Monday, April 29, 2024

ಸತ್ಯ | ನ್ಯಾಯ |ಧರ್ಮ

ಆಸಕ್ತಿ‌ ಇದ್ರೆ ಸಾಲ್ದು ತಲ್ಲೀನತೆ ಮುಖ್ಯ

ಹಿರಿಯ ಪ್ರಾಥಮಿಕ ಶಾಲೆಗೆ ಬರುವ ಹೊತ್ತಿಗೆ ನಾವೆಲ್ಲರೂ ಒಂದೊಂದು ಕಲೆಗಳತ್ತ ಆಸಕ್ತರಾಗ್ತಾ ಇದ್ವಿ. ಈ ಹಿಂದೆ ಹೇಳಿದಂತೆ ಕಾನ್ವೆಂಟ್ ಆದ ಕಾರಣ ನಮಗೆ ಶಾಲೆಯಲ್ಲೇ ಚಿತ್ರಕಲೆ – ಪಿಯಾನೊ – ನೃತ್ಯ – ಕ್ರೀಡೆಗಳ ತರಬೇತಿ ನಡೆಯುತ್ತಿತ್ತು. ಮನೇಲಿ ಹಾರ್ಮೋನಿಯಂ ಹಿಡಿದು ಕರ್ನಾಟಕ ಸಂಗೀತದ “ಸ- ಪ – ಸ – ಪ – ಸ – ಪ – ಸ” ಸ್ವರಗಳನ್ನು ನುಡಿಸ್ತಾ ತರಗತಿಯಲ್ಲಿ “a – b – c – d – e – f – g” ನೋಟ್ಸ್ ಗಳನ್ನು ಕಲೀತಾ ಇದ್ವಿ.

ಗೆಳೆಯರೆಲ್ಲಾ ಸೇರಿ‌‌ ಶಾಲೆಯಲ್ಲಿ ಪಾಶ್ಚಿಮಾತ್ಯ ಸಂಗೀತ ಹೇಳಿ ಕೊಡಲು ಬಂದಿದ್ದ ಮ್ಯೂಸಿಕ್ ಟೀಚರ್ ಹತ್ರ ಕಲಿತದ್ದು ಒಂದೇ ಒಂದು ಸಂಯೋಜನೆ ಅದೇ ನಮ್ಮ ರಾಷ್ಟ್ರ ಗೀತೆಯಾದ ‘ಜನ – ಗಣ – ಮನ’. ನವೇನಾ ಮತ್ತು ಕ್ರಿಸ್ಮಸ್ ಸಮಯ ಬಂತೆಂದ್ರೆ ನಮಗೆಲ್ಲಾ ಖುಷಿ ಆಗ್ತಾ ಇತ್ತು. ಯಾಕೆಂದರೆ ಶಾಲೆಯ ಸೆಟ್ ಆಫ್ ರೂಲ್ಸ್ ಪ್ರಕಾರ ಎಲ್ಲಾ ಮಕ್ಕಳು ನವೇನಾ ಆಚರಣೆಯ ವಾರದಲ್ಲಿ ತಮ್ಮ ತಮ್ಮ ಮನೆಗಳಿಂದ ಒಂದಿಷ್ಟು ಹೂವು, ಅಗರಬತ್ತಿಗಳನ್ನು ತರಬೇಕಾಗಿತ್ತು‌. ಆ ದಿನಗಳಲ್ಲಿ ಫಸ್ಟ್ ಬೆಲ್ ಆದ ನಂತರ ನಮ್ಮ ನಮ್ಮ ಕ್ಲಾಸ್ ರೂಂ ಗಳಿಂದ ನಾವು ಅಂದರೆ ಹುಡುಗರು – ಹುಡುಗಿಯರು ಪ್ರತ್ಯೇಕವಾಗಿ ಲೈನ್ ಮಾಡಿಕೊಂಡು ಶಿಸ್ತಿನಿಂದ ಗ್ರೌಂಡ್ ನಲ್ಲಿ ತರಗತಿಗಳ ಪ್ರಕಾರ ನಿಲ್ಲುತ್ತಿದ್ದೆವು‌. ಎಲ್ಲರ ಕೈಗಳಲ್ಲೂ
ಬಗೆಬಗೆಯ ಹೂ , ಪತ್ರೆ , ಉದ್ಬತ್ತಿ , ಮೊಮ್ಬತ್ತಿ ಯ ಕವರ್ ಗಳು ಇರುತ್ತಿದ್ದವು.

ಪ್ರತಿ ವರ್ಷವೂ ದಾಖಲಾತಿ ಹೆಚ್ಚಿದ ಕಾರಣ ಅದರಲ್ಲೂ ಹೈ ಸ್ಕೂಲ್ ತರಗತಿಗಳು ಆರಂಭವಾದದಕ್ಕೆ ಇಡೀ ಪ್ರೇಯರ್ ಬಹುಸಂಖ್ಯೆಯಿಂದ ಕೂಡಿರುತ್ತಿತ್ತು‌. ನಾವೆಲ್ಲರೂ ಶಾಲೆಯ ಡೈರಿಯಲ್ಲಿ ಅಚ್ಚಾಗಿರುತ್ತಿದ್ದ ಕ್ರಿಸ್ತನ ಹಾಡುಗಳ ಜೊತೆಗೆ ನಾಡಗೀತೆ ಯನ್ನು ಸಂಪೂರ್ಣ ವಾಗಿ ಹಾಡುತ್ತಿದ್ದೆವು. ಒಮ್ಮೊಮ್ಮೆ ನಮಗೆ ಕಷ್ಟವೆನಿಸುವ ವಿಷಯಗಳ ತರಗತಿಯಲ್ಲಿ ಮೆಲ್ಲಗೆ ಸಿಕ್ಕ ಸಿಕ್ಕ ಹಾಡುಗಳನ್ನು ಗುನುಗುತ್ತಿದ್ದೆವು.
ಒಮ್ಮೆ ಹೀಗೆ ನಮಗೆಲ್ಲ ಸಂಗೀತ ಕಲಿಯಬೇಕೆಂಬ ತೀವ್ರತೆ ಹುಟ್ಟಿತ್ತು.

ತಿಪಟೂರಿನ ಟ್ಯಾಗೋರ್ ಶಾಲೆಯ ಬಳಿ ಸಂಗೀತ ಹೇಳಿ ಕೊಡುವ ಗುರುಗಳು ಇದ್ದಾರೆ ಎಂದು ಅಪ್ಪ ಹೇಳಿದ ನಂತರ ಅಪ್ಪನೊಟ್ಟಿಗೆ ಗುರುಗಳ ಬಳಿ ಸಂಗೀತಾಭ್ಯಾಸ ಕ್ಕೆ ಸೇರಿಕೊಳ್ಳುವ ಅವಕಾಶ ಸಿಕ್ಕಿತ್ತು. ಅದಕ್ಕೂ ಮುಂಚೆ ಅಪ್ಪ ಅವರ ಬಳಿ ಹಾರ್ಮೋನಿಯಂ ಕಲಿಯುತ್ತಾ ಮನೆಯಲ್ಲಿ ಅದನ್ನು ಅಭ್ಯಾಸ ಮಾಡುತ್ತಿದ್ದರು. ಸ್ವರ ಗಳ ಪರಿಚಯ ಮನೆಯಲ್ಲೇ ಅಪ್ಪನಿಂದ ಆದ ಕಾರಣ ಪಿಳ್ಳಾರಿ ಗೀತೆಗಳು ಬಾಯಿಪಾಟ ಆಗಿದ್ದವು. ಮಾಯಾಮಾಳವ ಗೌಳ , ಮಲಹರಿ , ರಾಗಗಳ ಸ್ವರಗಳು ನೆನಪಿದ್ದವು. ಆದರೆ ಗೀತೆಗಳ ಸಾಹಿತ್ಯ ದ ಅರ್ಥ ಮಾತ್ರ ತಿಳಿದುಕೊಳ್ಳುವ ಅವಕಾಶ ಸಿಕ್ಕಿರಲಿಲ್ಲ.

ಕೆಲವು ಕಾರಣಗಳಿಂದ ಸಂಗೀತದ ಗುರುಗಳ ಪಾಠಭ್ಯಾಸಕ್ಕೆ ಹೋಗಲು ಸಾಧ್ಯವಾಗಲಿಲ್ಲ. ದಿನ ಕಳೆದಂತೆ ಸೈಕಲ್ ಏರಿ ನಾವಿದ್ದ ಏರಿಯಾದಲ್ಲಿ ಪ್ರತೀ ಅಡ್ಡ ರಸ್ತೆ ಯಲ್ಲೂ “ ಅಂಕಲ್ , ಆಂಟಿ, ಅಜ್ಜಿ ಇಲ್ಲಿ ಯಾರಾದರೂ ಸಂಗೀತ ಹೇಳಿ ಕೊಡ್ತಾರ “ ಎಂದು ಅಲೆಯಲು ಆರಂಭಿಸಿದೆ. ಹೀಗೆ ಹುಡುಕುವಾಗ ನಮ್ಮ ಮನೆಯ ಹತ್ತಿರದ ಒಂದು ಮನೆಯಲ್ಲಿ ನಮ್ಮ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದ ನನ್ನ ಗೆಳತಿ ಸಂಗೀತಾಭ್ಯಾಸ ಮಾಡುತ್ತಿದ್ದದ್ದು ಕೇಳಿಸಿತು. ಥಟ್ಟನೆ ಸೈಕಲ್ ಬ್ರೆಕ್ ಹಿಡಿದು ಸೈಡ್ ಸ್ಟ್ಯಾಂಡ್ ಹಾಕಿ ಅವರ ಮನೆಯ ಬಾಗಿಲನ್ನು ಬಡಿದೆ, ಯಾರೂ ಬರಲಿಲ್ಲ ಮತ್ತೊಮ್ಮೆ ಕಾಲಿಂಗ್ ಬೆಲ್ ಒತ್ತಿದೆ ಆಗಲು ಯಾರು ಬರಲಿಲ್ಲ ಮೂರನೇ ಸಲ “ ಅಂಕಲ್ – ಆಂಟಿ ಇಲ್ಲಿ ಯಾರಾದರೂ ಸಂಗೀತ ಹೇಳಿಕೊಡುವ ಗುರುಗಳು ಇದ್ದಾರ ?” ಎಂದು ಕೇಳಿದೆ. ತಡ ಮಾಡದೆ ಅವರು ಬಾಗಿಲು ತೆರೆದು ವಿಳಾಸ ತಿಳಿಸಿದರು.

ಕೊನೆಗೂ ಗುರುಗಳು ಸಿಕ್ಕಿದರು‌. ಮನೆಯ ಹತ್ತಿರವೇ ಇದ್ದ ಕಾರಣ ಸಮಯಕ್ಕೆ ಸರಿಯಾಗಿ ಅಂದರೆ ಮುಂಜಾನೆ ಆರುವರೆ ಹೊತ್ತಿಗೆ ಗುರುಗಳ ಮನೆ ಹತ್ರ ಹಾಜರಿರುತ್ತಿದ್ದೆ‌. ಜೊತೆಗೆ ಸಂಗೀತದಲ್ಲಿ ಆಸಕ್ತಿ ಇದ್ದ ನನ್ನ ಇತರ ಸ್ನೇಹಿತರನ್ನು ನನ್ನೊಟ್ಟಿಗೆ ಸೇರಿಸಿಕೊಂಡೆ. ನಮ್ಮ ಸಂಗೀತದ ಗುರುಗಳು ನಮಗೆ ಶಾಸ್ತ್ರೀಯ ಸಂಗೀತದ ಹೇಳಿಕೊಡುವುದರ ಜೊತೆಗೆ ಬೇಸಿಕ್ ಇಂಗ್ಲಿಷ್‌ ಹೇಳಿ ಕೊಡ್ತಾ “ ಮಕ್ಕಳೇ ನಾನು ನೀವು ಕೊಡುವ ಶುಲ್ಕ ಕ್ಕಾಗಿ ಪಾಠ ಹೇಳಿ ಕೊಡುವುದಿಲ್ಲ ಮತ್ತೆ, ನಿಮ್ಮ ಮಾತೃ ಭಾಷೆ ಯಾವುದೇ ಇರಲಿ ಅದನ್ನು ಸಂಪೂರ್ಣವಾಗಿ ಕಲಿಯಿರಿ ಆದರೆ ಬದುಕಲು ಅದೊಂದಿದ್ರೆ ಸಾಲ್ದು ಇಂಗ್ಲಿಷ್ ಕೂಡ ಬೇಕಾಗುತ್ತೆ” ಎಂದು ಹೇಳ್ತಾ ಇದ್ರು.

ಈ ಪ್ರೋಗ್ರೆಸ್ಸಿವ್ ಥಾಟ್ ಇಷ್ಟ ಆಗದ ನನ್ನ ಗೆಳೆಯರ ಪೋಷಕರು ಸಂಗೀತ ಕ್ಲಾಸ್ ಗೆ ಹೋಗದಂತೆ ಮಾಡಿದ್ದರು. ಅವರಿಗೆ ಸಮಸ್ಯೆ ಎನಿಸಿದ್ದು ನಮ್ಮ ಮೇಷ್ಟ್ರು ಇತರೆ ಗುರುಗಳಂತೆ ರಿಜಿಡ್ ಇರಲಿಲ್ಲ , ಸಂಗೀತ ವನ್ನು ಶಾಸ್ತ್ರದಂತೆ ಕಲಿಸದೇ ವಿದ್ಯೆ ಯಂತೆ ಕಲಿಸುತ್ತಿದ್ದರೆಂದು. ಕಾಲ ಜರುಗಿದಂತೆ ಬಹುಸಂಖ್ಯೆಯ ಸಂಗೀತದ ತರಗತಿಗಳು ಅಲ್ಪ ಸಂಖ್ಯೆ ಗೆ ಪರಿವರ್ತನೆಯಾಯ್ತು. ಆದರೂ ನಾನು, ನಮ್ಮ ಗುರುಗಳು ಸಿದ್ದಯ್ಯ ಪುರಾಣಿಕರ ಜಯವೆನ್ನಿರಿ ನವ ಭಾರತ ಹಾಡನ್ನು ಹಾಡುವುದನ್ನು ನಿಲ್ಲಿಸಲಿಲ್ಲ ಇಂಗ್ಲಿಷ್ ವ್ಯಾಕರಣದ ಕಲಿಕೆಯನ್ನು ಬಿಡಲಿಲ್ಲ.

~ ಸಂಘಮಿತ್ರೆ ನಾಗರಘಟ್ಟ

Related Articles

ಇತ್ತೀಚಿನ ಸುದ್ದಿಗಳು