ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಶೇಕಡಾ 500ರಷ್ಟು ಸುಂಕ ವಿಧಿಸುವ ಮಸೂದೆಯ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ.
ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಇದನ್ನು ಹೇಳಿದ್ದಾರೆ. ಮಸೂದೆಯನ್ನು ರಚಿಸಿದ ಅಮೆರಿಕದ ಸೆನೆಟರ್ ಲಿಂಡ್ಸೆ ಗ್ರಹಾಂ ಅವರಿಗೆ ತಮ್ಮ ಕಳವಳ ಮತ್ತು ಇಂಧನ ಭದ್ರತಾ ಅಗತ್ಯಗಳನ್ನು ತಿಳಿಸಲಾಗಿದೆ ಎಂದು ಅವರು ಹೇಳಿದರು.
ಬುಧವಾರ ವಾಷಿಂಗ್ಟನ್ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಜೈಶಂಕರ್ ಈ ವಿಷಯವನ್ನು ತಿಳಿಸಿದರು.
ಉಕ್ರೇನ್ ಜೊತೆಗಿನ ಶಾಂತಿ ಮಾತುಕತೆಗಳಲ್ಲಿ ಭಾಗವಹಿಸಲು ನಿರಾಕರಿಸಿದರೆ ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಶೇಕಡಾ 500ರಷ್ಟು ಸುಂಕ ವಿಧಿಸುವ ಮಸೂದೆಯನ್ನು ಗ್ರಹಾಂ ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ವಿಷಯದ ಬಗ್ಗೆ ಭಾರತೀಯ ರಾಯಭಾರ ಕಚೇರಿ ಮತ್ತು ಅಧಿಕಾರಿಗಳು ಗ್ರಹಾಂ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಜೈಶಂಕರ್ ಹೇಳಿದರು.