Home ದೇಶ ರೂ. 2,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ಎಂಡಿಆರ್ ಶುಲ್ಕ: ಸ್ವಪಕ್ಷೀಯರು ಹಾಗೂ ಆರ್‌ಎಸ್‌ಎಸ್ ಅಂಗಸಂಸ್ಥೆಯಿಂದಲೇ ತೀವ್ರ...

ರೂ. 2,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ಎಂಡಿಆರ್ ಶುಲ್ಕ: ಸ್ವಪಕ್ಷೀಯರು ಹಾಗೂ ಆರ್‌ಎಸ್‌ಎಸ್ ಅಂಗಸಂಸ್ಥೆಯಿಂದಲೇ ತೀವ್ರ ವಿರೋಧ

0

ರೂ. 2,000 ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ನಿರ್ದಿಷ್ಟ ಯುಪಿಐ (UPI) ವಹಿವಾಟುಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಶುಲ್ಕ ವಿಧಿಸಲು ಅವಕಾಶ ನೀಡುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ದೇಶಾದ್ಯಂತ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಪ್ರತಿಪಕ್ಷಗಳು ಮಾತ್ರವಲ್ಲದೆ ಆಡಳಿತಾರೂಢ ಬಿಜೆಪಿಯ ಬೆಂಬಲಿಗರು, ಸಾಮಾಜಿಕ ಜಾಲತಾಣ ಕಾರ್ಯಕರ್ತರು ಹಾಗೂ ಆರ್‌ಎಸ್‌ಎಸ್ ಅಂಗಸಂಸ್ಥೆಗಳಿಂದಲೂ ಈ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಬಿಜೆಪಿಯ ಪ್ರಮುಖ ಸಾಮಾಜಿಕ ಜಾಲತಾಣ ಬೆಂಬಲಿಗರಾದ ರಿಷಿ ಬಾಗ್ರಿ ‘ಎಕ್ಸ್’ ಪೋಸ್ಟ್ ಮೂಲಕ ಯುಪಿಐ ವಹಿವಾಟುಗಳನ್ನು ಉಚಿತವಾಗಿಯೇ ಮುಂದುವರಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ನೋಟುಗಳ ಮುದ್ರಣ ವೆಚ್ಚಕ್ಕೆ ಹೋಲಿಸಿದರೆ ಯುಪಿಐ ಅತ್ಯಂತ ಮಿತವ್ಯಯಕಾರಿಯಾಗಿದ್ದು, ತೆರಿಗೆ ಸಂಗ್ರಹ ಹೆಚ್ಚಿಸಲು ಸಹಕಾರಿಯಾಗಿದೆ; ಹೀಗಾಗಿ ಇದನ್ನು ಉಚಿತವಾಗಿಡಬೇಕು ಎಂದು ಒತ್ತಾಯಿಸಿದ್ದಾರೆ.

ಆರ್‌ಎಸ್‌ಎಸ್ ಅಂಗಸಂಸ್ಥೆಯಾದ ಸ್ವದೇಶಿ ಜಾಗರಣ ಮಂಚ್‌ನ ರಾಷ್ಟ್ರೀಯ ಸಹ ಸಂಚಾಲಕ ಅಶ್ವನಿ ಮಹಾಜನ್ ಅವರು ‘ದಿ ಪ್ರಿಂಟ್’ನಲ್ಲಿ ಬರೆದ ಲೇಖನದಲ್ಲಿ, ಯುಪಿಐ ಅನ್ನು ಲಾಭಗಳಿಕೆಯ ಸಾಧನವಾಗಿ ಬಳಸಬಾರದು ಎಂದು ಎಚ್ಚರಿಸಿದ್ದಾರೆ. ಎಂಡಿಆರ್ ಶುಲ್ಕದಿಂದ ಸಣ್ಣ ವ್ಯಾಪಾರಿಗಳಿಗೆ ಪೆಟ್ಟು ಬೀಳಲಿದ್ದು, ಇದು ವಿದೇಶಿ ಕಾರ್ಡ್ ಕಂಪನಿಗಳಿಗೆ ಅನುಕೂಲ ಮಾಡಿಕೊಡಲಿದೆ ಎಂಬ ಕಾಂಗ್ರೆಸ್ ಆರೋಪವನ್ನು ಅವರು ಪುನರುಚ್ಚರಿಸಿದ್ದಾರೆ.

ಅಕ್ಟೋಬರ್ 15ರಿಂದ ಎಂಡಿಆರ್ ಜಾರಿಗೆ ಬರಲಿದೆ ಎಂಬ ವಿಚಾರ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ತೀವ್ರ ವ್ಯಂಗ್ಯ ಹಾಗೂ ಮೀಮ್ಸ್ ಪ್ರವಾಹವೇ ಹರಿದುಬರುತ್ತಿದೆ. ‘ಡಿಜಿಟಲ್ ಇಂಡಿಯಾ, ನಗದು ರಹಿತ’ ಎಂಬ ಹಿಂದಿನ ಘೋಷಣೆಗೆ ಪ್ರತಿಯಾಗಿ ‘ಡಿಜಿಟಲ್ ಇಂಡಿಯಾ, ಆದರೆ ಯುಪಿಐ ಉಚಿತವಲ್ಲ’ ಎಂಬ ಸಂದೇಶಗಳು ವೈರಲ್ ಆಗುತ್ತಿವೆ. ವ್ಯಾಪಾರಿಗಳಿಗೆ ಮಾತ್ರ ಶುಲ್ಕ ಎನ್ನುವ ಸರ್ಕಾರದ ಸಮರ್ಥನೆಗೆ ನೆಟ್ಟಿಗರು, ವ್ಯಾಪಾರಿಗಳು ಸರಕುಗಳ ಬೆಲೆ ಹೆಚ್ಚಿಸುವ ಮೂಲಕ ಆ ಹೊರೆಯನ್ನು ಸಾರ್ವಜನಿಕರ ಮೇಲೆಯೇ ವರ್ಗಾಯಿಸುತ್ತಾರೆ ಎಂದು ಟೀಕಿಸುತ್ತಿದ್ದಾರೆ.

ಇನ್ನೊಂದೆಡೆ, ಸಂಸದೀಯ ಹಣಕಾಸು ಸ್ಥಾಯಿ ಸಮಿತಿಯಲ್ಲಿ ಯುಪಿಐ ಮೇಲಿನ ಶುಲ್ಕ ವಿಧಿಸುವ ಪ್ರಸ್ತಾಪವನ್ನು ಬೆಂಬಲಿಸಲಾಗಿತ್ತು ಎಂಬ ಆರೋಪವನ್ನು ಕಾಂಗ್ರೆಸ್ ಸಂಸದರಾದ ಗೌರವ್ ಗೊಗೊಯ್ ಮತ್ತು ಮನೀಶ್ ತಿವಾರಿ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಹಣಕಾಸು ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಯುಪಿಐ ಮೇಲಿನ ಶುಲ್ಕದ ಬಗ್ಗೆ ಯಾವುದೇ ನಿರ್ದಿಷ್ಟ ಅಥವಾ ವಿವರವಾದ ಪ್ರಸ್ತಾಪವನ್ನು ಸಮಿತಿಯ ಮುಂದೆ ಇಟ್ಟಿರಲಿಲ್ಲ ಎಂದು ಇಬ್ಬರೂ ನಾಯಕರು ಸ್ಪಷ್ಟಪಡಿಸಿದ್ದಾರೆ.

You cannot copy content of this page

Exit mobile version