ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ದೇಶದ ಆರ್ಥಿಕತೆಯು ಸಂಪೂರ್ಣವಾಗಿ ಹಾದಿ ತಪ್ಪಿದೆ ಎಂಬ ಆತಂಕಕಾರಿ ವಿಷಯಗಳು ಬೆಳಕಿಗೆ ಬಂದಿವೆ. ಇತ್ತೀಚೆಗಷ್ಟೇ ಜಿಡಿಪಿ (GDP) ಶ್ರೇಯಾಂಕದಲ್ಲಿ ಕುಸಿತ ಕಂಡಿದ್ದ ಭಾರತ, ಇದೀಗ ತಲಾದಾಯದಲ್ಲೂ (Per Capita Income) ಹಿನ್ನಡೆ ಅನುಭವಿಸುತ್ತಿದೆ. ಆರ್ಥಿಕ ಹಾಗೂ ರಾಜಕೀಯ ಸಂಕಷ್ಟಗಳಲ್ಲಿರುವ ನೆರೆಯ ಬಾಂಗ್ಲಾದೇಶವೂ ತಲಾದಾಯದಲ್ಲಿ ಭಾರತಕ್ಕಿಂತ ಉತ್ತಮ ಸ್ಥಿತಿಯಲ್ಲಿದೆ ಎಂಬುದು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯಿಂದ ತಿಳಿದುಬಂದಿದೆ.
ಹಿನ್ನಡೆಯ ಪಯಣ..
ಒಂದು ದೇಶದ ಒಟ್ಟು ಜಿಡಿಪಿಯನ್ನು ಆ ದೇಶದ ಜನಸಂಖ್ಯೆಯಿಂದ ಭಾಗಿಸಿದಾಗ ಬರುವ ಮೊತ್ತವೇ ತಲಾದಾಯ. IMF ಇತ್ತೀಚೆಗೆ ಬಿಡುಗಡೆ ಮಾಡಿದ ‘ವರ್ಲ್ಡ್ ಎಕನಾಮಿಕ್ ಔಟ್‌ಲುಕ್-2026’ ವರದಿಯ ಪ್ರಕಾರ, ಈ ವರ್ಷ ಬಾಂಗ್ಲಾದೇಶದ ತಲಾದಾಯವು 2,911 ಡಾಲರ್‌ಗೆ (ಅಂದಾಜು ರೂ. 2.74 ಲಕ್ಷ) ಏರಿಕೆಯಾಗುವ ನಿರೀಕ್ಷೆಯಿದೆ. ಇದೇ ಸಮಯದಲ್ಲಿ, ಭಾರತೀಯರ ತಲಾದಾಯವು ಕೇವಲ 2,812 ಡಾಲರ್‌ಗೆ (ಅಂದಾಜು ರೂ. 2.65 ಲಕ್ಷ) ಸೀಮಿತವಾಗಲಿದೆ ಎಂದು ಅಂದಾಜಿಸಲಾಗಿದೆ. ಅಂದರೆ, ಒಬ್ಬ ಸರಾಸರಿ ಭಾರತೀಯನಿಗಿಂತ ಬಾಂಗ್ಲಾದೇಶದ ನಾಗರಿಕನು ಸುಮಾರು 9,000 ರೂಪಾಯಿಗಳನ್ನು ಹೆಚ್ಚು ಗಳಿಸುತ್ತಿದ್ದಾನೆ ಎನ್ನುವುದು ಈ ವರದಿಯ ಸಾರಾಂಶ.
ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಸರಾಸರಿ ತಲಾದಾಯ ಸುಮಾರು 7,500 ಡಾಲರ್‌ಗಳಷ್ಟಿದ್ದರೆ, ಜಾಗತಿಕ ಸರಾಸರಿ ತಲಾದಾಯವು 15,600 ಡಾಲರ್‌ಗಳಷ್ಟು (ಅಂದಾಜು ರೂ. 14.69 ಲಕ್ಷ) ಇದೆ. ಈ ಅಂಕಿಅಂಶಗಳನ್ನು ಗಮನಿಸಿದರೆ, ಜಾಗತಿಕ ಸರಾಸರಿಗಿಂತ ಭಾರತೀಯನ ತಲಾದಾಯವು ಸುಮಾರು 12,788 ಡಾಲರ್‌ಗಳಷ್ಟು (ಅಂದಾಜು ರೂ. 12.04 ಲಕ್ಷ) ಕಡಿಮೆ ಇರುವುದು ದೇಶದ ಆರ್ಥಿಕ ಸ್ಥಿತಿಯ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ.
ಜಿಡಿಪಿಯಲ್ಲೂ ಕುಸಿತ
ಕೇವಲ ತಲಾದಾಯವಷ್ಟೇ ಅಲ್ಲ, ಭಾರತದ ಒಟ್ಟು ಆರ್ಥಿಕ ಗಾತ್ರದ (GDP) ರ್ಯಾಂಕಿಂಗ್‌ನಲ್ಲೂ ಭಾರತ ಒಂದು ಸ್ಥಾನವನ್ನು ಕಳೆದುಕೊಂಡಿದೆ. IMF ಅಂದಾಜಿನ ಪ್ರಕಾರ, 2025ರಲ್ಲಿ ಭಾರತದ ಆರ್ಥಿಕತೆಯ ಮೌಲ್ಯವು 3.92 ಟ್ರಿಲಿಯನ್ ಡಾಲರ್‌ಗಳಷ್ಟಿದ್ದರೆ, ಬ್ರಿಟನ್ ಆರ್ಥಿಕತೆಯ ಮೌಲ್ಯವು 4 ಟ್ರಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿದೆ. ಇದರಿಂದಾಗಿ, ಹಿಂದೆ ಭಾರತಕ್ಕಿಂತ ಹಿಂದೆ ಇದ್ದ ಬ್ರಿಟನ್, ಇದೀಗ ಭಾರತವನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೆ ಜಿಗಿದಿದೆ. ಭಾರತವು 6ನೇ ಸ್ಥಾನಕ್ಕೆ ಕುಸಿದಿದೆ. 2024ರಲ್ಲಿ ಭಾರತ ಜಿಡಿಪಿಯಲ್ಲಿ 5ನೇ ಸ್ಥಾನಕ್ಕೇರಿದಾಗ ದೊಡ್ಡ ಮಟ್ಟದಲ್ಲಿ ಪ್ರಚಾರ ಗಿಟ್ಟಿಸಿಕೊಂಡಿದ್ದ ಮೋದಿ ಸರ್ಕಾರ, ಈಗಿನ ಕುಸಿತದ ಬಗ್ಗೆ ಮೌನ ವಹಿಸಿರುವುದು ಅಚ್ಚರಿಗೆ ಕಾರಣವಾಗಿದೆ.
- ಜಾಗತಿಕ ಸರಾಸರಿ ತಲಾದಾಯ: ರೂ. 14.69 ಲಕ್ಷ
- ಭಾರತದ ಸರಾಸರಿ ತಲಾದಾಯ: ರೂ. 2.65 ಲಕ್ಷ
- ವ್ಯತ್ಯಾಸ: ರೂ. 12.04 ಲಕ್ಷ
