ಗಂಗೆ ಮತ್ತು ಮೋಹನ ಸಿನೆಮಾ ನೋಡಿ ಪೇಟೆ ಸುತ್ತಾಡಲು ಹೊರಡುತ್ತಾರೆ. ಗಂಗೆಯ ಆಸೆಯಂತೆ ಪೌಡರ್ ಸ್ನೋ ಇತ್ಯಾದಿಗಳನ್ನು ಖರೀದಿಸಿದ ಬಳಿಕ ಮೋಹನ ಆಕೆಗೆ ಪ್ಯಾಂಟು ಷರಟು, ಲಿಪ್ ಸ್ಟಿಕ್ ಇತ್ಯಾದಿಗಳನ್ನು ಗಂಗೆಯ ಒಪ್ಪಿಗೆ ಇಲ್ಲದೆಯೇ ಖರೀದಿಸುತ್ತಾನೆ. ಮನೆಯಲ್ಲಿ ಪ್ರಸ್ಥದ ಶಾಸ್ತ್ರಕ್ಕೆ ಸಿದ್ಧತೆಯಾಗಿರುತ್ತದೆ. ಗಂಗೆ ಒಪ್ಪಿದಳೇ? ಓದಿ, ವಾಣಿ ಸತೀಶ್ ಅವರ ʼತಂತಿ ಮೇಲಣ ಹೆಜ್ಜೆʼ ಯ ಮೂವತ್ತೊಂಭತ್ತನೇ ಕಂತು.
“ಏನೂ… ನಾನಿವತ್ತು ಆವಯ್ಯುನ್ ಮಗ್ಲಲ್ಲಿ ಮಲಿಕಬೇಕಾ!? ಅಮ್ಮಣ್ಣಿ…ಯಾಕೆ ಬಂದ್ಬುಡಿ ಆ ಸೋಬಾನೆ ರಾಜಮಜ್ಜಿ ಗಂಡುಸ್ರು ಕೈಲಿ ಮುಟ್ಟುಸ್ಕೊಬೇಡಿ ಮಕ್ಳಾಗ್ಬುಡ್ತವೆ ಅಂತ ಅವತ್ತು ನಿಮ್ಮೆದ್ರುಗೆ ಹೇಳ್ಲಿಲ್ವ ಅತ್ಗೆಮ್ಮ. ಇದು ಗೊತ್ತಿದ್ದು ಅವಯ್ಯುನ ಮಗ್ಲಲಿ ಮಲಿಕೊ ಅಂತಿದ್ದೀರಲ್ಲ. ಹಂಗನ್ನಕೆ ನಾಚ್ಕೆ ಆಗಕಿಲ್ವಾ ನಿಮ್ಗೆ” ಎಂದು ಗಂಗೆ ಊದಿ ಉಬ್ಬರಿಸಿಕೊಂಡು ಅತ್ತಿಗೆ ಎದುರು ತನ್ನ ವರಾತ ತೆಗೆದು ಕೂತಿದ್ದಳು. ಸಂಕೋಚ ಸ್ವಭಾವದ ಯಶೋಧೆ ಆ ಕ್ಷಣ ತನ್ನ ನಾಚಿಕೆಯನ್ನೆಲ್ಲಾ ಬದಿಗೊತ್ತಿ, ಗಂಡ ಹೆಂಡತಿ ನಡುವಿರುವ ಬಾಂಧವ್ಯವನ್ನು ಬಿಡಿಸಿ ಬಿಡಿಸಿ ಹೇಳುತ್ತಾ ಗಂಗೆಗೆ ಅರ್ಥೈಸಲು ಹೆಣಗಾಡಿದಳು. ಕೊನೆಗೆ ಒಳ ಬಂದ ಸಾಕವ್ವ ಯಶೋಧೆಯ ಮಾತಿಗೆ ಕಿವಿಗೊಡದೆ ಮಾತಿಗೆ ಮಾತು ಒಗೆಯುತ್ತಿದ್ದ ಮಗಳ ತಲೆಯ ಮೇಲೊಂದು ಸರಿಯಾಗಿ ಮೊಟಕಿ “ಹೆಡ್ಮುಂಡೆದೆ ನಾನು ನಿಮ್ಮಪ್ಪಂತವು ಮಲಿಕೊಳ್ಳಿಲ್ಲ ಅಂದಿದ್ರೆ ನೀನೆಲ್ಲಿ ಹುಟ್ತಿದ್ದೆ. ನಡ್ನಡಿ ನಾವು ಹೆಂಗ್ ಹೇಳ್ತಿವೋ ಹಂಗ್ ಕೇಳು” ಎಂದು ಒಂದಷ್ಟು ಬುದ್ದಿವಾದ ಹೇಳಿ ಪ್ರಸ್ಥಕ್ಕೆ ಅವಳನ್ನು ಅಣಿಗೊಳಿಸಿ, ತಾವೆಲ್ಲ ಅವರಿವರ ಮನೆಯಲ್ಲಿ ಮಲಗಿಕೊಳ್ಳಲು ಹೋದರು.
ಮಲಗುವ ಕೋಣೆಯಲ್ಲಿ ಗಂಗೆಗಾಗಿ ಕಾದು ಕುಳಿತಿದ್ದ ಮೋಹನ ಎಷ್ಟೊತ್ತಾದರೂ ಅವಳು ಬಾರದನ್ನು ಕಂಡು ಮೆಲ್ಲಗೆ ಹಜಾರದತ್ತ ಇಣುಕಿ ನೋಡಿದ. ಹಿಂದಿನ ದಿನ ಸೋಪಾನ ಪೇಟೆಯಿಂದ ತಂದಿದ್ದ ಬಟ್ಟೆ ಬರೆಗಳನ್ನೆಲ್ಲಾ ತನ್ನ ಸುತ್ತಾ ಹರವಿಕೊಂಡು ಕುಳಿತಿದ್ದ ಗಂಗೆ, ಮೋಹನ ತೆಗೆದು ಕೊಟ್ಟ ಉಗುರು ಬಣ್ಣವನ್ನು ತನ್ನ ಬೆರಳಿಗೆ ಹಚ್ಚಿಕೊಳ್ಳುವುದರಲ್ಲಿಯೇ ಮುಳುಗಿ ಹೋಗಿದ್ದಳು. ಹತ್ತಿರ ಬಂದು ನಿಂತು ಮೋಹನ ” ನಿಮ್ಮ ಕೈ ಬಹಳ ಚೆನ್ನಾಗಿ ಕಾಣ್ತಿದೆ ಗಂಗೂ” ಎಂದು ಪಿಸುಗುಟ್ಟಿದ. ಬೆನ್ನ ಹಿಂದೆಯೇ ನಿಂತ ಮೋಹನನನ್ನು ಕಂಡು ಗಾಬರಿಯಾದ ಗಂಗೆ “ಹೂಂ ಚನ್ನಾಗೈತೆ” ಎಂದು ಹೇಳಿ ಪಕ್ಕಕ್ಕೆ ಸರಿದು ಕೂತಳು.” ಅಲ್ಲ ಗಂಗೂ ನೆನ್ನೆ ರಾತ್ರಿ ಹಾಗೆ ಕೂಕ್ಕೊಂಡು ಓಡ್ಬಂದ್ರಲ್ಲ ಸರಿನಾ, ಮನೆಯವರು ನನ್ನ ಬಗ್ಗೆ ಏನ್ ಅಂದ್ಕೊಂಡಿರಲ್ಲ ಹೇಳಿ” ಎಂದು ಸಂಕೋಚ ವ್ಯಕ್ತಪಡಿಸಿದ. ಮುಖ ಊದಿಸಿಕೊಂಡ ಗಂಗೆ “ನಾನೇನು ಬಂದು ಹೇಳ್ಳಿಲ್ಲ ಬುಡಿ. ನೀವು ಹಂಗ್ ಮಾಡಿದ್ದು ಸರಿಯ ಮತ್ತೆ” ಎಂದು ಗಡುಸಾಗಿಯೇ ಹೇಳಿ, ಮತ್ತೆ ಸೋಬಾನೆ ರಾಜಮ್ಮಜ್ಜಿಯ ಮಾತುಗಳನ್ನು ಪುನರುಚ್ಚರಿಸಿ ತನ್ನ ಭಯದ ಕಾರಣವನ್ನು ತಿಳಿಸಿದಳು.
ಅವಳ ಮುಗ್ದತೆ ಕಂಡು ಹೊಟ್ಟೆ ಹುಣ್ಣಾಗುವಷ್ಟು ನಕ್ಕ ಮೋಹನ, ದೇವಾನು ದೇವತೆಗಳ ದಾಂಪತ್ಯದಿಂದ ಹಿಡಿದು ವೈಜ್ಞಾನಿಕವಾಗಿ ಗಂಡು ಹೆಣ್ಣು ಕೂಡುವುದರಿಂದ ಪ್ರಪಂಚ ಹೇಗೆ ಮುಂದುವರಿಯುತ್ತದೆ ಎಂಬ ವಿಶಯವನ್ನೆಲ್ಲಾ ಬಹಳ ತಾಳ್ಮೆಯಿಂದ ಅವಳಿಗೆ ಅರ್ಥವಾಗುವಂತೆ ಹೇಳಿದ. ವಿಧೇಯ ವಿದ್ಯಾರ್ಥಿಯಂತೆ ಕಣ್ಣರಳಿಸಿ ಕಿವಿಗೊಟ್ಟು ಅವನ ಮಾತುಗಳನ್ನು ಕೇಳಿಸಿಕೊಂಡ ಗಂಗೆ, ತನ್ನೊಳಗಿನ ಎಳಸುತನಕ್ಕೆ ನಾಚಿ ಓಡಿಹೋಗಿ ಅಡಿಗೆ ಕೋಣೆಯೊಳಗೆ ಮುಖಮುಚ್ಚಿ ಕೂತಳು. ಇದನ್ನು ಅರಿತ ಮೋಹನ ಅವಳ ಹಿಂದೆಯೇ ಹೋಗಿ ಮುಖಮುಚ್ಚಿಕೊಂಡಿದ್ದ ಅವಳ ಕೈಯನ್ನು ನಾಜೂಕಾಗಿ ತೆಗೆಸಿ “ಈಗ ಹೇಳಿ ಗಂಗೂ ನಿಮಗೆ ಮಕ್ಕಳು ಬೇಡ್ವ” ಎಂದು ಕೇಳಿದ. ರಂಗೇರಿದ ಗಂಗೆ ನಾಚಿ ಓರೆಗಣ್ಣಿನಲ್ಲೆ ಅವನ ಮುಖ ನೋಡಿದಳು. ಅವಳು ಮೆದುವಾಗಿದ್ದನ್ನು ಕಂಡು ಮತ್ತಷ್ಟು ಧೈರ್ಯಗೊಂಡ ಮೋಹನ ಮೆಲ್ಲಗೆ ಅವಳನ್ನು ತಬ್ಬಿದ. ಅವನ ಅಪ್ಪುಗೆಯಿಂದ ಪುಳಕಗೊಂಡ ಗಂಗೆ ಅವನಿಂದ ದೂರಹೋಗುವ ಯಾವ ಪ್ರಯತ್ನವನ್ನು ಮಾಡಲಿಲ್ಲ. ತನ್ನನ್ನು ಅವನತ್ತ ಇನ್ನಷ್ಟು ಒಡ್ಡಿನಿಂತಳು. ಮುದ್ದುಗರೆಯುತ್ತಲೆ ಹಜಾರಕ್ಕೆ ಅವಳನ್ನು ಕರೆತಂದ ಮೋಹನ, ತಾನು ತೆಗೆದು ಕೊಟ್ಟಿದ್ದ ಪ್ಯಾಂಟು ಶರ್ಟನ್ನೆಲ್ಲಾ ಹಾಕಿಸಿ, ಅವಳ ತುಟಿಯನ್ನು ಕೆಂಪನೆಯ ಲಿಪ್ ಸ್ಟಿಕ್ ನಿಂದ ಅಲಂಕರಿಸಿ “ನೋಡಿ ಎಷ್ಟು ಚೆನ್ನಾಗಿ ಕಾಣ್ತಿದ್ದೀರಿ ಗಂಗೂ. ನಾವು ಪೂನಾಕ್ಕೆ ಹೋದಮೇಲೆ ನೀವು ಹೀಗೆ ಡ್ರೆಸ್ ಮಾಡ್ಕೊಬೇಕು ಆಯ್ತಾ” ಎಂದು ಮತ್ತನಾಗಿ ಅವಳ ಕಿವಿಯಲ್ಲಿ ಉಸುರಿದ. ಗೋಡೆಯೊಳಗೆ ಅಂಟಿಸಿದ್ದ ಇಷ್ಟೇ ಇಷ್ಟಗಲದ ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಂಡು ಸಂಭ್ರಮಿಸಿ ಕೆಂಪಾದ ಗಂಗೆ “ಹೂಂ” ಎಂದು ತಲೆ ಆಡಿಸಿ “ಇನ್ಮೇಲೆ ನನ್ನ ಹೋಗು ಬಾ ಅನ್ನಿ, ನೀವು ತಾವು ಅನ್ಬೇಡಿ” ಎನ್ನುತ್ತಾ ಮಂತ್ರ ಮುಗ್ಧಳಾಗಿ ಅವನ ತೆಕ್ಕೆಯೊಳಗೆ ಕರಗಿ ನೀರಾಗಿ ಹರಿದಳು.
ಬಳೆಗಾರ ಭದ್ರಪ್ಪ ಆಗಾಗ ನಾರಿಪುರಕ್ಕೆ ಬಂದು ಹೋಗುತ್ತಿದ್ದ ಖಾಯಂ ಬಳೆ ವ್ಯಾಪಾರಿ. ವಯಸ್ಸು ಅರವತ್ತು ದಾಟಿದ್ದರು ಕಟ್ಟು ಮಸ್ತಿನ ಮಜಬೂತಾದ ಆಳು. ತಲೆಗೊಂದು ಮುಂಡಾಸು ಕಟ್ಟಿ ಕಚ್ಚೆ ಪಂಚೆಯುಟ್ಟು, ಎಡ ಬಗಲಿಗೆ ಬಳೆಯ ದಿಂಡು ತುಂಬಿದ ಬಿಳಿಯ ಜೋಳಿಗೆ ಇಳಿಬಿಟ್ಟು, ಬಲ ಬಗಲಿಗೆ ಬಣ್ಣ ಬಣ್ಣದ ಬಳೆಗಳನ್ನು ಸೊಗಸಾಗಿ ಕಟ್ಟಿದ ಮಲಾರವನ್ನು ನೇತು ಹಾಕಿ ಕೊಂಡು, ಊರ ಬಾಗಿಲಲ್ಲಿ ನಿಂತು ತನ್ನ ಕಂಚಿನ ಕಂಠ ಎತ್ತಿ ಹಾಡಲು ಶುರು ಮಾಡಿದನೆಂದರೆ ಅಡಿಗೆ ಕೋಣೆಯಲ್ಲಿ ಹುದುಗಿ ಹೋಗಿದ್ದ ಹೆಂಗಸರೆಲ್ಲ ಜಿಂಕೆಗಳಂತೆ ಹಾರಿ ಬಂದು ಬಾಗಿಲಲ್ಲಿ ನಿಲ್ಲುತ್ತಿದ್ದರು.
ಅಂದು ಮಧ್ಯಾಹ್ನ ಊಟ ಮುಗಿಸಿ ಅಪರೂಪವೋ ಎಂಬಂತೆ ಅವ್ವ ಅಪ್ಪ ಇಬ್ಬರು ಹೊರ ಬಾಗಿಲ ಜಗಲಿಕಟ್ಟೆಲ್ಲಿ ಕುಳಿತು ಎಲೆ ಅಡಿಕೆ ಮೆಲ್ಲುತ್ತಿದ್ದರು. ಮೋಹನ ಗೆಳೆಯರನ್ನು ನೋಡಿಬರಲು ಸೋಪಾನ ಪೇಟೆಯತ್ತ ಹೋದರೆ ಮಿಕ್ಕ ಅಣ್ಣ ತಮ್ಮಂದಿರು ಹೊಲಗದ್ದೆಗಳತ್ತ ಹೋಗಿದ್ದರು. ಅಡಿಗೆ ಮನೆಯ ಒಪ್ಪ ಓರಣದ ಕೆಲಸದಲ್ಲಿ ತೊಡಗಿದ್ದ ಗಂಗೆಗೆ ಬಳೆಗಾರ ಭದ್ರಪ್ಪನ ದನಿ ಕಿವಿ ಮೇಲೆ ಬಿದ್ದದ್ದೇ ತಡ, ಹಕ್ಕಿಯಂತೆ ಹಾರಿ ಬಂದು ಬಾಗಿಲಲ್ಲಿ ನಿಂತಳು. ಹಾಡಿಗಾಗಿ ಭದ್ರಪ್ಪನನ್ನು ಸದಾ ಗೋಳು ಹೊಯ್ದುಕೊಳ್ಳುತ್ತಿದ್ದ ಗಂಗೆ, ಅಂದು ಕೂಡ ಚಿಕ್ಕ ಹುಡುಗಿಯಂತೆ ನೆಗೆಯುತ್ತಾ ಕೆಳಗಿನ ಬೀದಿಯಿಂದ ನಡೆದು ಬರುತ್ತಿದ್ದ ಭದ್ರಪ್ಪನ ಬಳಿಗೆ ಓಡಿದಳು. ” “ಇಷ್ಟು ದಿನ ಎಲ್ಲ್ ಹೊಂಟ್ಹೋಗ್ಬುಟ್ಟಿದ್ರಿ ಭದ್ರಪ್ಪಯ್ಯ. ನನ್ ಮದ್ವೆಗೆ ಬಳೆ ತೊಡ್ಸುಕೊಳಕ್ಕೆ ನಿಮ್ಮನ್ನ ಎಷ್ಟು ಕಾಯ್ದೆ ಗೊತ್ತಾ” ಎಂದು ಹುಸಿ ಮುನಿಸು ತೋರುತ್ತ ಮನೆಯತ್ತ ಎಳೆದು ತಂದು ಕೂರಿಸಿದಳು. ತಿಂಗಳ ಕೆಳಗಷ್ಟೇ ನೋಡಿದ್ದ ಲಂಗ ರವಿಕೆ ತೊಟ್ಟ ಪುಂಡು ಹುಡುಗಿ ಇದ್ದಕ್ಕಿದ್ದಂತೆ ಹೀಗೆ ಸೀರೆ ತಾಳಿ ಕಾಲುಂಗುರ ತೊಟ್ಟು ಗಂಭೀರವಾಗಿ ನಿಂತಿರುವುದನ್ನು ಕಂಡು ದಂಗಾದ ಭದ್ರಪ್ಪ, ಎದುರು ಜಗುಲಿಯಲ್ಲಿ ಕುಳಿತು ಎಲೆ ಅಡಿಕೆ ಮೆಲ್ಲುತ್ತಿದ್ದ ಅಪ್ಪನಲ್ಲಿ “ಅಯ್ಯೋ ಶಿವನೇ.. ಇದೇನು ಬೋಪಯ್ಯ ನನ್ನ ಕಣ್ಣ ನಾನೇ ನಂಬಕಾಗ್ತಿಲ್ಲ. ಅಲ್ಲ ಒಂದು ಮಾತು ಯಾರ್ ಕೈಲಾದ್ರು ನನಗೆ ಹೇಳಿ ಕಳಿಸಿದ್ರೆ ನಾನೇ ಬಂದು ನಮ್ಮ ಗಂಗವ್ವುನ್ಗೆ ಬಳೆ ಶಾಸ್ತ್ರ ಮಾಡ್ಕೊಡ್ತಿದ್ನಲ್ಲ ಎಂಥ ಕೆಲಸ ಮಾಡ್ಬುಟ್ರಿ” ಎಂದು ಬೇಸರದಿಂದ ಲೋಚಗುಟ್ಟಿದ.
ಗಂಗೆಯ ಮದುವೆ ವಿಷಯವನ್ನೆಲ್ಲಾ ಸವಿಸ್ತಾರವಾಗಿ ಬಳೆಗಾರನೊಂದಿಗೆ ಹಂಚಿಕೊಂಡ ಅಪ್ಪ “ನಮ್ಗೂ ವಯಸ್ಸಾಯ್ತೈತೆ. ನಮ್ ಕೈಲು ಏನೈತೆ ಭದ್ರಪ್ಪ. ಇನ್ನು ಮುಂದೆ ಅವಳ್ ಕಷ್ಟಸುಖ ನೋಡ್ಬೇಕಾದ್ದೆಲ್ಲ ಮನೆಗಂಡ್ಮಕ್ಳು ತಾನೆಯ, ಹಂಗಾಗೆ ನಾವು ಕೈಚಲ್ಲಿ ಸುಮ್ಮನಾಗ್ಬುಟ್ಟೊ. ಎಂದು ತನ್ನ ಅಸಹಾಯಕತೆ ತೋಡಿಕೊಂಡ. ಪ್ರತಿದಿನ ಎಂಟತ್ತು ಹಳ್ಳಿಗಳನ್ನು ಸುತ್ತಾಡುವ ಭದ್ರಪ್ಪನಿಗೆ ಭೋಗನೂರಿನ ಪುಟ್ಟಪ್ಪನ ಹಿರಿಯ ಮಗ ಎಂಬ ಶಬ್ದ ಕಿವಿ ಮೇಲೆ ಬಿದ್ದಿದ್ದೆ ತಡ ರಕ್ತ ಸಂಚಾರವೆ ನಿಂತು ಹೋದವನಂತೆ ಗಪ್ಪಾಗಿ ಕುಳಿತು ಬಿಟ್ಟ. ಅವನನ್ನು ಕಂಡು ತಳಮಳಗೊಂಡ ಅಪ್ಪ ಏನನ್ನೋ ಊಹಿಸಿದವನಂತೆ ಗಂಗೆಯಿಂದ ನೀರುತರಿಸಿ ಭದ್ರಪ್ಪನಿಗೆ ಕುಡಿಯಲು ಕೊಟ್ಟು ” ಒಂದೀಟ್ ಹಂಗೆ ಹಿಂಗೋಗಿ ಬಂದ್ಬುಡನ ಬಾ ಭದ್ರಪ್ಪ” ಎಂದು ಹೇಳಿ ಅವನನ್ನು ಕರೆದುಕೊಂಡು ಮೇಗಳ ಬೀದಿಯತ್ತ ಹೊರಟ.
ತನ್ನೊಳಗಿನ ತಳಮಳವನ್ನು ಹೊರಹಾಕಿ ಕಂಪಿಸುತ್ತಿದ್ದ ಭದ್ರಪ್ಪ “ನೀವು ಬಾಳ ತಿಳ್ದೋರು ಅಂದ್ಕೊಂಡಿದ್ದೆ ಯಾಕಿಂಗೆ ದಡ್ಡ್ ಕೆಲ್ಸ ಮಾಡ್ಕೊಂಡಿದ್ದೀರಿ ಬೋಪಯ್ಯ. ಅರಗಿಣಿನ ಸಾಕಿ ಬೆಕ್ಕಿನ ಬಾಯ್ಗೆ ಕೊಟ್ಟಂಗೆ ಆ ಕಿತ್ತೋದ್ ಕುಟುಂಬುಕ್ಕೆ ಮಗ್ಳುನ್ನ್ ಕೊಟ್ಟು ಕೂತಿದ್ದೀರಲ್ಲ. ಅವನೊಬ್ಬ ತಿರುಬೋಕಿ ನನ್ಮಗ. ಮಾತೆತ್ತಿದ್ರೆ ಕೊಲೆ ಸುಲಿಗೆ ಅಂತ ಗುಂಡಾಗಿರಿ ಮಾಡ್ಕೊಂಡ್ ತಿರುಗ್ತನೆ. ಮೊದ್ಲು ಹೆಂಗಾರು ಮಾಡಿ ನಿಮ್ಮ ಹುಡ್ಗಿನ ಬಚಾವು ಮಾಡ್ಕೊಳ್ಳಿ” ಎಂದು ಹೇಳಿದ. ಜಗುಲಿ ಕಟ್ಟೆಯಲ್ಲಿ ಹಾಡಿಗಾಗಿ ಕಾದು ಕುಳಿತಿದ್ದ ಗಂಗೆಗೆ ಇನ್ನೊಂದು ಸತಿ ಬಂದು ನೀನು ಕೇಳ್ದಷ್ಟು ಹಾಡ್ತಿನಿ ಗಂಗವ್ವ ಇವತ್ತು ಮಾತ್ರ ನಂಗೆ ಹಿಂಸೆ ತಗಿ ಬ್ಯಾಡ” ಎಂದು ಹೇಳಿ, ತನ್ನ ಮಲಾರದಲ್ಲಿ ಪೋಣಿಸಿದ್ದ ಹಸಿರು ಬಣ್ಣದ ಬಳೆ ತೆಗೆದು ಅವಳ ಎರಡೂ ಕೈಗಳಿಗೆ ತೊಡಿಸಿ ತುಟಿ ಎರಡು ಮಾಡದಂತೆ ಭಾರವಾದ ಮನಸ್ಸಿನಲ್ಲಿ ಮುಂದಿನ ಮನೆಗಳತ್ತ ಹೆಜ್ಜೆ ಹಾಕಿದ.
ವಾಣಿ ಸತೀಶ್
ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ
ಹಿಂದಿನ ಸಂಚಿಕೆ ಓದಿದ್ದೀರಾ ? ಗಂಡುಸ್ರು ಮುಟ್ಟುದ್ರೆ ಮಕ್ಳಯ್ತವೆ…https://peepalmedia.com/if-men-touch-they-will-become-pregnent/