ಅಹಮದಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ವಿಶ್ವಕಪ್- 2023 ಪಂದ್ಯಾವಳಿಯ ಫೈನಲ್ ಪಂದ್ಯದ ನೇರಪ್ರಸಾರವನ್ನು ಕೆಲವು ಮಲ್ಪಿಪ್ಲೆಕ್ಸ್ ಗಳು ಪ್ರದರ್ಶಿಸುತ್ತಿದ್ದು, ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಪಂದ್ಯವನ್ನು ದೊಡ್ಡಪರದೆಯಲ್ಲಿ ನೋಡಿ ಕಣ್ತುಂಬಿಕೊಳ್ಳಲು ಕ್ರಿಕೆಟ್ ಪ್ರಿಯರು ಮುಂಗಡ ಬುಕಿಂಗ್ ಮಾಡಿಕೊಂಡಿದ್ದು, ಮಲ್ಪಿಪ್ಲೆಕ್ಸ್ ಗಳಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ.
ಮಲ್ಟಿಪ್ಲೆಕ್ಸ್ ದೈತ್ಯ ಪಿವಿಆರ್ ಐನಾಕ್ಸ್ ಸಂಸ್ಥೆ ದೇಶದ ಸುಮಾರು 60 ನಗರಗಳಲ್ಲಿ 150 ಸ್ಕ್ರೀನ್ ಗಳಲ್ಲಿ ಕ್ರಿಕೆಟ್ ವಿಶ್ವಕಪ್ ಫೈನಲ್ ನೇರಪ್ರಸಾರ ಇಟ್ಟುಕೊಂಡಿದ್ದು, ಈಗಾಗಲೇ ಶೇ.70ಕ್ಕೂ ಹೆಚ್ಚು ಅಡ್ವಾನ್ಸ್ ಬುಕಿಂಗ್ ಆಗಿದೆ. ಮಿರಾಜ್ ಸಿನಿಮಾಸ್ ಕೂಡ ತನ್ನ ಸ್ಕ್ರೀನ್ ಗಳಲ್ಲಿ ವಿಶ್ವಕಪ್ ಫೈನಲ್ ನೇರಪ್ರದರ್ಶನ ಪ್ರಸಾರ ಮಾಡುತ್ತಿದ್ದು, 21 ನಗರಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ದೊಡ್ಡಪರದೆಯ ಮೇಲೆ ಫೈನಲ್ ಕಣ್ತುಂಬಿಂಕೊಳ್ಳಬಹುದಾಗಿದೆ.
ಭಾರತ ಸೆಮಿಫೈನಲ್ ನಲ್ಲಿ ಜಯಗಳಿಸಿದ ನಂತರ ಅಡ್ವಾನ್ಸ್ ಬುಕಿಂಗ್ ಪ್ರಮಾಣ ಹೆಚ್ಚಾಗಿದ್ದು, ಥಿಯೇಟರ್ ಗಳು ಸಂಪೂರ್ಣ ಹೌಸ್ ಫುಲ್ ಆಗಲಿವೆ ಎಂದು ಪಿವಿಆರ್ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಸಂಜೀವ್ ಕುಮಾರ್ ಬಿಜ್ಲಿ ಹೇಳಿದ್ದಾರೆ. ದೊಡ್ಡ ಪರದೆಯ ಮೇಲೆ ಕ್ರಿಕೆಟ್ ನೋಡಲು ಬರುವ ಪ್ರೇಕ್ಷಕರಿಗೆ ಅತ್ಯುತ್ತಮ ಗುಣಮಟ್ಟದ ಊಟ-ಉಪಹಾರಗಳನ್ನು ಒದಗಿಸುತ್ತಿರುವುದಾಗಿ ಮಿರಾಜ್ ಸಿನಿಮಾಸ್ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಶರ್ಮಾ ಹೇಳಿದ್ದಾರೆ.
ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿರುವ 2023 ಪುರುಷರ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇದ್ದು, ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಪೈಪೋಟಿ ನೀಡಲಿವೆ.
ಸೆಮಿಫೈನಲ್ ಪಂದ್ಯಗಳಲ್ಲಿ ಭಾರತ ತಂಡವು ನ್ಯೂಜಿಲ್ಯಾಂಡ್ ತಂಡವನ್ನು, ಆಸ್ಟ್ರೇಲಿಯಾ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಗೆದ್ದು ಫೈನಲ್ ಗೇರಿವೆ. ಉಭಯ ತಂಡಗಳು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸುಮಾರು 1,30,000 ಪ್ರೇಕ್ಷಕರ ಮುಂದೆ ಕೊನೆಯ ಅಗ್ನಿಪರೀಕ್ಷೆಯನ್ನು ಎದುರಿಸುತ್ತಿವೆ.
ಭಾರತ ತಂಡವು ಈ ಪಂದ್ಯಾವಳಿಯಲ್ಲಿ ಇದುವರೆಗೆ ಅಜೇಯವಾಗಿಯೇ ಉಳಿದಿದೆ. ನ್ಯೂಜಿಲೆಂಡ್ ತಂಡವನ್ನು ಹೊರತುಪಡಿಸಿ ಇನ್ಯಾವುದೇ ತಂಡವೂ ಸಹ ಭಾರತದ ಎದುರು ತಕ್ಕ ಸ್ಪರ್ಧೆ ನೀಡಲು ವಿಫಲವಾದವು. ಬಹುತೇಕ ಪಂದ್ಯಗಳನ್ನು ಭಾರತ ಅಧಿಕಾರಯುತವಾಗಿ ಗೆದ್ದು ಫೈನಲ್ ವರೆಗೆ ಸಾಗಿ ಬಂದಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಹಿಂದೆಂದಿಗಿಂತಲೂ ಶಕ್ತಿಶಾಲಿಯಾಗಿ ಬೆಳೆದುನಿಂತಿದ್ದು, ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವ ಆತ್ಮವಿಶ್ವಾಸದಲ್ಲಿದೆ.