Home ಆಟೋಟ ವಿಶ್ವಕಪ್ ಫೈನಲ್: ಟಾಸ್ ಗೆದ್ದ ಆಸ್ಟ್ರೇಲಿಯಾದಿಂದ ಫೀಲ್ಡಿಂಗ್ ಆಯ್ಕೆ

ವಿಶ್ವಕಪ್ ಫೈನಲ್: ಟಾಸ್ ಗೆದ್ದ ಆಸ್ಟ್ರೇಲಿಯಾದಿಂದ ಫೀಲ್ಡಿಂಗ್ ಆಯ್ಕೆ

0

ಅಹಮದಾಬಾದ್: ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ನಿರೀಕ್ಷಿಸುತ್ತಿರುವ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ತಂಡದ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದ್ದಾರೆ.

ಮೊದಲು ಭಾರತವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿ, ನಂತರ ಚೇಸ್ ಮಾಡುವುದು ಆಸ್ಟ್ರೇಲಿಯಾದ ಯೋಜನೆ ಎಂದು ಪ್ಯಾಟ್ ಕಮಿನ್ಸ್ ಹೇಳಿದರು. ವಿಶೇಷವೆಂದರೆ ತಾವು ಟಾಸ್ ಗೆದ್ದಿದ್ದರೂ ಬ್ಯಾಟಿಂಗ್ ಮಾಡುತ್ತಿದ್ದೆವು ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದರು.

ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಪವರ್ ಪ್ಲೇ ಹಂತದಲ್ಲೇ ಭರ್ಜರಿ ಬೌಲಿಂಗ್ ಪ್ರದರ್ಶನ ಮಾಡಿ ಹೆಡೆಮುರಿ ಕಟ್ಟಿದ ಆಸ್ಟ್ರೇಲಿಯಾ ಬೌಲರ್ ಗಳು ಈ ಪಂದ್ಯದಲ್ಲೂ ಅದೇ ಪ್ರದರ್ಶನ ತೋರುವ ಉತ್ಸಾಹದಲ್ಲಿದ್ದಾರೆ.

ಸರಣಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿರುವ ಭಾರತ ಮೊದಲು ಬ್ಯಾಟ್ ಮಾಡಿದಾಗಲೂ ದೊಡ್ಡ ಅಂತರಗಳಿಂದ ಗೆದ್ದಿದೆ, ಮೊದಲು ಫೀಲ್ಡಿಂಗ್ ಮಾಡಿದಾಗಲೂ ದೊಡ್ಡ ಗೆಲುವುಗಳನ್ನೇ ದಾಖಲಿಸಿದೆ.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 14ರಂದು ನಡೆದ ಲೀಗ್ ಹಂತದ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ದೊಡ್ಡ ಅಂತರದಿಂದ ಸೋಲಿಸಿತ್ತು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಉತ್ತಮ ಆರಂಭ ಪಡೆದರೂ ನಂತರ ದಿಢೀರನೆ ಕುಸಿತ ಕಂಡು 191 ರನ್ ಗಳಿಗೆ ಆಲ್ ಔಟ್ ಆಗಿತ್ತು. ಈ ಸುಲಭ ಟಾರ್ಗೆಟ್ ಬೆನ್ನತ್ತಿದ್ದ ಭಾರತ 117 ಎಸೆಗಳು ಬಾಕಿ ಇರುವಂತೆಯೇ ಕೇವಲ 30.3 ಓವರ್ ಗಳಲ್ಲಿ ಕೇವಲ ಮೂರು ವಿಕೆಟ್ ನಷ್ಟಕ್ಕೆ ಗೆಲುವಿನ ದಡ ತಲುಪಿತ್ತು. ಭಾರತ-ಪಾಕಿಸ್ತಾನ ನಡುವೆ ನಡೆದ ಪಿಚ್ ನಲ್ಲೇ ಭಾರತ- ಆಸ್ಟ್ರೇಲಿಯಾ ನಡುವಿನ ಪೈನಲ್ ಪಂದ್ಯ ನಡೆಯುತ್ತಿರುವುದು ವಿಶೇಷ.

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಈ ಪಂದ್ಯಾವಳಿಯಲ್ಲಿ ಅಜೇಯವಾಗಿ ಉಳಿದಿದ್ದು, ಎಲ್ಲ ತಂಡಗಳ ವಿರುದ್ಧವೂ ಗೆಲುವು ಸಾಧಿಸಿದೆ. ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಿದ್ದ ಭಾರತ ಫೈನಲ್ ನಲ್ಲೂ ಆಸ್ಟ್ರೇಲಿಯಾವನ್ನು ಸೋಲಿಸಿ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ.

ಭಾರತದ ಬ್ಯಾಟಿಂಗ್ ಪಡೆ ಈಗಾಗಲೇ ʻಕ್ರಿಕೆಟ್ ದಂತಕಥೆʼಯಾಗಿರುವ ವಿರಾಟ್ ಕೊಹ್ಲಿಯವರ ಅದ್ಭುತ ಪ್ರದರ್ಶನದಿಂದ ಎದುರಾಳಿಗಳಲ್ಲಿ ಎದೆನಡುಕ ಹುಟ್ಟಿಸಿದ್ದು, ರೋಹಿತ್ ಶರ್ಮಾ, ಶುಭಮನ್ ಗಿಲ್, ಶ್ರೇಯಸ್ ಐಯ್ಯರ್, ಕೆ.ಎಲ್.ರಾಹುಲ್ ಅವರ ಅಮೋಘ ಆಟದಿಂದ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತ ಬಂದಿದೆ. ಭಾರತದ ಬೌಲಿಂಗ್ ಪಡೆ ಮಹಮದ್ ಶಮಿ, ಜಸ್ ಪ್ರೀತ್ ಬುಮ್ರಾ, ಮಹಮದ್ ಸಿರಾಜ್, ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಅವರ ಉತ್ಕೃಷ್ಟ ಪ್ರದರ್ಶನಗಳಿಂದ ಎಲ್ಲ ಪಂದ್ಯಗಳಲ್ಲೂ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದೆ.

ಫೈನಲ್ ಪಂದ್ಯವನ್ನು ನೋಡಲು ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರ ನೀಲಿಸಾಗರವೇ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಹರಿದು ಬಂದಿದೆ.

You cannot copy content of this page

Exit mobile version