Home ದೇಶ 20 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಭತ್ತದ ಇಳುವರಿ ಕುಸಿತದ ಭೀತಿ: ದೇಶದಲ್ಲಿ ಅಕ್ಕಿ ಬೆಲೆ ಏರಿಕೆಯ...

20 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಭತ್ತದ ಇಳುವರಿ ಕುಸಿತದ ಭೀತಿ: ದೇಶದಲ್ಲಿ ಅಕ್ಕಿ ಬೆಲೆ ಏರಿಕೆಯ ಆತಂಕ

0

ದೇಶದಲ್ಲಿ ಕಳೆದ ಎರಡು ದಶಕಗಳಲ್ಲೇ ಕಾಣದ ಮಟ್ಟಿಗೆ ಭತ್ತದ ಇಳುವರಿ ಕುಸಿಯುವ ಭೀತಿ ಎದುರಾಗಿದೆ. ಬೆಳೆ ಪಕ್ವವಾಗುವ ನಿರ್ಣಾಯಕ ಹಂತದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದು ಉತ್ಪಾದನೆ ಗಣನೀಯವಾಗಿ ತಗ್ಗಲು ಪ್ರಮುಖ ಕಾರಣ ಎಂದು ಕೃಷಿ ತಜ್ಞರು ತಿಳಿಸಿದ್ದಾರೆ. ವಿಶ್ವದಲ್ಲೇ ಅತಿ ಹೆಚ್ಚು ಅಕ್ಕಿ ಉತ್ಪಾದಿಸುವ ಮತ್ತು ರಫ್ತು ಮಾಡುವ ಭಾರತದಲ್ಲೇ ಇಳುವರಿ ಕಡಿಮೆಯಾದರೆ, ಸ್ಥಳೀಯ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ. ಜತೆಗೆ ಥಾಯ್ಲೆಂಡ್ ಮತ್ತು ವಿಯೆಟ್ನಾಂ ಮುಂತಾದ ಪ್ರಮುಖ ರಫ್ತು ರಾಷ್ಟ್ರಗಳಲ್ಲಿ ಈಗಾಗಲೇ ಬೆಲೆಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕ ರಫ್ತು ದರಗಳೂ ದುಬಾರಿಯಾಗಲಿವೆ.

ಮಳೆ ಕೊರತೆಯಿಂದಾಗಿ ಈ ವರ್ಷ ಭತ್ತದ ಉತ್ಪಾದನೆಯಲ್ಲಿ ಸುಮಾರು 10 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು ಇಳಿಕೆಯಾಗುವ ಅಂದಾಜಿದೆ ಎಂದು ರೈಸ್ ಎಕ್ಸ್‌ಪೋರ್ಟರ್ಸ್ ಅಸೋಸಿಯೇಷನ್ ​​ಅಧ್ಯಕ್ಷ ಬಿ.ವಿ. ಕೃಷ್ಣಾರಾವ್ ತಿಳಿಸಿದ್ದಾರೆ. ಕಳೆದ ವರ್ಷ ದಾಖಲಾಗಿದ್ದ 154 ಮಿಲಿಯನ್ ಟನ್‌ಗಳಿಗೆ ಹೋಲಿಸಿದರೆ ಈ ಬಾರಿ ಉತ್ಪಾದನೆಯಲ್ಲಿ ಶೇಕಡಾ 6.5 ರಷ್ಟು ಇಳಿಕೆಯಾಗುವ ಸಾಧ್ಯತೆಯಿದ್ದು, 2009-10ರ ನಂತರ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ಕುಸಿತ ದಾಖಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇನ್ನೊಂದೆಡೆ, ಹೆಚ್ಚಿನ ಸಂಖ್ಯೆಯ ರೈತರು ಉತ್ತಮ ಬೆಲೆ ತರುವ ಪ್ರೀಮಿಯಂ ತಳಿಯ ಭತ್ತ ಬೆಳೆಯಲು ಆಸಕ್ತಿ ವಹಿಸಿದ್ದು, ಮುಕ್ತ ಮಾರುಕಟ್ಟೆಯಲ್ಲಿಯೇ ಹೆಚ್ಚಿನ ದರ ಸಿಗುತ್ತಿರುವುದರಿಂದ ಸರ್ಕಾರಕ್ಕೆ ಕನಿಷ್ಠ ಬೆಂಬಲ ಬೆಲೆಯಡಿ ಮಾರಾಟ ಮಾಡುವ ಪ್ರಮಾಣವೂ ಕಡಿಮೆಯಾಗುತ್ತಿದೆ. ಒಟ್ಟಾರೆ ಈ ಬೆಳವಣಿಗೆಯು ಮುಂದಿನ ದಿನಗಳಲ್ಲಿ ಅಕ್ಕಿಯ ದೇಶೀಯ ಬೆಲೆ ಏರಿಕೆಗೆ ದಾರಿ ಮಾಡಿಕೊಡುವ ಲಕ್ಷಣಗಳು ಕಾಣುತ್ತಿವೆ.

You cannot copy content of this page

Exit mobile version