ಆಸ್ಟ್ರೇಲಿಯಾ ವಿರುದ್ಧದ ಯಶಸ್ವೀ ಸರಣಿಯ ನಂತರ ಈಗ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಟಿ 20 ಪಂದ್ಯಾವಳಿಗೆ ಮುನ್ನ ಮತ್ತೊಂದು ಪ್ರಾಕ್ಟೀಸ್ ಸರಣಿ ಎದುರಿಸುತ್ತಿದೆ. ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 3 ಪಂದ್ಯಗಳ ಟಿ 20 ಸರಣಿ ಮತ್ತು 3 ಪಂದ್ಯಗಳ ಏಕದಿನ ಪಂದ್ಯಾವಳಿ ಆಡಲಿದೆ ಭಾರತ. ಇಂದಿನಿಂದ ಟಿ 20 ಸರಣಿ ಶುರುವಾಗಿದ್ದು ಟಾಸ್ ಗೆದ್ದಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಈ ಟಿ 20 ಸರಣಿಯಲ್ಲಿ ಭಾರತ ವಿಶ್ವಕಪ್ ಗೆ ಮುನ್ನ ಅಂತಿಮ ಹಂತದ ಅಭ್ಯಾಸ ನಡೆಸಲಿದೆ. ಈ ಪಂದ್ಯಾವಳಿಯಲ್ಲಿ ತನ್ನ ಎಲ್ಲ ಬ್ಯಾಟಿಂಗ್ ಮತ್ತು ಬೋಲಿಂಗ್ ವಿಭಾಗವನ್ನು ಒರೆಗೆ ಹಚ್ಚುವ ಇರಾದೆ ಭಾರತ ತಂಡದ್ದು. ಆದರೆ, ಪಂದ್ಯಾವಳಿಗೆ ಆಯ್ಕೆಯಾಗಿದ್ದ ಭಾರತದ ಬ್ಯಾಟಿಂಗ್ ಸ್ಟಾರ್ ದೀಪಕ್ ಹೂಡಾ ಗಾಯದ ಕಾರಣ ಕೊನೆಯ ಕ್ಷಣದಲ್ಲಿ ತಂಡದಿಂದ ಹೊರಗೆ ಬಿದ್ದಿದ್ದಾರೆ. ಅವರ ಜಾಗದಲ್ಲಿ ಇನ್ನೂ ಯಾರನ್ನೂ ಆಯ್ಕೆ ಮಾಡಿಲ್ಲವಾದ ಕಾರಣ, ಮೊದಲ ಪಂದ್ಯದಲ್ಲಿ ಭಾರತ ಇರುವ ಆರು ಜನ ಬ್ಯಾಟ್ಸ್ ಮನ್ ಗಳೊಂದಿಗೆ ಕಣಕ್ಕಿಳಿಯಬೇಕಾಗಿದೆ. ಇನ್ನು ಐದು ಜನ ಬೋಲರ್ ಗಳ ಆಯ್ಕೆಯಲ್ಲೂ ತಂಡಕ್ಕೆ ಹೆಚ್ಚು ತಲೆನೋವಿಲ್ಲ. ಹಿರಿಯ ಆಟಗಾರ ಭುವನೇಶ್ವರ್ ಕುಮಾರ್ ಈ ಪಂದ್ಯಾವಳಿಯಿಂದ ಹೊರಗೆ ಇರುವ ಕಾರಣ ಬೋಲಿಂಗ್ ಲೈನ್ ಅಪ್ ಅನ್ನು ಊಹೆ ಮಾಡುವುದು ಕಷ್ಟದ ಕೆಲಸವೇನಲ್ಲ. ಒಟ್ಟಿನಲ್ಲಿ ಈ ಬಾರಿ ವಿಶ್ವಕಪ್ ಟಿ 20 ಗೆಲ್ಲುವ ಫೇವರೆಟ್ ತಂಡಗಳಲ್ಲಿ ಒಂದು ಎಂದು ಗುರುತಿಸಿಕೊಂಡಿರುವ ಭಾರತ ಈ ಪಂದ್ಯಾವಳಿಯಲ್ಲಿ ಇನ್ನಷ್ಟು ಸುಧಾರಿಸಿಕೊಂಡು ತಯಾರಾಗುವ ಪ್ರಯತ್ನ ಮಾಡಲಿದೆ.