ಮಲ್ಪೆ: ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ಇಬ್ಬರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರೋಹಿತ್ ಹಾಗೂ ಸಂತ್ರಿ ಎಂದು ಗುರುತಿಸಲಾಗಿದೆ. ಇಬ್ಬರೂ ಮಲ್ಪೆಯಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್ ಘಟಕದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು ಹಣಕ್ಕಾಗಿ ಪಾಕಿಸ್ತಾನಕ್ಕೆ ಗೌಪ್ಯ ರಕ್ಷಣಾ ಮಾಹಿತಿಗಳನ್ನು ವಾಟ್ಸ್‌ಆಪ್ ಮೂಲಕ ಕಳುಹಿಸುತ್ತಿದ್ದರು. ರೋಹಿತ್ ಮೊದಲು ಕೇರಳದ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ಇನ್ಸುಲೇಟರ್ ಆಗಿ ಕೆಲಸ ಮಾಡುತ್ತಿದ್ದನು. ಆ ಸಮಯದಲ್ಲಿ ಭಾರತೀಯ ನೌಕಾಪಡೆಗೆ ಸಂಬಂಧಿಸಿದ ಹಡಗುಗಳ ಸಂಖ್ಯೆಗಳ ಪಟ್ಟಿ ಹಾಗೂ ಇತರ ಗೌಪ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ್ದಾನೆಂದು ತಿಳಿದು ಬಂದಿದೆ.
ಮಲ್ಪೆಗೆ ವರ್ಗಾವಣೆಯಾದ ನಂತರವೂ, ರೋಹಿತ್ ಕೊಚ್ಚಿಯಲ್ಲಿದ್ದ ಸ್ನೇಹಿತರಿಂದ ಮಾಹಿತಿ ಪಡೆದು, ವಾಟ್ಸ್‌ಆಪ್ ಮೂಲಕ ಅನಧಿಕೃತ ವ್ಯಕ್ತಿಗಳಿಗೆ ಹಂಚುತ್ತಿದ್ದನೆಂದು ತನಿಖಾ ಮೂಲಗಳು ತಿಳಿಸಿವೆ. ಈ ಕ್ರಮದಿಂದ ದೇಶದ ಆಂತರಿಕ ಭದ್ರತೆಯನ್ನು ಅಪಾಯಕ್ಕೆ ಒಳಪಡಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮಲ್ಪೆ ಕೊಚ್ಚಿನ್ ಶಿಪ್‌ಯಾರ್ಡ್ ಸಿಇಒ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಳೆದ ಒಂದೂವರೆ ವರ್ಷಗಳಿಂದ ಆರೋಪಿಗಳು ಹಡಗುಗಳಿಗೆ ಸಂಬಂಧಿಸಿದ ಮಾಹಿತಿ ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದರೆಂಬ ಆರೋಪಗಳಿವೆ.
ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಗಳನ್ನು ಕಸ್ಟಡಿಗೆ ಪಡೆದು ಮುಂದಿನ ವಿಚಾರಣೆ ಮುಂದುವರಿಯುತ್ತಿದೆ.
