ಲಕ್ನೋ: ಹಾಥ್ರಸ್ ಕಾಲ್ತುಳಿತ ಪ್ರಕರಣದ ಮುಂದಿನ ವಿಚಾರಣೆಯನ್ನು ಸ್ಥಳೀಯ ನ್ಯಾಯಾಲಯವು ಈ ತಿಂಗಳ 27 ಕ್ಕೆ ಮುಂದೂಡಿದೆ. ಗುರುವಾರ ನಡೆದ ವಿಚಾರಣೆಯಲ್ಲಿ, ಹಾಥ್ರಸ್ ಜಿಲ್ಲಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮಹೇಂದ್ರ ಶ್ರೀವಾಸ್ತವ ಅವರ ಮುಂದೆ ಡಿಫೆನ್ಸ್ ಲಾಯರ್ ಮುನ್ನಾ ಸಿಂಗ್ ಪುಂಧೀರ್ ಅವರು ವಾದ ಮಂಡಿಸಿದರು.
ಕಾಲ್ತುಳಿತ ಸಂಭವಿಸಿದ ಸಮಯದಲ್ಲಿ ಆ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಬ್ ಇನ್‌ಸ್ಪೆಕ್ಟರ್ ನೀಲೇಶ್ ಯಾದವ್ ಅವರ ಹೇಳಿಕೆಯನ್ನು ದಾಖಲಿಸಲಾಗಿದ್ದು, ಇನ್ನೂ ಕೆಲ ಪೊಲೀಸರ ಹೇಳಿಕೆಗಳನ್ನು ದಾಖಲಿಸಲಾಗುವುದು ಎಂದು ಅವರು ನ್ಯಾಯಾಧೀಶರಿಗೆ ತಿಳಿಸಿದರು. ಬಳಿಕ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿದರು.
ಕಳೆದ ವರ್ಷ ಜುಲೈ 2 ರಂದು, ತನ್ನನ್ನು ತಾನೇ ದೇವರೆಂದು ಘೋಷಿಸಿಕೊಂಡಿದ್ದ ಸೂರಜ್‌ಪಾಲ್ ಅಲಿಯಾಸ್ ನಾರಾಯಣ ಸಕಾರ್ ಹರಿ ಬಾಬಾ (ಭೋಲೆ ಬಾಬಾ ಎಂದೂ ಕರೆಯಲ್ಪಡುವ) ಆಯೋಜಿಸಿದ್ದ ಸತ್ಸಂಗದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 121 ಜನರು ಮೃತಪಟ್ಟಿದ್ದರು. ಮೃತರಾದವರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ಮಹಿಳೆಯರು.
ಹಾಥ್ರಸ್ ಜಿಲ್ಲೆಯ ಸಿಖಂದ್ರರಾವ್ ಪೊಲೀಸ್ ಠಾಣಾ ವ್ಯಾಪ್ತಿಯ ಮುಗಲ್‌ಗಡಿ ಮತ್ತು ಫುಲ್ರಾರು ಗ್ರಾಮಗಳ ನಡುವೆ ಈ ಘಟನೆ ನಡೆದಿತ್ತು. ಈ ದುರಂತಕ್ಕೆ ಸಂಬಂಧಿಸಿದಂತೆ ಭೋಲೆ ಬಾಬಾನ ಸಹಾಯಕ ದೇವಪ್ರಕಾಶ್ ಮಧುಕರ್ ಮತ್ತು ಇತರ 10 ಜನರನ್ನು ಪೊಲೀಸರು ಆರೋಪಿಗಳೆಂದು ಹೆಸರಿಸಿದ್ದಾರೆ. ಪ್ರಸ್ತುತ ಇವರೆಲ್ಲರೂ ಜಾಮೀನಿನ ಮೇಲೆ ಹೊರಗಿದ್ದಾರೆ. ಈ ಆರೋಪಿಗಳ ವಿರುದ್ಧ 3,200 ಪುಟಗಳ ಚಾರ್ಜ್‌ಶೀಟ್ (ದೋಷಾರೋಪಣಾ ಪಟ್ಟಿ) ಸಲ್ಲಿಸಲಾಗಿದ್ದು, ಈಗ ವಿಚಾರಣಾ ಪ್ರಕ್ರಿಯೆ ನಡೆಯುತ್ತಿದೆ.
