ʼವಿಕಸಿತ ಭಾರತ’, ‘ಅಚ್ಛೇ ದಿನ್’ ಎಂದು ಘೋಷಣೆಗಳನ್ನು ಕೂಗುವ ಪ್ರಧಾನಿ ಮೋದಿಯವರ 11 ವರ್ಷಗಳ ಆಡಳಿತದಲ್ಲಿ ಬಡವರಿಗೆ ಏನೂ ಸಿಕ್ಕಿಲ್ಲ ಎಂದು ಮತ್ತೊಮ್ಮೆ ಸಾಬೀತಾಗಿದೆ. ಕಾರ್ಪೊರೇಟ್‌ಗಳನ್ನು ಬೆಂಬಲಿಸುವ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಮಿಲಿಯನೇರ್‌ಗಳು ಬಿಲಿಯನೇರ್‌ಗಳಾಗುತ್ತಿದ್ದರೆ, ಬಡವರು ಮಾತ್ರ ಬಡವರಾಗಿಯೇ ಉಳಿದಿದ್ದಾರೆ.
ಆದಾಯ ಅಸಮಾನತೆಯಲ್ಲಿ ಭಾರತ ಮತ್ತೊಮ್ಮೆ ಅಗ್ರಸ್ಥಾನದಲ್ಲಿದೆ. ಈ ಕುರಿತು ಬುಧವಾರ ಬಿಡುಗಡೆಯಾದ ವರ್ಲ್ಡ್ ಇನೀಕ್ವಾಲಿಟಿ ರಿಪೋರ್ಟ್ (ಜಾಗತಿಕ ಅಸಮಾನತೆಗಳ ವರದಿ (ಆರ್ಥಿಕ))-2026 ರಲ್ಲಿ ಪ್ರಮುಖ ವಿಷಯಗಳು ಬೆಳಕಿಗೆ ಬಂದಿವೆ.
ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚುತ್ತಲೇ ಇದೆ. ಇತ್ತೀಚಿನ ವರದಿಯ ಪ್ರಕಾರ, 10% ಶ್ರೀಮಂತರ ಬಳಿ 65% ಸಂಪತ್ತು ಕೇಂದ್ರೀಕೃತವಾಗಿದ್ದು, ಇದರಲ್ಲಿ ಕೇವಲ 1% ಶ್ರೀಮಂತರ ಬಳಿ ಬರೋಬ್ಬರಿ 40% ಸಂಪತ್ತು ಇದೆ ಎಂದು ವರದಿ ಹೇಳಿದೆ.
ಒಟ್ಟಾರೆ ರಾಷ್ಟ್ರೀಯ ಆದಾಯದಲ್ಲಿ 57.7% ಪಾಲು ಕೇವಲ 10% ಶ್ರೀಮಂತರ ಬಳಿ ಜಮಾವಣೆಯಾಗಿದ್ದು, ಬಡ ಮತ್ತು ಮಧ್ಯಮ ವರ್ಗಕ್ಕೆ ಸೇರಿದ 50% ಜನರ ಬಳಿ ಕೇವಲ 15% ಆದಾಯ ಮಾತ್ರ ಇದೆ ಎಂದು ವರದಿ ತಿಳಿಸಿದೆ. ಬಡವರ ತಲಾವಾರು ಸರಾಸರಿ ಆದಾಯ ರೂ. 98 ಸಾವಿರ ಆಗಿದ್ದರೆ, ಕುಬೇರರ ಸರಾಸರಿ ತಲಾವಾರು ಆದಾಯ ರೂ. 1.47 ಕೋಟಿ ಆಗಿದೆ ಎಂದು ವರದಿ ಸ್ಪಷ್ಟಪಡಿಸಿದೆ.
ಮೋದಿ ಸರ್ಕಾರ ಅಧಿಕಾರಕ್ಕೆ ಬಂದ 11 ವರ್ಷಗಳ ಅವಧಿಯಲ್ಲಿ ಬಡ ಮತ್ತು ಶ್ರೀಮಂತ ವರ್ಗಗಳ ನಡುವಿನ ಆದಾಯದ ಅಂತರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ, ಬದಲಿಗೆ ಈ ಅಂತರವು ಸ್ವಲ್ಪಮಟ್ಟಿಗೆ ಹೆಚ್ಚಾಗಿದೆ ಎಂದು ವರದಿಯ ಅಂಕಿ-ಅಂಶಗಳಿಂದ ತಿಳಿದುಬಂದಿದೆ.
2014 ರಲ್ಲಿ ಬಡ ಮತ್ತು ಶ್ರೀಮಂತ ವರ್ಗಗಳ ನಡುವಿನ ಆದಾಯ ಅಸಮಾನತೆ 38% ರಷ್ಟಿದ್ದರೆ, ಅದು 2024 ರ ಹೊತ್ತಿಗೆ 38.32% ಆಗಿದೆ ಎಂದು ವರದಿ ಹೇಳಿದೆ. ಕಾರ್ಮಿಕ ವಲಯದಲ್ಲಿ ಮಹಿಳೆಯರ ಭಾಗವಹಿಸುವಿಕೆಯಲ್ಲೂ ಯಾವುದೇ ಹೆಚ್ಚಳ ಕಂಡುಬಂದಿಲ್ಲ ಎಂದು ವರದಿ ಉಲ್ಲೇಖಿಸಿದೆ. 2014 ರಲ್ಲಿ 15.7% ರಷ್ಟಿದ್ದ ಮಹಿಳಾ ಕಾರ್ಮಿಕ ಬಲವು 2024 ರಲ್ಲೂ ಸಹ 15.7% ರಷ್ಟಿದೆ ಎಂದು ವರದಿ ಬಹಿರಂಗಪಡಿಸಿದೆ.
ಇನ್ನು, ವಿಶ್ವದ ಜನಸಂಖ್ಯೆಯ 50% ಬಡ ಮತ್ತು ಮಧ್ಯಮ ವರ್ಗದ ಬಳಿ ಇರುವ ಒಟ್ಟು ಸಂಪತ್ತಿಗೆ ಹೋಲಿಸಿದರೆ, ಕೇವಲ 60 ಸಾವಿರ ಮಿಲಿಯನೇರ್‌ಗಳ ಬಳಿ (0.001%) ಮೂರು ಪಟ್ಟು ಹೆಚ್ಚು ಸಂಪತ್ತು ಇದೆ ಎಂದು ವರದಿ ತಿಳಿಸಿದೆ.
ಒಟ್ಟಾರೆಯಾಗಿ, 90% ಬಡ ಮತ್ತು ಮಧ್ಯಮ ವರ್ಗದ ಬಳಿ ಇರುವ ಒಟ್ಟು ಸಂಪತ್ತಿಗಿಂತಲೂ ಹೆಚ್ಚು ಸಂಪತ್ತನ್ನು 1% ಬಿಲಿಯನೇರ್‌ಗಳು ಹೊಂದಿದ್ದಾರೆ ಎಂದು ವರದಿ ವಿವರಿಸಿದೆ. ಆದಾಯ ಅಸಮಾನತೆ ಸಮಗ್ರ ಅಭಿವೃದ್ಧಿಗೆ ಅಡ್ಡಿಯಾಗುತ್ತದೆ ಎಂದು ವರದಿ ಆತಂಕ ವ್ಯಕ್ತಪಡಿಸಿದೆ.
2024 ರಲ್ಲಿ, ಪ್ರಪಂಚದಾದ್ಯಂತ ವಾರಕ್ಕೆ ಸರಾಸರಿ ನಾಲ್ಕು ಹೊಸ ಬಿಲಿಯನೇರ್‌ಗಳು ಉದಯಿಸಿದ್ದಾರೆ ಎಂದು ಆಕ್ಸ್‌ಫಾಮ್ (Oxfam) ಇತ್ತೀಚೆಗೆ ಬಹಿರಂಗಪಡಿಸಿದೆ. 1765 ರಿಂದ 1900 ರ ನಡುವೆ ವಸಾಹತುಶಾಹಿಯ ಸಮಯದಲ್ಲಿ ಭಾರತದಿಂದ ಬ್ರಿಟನ್‌ಗೆ ಹರಿದುಹೋದ ಸಂಪತ್ತಿನ ಮೌಲ್ಯ ಈಗ 64.82 ಟ್ರಿಲಿಯನ್ ಡಾಲರ್‌ಗಳು ಎಂದು ಅಂದಾಜಿಸಲಾಗಿದೆ.
ಈ ಸಂಪತ್ತಿನ ಅರ್ಧದಷ್ಟು ಹಣವು ಅಲ್ಲಿನ 10% ಶ್ರೀಮಂತರ ಬಳಿಯೇ ಸಂಗ್ರಹವಾಗಿದೆ ಎಂದು ವರದಿ ಹೇಳಿದೆ. ಬ್ರಿಟಿಷ್ 50 ಪೌಂಡ್ ನೋಟುಗಳಿಂದ ಈ ಸಂಪತ್ತನ್ನೆಲ್ಲ ಲಂಡನ್‌ನಾದ್ಯಂತ ನಾಲ್ಕು ಬಾರಿಗಿಂತ ಹೆಚ್ಚು ನೆಲಹಾಸಿನಂತೆ ಹಾಸಬಹುದು ಎಂದು ತಿಳಿಸಿದೆ.
