Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ‘ಮಹಾ’ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಿಲ್ಲ ; ಅಜಿತ್ ಪವಾರ್ ತಗಾದೆ ಏನು?

‘ಮಹಾ’ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಿಲ್ಲ ; ಅಜಿತ್ ಪವಾರ್ ತಗಾದೆ ಏನು?

0

ಇನ್ನೇನು ಎಲ್ಲಾ ತಿಳಿಯಾಯಿತು ಎನ್ನುವಾಗಲೇ ಮಹಾರಾಷ್ಟ್ರ ಸರ್ಕಾರದ ಬುಡ ಮತ್ತೆ ಅಲುಗಾಡಲು ಶುರುವಾಗಿದೆ. ಏಕನಾಥ್ ಶಿಂಧೆ ಬಣದ ಶಿವಸೇನೆ ಹಾಗೂ ಅಜಿತ್ ಪವಾರ್ ಬಣದ NCP ಸೇರಿ ಇತ್ತೀಚೆಗೆ ಸರ್ಕಾರ ರಚನೆಯ ಭಾಗವಾಗಿದ್ದವು. ಆದರೆ ಅಧಿಕಾರ ಹಂಚಿಕೆ ವಿಚಾರದಲ್ಲಿ ಈಗ ಮತ್ತೆ ಈ ಎರಡು ಬಣಗಳ ನಡುವೆ ಶೀತಲ ಸಮರ ಏರ್ಪಟ್ಟಿದೆ.

ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರಕ್ಕೆ ಹೊಸದಾಗಿ ಸೇರಿಕೊಂಡಿರುವ NCPಯ ಅಜಿತ್‌ ಪವಾರ್‌ ಬಣ ಇಡುತ್ತಿರುವ ಬೇಡಿಕೆಗಳು ಈಗ ಏಕನಾಥ್ ಶಿಂಧೆ ಬಣಕ್ಕೆ ಅರಗಿಸಿಕೊಳ್ಳಲಾಗದ ತುತ್ತಾಗಿ ಪರಿಣಮಿಸಿದೆ. ಸಂಪುಟ ವಿಸ್ತರಣೆಯಿಂದ ಹಿಡಿದು, ರಾಜ್ಯದ ವಿವಿಧ ಭಾಗಗಳಲ್ಲಿ ತನಗೆ ಬೇಕಾದ ಅಧಿಕಾರದ ವಿಚಾರದಲ್ಲಿ NCP ಪದೇಪದೆ ಕಿರಿಕ್ ತಗೆಯುತ್ತಿರುವುದು ಶಿವಸೇನೆಗೆ ನುಂಗಲಾರದ ತುತ್ತಾಗಿದೆ.

ಇತ್ತ ಏಕನಾಥ್ ಶಿಂಧೆ ಬಣದ ಜೊತೆಗೆ ಸರ್ಕಾರ ರಚನೆಗೆ ಪ್ರಮುಖ ಪಾತ್ರ ವಹಿಸಿದ್ದ ಬಿಜೆಪಿ ಪಕ್ಷ, ಸರ್ಕಾರಕ್ಕೆ NCP ಪಕ್ಷದ ಆಗಮನದ ನಂತರ ಹೇಳ ಹೆಸರಿಲ್ಲದಂತೆ ಮೂಲೆಗುಂಪಾಗಿದೆ. ಇದೇ ಕಾರಣಕ್ಕೆ ದೇವೇಂದ್ರ ಫಡ್ನವೀಸ್ ಕೂಡಾ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅಲ್ಲಿಗೆ ಬಿಜೆಪಿ ಯಾವ ಉದ್ದೇಶ ಇಟ್ಟು ಅಜಿತ್ ಪವಾರ್ ಬಣವನ್ನು ಆಪರೇಷನ್ ಮಾಡಿತೋ, ಅದರ ಸಂಪೂರ್ಣ ಲೆಕ್ಕಾಚಾರ ಉಲ್ಟಾ ಆದಂತಿದೆ.

ಸಧ್ಯ ಎದ್ದಿರುವ ಹೊಸ ತಲೆನೋವು ಅಂದರೆ, ಉಪ ಮುಖ್ಯಮಂತ್ರಿಯಾಗಿರುವ ಅಜಿತ್‌ ಪವಾರ್‌ ಈಗ ಸಿಎಂ ಸ್ಥಾನಕ್ಕೆ ಹಠ ಹಿಡಿದಿದ್ದಾರೆ ಎನ್ನಲಾಗಿದೆ. ಇದು ಜಿಗರಿ ದೋಸ್ತ್ ನಂತೆ ಇದ್ದ ಶಿವಸೇನೆ ಮತ್ತು ಬಿಜೆಪಿ ಮಧ್ಯೆ ಬಿರುಕು ಮೂಡಿಸಿದೆ. ‘ಅಜಿತ್ ಪವಾರ್ ಹಿರಿಯ ನಾಯಕರಿದ್ದಾರೆ. ನಮ್ಮದೂ ತಕ್ಕ ಮಟ್ಟಿಗೆ ಹೆಚ್ಚು ಶಾಸಕರ ಬಲವಿದೆ. ಅಜಿತ್ ಪವಾರ್ ಮುಖ್ಯಮಂತ್ರಿ ಆಗುವುದರಲ್ಲೂ ನ್ಯಾಯ ಇದೆ’ ಎನ್ನುವಂತೆ NCP ನಾಯಕರು ತೆರೆಮರೆಯಲ್ಲಿ ಬ್ಯಾಟ್ ಬೀಸುತ್ತಿದ್ದಾರೆ.

ಮುಖ್ಯಮಂತ್ರಿ ಸ್ಥಾನದ ಬೇಡಿಕೆ ಈಗ ಯಾವ ಮಟ್ಟಕ್ಕೆ ಏರಿದೆ ಎಂದರೆ ತಮಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಲೇಬೇಕೆಂದು ಅಜಿತ್‌ ಪವಾರ್‌ ಹಠ ಹಿಡಿದಿದ್ದಾರೆ ಎಂಬ ಸುದ್ದಿ ಮಹಾರಾಷ್ಟ್ರ ಕಡೆಯಿಂದ ಕೇಳಿ ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೇಲ್, ಅಜಿತ್ ಪವಾರ್ ಜನಪ್ರಿಯ ನಾಯಕರಾಗಿದ್ದಾರೆ. ಅವರು ಮಹಾರಾಷ್ಟ್ರದ ಸಿಎಂ ಆಗುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಅಜಿತ್‌ ಪವಾರ್‌ ಅವರ ದೀರ್ಘ ಕಾಲದ ಕನಸಾಗಿದೆ. ಅದನ್ನು ನನಸು ಮಾಡಿಕೊಳ್ಳಲು ಅವರು ಮಹಾರಾಷ್ಟ್ರ ಸರ್ಕಾರದ ಭಾಗವಾಗಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಶರದ್ ಪವಾರ್ ನಾಯಕತ್ವದಲ್ಲಿ ಇದ್ದಾಗ ಮುಖ್ಯಮಂತ್ರಿ ಗಾದಿ ಕನಸಿನ ಮಾತಾಗಿತ್ತು. ಮೇಲಾಗಿ ಸೈದ್ಧಾಂತಿಕ ವಿರೋಧಿಗಳ ಜೊತೆಗೆ ಕೈ ಜೋಡಿಸಲು ಶರದ್ ಪವಾರ್ ಅಡ್ಡಗಾಲಾಗಿದ್ದರು. ಹಾಗಾಗಿ ಈಗ ಸಿಕ್ಕ ಅವಕಾಶವನ್ನು ಪಡೆದೇ ತೀರುವ ನಿರ್ಧಾರಕ್ಕೆ ಅಜಿತ್ ಪವಾರ್ ಬಂದಿದ್ದಾರೆ ಎನ್ನಲಾಗಿದೆ.

ಕೆಲ ದಿನಗಳ ಹಿಂದೆ ಪವಾರ್‌ ಅವರು ಶಿಂಧೆ ಅವರ ಸ್ಥಾನಕ್ಕೆ ಬಂದು ಕುಳಿತುಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ದೇವೇಂದ್ರ ಫಡ್ನವೀಸ್‌ ಅವರು ಇದೆಲ್ಲವೂ ಊಹಾಪೋಹವೆಂದು ಹೇಳಿದ್ದರು. ಆದರೆ, ಈಗ ಮತ್ತೆ ಅಜಿತ್‌ ಪವಾರ್‌ ಮುಖ್ಯಮಂತ್ರಿಯಾಗುವ ಕುರಿತು ವರದಿಗಳು ಪ್ರಕಟವಾಗಿವೆ.

ಈ ನಡುವೆ ಈ ಬಿಕ್ಕಟ್ಟಿಗೆ ಬಿಜೆಪಿಯೇ ನೇರ ಕಾರಣ ಎನ್ನಲಾಗಿದೆ. NCP ಪಕ್ಷವನ್ನು ಇಬ್ಬಾಗ ಮಾಡುವ ಉದ್ದೇಶ ಹೊಂದಿದ್ದ ಬಿಜೆಪಿ ಅಜಿತ್ ಪವಾರ್ ಗೆ ಮುಖ್ಯಮಂತ್ರಿ ಹುದ್ದೆಯ ಆಸೆ ತೋರಿಸಿಯೇ ಆಪರೇಷನ್ ಮಾಡಲಾಗಿತ್ತು ಎಂಬ ಇನ್ನೊಂದು ಸುದ್ದಿ ಎದುರಾಗಿದೆ. ಅಜಿತ್‌ ಪವಾರ್‌ ಅವರನ್ನು ಮುಖ್ಯಮಂತ್ರಿಯಾಗಿ ಮಾಡುತ್ತೇವೆಂದು ಬಿಜೆಪಿ ಕೇಂದ್ರ ನಾಯಕತ್ವ ಭರವಸೆ ನೀಡಿದೆ ಎಂಬ ಮಾತುಗಳು ಕೇಳಿಬಂದಿವೆ. ಇದು ಬಿಕ್ಕಟ್ಟನ್ನು ಮತ್ತಷ್ಟು ಜಠಿಲಗೊಳಿಸಿದೆ.

‘ಬಿಜೆಪಿಯ ಉನ್ನತ ನಾಯಕತ್ವವು ಅಜಿತ್ ಪವಾರ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡುವುದಾಗಿ ಭರವಸೆ ನೀಡಿದೆ. ಕೇಂದ್ರ ಸರ್ಕಾರದಲ್ಲಿ ಎರಡು ಕ್ಯಾಬಿನೆಟ್ ಮಂತ್ರಿಗಳ ಸ್ಥಾನಗಳನ್ನು ಎನ್‌ಸಿಪಿಗೆ ನೀಡಬೇಕೆಂದು ಬೇಡಿಕೆ ಕೂಡಾ NCP ಇಟ್ಟಿತ್ತು. ಅದಕ್ಕೂ ಬಿಜೆಪಿ ನಾಯಕತ್ವ ಒಪ್ಪಿಕೊಂಡಿದೆ’ ಎಂದು ಎನ್‌ಸಿಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಈ ನಡುವೆ ಈ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಶರದ್ ಪವಾರ್ ನೇತೃತ್ವದ ಬಣ ಅವಕಾಶವನ್ನು ನಿಧಾನಕ್ಕೆ ಉಪಯೋಗಿಸಿಕೊಳ್ಳಲು ಶುರು ಮಾಡಿವೆ. ಕಾಂಗ್ರೆಸ್ ಕೂಡಾ ‘ಆಗಸ್ಟ್‌ 10 ರಂದು ಅಜಿತ್‌ ಪವಾರ್‌ ಅವರನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿ ನಿರ್ಧರಿಸಿದೆ. ಲೋಕಸಭೆ ಚುನಾವಣೆಯನ್ನು ಎದುರಿಸಲು ಏಕನಾಥ ಶಿಂಧೆ ಅನರ್ಹರು ಎಂಬುದನ್ನು ಬಿಜೆಪಿ ಅರ್ಥ ಮಾಡಿಕೊಂಡಿದೆ’ ಎಂಬ ಹೇಳಿಕೆಯನ್ನು ಹರಿಬಿಟ್ಟಿದೆ. ಇನ್ನೊಂದು ಕಡೆ ಶಿಂಧೆ ಅವರ ಪರಮಾಧಿಕಾರವನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಶಿವಸೇನಾ ನಾಯಕರು ಆಕ್ರೋಶಗೊಂಡಿದ್ದಾರೆ.

ಒಟ್ಟಾರೆ ಈ ಎಲ್ಲಾ ಬೆಳವಣಿಗೆ ನೋಡಿದರೆ ಸರ್ಕಾರದ ಭಾಗವಾಗಿರುವ ಶಿವಸೇನೆ ಬಿಜೆಪಿ ಮತ್ತು NCP ಮೂರೂ ಪಕ್ಷಗಳು ಮೂರು ದಿಕ್ಕಿಗೆ ಮುಖ ಮಾಡಿವೆ. ಮೂರೂ ಪಕ್ಷಗಳ ಒಳಗೂ ‘ವಚನ ಭ್ರಷ್ಟತೆ’ ಮಾತುಗಳು ಕೇಳಿ ಬಂದಿವೆ. ಇವೆಲ್ಲಕ್ಕೂ ಸೂತ್ರದಾರನಾಗಿದ್ದ ಬಿಜೆಪಿ ಅಷ್ಟೂ ಲೆಕ್ಕಾಚಾರ ಇನ್ನು ಕೆಲವೇ ದಿನಗಳಲ್ಲಿ ತಲೆಕೆಳಗಾದರೂ ಆಶ್ಚರ್ಯವಿಲ್ಲ.

You cannot copy content of this page

Exit mobile version