ಮಂಗಳೂರು: ಇಷ್ಟು ಕರಾವಳಿ ಊರಿನಲ್ಲಿ ಸಾರ್ವಜನಿಕರು ಪದೇ ಪದೇ ಮೂಲಭೂತವಾದಿ ಸಂಘಟನೆಗಳ ನೈತಿಕ ಪೋಲೀಸುಗಿರಿಗೆ ಬಲಿಯಾಗುತ್ತಿದ್ದರು. ಆದರೆ ಈ ಬಾರಿ ಈ ಮೂಲಭೂತವಾದಿಗಳು ಒಬ್ಬ ಪೊಲೀಸ್ ಸಿಬ್ಬಂದಿಯನ್ನೇ ತಾನು ಪೊಲೀಸ್ ಎಂದರೂ ಕೇಳದೆ ಅವರನ್ನು ನೈತಿಕ ಪೊಲೀಸ್‌ಗಿರಿಗೆ ಒಳಪಡಿಸಿದ್ದಾರೆ ಜೊತೆಗೆ ಅವರ ಪತ್ನಿಗೂ ಕಿರುಕುಳು ನೀಡಿದ್ದಾರೆ. ಈ ಘಟನೆ ಮಂಗಳೂರಿನ ಬಿ ಸಿ ರೋಡಿನಿಂದ ವರದಿಯಾಗಿದೆ.
ಬಂಟ್ವಾಳ DYSP ಪೊಲೀಸ್ ಸಿಬ್ಬಂದಿಯಾಗಿರುವ ಕುಮಾರ್ ಹನುಮಂತಪ್ಪ ಅವರನ್ನು ಸಂತ್ರಸ್ಥರೆಂದು ಗುರುತಿಸಲಾಗಿದೆ.
ಈ ಕುರಿತು ಅವರು ಬಂಟ್ವಾಳ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ತುಂಬೆ ನಿವಾಸಿಗಳಾದ ಮನೀಷ್ ಪೂಜಾರಿ ಮತ್ತು ಮಂಜುನಾಥ ಆಚಾರ್ಯ ಬಂಧಿತರು.
ಬಿ.ಸಿ.ರೋಡ್ ನಿವಾಸಿಯಾಗಿರುವ ಪೊಲೀಸ್ ಸಿಬ್ಬಂದಿಯೊಬ್ಬರು ತನ್ನ ಪತ್ನಿಯ ಜೊತೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಅವರ ಮೇಲೆ ನೈತಿಕ ಪೊಲೀಸ್ ಗಿರಿ ಮಾಡಿದ್ದಾಗಿ ಆಪಾದಿಸಲಾಗಿದೆ.
ಅವರು ತನ್ನ ಪತ್ನಿ ಮತ್ತು ಪತ್ನಿಯ ಸಹೋದರಿ ಜೊತೆ ಬಿ.ಸಿ.ರೋಡಿನ ಹೋಟೆಲ್ ಒಂದಕ್ಕೆ ಊಟಕ್ಕೆ ಗುರುವಾರ(ಜುಲೈ 27) ರಾತ್ರಿ ಹೋಗಿದ್ದರು. ಬಳಿಕ ಅಲ್ಲಿಂದ ನಡೆದುಕೊಂಡು ಮನೆಗೆ ಬರುವ ವೇಳೆ ವೈನ್ ಶಾಪ್ ಮುಂಭಾಗದಲ್ಲಿದ್ದ ಇಬ್ಬರು ಯುವಕರು ಇವರನ್ನು ಗಮನಿಸಿ, ಹಿಂಬಾಲಿಸಿಕೊಂಡು ಬಂದಿದ್ದಾರೆ.
ಪೊಲೀಸ್ ಸಿಬ್ಬಂದಿ ಕುಟುಂಬವನ್ನು ಮನೆಗೆ ಮುಟ್ಟಿಸಿ, ಬಳಿಕ ಮತ್ತೆ ಕೇಸ್ ಒಂದರ ವಿಚಾರಕ್ಕೆ ಮನೆಯಿಂದ ಹೊರಕ್ಕೆ ಹೊರಡುತ್ತಿದ್ದಂತೆ, ಮನೆಯ ಅಂಗಳದಲ್ಲಿ ನಿಂತಿದ್ದ ಇಬ್ಬರು ಯುವಕರು ಮಾತಿಗಿಳಿದಿದ್ದಾರೆ. ಅವಾಚ್ಯವಾಗಿ ನಿಂದಿಸಿ, ʼಹುಡುಗಿಯನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದೀಯಾ? ನೀನು ಬ್ಯಾರಿ ಎಂದೆಲ್ಲ ಬಯ್ದು’ ಎಂದು ಬೆದರಿಕೆ ಹಾಕಿದ್ದಾರೆ. ಪೋಲೀಸ್ ಎಂದು ಗೋಗೆರದರೂ ಲೆಕ್ಕಿಸಿದೆ ಹಲ್ಲೆಗೂ ಮುಂದಾಗಿದ್ದಾರೆ ಎಂದು ದೂರಲಾಗಿದೆ.
ಗಲಾಟೆ ನಡೆಯುವ ವೇಳೆ ಪೊಲೀಸ್ ಸಿಬ್ಬಂದಿ ಪತ್ನಿ ಹೊರಬಂದಿದ್ದು, ಆರೋಪಿಗಳು ಅವರ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಬಳಿಕ ಇಬ್ಬರನ್ನೂ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದ್ದು, ತನಿಖೆ ಸಾಗಿದೆ. ಪೋಲೀಸ್ ಕುಟುಂಬದ ಮಾನಭಂಗಕ್ಕೆ ಯತ್ನಿಸಿ ಕರ್ತವ್ಯಕ್ಕೂ ಅಡ್ಡಿಪಡಿಸಿದ ಬಗ್ಗೆ ದೂರು ದಾಖಲಾಗಿದೆ.