ಬೆಂಗಳೂರು : ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿಗಾಗಿ ಆಗ್ರಹಿಸಿ ಕಳೆದ 35 ವರ್ಷಗಳಿಂದ ನಿರಂತರವಾಗಿ ಬೀದಿ ಹೋರಾಟ ಹಾಗೂ ಕಾನೂನು ಹೋರಾಟದಿಂದಾಗಿ ಆಗಸ್ಟ್ 1 2024ರಂದು ಮಾನ್ಯ ಸರ್ವೋಚ್ಚ ನ್ಯಾಯಾಲಯದ 7 ಜನ ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಒಳಮೀಸಲಾತಿಯ ಪರವಾಗಿ ತೀರ್ಪು ನೀಡಿ ರಾಜ್ಯ ಸರ್ಕಾರಗಳ ಹೆಗಲಿಗೆ ಒಳಮೀಸಲಾತಿ ಜಾರಿ ಮಾಡುವ ಅಧಿಕಾರ ನೀಡಿ 14 ತಿಂಗಳುಗಳು ಗತಿಸಿಸದರೂ ಒಳಮೀಸಲಾತಿ ಕುರಿತಂತೆ ತಾರ್ಕಿಕ ಅಂತ್ಯ ಕಂಡಿಲ್ಲ. ತಡವಾಗಿ ಕರ್ನಾಟಕ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿ ಮಾಡಲು ನಿವೃತ್ತ ನ್ಯಾಯಾಧೀಶರಾದ ಹೆಚ್. ಎನ್ ನಾಗಮೋಹನ್ ದಾಸ್ ನೇತೃತ್ವದಲ್ಲಿ ಆಯೋಗ ರಚಿಸಿ ದತ್ತಾಂಸ ಸಂಗ್ರಹ ಮಾಡಿ, ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿಯ ಕುರಿತು ನಿರ್ಣಯ ಮಾಡಲಾಗಿದೆ. ಇದು ಒಳಮೀಸಲಾತಿ ಹೋರಾಟಕ್ಕೆ ತಾತ್ವಿಕ ಗೆಲುವು ಸಿಕ್ಕಂತಾಗಿದೆ. ಆದರೆ ಒಳಮೀಸಲಾತಿಯನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಕಳೆದ 2 ತಿಂಗಳಿನಿಂದ ರಾಜ್ಯ ಸರ್ಕಾರ ಮತ್ತು ಸಮಾಜ ಕಲ್ಯಾಣ ಇಲಾಖೆಯು ವಿಳಂಬ ಧೋರಣೆ ಅನುಸರಿಸುತ್ತಿರುವುದು ಒಳಮೀಸಲಾತಿ ಹೋರಾಟಗಾರರಲ್ಲಿ ರಾಜ್ಯ ಸರ್ಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಮೇಲೆ ಹಾಗೂ ಕರ್ನಾಟಕ ಸರ್ಕಾರದ ಮೇಲೆ ವಿಶ್ವಾಸವಿಲ್ಲದಾಗಿದೆ.
ಈ ಕಾರಣದಿಂದಾಗಿ ದಿನಾಂಕ 10-10-2025ರಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ. ಹೆಚ್.ಸಿ. ಮಹಾದೇವಪ್ಪರವರ ಮನೆಗೆ ಒಳಮೀಸಲಾತಿ ಹೋರಾಟಗಾರರು ಮುತ್ತಿಗೆ ಹಾಕಲು ಮುಂದಾದರು. ಈ ವೇಳೆ ಪೊಲೀಸರು ಹೋರಾಟಗಾರರನ್ನು ಬಂಧಿಸಿದರು.ನಮ್ಮ ಈ ಕೆಳಗಿನ ಎಲ್ಲ ಹಕ್ಕೊತ್ತಾಯಗಳಿಗೆ ಸಂಬಂಧಿಸಿದಂತೆ ಸರ್ಕಾರ ತೀರ್ಮಾನ ತೆಗೆದುಕೊಳ್ಳದಿದ್ದರೆ ಹೋರಾಟವನ್ನು ಜಿಲ್ಲಾ ಮಟ್ಟಕ್ಕೆ ವಿಸ್ತರಿಸಲಾಗುವುದು, ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಜಿಲ್ಲಾ ಪ್ರವೇಶವನ್ನು ನಿರ್ಬಂಧಿಸಲಾಗುವುದು.
ಎಲ್ಲಾ ಅಂಶಗಳನ್ನು ಪರಿಗಣಿಸಿ ಒಳಮೀಸಲಾತಿ ಹೋರಾಟಗಾರರು ತೆಲಂಗಾಣ ಮಾದರಿ ಸೇರಿದಂತೆ ಈ ಕೆಳಗಿನ ಹಕ್ಕೊತ್ತಾಯಗಳ ಪಟ್ಟಿ ಕೆಳಕಂಡಿಂತಿದೆ
- ಬಡ್ತಿ, ಬ್ಯಾಕ್ಲಾಗ್ ಹುದ್ದೆಗಳ ನೇಮಕಾತಿಗೆ ಒಳಮೀಸಲಾತಿಯನ್ನು ಅನ್ವಯಿಸಿ ಕೂಡಲೇ ಆದೇಶ ಹೊರಡಿಸಬೇಕು.
- ಎಕೆ.ಎಡಿ.ಎಎ ಕುರಿತು ಈಗಾಗಲೇ ಹೊರಡಿಸಿರುವ ಆದೇಶದಲ್ಲಿ ಹಲವು ಗೊಂದಲಗಳಿರುವುದರಿಂದ ಪರಿಷ್ಕರಿಸಿ ಮರು ಆದೇಶವನ್ನು ತಕ್ಷಣವೇ ಹೊರಡಿಸಬೇಕು.
- ಜಸ್ಟೀಸ್ ಹೆಚ್.ಎನ್. ನಾಗಮೋಹನ್ ದಾಸ್ ವರದಿಯಲ್ಲಿರುವ 4 ಲಕ್ಷ 73 ಸಾವಿರ ಜನರಲ್ಲಿ ನಕಲಿ ಜನರಿರುವ ಸಂಶಯ ಒಳಮೀಸಲಾತಿ ಹೋರಾಟಗಾರರಲ್ಲಿದೆ. ಹಾಗಾಗಿ ಕೂಡಲೇ ಈ 4 ಲಕ್ಷ 73 ಸಾವಿರ ಜನರ ಮಾಹಿತಿಯನ್ನು ಬಹಿರಂಗಗೊಳಿಸಬೇಕು.
- ತೆಲಂಗಾಣ ಮಾದರಿಯಂತೆ ಸ್ಥಳೀಯ ಸಂಸ್ಥೆಗಳಿಗೂ ಒಳಮೀಸಲಾತಿಯನ್ನು ಅನ್ವಯಿಸಬೇಕು.
- ಆರ್ಥಿಕ ಕ್ಷೇತ್ರಗಳಿಗೂ ಒಳಮೀಸಲಾತಿಯನ್ನು ಅನ್ವಯಿಸಿ ಆದೇಶ ಹೊರಡಿಸಬೇಕು.
- ಶಾಶ್ವತ ಆಯೋಗ ರಚಿಸಿ ಅಲೆಮಾರಿ ಸಮುದಾಯಗಳಿಗೆ ಶೇ.1 ಮೀಸಲಾತಿಯನ್ನು ನೀಡಬೇಕು.
- SCSP/TSP ಸಲಹೆಗಾರರ ಹುದ್ದೆಯನ್ನು ಕೂಡಲೇ ರದ್ದುಪಡಿಸಬೇಕು ಹಾಗೂ ಹಲವು ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆಯ ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳನ್ನು ತಕ್ಷಣವೇ ವರ್ಗಾವಣೆ ಮಾಡಬೇಕು.
- ಒಳಮೀಸಲಾತಿ ಜಾರಿ ಕವಲು ಸಮಿತಿಯನ್ನು ರಚಿಸಬೇಕು