ಹೊಸದಿಲ್ಲಿ: ಜಾಗತಿಕ ಹಸಿವು ಸೂಚ್ಯಂಕ 2022ರಲ್ಲಿ (Global Hunger Index- GHI) 121 ದೇಶಗಳ ಪೈಕಿ ಭಾರತವು ಹಿಂದಿದ್ದ 101 ನೇ ಸ್ಥಾನದಿಂದ 107ನೇ ಇಳಿದು ಅತ್ಯಂತ ಶೋಚನೀಯ ಕುಸಿತ ಕಂಡಿದೆ.
ರಾಷ್ಟ್ರಗಳಲ್ಲಿ ನೆರೆರಾಷ್ಟ್ರಗಳಾದ ನೇಪಾಳ (81), ಪಾಕಿಸ್ತಾನ (99), ಶ್ರೀಲಂಕಾ(64) ಮತ್ತು ಬಾಂಗ್ಲಾದೇಶ(84)ಗಳಿಗಿಂತಲೂ ಕೆಳಗಿನ ಸ್ಥಾನಕ್ಕೆ ಭಾರತ ತಲುಪಿರುವುದು ಆತಂಕಕಾರಿಯಾಗಿದೆ.
ಯೆಮೆನ್ ದೇಶಕ್ಕೆ 121ನೇ ಸ್ಥಾನ ನೀಡಿರುವ ಈ ಪಟ್ಟಿಯಲ್ಲಿ 17 ದೇಶಗಳು ಉನ್ನತ ಶ್ರೇಣಿ ಹೊಂದಿವೆ. ಈ ದೇಶಗಳ ನಡುವೆ ರ್ಯಾಂಕಿಂಗಿನಲ್ಲಿ ಹೆಚ್ಚು ವ್ಯತ್ಯಾಸಗಳಿಲ್ಲ. ಅಂತಹ ಉನ್ನತ ಶ್ರೇಣಿ ಪಡೆದಿರುವ ಏಷ್ಯಾದ ದೇಶಗಳಲ್ಲಿ ಚೀನಾ, ಕುವೈತ್ ಪ್ರಮುಖವಾದವು. ಮಿಕ್ಕಂತೆ ಕ್ರೊಯೇಶಿಯಾ, ಎಸ್ಟೋನಿಯಾ ಹಾಗೂ ಮಾಂಟೆನೆಗ್ರೊ ದೇಶಗಳು ಅತ್ಯುನ್ನತ ಶ್ರೇಣಿ ಹೊಂದಿರುವ ಯೂರೋಪಿಯನ್ ದೇಶಗಳಾಗಿವೆ.
ಜಾಗತಿಕ ಹಸಿವಿನ ಸೂಚ್ಯಂಕವನ್ನು ಅಪೌಷ್ಠಿಕತೆ, ಮಗುವಿನ ಕ್ಷೀಣತೆ, ಮಕ್ಕಳ ಬೆಳವಣಿಗೆ ಮತ್ತು ಮಕ್ಕಳ ಮರಣ ದರವನ್ನು ಆಧರಿಸಿ ಲೆಕ್ಕ ಹಾಕಲಾಗುತ್ತದೆ.
ಐದು ವರ್ಷದೊಳಗಿನ ಮಕ್ಕಳಲ್ಲಿ ವಯಸ್ಸಿಗೆ ತಕ್ಕ ತೂಕ, ಎತ್ತರ ಇಲ್ಲದೆ ಇದ್ದರೆ ಅದು ಮಗುವಿನ ತೀವ್ರ ಅಪೌಷ್ಠಿಕತೆಯನ್ನು ಬಿಂಬಿಸುತ್ತದೆ. ಮತ್ತು ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣವನ್ನು ಈ ಸೂಚ್ಯಂಕದಲ್ಲಿ ಪರಿಗಣಿಸಿ ಲೆಕ್ಕಹಾಕಲಾಗುತ್ತದೆ.
ಹಸಿವು ಸೂಚ್ಯಂಕ ತಯಾರಿಸುವಾಗ ಅನುಸರಿಸುವ ವಿಧಾನದ ಪ್ರಕಾರ 9.9ಕ್ಕಿಂತ ಕಡಿಮೆ ಇದ್ದರೆ ʼಕಡಿಮೆʼ , ಸ್ಕೋರ್ 10ರಿಂದ 19.9 ಇದ್ದಲ್ಲಿ – ಸಾಧಾರಣ, ಸ್ಕೋರ್ 20ರಿಂದ 34.9 ಇದ್ದಲ್ಲಿ ಗಂಭೀರ ಹಾಗೂ ಸ್ಕೋರ್ 35ರಿಂದ 49.9 ಇದ್ದಲ್ಲಿ ʼಎಚ್ಚರಿಕೆಯ ಮಟ್ಟʼ ಎಂದು ಪರಿಗಣಿಸಲಾಗುತ್ತದೆ. 50ಕ್ಕಿಂತ ಹೆಚ್ಚಿನ ಸ್ಕೋರ್ ಇದ್ದಲ್ಲಿ ತೀರಾ ಎಚ್ಚರಿಕೆಯ ಮಟ್ಟ ಎಂದು ಗುರುತಿಸಲಾಗುತ್ತದೆ.
2022 ರ ಜಾಗತಿಕ ಹಸಿವು ಸೂಚ್ಯಂಕದ ಪ್ರಕಾರ, ಭಾರತಕ್ಕೆ 29.1 ಅಂಕವನ್ನು ನೀಡಿದ್ದು, ದೇಶದಲ್ಲಿ ಹಸಿವಿನ ಮಟ್ಟ ಗಂಭೀರವಾಗಿದೆ ಎಂದು ಪರಿಗಣಿಸಲಾಗಿದೆ.
ವರದಿಯ ಪ್ರಕಾರ, ʼಭಾರತದ ಮಕ್ಕಳ ಕ್ಷೀಣಿಸುವಿಕೆಯ ಪ್ರಮಾಣವು ಶೇ.19.3 ರಷ್ಟಿದ್ದು, ಭಾರತದಲ್ಲಿ ಮಕ್ಕಳ ಕ್ಷಯ ದರವು ವಿಶ್ವದಲ್ಲೇ ಅತ್ಯಧಿಕವಾಗಿದೆ.
ಆರೋಗ್ಯ ಮತ್ತು ಪೋಷಣೆಯ ಮಧ್ಯಸ್ಥಿಕೆಗಳು, ಮನೆಯ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ , ತಾಯಂದಿರ ಶಿಕ್ಷಣ ಮತ್ತು ಆರೋಗ್ಯದ ಸ್ಥಿತಿ ಇದೆಲ್ಲದರಿಂದ ಕುಂಠಿತವಾಗುತ್ತದೆ ಎಂದು ಸಂಶೋಧಕರ ವರದಿಗಳು ಹೇಳಿದೆ.