Home ಬೆಂಗಳೂರು ಭಾರತದ ಮೊದಲ 3D ಪ್ರಿಂಟೆಡ್‌ ಅಂಚೆಕಚೇರಿ ಬೆಂಗಳೂರಿನಲ್ಲಿ!

ಭಾರತದ ಮೊದಲ 3D ಪ್ರಿಂಟೆಡ್‌ ಅಂಚೆಕಚೇರಿ ಬೆಂಗಳೂರಿನಲ್ಲಿ!

0

ಬೆಂಗಳೂರು: ಭಾರತದಲ್ಲಿ ಮೊದಲ 3ಡಿ ಪ್ರಿಂಟೆಡ್ ಅಂಚೆ ಕಚೇರಿಯನ್ನು ಪೂರ್ವ ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್‌ನಲ್ಲಿ ಆಗಸ್ಟ್ 18 ರಂದು ಕೇಂದ್ರ ರೈಲ್ವೆ, ಸಂವಹನ ಮತ್ತು ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಉದ್ಘಾಟಿಸಿದರು.

3ಡಿ ಪ್ರಿಂಟಿಂಗ್ ತಂತ್ರಜ್ಞಾನ ಬಳಸಿ ನಿರ್ಮಿಸಿದ ಮೊದಲ ಕಮರ್ಷಿಯಲ್‌ ಕಟ್ಟಡ ಇದಾಗಿದ್ದು ಕೇವಲ 43 ದಿನಗಳಲ್ಲಿ, 1,000 ಚದರ ಅಡಿಗಳಲ್ಲಿ ಇದನ್ನು ನಿರ್ಮಿಸಲಾಗಿದೆ.

ಲಾರ್ಸೆನ್ ಮತ್ತು ಟೂಬ್ರೊ ಕನ್‌ಸ್ಟ್ರಕ್ಷನ್‌ ನಿರ್ಮಾಣದ ಈ ಕಟ್ಟಡವನ್ನು ನಿರ್ಮಿಸಲು 45 ದಿನಗಳನ್ನು ನಿಗದಿ ಪಡಿಸಲಾಗಿತ್ತು. ಆದರೆ, ಕೇವಲ 43 ದಿನಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಮದ್ರಾಸ್ ಈ ಕಟ್ಟಡದ ವಿನ್ಯಾಸವನ್ನು ಮಾಡಿದೆ. ಸಾಂಪ್ರದಾಯಿಕ ವಿಧಾನಗಳಿಗೆ 30-40% ರಷ್ಟು ವೆಚ್ಚವನ್ನು ಈ ತಂತ್ರಜ್ಞಾನ ಉಳಿಸುತ್ತದೆ ಮತ್ತು ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತದೆ.

ಹಿಂದೆ ಈ ಅಂಚೆ ಕಚೇರಿಯನ್ನು ಹಲಸೂರು ಬಜಾರ್‌ ಅಂಚೆ ಕಚೇರಿ ಎಂದು ಕರೆಯಲಾಗುತ್ತಿತ್ತು. ಈಗ ಇದನ್ನು ಕೇಂಬ್ರಿಡ್ಜ್ ಲೇಔಟ್ ಅಂಚೆ ಕಚೇರಿ ಎಂದು ಕರೆಯಲಾಗುತ್ತಿದೆ.

ಈ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, “ ಬೆಂಗಳೂರು ಭಾರತದ ಹೊಸ ಚಿತ್ರಣವನ್ನು ನೀಡುವ ನಗರ. ಇಂದು ನಾವು ನೋಡುತ್ತಿರುವ ಈ 3D ಪೋಸ್ಟ್ ಆಫೀಸ್ ಕಟ್ಟಡವು ಅಂತಹ ಒಂದು ಹೊಸ ಚಿತ್ರಣವಾಗಿದೆ ಮತ್ತು ನವ ಭಾರತದ ಆತ್ಮವನ್ನು ಪ್ರತಿನಿಧಿಸುತ್ತದೆ,” ಎಂದರು.

ಈ ಕಟ್ಟಡದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು “ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್‌ನಲ್ಲಿ ನಿರ್ಮಾಣವಾಗಿರುವ ಭಾರತದ ಮೊದಲ 3D ಮುದ್ರಿತ ಅಂಚೆ ಕಚೇರಿಯನ್ನು ನೋಡಲು ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುತ್ತಾನೆ. ನಮ್ಮ ರಾಷ್ಟ್ರದ ನಾವೀನ್ಯತೆ ಮತ್ತು ಪ್ರಗತಿಗೆ ಇದು ಸಾಕ್ಷಿಯಾಗಿದೆ, ಇದು ಸ್ವಾವಲಂಬಿ ಭಾರತದ ಆತ್ಮ. ಅಂಚೆ ಇಲಾಖೆಯನ್ನು ಪೂರ್ಣಗೊಳಿಸುವಲ್ಲಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು,” ಎಂದು ಟ್ವೀಟ್‌ ಮಾಡಿದ್ದಾರೆ.

You cannot copy content of this page

Exit mobile version