್ಚು ಉಪಯುಕ್ತ ಮತ್ತು ವಾಸ್ತವಿಕ –  ಡಾ. ಉದಯ ಕುಮಾರ್ ಇರ್ವತ್ತೂರು, ವಿಶ್ರಾಂತ ಪ್ರಾಂಶುಪಾಲರು.

ಕಳೆದು ಹೋದ ದಿನಗಳ ತಪ್ಪು-ಒಪ್ಪುಗಳ ಕೊಪ್ಪರಿಗೆಯ ಕುರಿತ ವ್ಯಾಮೋಹದಿಂದ ನಮಗೆ ಬಿಡುಗಡೆ ಸುಲಭವಲ್ಲ. ಹಾಗಂತ ಈ ವ್ಯಾಮೋಹದಲ್ಲಿಯೇ ಪೂರ್ತಿ ಕಳೆದು ಹೋದರೆ ನಮ್ಮ ವರ್ತಮಾನ ಮತ್ತು ಭವಿಷ್ಯವೂ ಮಂಕಾಗುವ ಅಪಾಯ ಇದೆ. ಇತಿಹಾಸ ನಮಗೆ ಭವಿಷ್ಯದ ದಾರಿ ಗುರುತಿಸಿ ಮುನ್ನಡೆಯಲು ಪ್ರೇರಣೆಯಾಗಬೇಕೇ ಹೊರತು ಇನ್ಯಾರಿಗೋ ಪಾಠ ಕಲಿಸಲು ಕಾರಣವಾಗಬಾರದು. ಪಾಠ ಏನಿದ್ದರೂ ಕಲಿಯುವಂತದ್ದು, ಕಲಿಸುವಂತದ್ದಲ್ಲ. ಸಮಷ್ಠಿಯ ಸಹಬಾಳ್ವೆಗೆ ನಾಂದಿಯಾಗಬಲ್ಲ ಅರಿವಿನ ಬೆಳಕಿನ ಆಕರವಾಗಿ ಇತಿಹಾಸದ ಅಧ್ಯಯನ ನಡೆಯಬೇಕಾದುದು ಇಂದಿನ ಅಗತ್ಯ ಮತ್ತು ಅನಿವಾರ್ಯ. ಸಾಮುದಾಯಿಕ ಹಿತ ಬಯಸುವ ಮನಸ್ಸಿಗೆ ಕಾಲ ಧರ್ಮದ ಕಾಲ್ಗುಣಗಳನ್ನು ಮೀರಿ ಓಳಿತು ಕೆಡುಕುಗಳನ್ನು ಕೇರಿ ಗಟ್ಟಿಕಾಳುಗಳನ್ನು ಮುಷ್ಠಿಯಲ್ಲಿ ಹಿಡಿಯುವ ಹಂಬಲವಿರಬೇಕು. ಪರಸ್ಪರ ನಂಬಿಕೆ, ವಿಶ್ವಾಸಗಳ ಬೆಳೆಯನ್ನು ಸಂಶಯ, ಗುಮಾನಿ ಮತ್ತು ಪ್ರತೀಕಾರದ ಕಳೆ ಎಂದಿಗೂ ಬೆಳೆಯಲು ಬಿಡಲಾರದು ಎನ್ನುವ ವಿವೇಕ ನಮ್ಮಲ್ಲಿ ಮೂಡಿದಷ್ಟು ಸಮಷ್ಠಿಗೆ ಆಗುವ ಹಾನಿಯ ಪ್ರಮಾಣ ಕಡಿಮೆಯಾದೀತು.

ಇತಿಹಾಸವನ್ನು ನಮ್ಮಿಂದ ತಿದ್ದಲಾರದು, ಅದರ ಬೆಳಕಲ್ಲಿ ನಾವು ಭವಿಷ್ಯ ಮಾತ್ರ ರೂಪಿಸಿಕೊಳ್ಳಬಹುದು ಎನ್ನುವ ಗೋಡೆಯ ಮೇಲಿನ ಬರಹ ಓದಲಾರದಷ್ಟು ನಮ್ಮನ್ನು ದುರ್ಬಲರನ್ನಾಗಿ ಮಾಡಲಾಗುತ್ತಿದೆ. ಚರಿತ್ರೆಯ ಮರುನಿರೂಪಣೆಗೆ ಕೈ ಹಾಕಿ ಭವಿಷ್ಯ ಮಂಕಾಗಿಸಿಕೊಳ್ಳುವ ಅಪಾಯದಿಂದ ನಾವು ಪಾರಾಗುವ ದಾರಿ ಯಾವುದು? ರಾಜ, ಮಹಾರಾಜರುಗಳು ಒಂದು ಅಧಿಕಾರದ ಕೇಂದ್ರದಿಂದ ನಾಡನ್ನು ಮುನ್ನಡೆಸುವಾಗ  ಆ ಕಾಲದಲ್ಲಿ ಆಗಿರುವ ಸರಿ, ತಪ್ಪುಗಳನ್ನು ವರ್ತಮಾನದಲ್ಲಿರುವ ನಾವು ಅಧ್ಯಯನ ಮಾಡುವಾಗ ಬಹಳ ಎಚ್ಚರಿಕೆಯಿಂದ ಕಾಲ ಧರ್ಮದ ವ್ಯತ್ಯಾಸಗಳ ಹಿನ್ನೆಲೆಯಲ್ಲಿ ವಿಮರ್ಶೆ ಮಾಡಬೇಕಿದೆ. ಮುಂದುವರಿದು ಅವುಗಳನ್ನು ಜಾತಿ, ಧರ್ಮಗಳ ಕನ್ನಡಕ ಕಳಚಿ, ರಾಜ ಮತ್ತು ಪ್ರಜೆ, ಆಳುವವರು ಮತ್ತು ಆಳಿಸಿಕೊಂಡವರು ಎನ್ನುವ ನೆಲೆಯಿಂದಲೂ ನೋಡುವುದು ಅಗತ್ಯ ಎನಿಸುತ್ತದೆ. ಇದು ವರ್ತಮಾನದ ತಿಳುವಳಿಕೆ ಮತ್ತು ಭವಿಷ್ಯದ ದೃಷ್ಟಿಯಿಂದ ಹೆಚ್ಚು ಉಪಯುಕ್ತ ಮತ್ತು ವಾಸ್ತವಿಕ ಎನ್ನುವುದು ಈ ಲೇಖನದ ಆಶಯ ಹಾಗೂ ನನ್ನ ಅಭಿಪ್ರಾಯ. ನಾಡನ್ನು ಆಳಿದ ಒಂದು ರಾಜಪ್ರಭುತ್ವದ ವಿವರಗಳನ್ನು ಅವರ ಧರ್ಮದ ಹಿನ್ನೆಲೆಯನ್ನು ಬಿಟ್ಟು ಈ ಲೇಖನದಲ್ಲಿ ನೀಡಲಾಗಿದೆ. ಇಂತಹ ಓದು ನಮ್ಮನ್ನು ಹೆಚ್ಚು ಮಾನವೀಯವಾಗಿ ಮಾಡಬಹುದೇ?

ಹದಿನೈದನೆಯ ವಯಸ್ಸಿನಲ್ಲಿಯೇ ವೈರಿಪಡೆಯ ವಿರುದ್ಧ ಆತ್ಮವಿಶ್ವಾಸದಿಂದ ಹೋರಾಟ ಆರಂಭಿಸಿ, ರಾಜ್ಯಕಾರಣದ ಎಲ್ಲ ಆಯಾಮಗಳಲ್ಲಿಯೂ ಹೊಸತನದ ಛಾಪು ಮೂಡಿಸಿದ ನಾಡರಸ ( ಈತ ) ಈ ನಾಡು ಕಂಡ ಅಪ್ರತಿಮ ಮುತ್ಸದ್ದಿ ಎನ್ನಬಹುದು. ವರ್ತಮಾನದ ರಾಜಕೀಯ ಕೆಸರೆರಚಾಟದ ಆಚೆಗೆ, ಈತನ ಬದುಕು, ಆಡಳಿತ, ಹೋರಾಟ, ಮತ್ತು ವಸಾಹತುಶಾಹಿಯ ವಿರುದ್ಧ ಆತನಿಗೆ ಇದ್ದ ಆಕ್ರೋಶಗಳ ಅಧ್ಯಯನ ಅಪೇಕ್ಷಣೀಯ. ಏಕೆಂದರೆ ಇದು ಆ ಕಾಲದ ರಾಜಾಡಳಿತದ ಕುರಿತು ವಿಷಯಗಳನ್ನು ತಿಳಿಸುವುದರೊಂದಿಗೇನೆ, ಈ ನಾಡಿನಲ್ಲಿ ವಸಾಹತುಶಾಹಿಯ ಪ್ರವೇಶದಿಂದಾದ ತವಕ, ತಲ್ಲಣಗಳನ್ನು ಮತ್ತು ಆಧುನಿಕ ಅನ್ವೇಷಣೆಗಳಿಗೆ ವರ್ತಮಾನ ತೆಗೆದುಕೊಂಡ ರೀತಿಯನ್ನೂ ತಿಳಿಸುತ್ತದೆ. ಇಂತಹ ತಿಳುವಳಿಕೆ ವರ್ತಮಾನವನ್ನು ಕೂಡ ಹೊಸ ಬೆಳಕಲ್ಲಿ ಅರ್ಥೈಸಿಕೊಳ್ಳಲು ಸಹಕರಿಸಬಲ್ಲುದು.

ಬ್ರಿಟೀಷ್ ವಸಾಹತುಶಾಹೀ ಆಡಳಿತ ಭಾರತೀಯ ಉಪಖಂಡದಲ್ಲಿ ಆಳವಾಗಿ ಬೇರೂರಿ, ಈ ನೆಲದ ಸತ್ವವನ್ನು ಹೀರಿ ಬ್ರಿಟನ್ನಿನಲ್ಲಿ ಹೂ ಬಿಡುತ್ತಿತ್ತು. ಇದಕ್ಕೆಲ್ಲ ಈ ನೆಲದ ಜನರ ಬೆವರು, ಈ ನೆಲದ ಸಂಪತ್ತು ವಿನಿಯೋಗವಾಗುತ್ತಿತ್ತು. ಈ ಬೆಳವಣಿಗೆಯನ್ನು ಕಂಡು ತಲ್ಲಣಗೊಂಡ ರಾಜ, ಮಹಾರಾಜರು ಬ್ರಿಟೀಷರ ವಿರುದ್ಧ ತೊಡೆತಟ್ಟಿದ್ದರೂ ಕೂಡಾ ಅಂತಹ ಎಲ್ಲ ಹೋರಾಟಗಳು ಬಹಳ ದಿನ ಮುಂದುವರಿಯುತ್ತಿರಲಿಲ್ಲ. ಬ್ರಿಟೀಷರ ಕುಟಿಲ ರಾಜಕೀಯ, ದೇಶೀಯ ರಾಜರನ್ನು ಪರಸ್ಪರರ ವಿರುದ್ಧ ಎತ್ತಿಕಟ್ಟಿ, ನಿಜವಾದ ವೈರಿಯನ್ನು ಅಡಗಿಸಿ ಕಲ್ಪಿತ ಬೆದರು ಬೊಂಬೆಯ ವಿರುದ್ಧ ಕಾದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ರಾಜಕೀಯ ಮಹತ್ವಾಕಾಂಕ್ಷೆಯ ಅಮಲು ಹತ್ತಿಸಿ ರಾಜ ಮಹಾರಾಜರ ಆಪ್ತ ವಲಯದಲ್ಲಿಯೇ ವಿರೋಧ ಹುಟ್ಟಿಸಿ ಬಿಟ್ಟು ತಮ್ಮ ಕಾರ್ಯ ಸಾಧಿಸಿಕೊಳ್ಳುತ್ತಿದ್ದರು. ಆದರೆ ಬ್ರಿಟೀಷ್ ವಸಾಹತುಶಾಹಿಯ ವಿರುದ್ಧ ನಿರಂತರ ಹೋರಾಟ ಮಾಡಿ ಅವರ ಶಕ್ತಿಯನ್ನು ಕುಂದಿಸಲು ಈತ ಮಾಡಿದ ಹೋರಾಟ ಇತರರಿಗಿಂತ ಈ ಮೇಲಿನ ದೃಷ್ಟಿಯಿಂದ ಭಿನ್ನವಾದದ್ದು. ರಾಜಕೀಯ ಹೋರಾಟ ನಡೆಸುತ್ತಲೇ ರಾಜ್ಯವನ್ನೂ ಆರ್ಥಿಕವಾಗಿ ಸಮೃದ್ಧಗೊಳಿಸಲು, ಸೂಕ್ತ ಅಭಿವೃದ್ಧಿಯನ್ನು ವಿನ್ಯಾಸಗೊಳಿಸಿದ ಹಿರಿಮೆ  ಈತನದು.

ಈತ ಬದುಕಿದ್ದು 49 ವರ್ಷ. ಇದರಲ್ಲಿ ಆಡಳಿತ ವಹಿಸಿಕೊಳ್ಳುವವರೆಗಿನ ೨೨ ವರ್ಷ ಮತ್ತು ರಾಜ್ಯಭಾರ ನಡೆಸಿದ 27 ವರ್ಷಗಳ ಅವಧಿ ಸೇರಿಕೊಂಡಿದೆ. ಮೊದಲ 22 ವರ್ಷಗಳಲ್ಲಿ ಪಡೆದ ಎಲ್ಲ ಅನುಭವಗಳನ್ನು, ರಚನಾತ್ಮಕವಾಗಿ ಬಳಸಿಕೊಂಡು ಸದೃಢ ರಾಜ್ಯವನ್ನು ನಿರ್ಮಾಣ ಮಾಡಲು ಕಾರ್ಯ ನಿರ್ವಹಿಸಿದ್ದನ್ನು ಕಾಣಬಹುದು. ಒಬ್ಬ ರಾಜನಾಗಿ, ಆಡಳಿತಗಾರನಾಗಿ ದೇಶ ಆಳುವಾಗ ಆಡಳಿತ ನಡೆಸುವಾಗ ಕೆಲವೊಂದು ಅತಿರೇಕಗಳಿವೆ ಎಂದು ಅನಿಸಿದಾಗ ನಾವು  ಈತನನ್ನು ವ್ಯಕ್ತಿಯಾಗಿ ನೋಡದೆ ಒಬ್ಬ ಆಡಳಿತಗಾರನಾಗಿ ನೋಡಬೇಕಾಗಿದೆ. ತನ್ನ ಬದ್ಧ ವೈರಿಗಳ ಜೊತೆ ಯಾರಾದರೂ ಸೇರಿದ್ದಾರೆ ಎಂಬ ಗುಮಾನಿ ಇದ್ದಾಗ  ಈತ ಅಂತಹ ಜನರೊಂದಿಗೆ  ಬಹಳ ಕಠೋರವಾಗಿ ವರ್ತಿಸಿದ್ದಾನೆ. ಆದರೆ ಆ ಕಾಠಿಣ್ಯವೇ  ಈತನ ಸಮಗ್ರ ವ್ಯಕ್ತಿತ್ವವಲ್ಲ ಎನ್ನುವ ಎಚ್ಚರ ನಮ್ಮಲ್ಲಿರಬೇಕಿದೆ.

18 ನೇ ಶತಮಾನದ ಉತ್ತರಾರ್ಧದ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ, ಈ ಕಾಲಘಟ್ಟದಲ್ಲಿ ದಕ್ಷಿಣ ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಿನ್ಯಾಸಗಳು ಒಂದು ನಿರ್ದಿಷ್ಟ ರೂಪ ಪಡೆದುಕೊಂಡು, ಮುಂದಿನ ದಿನಗಳಲ್ಲಿ ಈ ಪ್ರದೇಶವು ಅಭಿವೃದ್ಧಿಯನ್ನು ಹೊಂದಲು ಸಹಕಾರಿಯಾಯಿತು ಎನ್ನುವ ಮಹತ್ವದ ಅಂಶ ತಿಳಿಯುತ್ತದೆ. ವಸಾಹತುಶಾಹಿಗಳಲ್ಲಿ ಪೋರ್ಚುಗೀಸರು, ಫ್ರೆಂಚರು, ಡಚ್ಚರು, ಬ್ರಿಟೀಷರು ಮುಂತಾದ ಯುರೋಪಿನ ದೇಶಗಳಿದ್ದರೂ, ಇಲ್ಲಿನ ಪರಿಸ್ಥಿತಿಯನ್ನು ಅತ್ಯಂತ ಹೆಚ್ಚು ದುರುಪಯೋಗಪಡಿಸಿಕೊಂಡವರಲ್ಲಿ ಬ್ರಿಟೀಷರು ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಭಾರತೀಯ ಉಪಖಂಡದಲ್ಲಿ ಇರುವ ವೈವಿಧ್ಯವನ್ನು ವೈರುಧ್ಯವಾಗಿಸಿ, ಸ್ಥಳೀಯ ಅರಸು ಮನೆತನಗಳ ಮಧ್ಯೆ, ಸಂಶಯದ ಬೀಜ ಬಿತ್ತಿ ಅದು ಸಮೃದ್ಧವಾಗಿ ಬೆಳೆಯುವಂತೆ ಮಾಡಿ ‘ಕುಟಿಲೋಪಾಯದ’ ಮೂಲಕ ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದ ಈಸ್ಟ್ ಇಂಡಿಯಾ ಕಂಪನಿ ಮತ್ತು ಅದರ ಬೆನ್ನೆಲುಬಾಗಿದ್ದ ಬ್ರಿಟೀಷ್ ಆಡಳಿತದ ವಿರುದ್ಧ ಈತನಿಗಿದ್ದ ಆಕ್ರೋಶ ಅಪಾರವಾದದ್ದು.

ಈತ ಆಡಳಿತ ಚುಕ್ಕಾಣಿ ಹಿಡಿದ ನಂತರ ನಡೆದ ನಾಡಿನ ಎರಡು, ಮೂರು ಮತ್ತು ನಾಲ್ಕನೇ ಯುದ್ಧ ಮತ್ತು ಇತರ ರಾಜಕೀಯ ವಿಷಯಗಳ ಕುರಿತು ಈಗಾಗಲೇ ಸಾಕಷ್ಟು ಚರ್ಚೆ ನಡೆದಿದೆ. ಕೇವಲ ರಾಜಕೀಯ ವಿಷಯಗಳಿಗಷ್ಟೇ ಅಧ್ಯಯನವನ್ನು ಮಿತಿಗೊಳಿಸಿದರೆ ಬಹುಮುಖ್ಯವಾದ ಅಭಿವೃದ್ಧಿಯ ವಿಷಯ ಮತ್ತು ಈ ಕಾರಣದಿಂದ ರೂಪುಗೊಂಡ ಅಭಿವೃದ್ಧಿಯ ವಿನ್ಯಾಸ ನೇಪಥ್ಯಕ್ಕೆ ಸರಿಯಬಹುದು. ಹಾಗಾಗಿ ಈ ಲೇಖನದಲ್ಲಿ  ಈತನ ಕಾಲದಲ್ಲಿ ಆದ ಒಟ್ಟು ಬೆಳವಣೆಗೆಗಳು ಹೇಗೆ ಆಧುನಿಕತೆಯ, ಪರಿವರ್ತನೆಯ ಹೊಸ ವಿನ್ಯಾಸಕ್ಕೆ ಕಾರಣವಾಯಿತು ಎನ್ನುವುದರ ಕುರಿತು ಚರ್ಚಿಸಲಾಗಿದೆ.

ಬ್ರಿಟೀಷರು ಭಾರತೀಯ ಉಪಖಂಡವನ್ನು ವಸಾಹತು ಆಗಿ ಮಾಡಲು ಮತ್ತು ಇದರ ಮೇಲೆ ಹಿಡಿತ ಸಾಧಿಸಲು ಅವರಿಗಿದ್ದ ಮೂಲ ಉದ್ದೇಶವೇ ಇಲ್ಲಿಂದ ದೊರೆಯುವ ಅಪಾರ ಸಂಪತ್ತು. ಅವರ ಈ ಉದ್ದೇಶ ಈಡೇರಿಕೆಗಾಗಿ ರಾಜಕೀಯ ಅಧಿಕಾರ ಬೇಕಿತ್ತು. ಈ ಹುನ್ನಾರವನ್ನು ಸರಿಯಾಗಿಯೇ ಮನವರಿಕೆ ಮಾಡಿಕೊಂಡಿದ್ದ  ಈತ  ಆರ್ಥಿಕ ಮತ್ತು ರಾಜಕೀಯವಾಗಿ ಅವರನ್ನು ಎದುರಿಸಿ ಮಣಿಸಲು ಪ್ರಯತ್ನ ಪಟ್ಟಿದ್ದಾನೆ ಎನ್ನುವುದು ದಾಖಲೆಗಳಿಂದ ತಿಳಿದುಬರುತ್ತದೆ.

‘ದೈವ ಭಕ್ತಿ’ ಮತ್ತು ‘ಕರ್ಮ ಸಿದ್ಧಾಂತ’ದಲ್ಲಿ ನಂಬಿಕೆ ಇಟ್ಟಿರುವ ಭಾರತೀಯ ಉಪಖಂಡದ ರಾಜರಲ್ಲಿ ಸಂಪತ್ತನ್ನು ಗಳಿಸಿ ಗುಡ್ಡೆ ಹಾಕುವ ಹಪಹಪಿಕೆ ತುಂಬಾ ಕಡಿಮೆಯೇ ಎನ್ನಬಹುದು. ಹೊಸ ಆವಿಷ್ಕಾರಗಳ ಮೂಲಕ ಯಂತ್ರ ನಾಗರಿಕತೆಗೆ ಬಲಿಯಾದ ‘ಯುರೋಪಿನ ದೇಶಗಳಿಗೆ ಸದಾ ಸ್ಥಿರತೆ ಮತ್ತು ಹೊಸದಾಗಿ ದೊರಕಿದ ಮೇಲ್ಮೆಯನ್ನು’ ಕಾಯ್ದುಕೊಂಡು ಪೋಷಿಸುವ ಧಾವಂತವಿತ್ತು.  ಈತ ಬ್ರಿಟನ್ನಿನ ನವ ಉದ್ಯಮಶೀಲ ವರ್ಗದ ಸಂಪತ್ತು ಗಳಿಸುವ ಈ ವ್ಯಾಧಿಯನ್ನು ಸರಿಯಾಗಿಯೇ ಗುರುತಿಸಿದ್ದ. ಹಾಗಾಗಿ ಅವರನ್ನು ಮಣಿಸಲು ಇನ್ನಿಲ್ಲದಂತೆ ಪ್ರಯತ್ನಿಸಿದ ಮತ್ತು ತನ್ನ ಇಂತಹ ಪ್ರಯತ್ನದ ಭಾಗವಾಗಿ ಇವರ ವೈರಿಗಳ ಸಹಾಯ ಹಾಗೂ ಸಹಕಾರವನ್ನು ಪಡೆದ. ಈತನ ರಾಜಕೀಯ ಕನಸು ಕೈಗೂಡದಿದ್ದರೂ ಇವನ ಆಡಳಿತ ಕಾಲದಲ್ಲಿ ಅನುಷ್ಠಾನಗೊಂಡ ಬಹಳಷ್ಟು ಯೋಜನೆಗಳು ಆಧುನಿಕ ಕರ್ನಾಟಕದ ನಿರ್ಮಾಣಕ್ಕೆ ಹಾದಿ ಮಾಡಿಕೊಟ್ಟಿರುವುದಂತೂ ಸತ್ಯ. ಮಾತ್ರವಲ್ಲದೆ ರಾಜ್ಯದ ಬಹುತೇಕ ಕನ್ನಡ ಭಾಷಿಕ ಪ್ರದೇಶಗಳು ಒಂದೇ ಆಡಳಿತದಡಿಯಲ್ಲಿ ಬಂದಿರುವುದೂ ಕೂಡಾ ಒಂದು ಪ್ರಮುಖ ಬೆಳವಣಿಗೆ.

ಈತನ ಕಾಲದಲ್ಲಿ ಮೈಸೂರು ಒಂದು ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿತ್ತು. ಕೃಷಿ, ತೋಟಗಾರಿಕೆ, ರೇಷ್ಮೆ, ಕೈಗಾರಿಕೆ, ಕುಶಲ ಕರ್ಮಿಗಳ ಕೆಲಸಗಳು ಇತ್ಯಾದಿಗಳಿಂದಾಗಿ ಮೈಸೂರು ಸಂಸ್ಥಾನದಲ್ಲಿ ತಲಾ ಆದಾಯ ಅಧಿಕವಿದ್ದು, ವಾಸ್ತವಿಕ ಆದಾಯ ಇತರ ಪ್ರದೇಶಗಳಿಗಿಂತ ಬಹಳಷ್ಟು ಅಧಿಕವಾಗಿತ್ತು. ಈ ರೀತಿಯ ಆರ್ಥಿಕ ಸುಭಿಕ್ಷಕ್ಕೆ ಆಧಾರಗಳನ್ನು ಹುಡುಕುತ್ತಾ ಹೋದರೆ ನಮಗೆ ಬಹಳಷ್ಟು ಪುರಾವೆಗಳು ದೊರೆಯುತ್ತವೆ. ಹಾಗಾಗಿ ಆರ್ಥಿಕ ಅಭಿವೃದ್ಧಿಯ ಮತ್ತು ಸಾಮಾಜಿಕ ಪರಿವರ್ತನೆಯ ಕುರಿತ ತಿಳಿವಿಗೆ ಕಸುವು ನೀಡಬಲ್ಲ ವಿಷಯಗಳ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲುವುದು, ದೇಶದ ವರ್ತಮಾನ ಮತ್ತು ಭವಿಷ್ಯದ ದೃಷ್ಟಿಯಿಂದ ಉಪಯುಕ್ತ ಎನ್ನುವುದು ನನ್ನ ಭಾವನೆ.

ಒಂದು ಪ್ರದೇಶದಲ್ಲಿರುವ ಜನ ಸಮುದಾಯದ ಕೈಗಳಿಗೆ ಕೆಲಸ ದೊರೆತು ಸಂಪನ್ಮೂಲ (ಪ್ರಾಕೃತಿಕ ಹಾಗೂ ಮಾನವ ನಿರ್ಮಿತ) ಸರಿಯಾಗಿ ಬಳಕೆಯಾದಲ್ಲಿ ಆ ಪ್ರದೇಶ ಸಮಗ್ರವಾಗಿ ಅಭಿವೃದ್ಧಿ ಹೊಂದುವುದು ಸಾಧ್ಯವಿದೆ. ರಾಜ ಮಹಾರಾಜರ ಕಾಲದಲ್ಲಿ ಭೂಮಿಯ ಒಡೆತನ ಕೆಲವೇ ಜನರಲ್ಲಿದ್ದು ಕೃಷಿ ಮತ್ತು ಇನ್ನಿತರ ಭೂ ಆಧಾರಿತ ಉತ್ಪಾದನಾ ಚಟುವಟಿಕೆಗಳಿಗೆ ಬಳಕೆಯಾಗುತ್ತಿದ್ದ ಭೂಮಿ ಕಡಿಮೆಯೇ. ಬಹಳ ದೊಡ್ಡ ಪ್ರಮಾಣದ ಭೂಮಿ ಬಂಜರಾಗಿದ್ದು ಅನುತ್ಪಾದಕವಾಗಿರುತ್ತಿತ್ತು. ಆದರೆ ಈತ ಇಂತಹ ಭೂಮಿಯನ್ನು ಉತ್ಪಾದಕವನ್ನಾಗಿಸಲು ಬದಲಾವಣೆಗಳನ್ನು ತಂದಿರುವುದನ್ನು ಗಮನಿಸಬಹುದು. ಭೂಮಾಲಕರು, ಮಠಮಾನ್ಯಗಳು, ಪಾಳೇಗಾರರು, ಜಾಗೀರುದಾರರು, ಯಾರೆಲ್ಲ ದೊಡ್ಡ ಪ್ರಮಾಣದಲ್ಲಿ ಭೂಮಿಯನ್ನು ಹಿಡುವಳಿಯಾಗಿ ಹೊಂದಿದ್ದರೋ ಅದೆಲ್ಲವನ್ನೂ ಅವರಿಂದ ಬಿಡಿಸಿ ಕೃಷಿ ಮಾಡುವ ರೈತರಿಗೆ ಸಿಗುವಂತೆ ಮಾಡಲಾಯಿತು. ಇಂತಹ ಬದಲಾವಣೆಯಿಂದ ಕೃಷಿಯ ಉತ್ಪಾದನೆ ಅಧಿಕವಾಯಿತು. ಕೃಷಿ ಭೂಮಿಯ ಶೇಕಡಾ 35 ರಷ್ಟು ಭಾಗ ನೀರಾವರಿಗೆ ಒಳಗಾಯಿತು. ನೀರಾವರಿ ಇರುವಲ್ಲಿ ಕನಿಷ್ಠ ಎರಡು ಬೆಳೆ ಬೆಳೆಯಲಾಗುತ್ತಿತ್ತು. ಈ ಕಾರಣದಿಂದ ಕೃಷಿ ಕ್ಷೇತ್ರದ ಉತ್ಪನ್ನ ಬಹಳಷ್ಟು ಅಧಿಕವಾಯಿತು. ಈ ಮೊದಲು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿಲ್ಲದ ಶಾನುಭೋಗರು ಮತ್ತು ಪಟೇಲರ ಹಿಡಿತವನ್ನು ಸಡಿಲಗೊಳಿಸಲಾಯಿತು. ಬೇಕಾಬಿಟ್ಟಿಯಾಗಿ ಭೂಮಿಯನ್ನು ಜಹಗೀರು ನೀಡುವ ಅದುವರೆಗಿನ ಪದ್ಧತಿಯನ್ನು ಈತನ ಕಾಲದಲ್ಲಿ ಸಂಪೂರ್ಣವಾಗಿ ನಿಲ್ಲಿಸಲಾಯಿತು. ಕೃಷಿ ಕ್ಷೇತ್ರದಲ್ಲಿ ಸಾಲದ ಯೋಜನೆಯನ್ನು ಪರಿಚಯಿಸಲಾಯಿತು. ಉತ್ಪನ್ನದ ಆರನೇ ಒಂದಂಶ ಭೂ ಕಂದಾಯವಾಗಿ ರಾಜನ ಖಜಾನೆ ಸೇರುತ್ತಿದ್ದುದರಿಂದ ರಾಜ್ಯಾದಾಯವೂ ಅಧಿಕವಾಗಲು ಕಾರಣವಾಯಿತು.  ಭೂಕಂದಾಯ ಪದ್ಧತಿಯಲ್ಲಿಯ ಕ್ರಾಂತಿಕಾರಿ ಸುಧಾರಣೆಯನ್ನು ಮಾಡುವ ಮೂಲಕ ಖಜಾನೆಗೆ ಬರುವ ತೆರಿಗೆ ಹಣ ಹೆಚ್ಚಾಗುವಂತೆ ಮಾಡಲಾಯಿತು.

ಕೃಷಿ ಭೂಮಿಯು ಹೆಚ್ಚಾದಂತೆ, ನೀರಾವರಿ ಸವಲತ್ತು ದೊರಕಿದಂತೆ ಮತ್ತು ಕೃಷಿ ಸಾಲವೂ ದೊರೆತ ಕಾರಣದಿಂದ ಕೃಷಿ ಕ್ಷೇತ್ರದಲ್ಲಿ ದುಡಿಯುವವರಿಗೆ ಅವಕಾಶಗಳು ಹೆಚ್ಚಾಗ ತೊಡಗಿದುವು. ಕೃಷಿ ವಲಯ ವಾಣಿಜ್ಯೀಕರಣಗೊಂಡಿರುವುದನ್ನು ನಾವು ಗಮನಿಸಬಹುದು. ಈ ಹಂತದಲ್ಲಿ ರೇಷ್ಮೆ ಕೃಷಿಯನ್ನು ಅಭಿವೃದ್ಧಿ ಪಡಿಸಲಾಯಿತು. ಈತನ ದೂರಾಲೋಚನೆಯ ಫಲವಾಗಿ ಪರಿಣಿತರನ್ನು ಬಂಗಾಳಕ್ಕೆ ಕಳುಹಿಸಿ ಅಲ್ಲಿ ರೇಷ್ಮೆ ಬೆಳೆಯುವ ವಿಧಾನ ಮತ್ತು ರೇಷ್ಮೆ ಉದ್ಯಮ ಕಾರ್ಯನಿರ್ವಹಿಸುವ ಕುರಿತು ಅಧ್ಯಯನ ನಡೆಸಲಾಯಿತು. ಇಂತಹ ಅಧ್ಯಯನದ ಫಲವಾಗಿ ಮತ್ತು ಪರಿಣಿತರ ಸಹಾಯದಿಂದ ರೇಷ್ಮೆ ಕೃಷಿ ಮತ್ತು ‘ಮೈಸೂರು ಸಿಲ್ಕ್ʼ ಎನ್ನುವ ಹೆಸರಲ್ಲಿ ರೇಷ್ಮೆ ಉದ್ಯಮ ಮೈಸೂರು ಸಂಸ್ಥಾನದಲ್ಲಿ ನೆಲೆ ಕಂಡುಕೊಂಡಿತು. ಇವುಗಳಲ್ಲದೆ, ಅದುವರೆಗೆ ಪರಿಚಯವೇ ಇಲ್ಲದ ಔಷಧೀಯ ಸಸ್ಯಗಳು, ವಾಣಿಜ್ಯ ಕಾಡುಗಳು, ತೋಟಗಾರಿಕೆಯ ಬೆಳೆಗಳು ಕೃಷಿ ರಂಗದಲ್ಲಿ ಪ್ರವೇಶ ಪಡೆದುವು. ಆ ಕಾಲದಲ್ಲಿ ಮೈಸೂರಿಗೆ ಬಂದಂತಹ ವಿದೇಶಿ ಪ್ರವಾಸಿಗರು ಕಂಡಂತೆ ತೋಟಗಾರಿಕೆ ಬಹಳ ಮಹತ್ವ ಪಡೆದಿದ್ದು ಸಣ್ಣ ಮತ್ತು ಮಧ್ಯಮ ವರ್ಗದ ಜನರ ಜೀವನ ಮಟ್ಟ ಸುಧಾರಣೆ ಕಂಡು ಉತ್ತಮ ಜೀವನ ನಡೆಸಲು ಸಹಕಾರಿಯಾಗಿದ್ದವು. ಅದರಲ್ಲಿಯೂ ತೋಟಗಾರಿಕೆಯ ಕ್ಷೇತ್ರದಲ್ಲಿ ತರಕಾರಿ ತೋಟ, ತೆಂಗಿನ ತೋಟ, ಎಲೆ ತೋಟ ಹಾಗೂ ಹೂವಿನ ತೋಟಗಳ ಬಗ್ಗೆ ವಿವರಗಳನ್ನು ಪ್ರವಾಸಿಗರು ನೀಡಿದ ದಾಖಲೆಗಳ ಮೂಲಕ ಪಡೆಯಬಹುದಾಗಿದೆ. ಬಯಲು ಸೀಮೆ, ಮಲೆನಾಡು ಮತ್ತು ಹಳೆ ಮೈಸೂರು ಸೀಮೆಯಲ್ಲಿ ಈ ಪರಂಪರೆಯು ಇಂದಿಗೂ ಮುಂದುವರಿಯುತ್ತಿರುವುದಕ್ಕೆ ನಿದರ್ಶನ ನಮ್ಮ ಕಣ್ಣ ಮುಂದೆಯೇ ಇದೆ.

ಅದುವರೆಗೂ ಅವಕಾಶ ವಂಚಿತ ಬೇಡ, ಕುರುಬ, ಈಡಿಗ, ಒಕ್ಕಲಿಗ ಮುಂತಾದ ಸಮುದಾಯದ ಜನರಿಗೆ ಈತ ತನ್ನ ಸೇನೆಯಲ್ಲಿ ಅವಕಾಶಗಳನ್ನೂ ಕಲ್ಪಿಸಿದನು. ಸೈನಿಕರಿಗೆ ಉಂಬಳಿ ಭೂಮಿಯನ್ನು ನೀಡುವ ಹಿಂದಿನ ಒಡೆಯರ್ ಮನೆತನ ಆರಂಭಿಸಿದ ಕ್ರಮವನ್ನು ಈ ಹಿಂದಿನಂತೆ ಈತ ವಿಸ್ತರಿಸಿದ. ಈ ಮೇಲಿನ ಕ್ರಮಗಳಿಂದಾಗಿ ಸಮಾಜದ ಎಲ್ಲಾ ವರ್ಗದ ಜನರಿಗೆ ಆದಾಯ ದೊರೆತು ಉತ್ತಮ ರೀತಿಯಲ್ಲಿ ಜೀವನ ನಡೆಸಲು ಅನುಕೂಲವಾಯಿತು ಎಂದು ತಿಳಿದು ಬರುತ್ತದೆ. ಆದಾಯ ಮತ್ತು ಉತ್ಪನ್ನಗಳು ವೃದ್ಧಿಯಾದಾಗ ಸ್ವಾಭಾವಿಕವಾಗಿಯೇ ವಿನಿಮಯದ ಅವಶ್ಯಕತೆ ಬರುತ್ತದೆ. ಇಂತಹ ವಿನಿಮಯದ ಅವಶ್ಯಕತೆಗಳ ಕಾರಣದಿಂದ ‘ವಾರದ ಸಂತೆ’ ಚಾಲ್ತಿಗೆ ಬರುತ್ತದೆ. ಸಾಮಾನ್ಯವಾಗಿ ಎಲ್ಲಾ ಊರುಗಳಲ್ಲಿ ವಾರದ ಸಂತೆ ನಡೆಯುತ್ತಿತ್ತು ಎಂದು ತಿಳಿದು ಬರುತ್ತದೆ. ವಾರದ ಸಂತೆಗಳಲ್ಲಿ ವಿನಿಯೋಗಕ್ಕಾಗಿ (ಉಪಭೋಗ) ವ್ಯಾಪಾರ ಮಾಡುವವರು ಮತ್ತು ವಿನಿಮಯಕ್ಕಾಗಿ ವ್ಯಾಪಾರ ಮಾಡುವವರು ಪಾಲುಗೊಳ್ಳುತ್ತಿದ್ದರು. ವಿನಿಯೋಗ ಅಥವಾ ಉಪಭೋಗ ಎಂದರೆ ವಸ್ತುಗಳನ್ನು ಖರೀದಿಸಿ ಉಪಭೋಗಿಸಿ ತಮ್ಮ ಬದುಕಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದು. ವಿನಿಮಯ ಎಂದರೆ ವ್ಯಾಪಾರಕ್ಕಾಗಿ ವಸ್ತುಗಳನ್ನು ಖರೀದಿಸುವುದು. ಇಂತಹ ವಿನಿಮಯದ ಉದ್ದೇಶ ಒಂದು ಕಡೆ ಕಡಿಮೆ ಬೆಲೆಗೆ ಖರೀದಿಸಿದ ವಸ್ತುಗಳನ್ನು ಬೇರೊಂದು ಕಡೆಯಲ್ಲಿ ಹೆಚ್ಚು ಬೆಲೆಗೆ ಮಾರಾಟ ಮಾಡುವ ಮೂಲಕ ಲಾಭ ಗಳಿಸುವುದು. ಈ ಎರಡೂ ಕ್ರಮಗಳಿಂದ ಮಾರುಕಟ್ಟೆ ಬೆಳೆಯುತ್ತದೆ. ಈ ಬೆಳವಣಿಗೆ ಮುಂದುವರಿಯಬೇಕಾದರೆ ಉತ್ಪಾದನೆಯಂತೂ ನಿರಂತರವಾಗಿ ಆಗುತ್ತಿರಲೇಬೇಕು.

ಈ ರೀತಿಯಲ್ಲಿ  ಮಾರುಕಟ್ಟೆಯ ವಿಸ್ತರಣೆ ಆಗಬೇಕಾದರೆ ‘ಹಣ’ದ ಪ್ರಸರಣವೂ ಅಧಿಕವಾಗುತ್ತಾ ಹೋಗಬೇಕು. ರಾಜಾಶ್ರಯದಲ್ಲಿ ಟಂಕಸಾಲೆಯ ನಿರ್ವಹಣೆಯೂ ಬಹಳ ಹೊಣೆಗಾರಿಕೆಯಿಂದ ನಡೆದಾಗ ಮಾತ್ರ ಈ ಒಂದು ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ತನ್ನ ರಾಜ್ಯದ ಆರ್ಥಿಕ ನಿರ್ವಹಣೆಯನ್ನು ಈತ ಸಮರ್ಥವಾಗಿ, ಸರಿಯಾದ ತಿಳುವಳಿಕೆಯಿಂದ ನಿರ್ವಹಿಸಿದ ಎನ್ನುವುದಕ್ಕೆ ನಗದು ಹಣದ ಚಲಾವಣೆಯು ದೊಡ್ಡ ಪ್ರಮಾಣದಲ್ಲಿ ಆಗುತ್ತಿತ್ತು ಎನ್ನುವ ಅಂಶವೇ ಆಧಾರ. ಈ ಕಾರಣದಿಂದಾಗಿಯೇ ‘ಉತ್ಪಾದನೆ’, ‘ವಿನಿಮಯ’ ಮತ್ತು ‘ನಗದು’ ಆಧಾರಿತ ಆರ್ಥಿಕ ವ್ಯವಸ್ಥೆ ವಿನ್ಯಾಸಗೊಂಡು ವಿಕಸನ ಹೊಂದಿರುವುದು ಬಹಳ ಮಹತ್ವ ಪೂರ್ಣವಾದ ಬೆಳವಣಿಗೆ ಎಂದರೆ ತಪ್ಪಾಗಲಿಕ್ಕಿಲ್ಲ. ಹೊಸ ರೀತಿಯ ನಾಣ್ಯಗಳನ್ನು ಚಲಾವಣೆ ತಂದ ಈತ ಹಣದ ಪ್ರಸರಣಕ್ಕೆ ಒತ್ತು ನೀಡಿದ.

ವಿದೇಶೀ ವ್ಯಾಪಾರಕ್ಕೆ ಮಹತ್ವ ನೀಡಿದ ಈತ  ಸರಕು ಸಾಗಾಟಕ್ಕೆ ಅನುಕೂಲವಾಗುವಂತೆ ದೊಡ್ಡ ಹಡಗುಗಳನ್ನು ನಿರ್ಮಿಸಿ ಸರಕುಗಳನ್ನು ವಿದೇಶೀ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಸಿ ಅಪಾರ ಪ್ರಮಾಣದ ಹಣ ಗಳಿಸಿರುವುದನ್ನು ನಾವು ಗಮನಿಸಬಹುದು. ಮಂಗಳೂರಿನ ಮೇಲೆ ಹತೋಟಿಗಾಗಿ ಈತ ಪ್ರಯತ್ನಿಸಿರುವುದಕ್ಕೆ ವಿದೇಶೀ ವ್ಯಾಪಾರ ವೃದ್ಧಿಗೆ ನೀಡಿದ ಮಹತ್ವವೂ ಕಾರಣವಾಗಿದೆ. ವ್ಯಾಪಾರ ಮತ್ತು ಮಿಲಿಟರಿಯನ್ನು ಬಲಪಡಿಸುವುದಕ್ಕೆ ಬಂದರು ಅತೀ ಅಗತ್ಯವಾಗಿತ್ತು.  ಅಂದಿನ ಸಂದರ್ಭದಲ್ಲಿ ಕರಾವಳಿ ತೀರದ ಮಂಗಳೂರು ಇದಕ್ಕೆ ಅತ್ಯಂತ ಪ್ರಶಸ್ತವಾಗಿತ್ತು ಎಂದು ತಿಳಿಯಲಾಗಿತ್ತು. ನೌಕಾಬಲವನ್ನು ಬಲಪಡಿಸಿ ಸೇನಾ ನೆಲೆಯನ್ನು ಮತ್ತು ವಿದೇಶೀ ವ್ಯಾಪಾರವನ್ನು ವಿಸ್ತರಿಸಿಕೊಂಡ ಈತ ಬ್ರಿಟೀಷರಿಗೆ ಸೆಡ್ದು ಹೊಡೆದ ಒಬ್ಬ ಪ್ರಮುಖ ಆಡಳಿತಗಾರನೂ ಹೌದು.

ಈತ ಬ್ರಿಟೀಷರ ಹುನ್ನಾರಗಳನ್ನು ತಿಳಿಯಲು ಮತ್ತು ಅವರ ವಿರುದ್ಧ ಅಷ್ಟೊಂದು ಕ್ರೂರನಾಗಲು ಕಾರಣ ಅವರು ವ್ಯೂಹಾತ್ಮಕವಾಗಿ, ವ್ಯಾಪಾರ, ರಾಜಕೀಯ ಮತ್ತು ನ್ಯಾಯ… ಎಲ್ಲವನ್ನೂ ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿ ಮಿಕ್ಕುಳಿದವರನ್ನು ನಯವಾಗಿ ವಂಚಿಸುತ್ತಾ ಬಂದಿದ್ದೇ ಆಗಿರಬೇಕು. ವಿದ್ಯಾವಂತನಲ್ಲದ  ಈತನ ತಂದೆ ಮಗನಿಗೆ ಎಲ್ಲ ರೀತಿಯ ಶಿಕ್ಷಣ ಮತ್ತು ಅನುಭವ ದೊರೆಯುವಂತೆ ನೋಡಿಕೊಂಡ, ರಾಜಕೀಯ ಮತ್ತು ಆಡಳಿತವನ್ನು ಬಹಳ ಹತ್ತಿರದಿಂದ ಕಂಡ  ಈತ  ರಾಜಕೀಯ, ವ್ಯಾಪಾರ ಮತ್ತು ಆಡಳಿತವನ್ನು ಕರಗತ ಮಾಡಿಕೊಂಡ. ಅಂತಾರಾಷ್ಟ್ರೀಯ ನೆಲೆಯಲ್ಲಿ ದೇಶೀಯ ರಾಜಕೀಯವನ್ನು ನಾವು ಈತನಲ್ಲಿ ಕಾಣಬಹುದು. ಪ್ರಾಯಶ: ಇಂತಹ ರಾಜಕೀಯ ಚತುರತೆಯ ಕಾರಣದಿಂದಾಗಿಯೇ ಬ್ರಿಟೀಷರು ಈತನನ್ನು ಯುದ್ಧದ ಮೂಲಕ ನಿವಾರಿಸಿ ಬಿಡಲು ತೀರ್ಮಾನಿಸಲು ಪ್ರಮುಖ ಕಾರಣವಿರಬಹುದು.

ಇತಿಹಾಸ ರಚನೆಯ ‘ಕಾರ್ಯ’ ಮತ್ತು ‘ಕಾರಣ’ ಎರಡರ ಮೇಲೂ ಬ್ರಿಟೀಷರ ಪ್ರಭಾವ ಇದ್ದೇ ಇದೆ. ಆಡಳಿತಕ್ಕೆ ಹತ್ತಿರವಿರುವ ‘ಓದು’ ‘ಬರಹ’ ಬಲ್ಲವರು ಈ ಕೆಲಸದಲ್ಲಿ ಪ್ರಮುಖ ಪಾತ್ರವಹಿಸಿರುವ ಕಾರಣ ಇತಿಹಾಸದ ಅಧ್ಯಯನ ಕುರಿತು “ಬಹುಮುಖ” ದೃಷ್ಟಿಕೋನದ ತಿಳುವಳಿಕೆ ಅಗತ್ಯವೆಂದು ನನ್ನ ಅನಿಸಿಕೆ. ಅಧಿಕಾರದ ಕೇಂದ್ರದಿಂದ ದೂರವಿರುವ ಬಹುಪಾಲು ಜನರ ಮಾತು ಮತ್ತು ಮೌನ ಯಾವಾಗಲೂ ಒಂದು ನಿಟ್ಟುಸಿರಾಗಿಯೇ ಉಳಿದು ಬಿಡಬಹುದಾದರೂ, ಮನದ ಬೇಗುದಿ, ಹೃದಯದ ತಲ್ಲಣ ಎಲ್ಲಾದರೂ ಒಂದು ಸುಳಿವು ನೀಡದೇ ಉಳಿಯುವುದಿಲ್ಲ. ಇಂತಹ ಸುಳಿವಿಗಾಗಿ ಇತಿಹಾಸಕಾರನಲ್ಲಿ ತುಡಿತವಿರಬೇಕು. ಜನಪದ, ಕಲೆ, ಸಂಸ್ಕೃತಿ ಇಂತಹ ಸುಳಿವುಗಳನ್ನು ತನ್ನಲ್ಲಿ ಸದಾ ಹುದುಗಿಸಿ ಕೊಂಡಿರುತ್ತದೆ.

ನಮ್ಮ ದೇಶದಲ್ಲಿದ್ದ ಹಲವು ಅಧಿಕಾರದ ಕೇಂದ್ರಗಳನ್ನು ನಿಭಾಯಿಸುವ ದೊಡ್ಡ ಸವಾಲು ಎಲ್ಲ ರಾಜರುಗಳಂತೆ  ಈತನಿಗೂ ಇತ್ತು. ಇದೆಲ್ಲವನ್ನೂ ನಿಭಾಯಿಸುತ್ತಾ ಬ್ರಿಟಿಷರ ವಿರುದ್ಧ ಆಕ್ರಮಣಕಾರಿ ಆಟವಾಡಿದರೂ ಕೊನೆ ಕೊನೆಗೆ ರಕ್ಷಣಾತ್ಮಕವಾಗಿ ಆಡಿದರೂ ಅನಿವಾರ್ಯವಾಗಿ ಸೋಲಬೇಕಾದ ಸ್ಥಿತಿ ಈತನದಾಯಿತು. ಈತನಿಗೆ ರಾಜಕೀಯ ಗೆಲುವು ಸಿಗದೇ ಹೋದರೂ ಈತನ ಬಹುಮುಖೀ ಜನಪರ ಅಲೋಚನೆಯ ಕಾರಣ ಈ ಪ್ರದೇಶದ ಜನಜೀವನಕ್ಕೆ ಹೊಸ ಆರ್ಥಿಕ ವಿನ್ಯಾಸದ ಪರಿಚಯವಾಯಿತು ಎನ್ನುವುದು ಸತ್ಯ. ಇಂತಹ ಒಬ್ಬ ದಕ್ಷ ಆಡಳಿತಗಾರನ ಸಾಧನೆಗಳನ್ನು  ಜಾತಿ ಧರ್ಮಗಳ ಹಂಗಿಗೆ ಬಿದ್ದು ನಿರಾಕರಿಸಿದರೆ ಕಳೆದುಕೊಳ್ಳುವವರು ಯಾರು?

ಡಾ. ಉದಯ ಕುಮಾರ್ ಇರ್ವತ್ತೂರು

ವಿಶ್ರಾಂತ ಪ್ರಾಂಶುಪಾಲರು. ಮೊ: 9449772996

ಇದನ್ನೂ ಓದಿ- “ನೆಟ್ವರ್ಕಿಂಗ್ ಎಂಬ ನವೀನ ತಲಾಶೆ” https://peepalmedia.com/the-innovative-quest-of-networking/

Related Articles

ಇತ್ತೀಚಿನ ಸುದ್ದಿಗಳು