Home ರಾಜ್ಯ ದಕ್ಷಿಣ ಕನ್ನಡ ಅಸ್ತ್ರ- ಸಮವಸ್ತ್ರ…..  

ಅಸ್ತ್ರ- ಸಮವಸ್ತ್ರ…..  

0

ಶಾಲೆ, ಕಾಲೇಜಿನೊಳಗಿನ ಯಾವ ಸಮಸ್ಯೆಯಾದರೂ ಅದನ್ನು ಪರಿಹರಿಸುವುದು ಶಿಕ್ಷಕರಿಗಾಗಲೀ, ಕಾನೂನು ಪಾಲನಾ ವಿಭಾಗಕ್ಕಾಗಲೀ ಅಸಾಧ್ಯವಾದ್ದೇನು ಅಲ್ಲ. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಕಟ್ಟಿಕೊಡುವುದು ನಮ್ಮ ಗುರಿಯಾಗಿರುವಾಗ ಅದರ ಮುಖ್ಯ ಫಲಾನುಭವಿಗಳಾದ ವಿದ್ಯಾರ್ಥಿಗಳಾಗಲೀ ಅವರ ಹೆತ್ತವರಾಗಲೀ ಸಮಸ್ಯೆ ಪರಿಹಾರವಾಗುವುದನ್ನ ಯಾಕೆ ಬೇಡವೆನ್ನುತ್ತಾರೆ. ಆದರೆ ಬೇರೆಯವರ ಬದುಕನ್ನು ಬೆಂಕಿ ಮಾಡಿ ಅದರಿಂದಲೇ ಚಳಿಕಾಯಿಸಿಕೊಳ್ಳುವ ಒಂದು ವರ್ಗವಿದೆಯಲ್ಲಾ, ಅವರಿಗೆ ಮಾತ್ರ ಇದರಿಂದ ಬಹಳ ಬೇಸರವಾಗುತ್ತದೆ, ಯಾಕೆಂದರೆ ಇಂಥಹ ಸಮಸ್ಯೆಗಳು ಹುಟ್ಟುಹಾಕುವ ಉದ್ಯೋಗ, ಸುದ್ದಿಯಲ್ಲಿರುವ ಅವಕಾಶ ಎಲ್ಲ ಕೈ ಜಾರಿ ಹೋಗುತ್ತಲ್ಲ ಎನ್ನುವ ಕಾರಣಕ್ಕೆ. ವೃತ್ತಿ ಜೀವನದಲ್ಲಿ ನಡೆದ ಅಂತಹದ್ದೇ ಒಂದು ಘಟನೆ ಇಲ್ಲಿದೆ ನೋಡಿ- ಡಾ. ಉದಯಕುಮಾರ್‌ ಇರ್ವತ್ತೂರು, ನಿವೃತ್ತ ಪ್ರಾಂಶುಪಾಲರು

ಬೆಳಗ್ಗಿನ ಹೊತ್ತು ತರಗತಿ ಆರಂಭವಾಗುವ ಹೊತ್ತು 9.30ಕ್ಕೆ ತರಗತಿಗೆ ಹೋಗಲು ಸೂಚನೆ ನೀಡಲಾಗುತ್ತದೆ. ಅದಾದ ನಂತರ ತಕ್ಷಣ ಪಾಠ ಪ್ರವಚನಗಳು ಶುರುವಾಗುತ್ತದೆ. ಸಾಮಾನ್ಯವಾಗಿ ಬೆಲ್ ಆದ ತಕ್ಷಣ ಕ್ಯಾಂಪಸ್ಸಿನಲ್ಲಿ ನನ್ನ ಸರ್ಕೀಟ್ ಶುರುವಾಗುತ್ತಿತ್ತು. ಎಂದಿನಂತೆಯೇ ಒಂದು ದಿನ ಬೆಳಿಗ್ಗೆ ಸರ್ಕೀಟ್ ಹೊರಟಿದ್ದ ವೇಳೆ ಸುಮಾರು ನೂರು ಜನ ವಿದ್ಯಾರ್ಥಿಗಳು ಕಾಲೇಜಿನ ಆವರಣದೊಳಗೆ ಗುಂಪಾಗಿ ನಿಂತಿದ್ದರು. ಏನೋ ಎಲ್ಲಿಯೋ ಎಡವಟ್ಟಾಗಿದೆ ಎನ್ನುವುದು ತಿಳಿಯಿತು, ಏನೆಂದು ವಿಚಾರಿಸತೊಡಗಿದೆ.  ಯಾರೂ ಬಾಯಿ ಬಿಡುತ್ತಿಲ್ಲ. ಕೊನೆಗೆ ಉಳ್ಳಾಲ ಕಡೆಯಿಂದ ಬರುವ ಬಿ.ಎ. ವಿಭಾಗದ ಮಿನಿ ಮುಖಂಡ “ನಮಗೆ ಅನ್ಯಾಯವಾಗ್ತಿದೆ, ನಮ್ಮನ್ನು ಇಲ್ಲಿ ಕೇಳುವವರೇ ಇಲ್ಲ, ಕೆಲವು ವಿದ್ಯಾರ್ಥಿಗಳು ಅವರಿಗೆ ಖುಷಿ ಬಂದ ಹಾಗೆ ಇರ್ತಾರೆ ಅದರ ಬಗ್ಗೆ ನೀವು ಏನೂ ಮಾಡಿಲ್ಲ ನಮಗೆ ಮಾತ್ರ ರೂಲ್ಸು ಅಂತ ಹೇಳ್ತಿರಿ” ಎಂದು ತನ್ನ ವಾದ ಮಂಡಿಸಿದ. ಸರಿಯಪ್ಪ ನೀವು ನನ್ನ ಗಮನಕ್ಕೆ ಇದುವರೆಗೆ ಯಾವ ಸಮಸ್ಯೆಯನ್ನೂ ತಂದಿಲ್ಲ, ನಿಮಗೆ ಸಮಸ್ಯೆ ಇದೆ ಎಂದು ಹೇಳದಿದ್ರೆ ನಮಗೆ ಹೇಗೆ ತಿಳಿಯಬೇಕು? ಸಮಸ್ಯೆ ಏನು ಅಂತ ಹೇಳಿ? ಮನಸ್ಸಿದ್ದರೆ ಪರಿಹರಿಸಲು ಆಗದೇ ಇರುವ ಯಾವ ಸಮಸ್ಯೆಯೂ ಇಲ್ಲ ಎಂದು ಹೇಳಿದ ನಂತರ ನಿಧಾನವಾಗಿ “ಬೆಕ್ಕು ಚೀಲದಿಂದ ಹೊರಗೆ ಬಂತು”. ನಿಜ ವಿಷಯ ಏನೆಂದರೆ “ಕೆಲವು ವಿದ್ಯಾರ್ಥಿನಿಯರು ಯುನಿಫಾರಂನೊಂದಿಗೆ ಅವರಿಗೆ ಇಷ್ಟದ ಶಿರವಸ್ತ್ರ ಧರಿಸಿ ಬರ್ತಾರೆ, ನಿಯಮ ಪಾಲಿಸುತ್ತಿಲ್ಲ. ಹಾಗಾಗಿ ಅವರು ನಿಯಮ ಪಾಲಿಸದಿದ್ದರೆ ನಾವೂ ನಮ್ಮ ಇಷ್ಟದ ಶಾಲು ಹಾಕಿಕೊಂಡು ಬರ್ತೇವೆ” ಎನ್ನುವುದೇ ಈ ನೊಂದವರ ವಾದವಾಗಿತ್ತು. ಅಷ್ಟೊತ್ತಿಗಾಗಲೇ ಇದರ ಮೂಲ ಏನು ಎನ್ನುವುದು ನನಗೆ ತಿಳಿದು ಹೋಯಿತು. ನಿಜವಾಗಿಯೂ ಇದು ಹೊರಗಿನವರ ಸಮಸ್ಯೆ, ವಿದ್ಯಾರ್ಥಿಗಳ ಮೂಲಕ ಕಾಲೇಜಿಗೆ ನುಸುಳಿ ಬಂದಿದೆ. ಒಂದು ಕ್ಷಣಕ್ಕೆ ನನಗೆ ಗಾಬರಿಯಾದರೂ ಸುಧಾರಿಸಿಕೊಂಡು, ಸಮಾಧಾನದಿಂದ ಅವರಲ್ಲಿ ಹೇಳಿದೆ. “ನೀವು ಈ ಬಗ್ಗೆ ಇದುವರೆಗೆ ಏನೂ ಹೇಳದೆ ಈಗ ಕ್ಲಾಸಿಗೆ ಹೋಗುವುದರ ಬದಲು ಇಲ್ಲಿ ನಿಂತುಕೊಂಡು ಸಮಸ್ಯೆ ಇದೆ ಅಂತ ಹೇಳ್ತಿರಿ? ಈಗ ನಿಮ್ಮ ಸಮಸ್ಯೆಯ ಬಗ್ಗೆ ಹೇಳಿದಿರಿ. ಹೇಳಿದ ತಕ್ಷಣ ಪರಿಹಾರ ನೀಡುವ ಮಂತ್ರದಂಡ ನನ್ನತ್ರ ಇಲ್ಲ. ನನಗೆ ಮೂರು ದಿನ ಸಮಯ ಕೊಡಿ, ಅಷ್ಟರೊಳಗೆ ಸಮಸ್ಯೆ ಬಗೆಹರಿಸಿ ಕೊಡ್ತೇನೆ. ಈಗ ನೀವು ನಿಮ್ಮ ನಿಮ್ಮ ತರಗತಿಗಳಿಗೆ ಹೋಗಿ. ನನಗೆ ನಿಮ್ಮಲ್ಲಿ ತುಂಬಾ ಬೇಸರ ಇರುವುದು ನಾನು ಸಮಸ್ಯೆ ಬಗೆಹರಿಸಲು ಮಾತ್ರ ಇರುವವನು ಎನ್ನುವ ನಿಮ್ಮ ಆಲೋಚನೆಯ ಕುರಿತು. ಇದು ನಿಮ್ಮ ಸಮಸ್ಯೆ ಮಾತ್ರವಾ? ಕಾಲೇಜಿನ ಸಮಸ್ಯೆ ಅಲ್ವಾ? ನಮ್ಮ ಸಮಸ್ಯೆ ಅಲ್ಲವಾ? ನೀವು ಕಾಲೇಜಿನ ಭಾಗ ತಾನೇ? ಇದನ್ನು ನಾವೆಲ್ಲರೂ ಸೇರಿ ಬಗೆಹರಿಸಬೇಕು ತಾನೇ?  ಅದರ ಬದಲು ನಮ್ಮದು ನಿಮ್ಮದು ಎನ್ನುವ ಭಾಷೆಯಲ್ಲಿ ನೀವು ಮಾತನಾಡುವ ಕ್ರಮವೇ ಸರಿಯಲ್ಲ” ಎಂದು ಹೇಳಿದೆ. ವಿದ್ಯಾರ್ಥಿಗಳು ನನ್ನ ಮಾತಿಗೆ ಒಪ್ಪಿ ತರಗತಿಗಳಿಗೆ ಹೋದರು. ಶಿರವಸ್ತ್ರ, ಸ್ಕಾರ್ಫ್, ಕೇಸರಿ ಶಾಲಿನ ಸಮಸ್ಯೆ ಕರ್ನಾಟಕದ ಬೇರೆ ಬೇರೆ ಕಡೆ ತಲೆದೋರಿತ್ತು. ಇಡೀ ರಾಜ್ಯದಲ್ಲಿ ಏನು ನಡೆಯುತ್ತಿದೆಯೋ ಅದರ ಗಾಳಿ ನಮ್ಮಲ್ಲಿಗೂ ಬೀಸಿತ್ತು.‌

ಶಾಂತವಾಗಿ ಆಲೋಚಿಸ ತೊಡಗಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಸಮಸ್ಯೆ ಬಗೆಹರಿಯಬೇಕು. ಹಿರಿಯರಾದ ಅನುಭವಿಗಳಾದ ಕೆಲವರನ್ನು ಈ ಕುರಿತು ಮಾತನಾಡಿಸಿದೆ, ತಲೆ ವಸ್ತ್ರ ಹಾಕುವುದು ಧರಿಸುವುದು ಧರಿಸದಿರುವುದು ಅವರವರಿಗೆ ಬಿಟ್ಟ ವಿಷಯ. ಆದರೆ ನಾವು ಈಗಾಗಲೇ ಮಾಡಿಕೊಂಡಿರುವ ನಿಯಮಗಳ ಬಗ್ಗೆ ಅನಗತ್ಯವಾಗಿ ಬೇರೆ ಯಾರೋ ಗೊಂದಲ ಸೃಷ್ಟಿ ಮಾಡಬಾರದೆನ್ನುವುದು ನನ್ನ ನಿಲುವಾಗಿತ್ತು. ಮರುದಿನ ಬೆಳಿಗ್ಗೆ ದೂರು ನೀಡಿದ ವಿದ್ಯಾರ್ಥಿಗಳನ್ನು ಕೊಠಡಿಗೆ ಕರೆಸಿದೆ. ಅವರಲ್ಲಿ ಸಮಸ್ಯೆಯ ಬಗ್ಗೆ ವಿವರಿಸುವಂತೆ ಮತ್ತೊಂದು ಬಾರಿ ಕೇಳಿದೆ. “ಮತ್ತೆ ಹಿಂದಿನ ದಿನ ಹೇಳಿದ್ದನ್ನೇ ಪುನರುಚ್ಚರಿಸಿದರು”. ಸರಿ ನೀವು ಯಾವ ದೂರು ತಂದಿದ್ದೀರಿ ಅದನ್ನು ಸರಿಪಡಿಸುತ್ತೇನೆ ಎಂದು ಹೇಳಿ, “ನೋಡಿ ಯುನಿಫಾರಂ ಬೇಕು, ಎಂದವರೂ ನೀವು, ಹೇಗಿರಬೇಕು ಎಂದು ತೀರ್ಮಾನಿಸಿದವರೂ ನೀವು, ನಾವು ಹಾಗೂ ಹೆತ್ತವರು. ನಾವು ಮಾಡಿದ ತೀರ್ಮಾನವನ್ನು ಅನುಷ್ಟಾನಕ್ಕೆ ತರಲು ಅನುಮತಿ ನೀಡಿದ್ದು ವಿಶ್ವವಿದ್ಯಾನಿಲಯ. ಈಗಾಗಲೇ ಮಾಡಲಾದ ನಿರ್ಧಾರದಂತೆ ನಡೆದುಕೊಳ್ಳುವುದು ನಮ್ಮ, ನಿಮ್ಮ ಕರ್ತವ್ಯವಿದೆ. ತಲೆವಸ್ತ್ರ ಧರಿಸಲು ಅವಕಾಶ ಕಲ್ಪಿಸಿ ಸಮವಸ್ತ್ರ ಸಂಹಿತೆ ಜಾರಿಯಾಗಿರುವುದು. ಈಗ ಇಲ್ಲದ ಕ್ಯಾತೆ ತೆಗೆಯುವುದು ಸರಿಯಲ್ಲ. ಸ್ವಲ್ಪ ಯೋಚಿಸಿ ನಿರ್ಧಾರ ಮಾಡಿ” ಎಂದು ಕೇಳಿದೆ.  ತಲೆ ವಸ್ತ್ರ ಧರಿಸುವ ಕೆಲವೊಂದು ವಿದ್ಯಾರ್ಥಿನಿಯರು ಯೂನಿಫಾರಂನೊಂದಿಗೆ ನೀಡಿದ ಶಾಲಿನ ಬಟ್ಟೆ ತುಂಬಾ ತೆಳು ಹಾಗೂ ಪಾರದರ್ಶಕವಾಗಿದೆ. ಹಾಗಾಗಿ ಶಿರ ವಸ್ತ್ರವಾಗಿ ನಾವು ಬೇರೆ ದಪ್ಪದ ದುಪ್ಪಟ್ಟಾ ಉಪಯೋಗಿಸುತ್ತಿರುವುದಾಗಿ ಹೇಳಿದರು. ಅದರಿಂದ ಯಾರಿಗೆ ಏನೂ ತೊಂದರೆ ಇರಲಿಲ್ಲ. ವಿದ್ಯಾರ್ಥಿಗಳು ದೂರು ನೀಡಿದಾಗ ಅದನ್ನು ಪರಾಮರ್ಶಿಸಿ ಒಂದು ಪರಿಹಾರ ನೀಡಬೇಕಾದ್ದು ನನ್ನ ಜವಾಬ್ದಾರಿಯಾಗಿತ್ತು. ಬೇರೆ ಬೇರೆ ಬಣ್ಣದ ಶಿರವಸ್ತ್ರ ಧರಿಸುವ, ಎಲ್ಲಾ ವಿದ್ಯಾರ್ಥಿನಿಯರನ್ನು ಕರೆದು “ನೀವು ಯೂನಿಫಾರಂ ಬಟ್ಟೆಯ  ಬಣ್ಣದ ಶಿರವಸ್ತ್ರವನ್ನು ಧರಿಸಬೇಕೆಂದು ಸೂಚಿಸಿದೆ. ಅಲ್ಲಿಯೂ ಕೆಲವೊಂದು ಜನ ವಿದ್ಯಾರ್ಥಿಗಳು “ನೀವು ಮೊದಲು ತಲೆವಸ್ತ್ರದ ಬಗ್ಗೆ ತಕರಾರು ತೆಗೆದಿರಲಿಲ್ಲ ಈಗ ನಿಯಮ ಹೇಳ್ತಿದ್ದೀರಿ” ಎಂದು ಖ್ಯಾತೆ ತೆಗೆದರು. “ನಾವು ಹೇಳ್ತಾ ಇರೋದು ನೀವು ನಿಯಮ ಪಾಲಿಸಿ, ನಾವು ಸೂಚಿಸಿದ ಬಣ್ಣದ ಶಿರ ವಸ್ತ್ರ ಧರಿಸ ಬೇಕು ಅಷ್ಟೇ. ಇದನ್ನು ಮೊದಲೇ ಹೇಳಿದ್ದೇವೆ, ಈಗಲೂ ಅದನ್ನೇ ಹೇಳುತ್ತಿರುವುದು.” ಆ ಸಂದರ್ಭದಲ್ಲಿ ಕೆಲವರು “ನಾವು ಈಗಾಗಲೇ ಅದನ್ನು ಖರೀದಿಸಿ ಆಗಿದೆ. ಇನ್ನು ಬೇರೆ ತೆಗೆದುಕೊಳ್ಳಲಿಕ್ಕೆ ನಮ್ಮತ್ರ ದುಡ್ಡಿಲ್ಲ” ಎನ್ನುವ ವಿತಂಡ ವಾದ ಮಾಡಿದರು ಕೂಡಾ.  ಆಗ “ಸರಿ, ಯಾರಲ್ಲಿ ದುಡ್ಡಿಲ್ಲವೋ ಅಂತವರಿಗೆ ಸದ್ಯಕ್ಕೆ ನಾವು ಕೊಡುತ್ತೇವೆ, ಆದರೆ ನಿಯಮ ಪಾಲನೆ ಆಗಬೇಕು” ಎಂದು ಹೇಳಿದೆ. ಸಮಸ್ಯೆ ವಿದ್ಯಾರ್ಥಿಗಳಲ್ಲದಿದ್ದುದರಿಂದ ಅದನ್ನು ಪರಿಹರಿಸುವುದು ಸುಲಭವಾಯಿತು. ಕಾತರದಿಂದ ಇದ್ದ ಎಲ್ಲರೂ ಸಮಸ್ಯೆ ಬಗೆಹರಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಾಡಿನ ನೆಮ್ಮದಿ ಕೆಡಿಸುತ್ತಿರುವ ದೊಡ್ಡ ಸಮಸ್ಯೆಯೊಂದು ನಮ್ಮ ಕಾಲೇಜಿನಲ್ಲಿ ಹೂವೆತ್ತಿದಷ್ಟು ಸಲೀಸಾಗಿ ಪರಿಹಾರ ಕಂಡಿತು. ಇದಕ್ಕೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಪರಸ್ಪರರಲ್ಲಿ ಇದ್ದ ನಂಬಿಕೆ ವಿಶ್ವಾಸಗಳೂ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ.

ವಿದ್ಯಾರ್ಥಿಗಳು, ಹೆತ್ತವರು, ಮಕ್ಕಳಿಗೆ ಒಳ್ಳೆಯ ಭವಿಷ್ಯ ಮತ್ತು ಉತ್ತಮ ಸಮಾಜ ಬಯಸುವ ಪ್ರತಿಯೊಬ್ಬರೂ ಯೋಚಿಸ ಬೇಕಾದ ವಿಷಯ ಏನೆಂದರೆ, ಈ ಸಮಾಜದಲ್ಲಿ ಒಂದು ವ್ಯವಸ್ಥೆ ಇದೆ, ಅದು ಕೆಲಸ ಮಾಡುವ ರೀತಿ ಇದೆ, ಅದನ್ನು ಕೆಲಸ ಮಾಡಲು ಬಿಡಿ. ಸಮಸ್ಯೆ ಇದ್ದರೆ ಅದನ್ನು ಪರಿಹರಿಸಬಹುದಾದ ದಾರಿಗಳೂ ಇವೆ, ಅದರ ಮೇಲೆ ವಿಶ್ವಾಸವಿಡಿ. ಸಂಸ್ಥೆ ನಡೆಸುವವರಿಗೆ ಅಲ್ಲಿ ಬರಬಹುದಾದ ಸಮಸ್ಯೆ ಬಗೆಹರಿಸುವ ಬುದ್ಧಿ ಇರುತ್ತದೆ, ಕಾನೂನು ಪಾಲಕರಿಗೆ ಶಾಂತಿ ಸುವ್ಯವಸ್ಥೆ ಕಾಪಾಡುವ ಶಕ್ತಿ ಇದ್ದೇ ಇದೆ.  ಯಾರು ಏನು ಮಾಡಬೇಕು ಅದನ್ನು ಅವರು ಮಾಡಲಿ. ಎಲ್ಲವನ್ನು ಎಲ್ಲರೂ ಮಾಡಲಾಗುವುದಿಲ್ಲ ಎನ್ನುವ ವಿವೇಕ ನಮ್ಮಲ್ಲಿರಬೇಕು. ಇಲ್ಲವಾದರೆ ನಾಳೆ ನಿಮ್ಮ ಆರೋಗ್ಯ ಕೆಟ್ಟರೆ, ರಾಜಕೀಯ ನಾಯಕರೇ, ಟೀವೀ ನಿರೂಪಕರೇ ಔಷಧಿ ನೀಡುವ, ಶಸ್ತ್ರ ಚಿಕಿತ್ಸೆ ನಡೆಸಬೇಕಾದ ಕಾಲವೂ ಬಂದೀತು ಯೋಚಿಸಿ.

(ಇವತ್ತು ಶಿಕ್ಷಣ ರಂಗದಲ್ಲಿರುವ ಹಲವಾರು ಸಮಸ್ಯೆ, ಸವಾಲುಗಳ ಕುರಿತು ” ಗೆಲುವಿನ ದು:ಖ ಮತ್ತು ಸೋಲಿನ ಸುಖ” ಎನ್ನುವ ನನ್ನ ಕೃತಿಯಲ್ಲಿ ವಿವರವಾಗಿ ದಾಖಲಿಸಿದ್ದೇನೆ)

ಡಾ.ಉದಯ ಕುಮಾರ ಇರ್ವತ್ತೂರು

ನಿವೃತ್ತ ಪ್ರಾಂಶುಪಾಲರು

ಇದನ್ನೂ ಓದಿ-ಗೃಹ ಸಚಿವರ ಮಗ ಲಿಂಗ ಬದಲಿಸಿಕೊಂಡಿದ್ದೂ ಮಕ್ಕಳಾಟವೆ? ಯಶ್ಪಾಲ್‌ ಸುವರ್ಣ ಪ್ರಶ್ನೆ

You cannot copy content of this page

Exit mobile version