ಕಳೆದ ಮೂರು ತಿಂಗಳಿನಿಂದ ಗಲಭೆ ಪೀಡಿತವಾಗಿರುವ ಮಣಿಪುರದಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅರಿಯುವ ಸಲುವಾಗಿ ವಿರೋಧ ಪಕ್ಷಗಳ ಮೈತ್ರಿಕೂಟವಾದ ಇಂಡಿಯಾ ಇಂದು ತನ್ನ ನಿಯೋಗವನ್ನು ಮಣಿಪುರಕ್ಕೆ 2 ದಿನಗಳ ಭೇಟಿಗೆಂದು ಕಳುಹಿಸಲಿದೆ.
ಈಗಾಗಲೇ ದೆಹಲಿ ವಿಮಾನ ನಿಲ್ದಾಣ ತಲುಪಿರುವ ನಿಯೋಗದಲ್ಲಿ 16 ವಿವಿಧ ಪಕ್ಷಗಳ 20 ಸಂಸದರಿದ್ದಾರೆ. ಎರಡು ದಿನಗಳ ಭೇಟಿಯಲ್ಲಿ ಅಲ್ಲಿನ ಪರಿಸ್ಥಿತಿಯ ಅವಲೋಕನ ನಡೆಸಿ ಕೇಂದ್ರ ಸರಕಾರ ಮತ್ತು ಸಂಸತ್ತಿಗೆ ವರದಿ ಮಾಡುವುದಾಗಿ ನಿಯೋಗ ಹೇಳಿದೆ.
“ಸರ್ಕಾರ ವಿಫಲವಾಗಿದೆ, ಹೀಗಾಗಿಯೇ ನಾವೇ ಮಣಿಪುರಕ್ಕೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಸುಶ್ಮಿತಾ ದೇವ್ ಅವರು ತಿಳಿಸಿದ್ದಾರೆ. ಆರ್ಜೆಡಿಯ ಮನೋಜ್ ಝಾ ಅವರು ಮಾತನಾಡಿ,”ಮಣಿಪುರ ನೋವು ಕೇಳಬೇಕಾಗಿದೆ”. ಅಲ್ಲಿನ ಜನರ ನೋವು ಕೇಳಲು ಮತ್ತು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಭೇಟಿ ನೀಡುತ್ತಿದ್ದೇವೆಂದು ಹೇಳಿದ್ದಾರೆ. ಈ ನಡುವೆ ಮಂಗಳವಾರ ಸಂಭವಿಸಿದ್ದ ಹಿಂಸಾಚಾರದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌದರಿ, ಗೌರವ್ ಗೊಗೊಯಿ, ಟಿಎಂಸಿಯ ಸುಶ್ಮಿತಾ ದೇವ್, ಜೆಎಂಎಂನ ಮಹುವಾ ಮಜ್ಹಿ, ಡಿಎಂಕೆಯ ಕನಿಮೋಳಿ, ಎನ್‌ಸಿಪಿಯ ವಂದನಾ ಚೌಹಾಣ್, ಆರ್‌ಎಲ್‌ಡಿಯ ಜಯಂತ್ ಚೌದರಿ, ಆರ್‌ಜೆಡಿಯ ಮನೋಜ್ ಕುಮಾರ್, ಆರ್‌ಎಸ್‌ಪಿಯ ಎನ್. ಕೆ ಪ್ರೇಮಚಂದ್ರನ್ ಮತ್ತು ವಿಸಿಕೆಯ ತಿರುಮಾವಳನ್ ನಿಯೋಗದಲ್ಲಿರುವ ಕೆಲವು ಸದಸ್ಯರು.
ದಿನದಿಂದ ದಿನಕ್ಕೆ ಮಣಿಪುರದಲ್ಲಿ ಹಿಂಸಾಚಾರ ಹೆಚ್ಚುತ್ತಲೇ ಇದ್ದು ಇದರ ನಡುವೆಯೇ ನಿಯೋಗ ಹೊರಟಿದ್ದು ಇದರ ಫಲಿತಾಂಶದ ಕುರಿತು ಕಾದು ನೋಡಬೇಕಿದೆ.