ಉಡುಪಿ ವಿಡಿಯೋ ವಿವಾದಕ್ಕೆ ಸಂಬಂಧಿಸಿದಂತೆ ಆರೋಪ ಪ್ರತ್ಯಾರೋಪಗಳು ತಾರಕಕ್ಕೇರಿದೆ. ಇಂದು ಉಡುಪಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಉಡುಪಿಯ ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ಗೃಹ ಸಚಿವರ ವಿರುದ್ಧ ತೀರಾ ವೈಯಕ್ತಿಕ ದಾಳಿ ಮಾಡಿದ್ದಾರೆ.
ಇಂದಿನ ಪ್ರತಿಭಟನೆಯ ನಂತರದ ಪತ್ರಿಕಾಗೋಷ್ಟಿಯಲ್ಲಿ ಪತ್ರಕರ್ತರೊಡನೆ ಮಾತನಾಡುತ್ತಾ ಅವರು “ಇಂದು ಕ್ಯಾಮರಾ ಇಟ್ಟ ವಿದ್ಯಾರ್ಥಿಗಳು, ನಾಳೆ ಬಾಂಬ್ ಇಡುತ್ತಾರೆ. ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣವನ್ನು ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಕ್ಕಳಾಟ ಎಂದಿದ್ದಾರೆ. ಅವರ ಮಗ ಲಿಂಗ ಬದಲಾಯಿಸಿಕೊಂಡಿದ್ದು ಮಕ್ಕಳಾಟವೆ” ಎಂದು ಕುಹಕವಾಡಿದ್ದಾರೆ.
ಈ ಹಿಂದೆ ಜಿ.ಪರಮೇಶ್ವರ್ ಪುತ್ರ ಶಶಾಂಕ್ ವಿದೇಶದಲ್ಲಿ ಲಿಂ-ಗಪರಿವರ್ತನೆ ಮಾಡಿಸಿಕೊಂಡು ಶನಾ ಎನ್ನುವ ಹೆಸರನ್ನು ಇರಿಸಿಕೊಂಡಿದ್ದರು. ಇಂದು ರಾಜಕೀಯ ಕೆಸರೆರೆಚಾಟಕ್ಕೆ ಉಡುಪಿ ಶಾಸಕ ಅದನ್ನೇ ಬಳಸಿಕೊಂಡಿದ್ದಾರೆ.
ಈ ಕುರಿತು ಈಗಾಗಲೇ ಆಕ್ರೋಶ ವ್ಯಕ್ತವಾಗುತ್ತಿದ್ದು, ಕಮ್ಯುನಿಸ್ಟ್ ನಾಯಕ ಮುನೀರ್ ಕಾಟಿಪಳ್ಳ ಅವರು ತಮ್ಮ ಫೇಸ್ಬುಕ್ ಪೋಸ್ಟಿನಲ್ಲಿ “ಸಿದ್ದರಾಮಯ್ಯರ ಕುಟುಂಬವನ್ನು ಅವಹೇಳನ ಮಾಡಿದರೆ ಮಾತ್ರ FIR ದಾಖಲಾಗುವುದೇ ? ಗೃಹ ಸಚಿವ ಪರಮೇಶ್ವರ್ ಕುಟುಂಬವನ್ನು ಹೀನಾಯವಾಗಿ ಅವಹೇಳನ ಮಾಡಿದರೆ ನಡೆಯುತ್ತದೆಯೆ ?
ಯಶ್ಪಾಲ್ ಸುವರ್ಣ ನಡೆದದ್ದೇ ದಾರಿಯಾಗಲು ಆತ ಏನು ಆನೆಯೇ, ಸಿದ್ದರಾಮಯ್ಯನವರೆ !?” ಎಂದು ಪ್ರಶ್ನಿಸಿದ್ದಾರೆ.
ಇಂದು ಬೆಳಗ್ಗೆ ಸಿದ್ಧರಾಮಯ್ಯನವರ ಕುರಿತು ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದ ಕಾರಣಕ್ಕಾಗಿ ಶಕುಂತಲಾ ಎನ್ನುವ ಬಿಜೆಪಿ ಕಾರ್ಯಕರ್ತೆಯನ್ನು ಬಂಧಿಸಲಾಗಿತ್ತು. ಈ ವಿಷಯವನ್ನು ಪ್ರಸ್ತಾಪಿಸಿ ಮುನೀರ್ ಅವರು ಈ ರೀತಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಪೀಪಲ್ ಮೀಡಿಯಾ ವರದಿ ಇಂಪ್ಯಾಕ್ಟ್ : ಬಿಜೆಪಿ ಕಾರ್ಯಕರ್ತೆ ಶಕುಂತಲಾ ಅರೆಸ್ಟ್
https://peepalmedia.com/bjp-worker-shakuntala-arrested/