Home ಆಟೋಟ ವಿಶ್ವಕಪ್- 2023: ಆಸ್ಟ್ರೇಲಿಯಾ ಎದುರು ಸಾಧಾರಣ ಸವಾಲು ಒಡ್ಡಿದ ಭಾರತ

ವಿಶ್ವಕಪ್- 2023: ಆಸ್ಟ್ರೇಲಿಯಾ ಎದುರು ಸಾಧಾರಣ ಸವಾಲು ಒಡ್ಡಿದ ಭಾರತ

0

ಅಹಮದಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್ ಗಳಲ್ಲಿ ಕೇವಲ 240 ರನ್ ಗಳಿಸಿ ಸರ್ವಪತನ ಕಂಡಿತು. ಆರನೇ ಬಾರಿ ವಿಶ್ವಕಪ್ ಕಿರೀಟ ಧರಿಸಲು ಆಸ್ಟ್ರೇಲಿಯಾ 241 ರನ್ ಗಳಿಸಬೇಕಿದೆ.

ಬ್ಯಾಟಿಂಗ್ ಗೆ ಅನುಕೂಲಕರವಾಗಿಲ್ಲದ ಪಿಚ್ ನಲ್ಲಿ ಚೆಂಡು ನಿಧಾನಗತಿಯಲ್ಲಿ ಬ್ಯಾಟ್ ಗೆ ಬರುತ್ತಿದ್ದು, ಆಸ್ಟ್ರೇಲಿಯಾದ ಬೌಲರ್ಗಳ ದಾಳಿ ಎದುರು ಭಾರತೀಯ ಬ್ಯಾಟ್ಸ್ಮನ್ ಗಳು ಪರದಾಡಿದರು. ಚೆಂಡು ತಿರುವು ಪಡೆಯುತ್ತಿದ್ದು, ಪಿಚ್ ನ ಲಾಭವನ್ನು ಪಡೆದುಕೊಂಡು ಭಾರತೀಯ ಬ್ಯಾಟರ್ ಗಳನ್ನು ಕಟ್ಟಿಹಾಕಲು ಆಸ್ಟ್ರೇಲಿಯಾ ಬೌಲರ್ ಗಳು ಯಶಸ್ವಿಯಾದರು.

ಟೂರ್ನಿಯುದ್ದಕ್ಕೂ ಸ್ಫೋಟಕ ಆರಂಭ ನೀಡುತ್ತಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಈ ಪಂದ್ಯದಲ್ಲೂ ಬಿರುಸಿನ ಆಟವಾಡಿ 31 ಎಸೆತಗಳಲ್ಲಿ 47 ರನ್ ಗಳಿಸಿ, ಮ್ಯಾಕ್ಸ್ ವೆಲ್ ಬೌಲಿಂಗ್ ನಲ್ಲಿ ಭರ್ಜರಿ ಸಿಕ್ಸರ್ ಬಾರಿಸಲು ಹೋಗಿ ಟ್ರಾವಿಸ್ ಹೆಡ್ ಗೆ ಕ್ಯಾಚಿತ್ತು ಔಟಾದರು. ಇದಕ್ಕೂ ಮುನ್ನ ಯುವ ಆಟಗಾರ ಶುಭಮನ್ ಗಿಲ್ ಕೆಟ್ಟ ಆಡಂ ಜಾಂಪಾ ಬೌಲಿಂಗ್ ನಲ್ಲಿ ಮಿಚೆಲ್ ಸ್ಟಾರ್ಕ್ ಅವರಿಗೆ ಕ್ಯಾಚ್ ನೀಡಿ ಔಟಾದರು. ರೋಹಿತ್ ಔಟಾದ ನಂತರ ಬಂದ ಶ್ರೇಯಸ್ ಐಯ್ಯರ್ ಹೆಚ್ಚು ಕಾಲ ಬಾಳಲಿಲ್ಲ. ಪ್ಯಾಟ್ ಕಮಿನ್ಸ್ ಎಸೆತವನ್ನು ಗ್ರಹಿಸಲು ಸಾಧ್ಯವಾಗದೆ ವಿಕೆಟ್ ಕೀಪರ್ ಇಂಗ್ಲಿಸ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಗೆ ತೆರಳಿದರು.

ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ವಿರಾಟ್ ಕೊಹ್ಲಿ ಮತ್ತು ಐದನೇ ಕ್ರಮಾಂಕದಲ್ಲಿ ಆಡಲು ಬಂದ ಕೆ.ಎಲ್.ರಾಹುಲ್ ಭಾರತ ತಂಡದ ಕುಸಿತ ತಪ್ಪಿಸಿದರು. ನಿಧಾನಗತಿಯಲ್ಲಿ ಆಡಿದ ಈ ಜೋಡಿ ಇನ್ನೇನು ಸ್ಕೋರಿಂಗ್ ರೇಟ್ ಹೆಚ್ಚಿಸಬಹುದು ಎನ್ನುವಷ್ಟರಲ್ಲಿ ವಿರಾಟ್ ಕೊಹ್ಲಿ ಪ್ಯಾಟ್ ಕಮಿನ್ಸ್ ಅವರ ಶಾರ್ಟ್ ಬಾಲನ್ನು ವಿಕೆಟ್ ಮೇಲೆ ಎಳೆದುಕೊಂಡು ಔಟಾದರು.

ಏಕಾಂಗಿ ಹೋರಾಟ ಮುಂದುವರೆಸಿದ ಕೆ.ಎಲ್.ರಾಹುಲ್ ಮಿಚೆಲ್ ಸ್ಟಾರ್ಕ್ ಅವರ ಅದ್ಭುತ ರಿವರ್ಸ್ ಸ್ವಿಂಗ್ ಎಸೆತದಲ್ಲಿ ವಿಕೆಟ್ ಕೀಪರ್ ಗೆ ಕ್ಯಾಚ್ ನೀಡಿ ಔಟಾದರು. ಬಿರುಸಿನ ಆಟಕ್ಕೆ ಹೆಸರಾದ ಸೂರ್ಯಕುಮಾರ್ ಯಾದವ್ ಅವರ ಆಟವೂ ಆಸ್ಟ್ರೇಲಿಯಾದ ಸಂಘಟಿತ ಬೌಲಿಂಗ್ ಪರಾಕ್ರಮದೆದುರು ನಡೆಯಲಿಲ್ಲ. ಸೂರ್ಯ 28 ಎಸೆತಗಳನ್ನು ಎದುರಿಸಿ ಕೇವಲ 18 ರನ್ ಗಳಿಸಿ ನಿರಾಶೆ ಮೂಡಿಸಿದರು.

ಇನ್ನಿಂಗ್ಸ್ ಕೊನೆಯಲ್ಲಿ ಮಹಮದ್ ಶಮಿ 6, ಜಸ್ಪೀತ್ ಬೂಮ್ರಾ 1, ಕುಲದೀಪ್ ಯಾದವ್ 10, ಮಹಮದ್ ಸಿರಾಜ್ 9 ರನ್ ಗಳಿಸಿದರು.
ಬೌಲಿಂಗ್ ನಲ್ಲಿ ಪದೇಪದೇ ಬದಲಾವಣೆ ಮಾಡಿದ ನಾಯಕ ಪ್ಯಾಟ್ ಕಮಿನ್ಸ್ ಏಳು ಬೌಲರ್ ಗಳನ್ನು ಬಳಸಿದರು. ಮಿಚೆಲ್ ಸ್ಟಾರ್ಕ್ 55 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ನಾಯಕ ಪ್ಯಾಟ್ ಕಮಿನ್ಸ್ ಕೇವಲ 30 ರನ್ ನೀಡಿ ಎರಡು ವಿಕೆಟ್ ಪಡೆದರೆ ಹೇಜಲ್ ವುಡ್ 60ರನ್ ನೀಡಿ ಎರಡು ವಿಕೆಟ್ ಪಡೆದರು.

You cannot copy content of this page

Exit mobile version