Home ಅಂಕಣ ಸಂಸತ್ತಿನ ಪೂರ್ವಸೂರಿಗಳು – 9 : ದೀರ್ಘಾವಧಿ ಸಚಿವ ಜಗಜೀವನ್ ರಾಮ್‌ಗೆ ಸಾಮಾಜಿಕ ನ್ಯಾಯವೇ ಪ್ರಮುಖ...

ಸಂಸತ್ತಿನ ಪೂರ್ವಸೂರಿಗಳು – 9 : ದೀರ್ಘಾವಧಿ ಸಚಿವ ಜಗಜೀವನ್ ರಾಮ್‌ಗೆ ಸಾಮಾಜಿಕ ನ್ಯಾಯವೇ ಪ್ರಮುಖ ಗುರಿ

0

ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಒಂಬತ್ತನೇ ಲೇಖನ

ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ, ದಲಿತರ ಹಕ್ಕುಗಳಿಗಾಗಿ ಹೋರಾಟವನ್ನು ಮುನ್ನಡೆಸಿ, 30 ವರ್ಷಗಳಿಗೂ ಹೆಚ್ಚು ಕಾಲ ಸಚಿವರಾಗಿದ್ದ ಜಗಜೀವನ್‌ ರಾಮ್ ವಿವಿಧ ಖಾತೆಗಳನ್ನು ನಿಭಾಯಿಸಿದ್ದರು.

ಬಾಬು ಜಗಜೀವನ್‌ ರಾಮ್‌ ಅವರು ಬಾಬುಜೀ ಎಂದೇ ಜನಪ್ರಿಯರಾದವರು. ಸ್ವಾತಂತ್ರ್ಯ ಹೋರಾಟಗಾರ, ಸಾಮಾಜಿಕ ನ್ಯಾಯದ ಹರಿಕಾರ, ದಮನಿತ ಸಮುದಾಯಗಳ ಮುಂದಾಳು, ಅದ್ಭುತ ಸಂಸದೀಯ ಪಟು, ವಿಶಿಷ್ಟ ಕೇಂದ್ರ ಸಚಿವ, ಸಮರ್ಥ ಆಡಳಿತಗಾರ ಮತ್ತು ಅದ್ಭುತ ಭಾಷಣಗಾರರಾಗಿದ್ದರು ಜಗಜೀವನ್‌ ರಾಮ್. ಭಾರತೀಯ ರಾಜಕಾರಣದ ಅರ್ಧ ಶತಮಾನಗಳ ಕಾಲವನ್ನು ತನ್ನ ಬದ್ಧತೆ ಮತ್ತು ಸಮರ್ಪಣಾ ಭಾವದ ಅತ್ಯುನ್ನತ ವ್ಯಕ್ತಿತ್ವದ ಮೂಲಕ ಬೆಳಗಿದವರು ಬಾಬುಜೀ.

ತನ್ನ ಖ್ಯಾತಿವೆತ್ತ ರಾಜಕೀಯ ಬದುಕಿನಲ್ಲಿ ರಾಷ್ಟ್ರಪತಿ ಹುದ್ದೆಗೇರುವ ಅವಕಾಶವನ್ನು 1969 ರಲ್ಲಿ ಸ್ವಲ್ಪದರಲ್ಲೇ ತಪ್ಪಿಸಿಕೊಂಡರು. ಅದಾಗಿ ಒಂದು ದಶಕದ ನಂತರ, ಜುಲೈ 1979 ರಲ್ಲಿ ಮೊರಾರ್ಜಿ ದೇಸಾಯಿ ಅವರ ಸರಕಾರ ಪತನವಾದ ನಂತರ, ಸರಕಾರ ರಚಿಸಲು ಅವರು ಹಕ್ಕು ಮಂಡಿಸಿದಾಗ ಅದನ್ನು ಆಗಿನ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ನಿರಾಕರಿಸುತ್ತಾರೆ. ಆ ಮೂಲಕ ಪ್ರಧಾನ ಮಂತ್ರಿಯಾಗುವುದೂ ಸಾಧ್ಯವಾಗುವುದಿಲ್ಲ.

ಸುಮಾರು 30 ವರ್ಷಗಳ ಕಾಲ ವಿವಿಧ ಖಾತೆಗಳ ಸಚಿವರಾಗಿ ಜಗಜೀವನ್‌ ರಾಮ್‌ ಕೆಲಸ ಮಾಡಿದ್ದರು. ಆ ಮೂಲಕ ಭಾರತದ ಇತಿಹಾಸದಲ್ಲಿಯೇ ಅತಿ ಹೆಚ್ಚು ಕಾಲ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಖ್ಯಾತಿಯನ್ನು ತಮ್ಮದಾಗಿಸಿಕೊಂಡವರು. 1979 ಜನವರಿಯಿಂದ ಜುಲೈ ತನಕ ಉಪ ಪ್ರಧಾನ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದರು. 1971 ರಲ್ಲಿ ಬಾಂಗ್ಲಾದೇಶದ ರಚನೆಗೆ ಕಾರಣವಾದ ಇಂಡೋ-ಪಾಕ್ ಯುದ್ಧದ ಸಂದರ್ಭದಲ್ಲಿ ರಕ್ಷಣಾ ಸಚಿವರಾಗಿದ್ದ ಅವರು ಆ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೇಂದ್ರ ಕೃಷಿ ಸಚಿವರಾಗಿ ಹಸಿರು ಕ್ರಾಂತಿಗೆ ಗಮನಾರ್ಹ ಕೊಡುಗೆ ನೀಡಿದರು. ಭಾರತೀಯ ಕೃಷಿಯನ್ನು ಆಧುನೀಕರಣಗೊಳಿಸಿದರು. ಅದೂ ಕೂಡ 1974 ತೀವ್ರ ಬರಗಾಲದ ಸಮಯದಲ್ಲಿ ಆಹಾರದ ಬಿಕ್ಕಟ್ಟನ್ನು ನಿರ್ವಹಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದ್ದ ಸಂದರ್ಭದಲ್ಲಿ.

ವಿದ್ಯಾರ್ಥಿ ಚಳುವಳಿ ಮತ್ತು ಸ್ವಾತಂತ್ರ್ಯ ಹೋರಾಟಗಳ ಮೂಲಕ ಅವರು ತಮ್ಮ ಸಾರ್ವಜನಿಕ ಬದುಕನ್ನು ಆರಂಭಿಸುವುದು. 1936 ರಲ್ಲಿ ತನ್ನ 28ನೇ ವಯಸ್ಸಿನಲ್ಲಿ ಬಿಹಾರ ವಿಧಾನ ಪರಿಷತ್ತಿಗೆ ನಾಮನಿರ್ದೇಶಿತ ಸದಸ್ಯರಾಗಿ ಅವರು ಆಯ್ಕೆಯಾಗುತ್ತಾರೆ. ಅದೇ ವರ್ಷದ ಕೊನೆಗೆ ಪೂರ್ವ ಮಧ್ಯ ಶಹಾಬಾದ್‌ (ಗ್ರಾಮೀಣ) ಕ್ಷೇತ್ರದಿಂದ ಬಿಹಾರ ವಿಧಾನಸಭೆಗೆ ಅವಿರೋಧವಾಗಿ ಆಯ್ಕೆಯಾಗುತ್ತಾರೆ. ಕಾಂಗ್ರೆಸ್‌ ಸರಕಾರದ ಅಡಿಯಲ್ಲಿ ಕೃಷಿ, ಸಹಕಾರಿ, ಕೈಗಾರಿಕೆ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯಗಳ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಳ್ಳುತ್ತಾರೆ. ಆದರೆ ಅಂಡಮಾನ್‌ ಖೈದಿಗಳ ವಿಷಯ ಮತ್ತು ಎರಡನೇ ಮಹಾಯುದ್ಧದಲ್ಲಿ ಭಾರತದ ಪಾಲ್ಗೊಳ್ಳುವಿಕೆಗಳನ್ನು ಮುಂದಿಟ್ಟುಕೊಂಡು ಅವರು 1938 ರಲ್ಲಿ ರಾಜೀನಾಮೆ ನೀಡುತ್ತಾರೆ.

ಬಿಹಾರದ ಶಹಬಾದ್‌ ಜಿಲ್ಲೆಯ (ಈಗಿನ ಭೋಜ್‌ಪುರ) ಆರ್ರಾ ಬಳಿ ಚಾಂದ್ವಾ ಎಂಬಲ್ಲಿ 1908 ಏಪ್ರಿಲ್‌ 5 ರಂದು ಜಾತವ್‌ ದಲಿತ ಕುಟುಂಬದಲ್ಲಿ ಜಗಜೀವನ್‌ ರಾಮ್‌ ಅವರ ಜನನ. ಶಿವ ನಾರಾಯಣಿ ಪಂಥದ ಧಾರ್ಮಿಕ ಮುಖಂಡನಾಗಿದ್ದ ತಂದೆ, ಅವರಲ್ಲಿ ಮಾನವೀಯ ಮತ್ತು ಸಹಿಷ್ಣುತೆಯ ಗುಣಗಳನ್ನು ತುಂಬಿದರು. ಆದರೆ, ಸಣ್ಣ ಪ್ರಾಯದಲ್ಲಿಯೇ ಅವರು ತಂದೆಯನ್ನು ಕಳೆದುಕೊಂಡು ತಾಯಿಯ ಆಶ್ರಯದಲ್ಲಿ ಬೆಳೆಯುತ್ತಾರೆ. ಜಾತಿ ತಾರತಮ್ಯಗಳನ್ನು ಎದುರಿಸಬೇಕಾಗಿ ಬಂದಿದ್ದರೂ ಕೂಡ ಅವರು ಆರ್ರಾ ಟೌನ್‌ ಶಾಲೆಯಲ್ಲಿ ಪ್ರಥಮ ದರ್ಜೆಯೊಂದಿಗೆ ಮೆಟ್ರಿಕ್ಯುಲೇಷನ್ ಉತ್ತೀರ್ಣರಾಗುತ್ತಾರೆ. ಬನಾರಸ್‌ ಹಿಂದೂ ವಿಶ್ವವಿದ್ಯಾಲಯದಿಂದ ಇಂಟರ್‌ ಸೈನ್ಸ್‌ ಪರೀಕ್ಷೆ ಪೂರ್ಣಗೊಳಿಸಿದ ನಂತರ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಪದವಿ ಪಡೆದುಕೊಳ್ಳುತ್ತಾರೆ.

1914 ರಲ್ಲಿ ಜಗಜೀವನ್‌ ರಾಮ್‌ ಸ್ಥಳೀಯ ಶಾಲೆಯಲ್ಲಿ ವ್ಯಾಸಂಗ ಆರಂಭ ಮಾಡುವುದು. ತಂದೆಯ ಅಕಾಲಿಕ ಮರಣದಿಂದ ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಗಿ ಬಂದರೂ, ಅವರು ಶಿಕ್ಷಣವನ್ನು ಮುಂದುವರಿಸುತ್ತಾರೆ. 1922 ರಲ್ಲಿ ಆರ್ರಾ ಟೌನ್‌ ಶಾಲೆಯಲ್ಲಿ ನೀರಿನ ಪಾತ್ರೆಯನ್ನು ಮುಟ್ಟಲು ಅವಕಾಶ ನಿರಾಕರಿಸಿದಾಗ ಅವರು ಜಾತಿ ತಾರತಮ್ಯದ ಕಟು ವಾಸ್ತವವನ್ನು ಎದುರಿಸುತ್ತಾರೆ. ದಲಿತರು ನೀರಿನ ಪಾತ್ರೆಯನ್ನು ಮುಟ್ಟವಾರದೆಂಬ ನಿಯಮವನ್ನು ಪ್ರಾಂಶುಪಾಲರು ಹಿಂಪಡೆಯುವವರೆಗೂ ಪ್ರತಿಭಟನಾತ್ಮಕವಾಗಿ ದಲಿತರಿಗಾಗಿ ಮೀಸಲಿಟ್ಟಿದ್ದ ಪಾತ್ರೆಗಳನ್ನು ಮತ್ತೆ ಮತ್ತೆ ಒಡೆದು ಹಾಕಿದರು. ಇಂತಹ ತಾರತಮ್ಯದ ನಡುವೆಯೂ ಅವರು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಾರೆ.

ಜಗಜೀವನ್‌ ರಾಮ್‌ ಅವರ ಭಾಷಣದಿಂದ ಪ್ರಭಾವಿತರಾದ ಮದನ್ ಮೋಹನ್ ಮಾಳವೀಯ ಅವರು 1925 ರಲ್ಲಿ ಅವರನ್ನು ಬನಾರಸ್‌ ಹಿಂದೂ ವಿಶ್ವವಿದ್ಯಾಲಯಕ್ಕೆ ಆಹ್ವಾನಿಸುವುದರೊಂದಿಗೆ ಅವರ ಬದುಕಿನಲ್ಲಿ ಒಂದು ಮಹತ್ವದ ತಿರುವು ಕಾಣಿಸಿಕೊಳ್ಳುತ್ತದೆ. ಅಲ್ಲಿ ಅವರು ಬಿರ್ಲಾ ವಿದ್ಯಾರ್ಥಿ ವೇತನವನ್ನು ಪಡೆಯುತ್ತಾರಾದರೂ ಹಾಸ್ಟೆಲ್ ಸೌಲಭ್ಯಗಳು ಮತ್ತು ಇತರ ಸೇವೆಗಳಲ್ಲಿ ತಾರತಮ್ಯವನ್ನು ಎದುರಿಸಬೇಕಾಗಿ ಬರುತ್ತದೆ. ಅವರು ಅಂತಹ ಸಾಮಾಜಿಕ ತಾರತಮ್ಯಗಳ ವಿರುದ್ಧ ಪ್ರತಿಭಟನೆಗಳನ್ನು ಸಂಘಟಿಸುತ್ತಾರೆ. ನಂತರ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸುತ್ತಾರೆ. 2007 ರಲ್ಲಿ, ಅದೇ ವಿಶ್ವವಿದ್ಯಾಲಯವು ಜಾತಿ ತಾರತಮ್ಯ ಮತ್ತು ಆರ್ಥಿಕ ಹಿಂದುಳಿದಿರುವಿಕೆಯ ಅಧ್ಯಯನಕ್ಕೆಂದು ತನ್ನ ಸಮಾಜ ವಿಜ್ಞಾನ ವಿಭಾಗದಲ್ಲಿ ಬಾಬು ಜಗಜೀವನ್ ರಾಮ್ ಪೀಠವನ್ನು ಸ್ಥಾಪಿಸಿತು.

1928 ರಲ್ಲಿ ಕಲ್ಕತ್ತಾದ ವೆಲ್ಲಿಂಗ್ಟನ್‌ ಸ್ಕ್ವೇರ್‌ನಲ್ಲಿ ಮಜ್ದೂರ್‌ ರ್ಯಾಲಿ ಆಯೋಜಿಸುವ ಜಗಜೀವನ್‌ ರಾಮ್‌ ಅವರನ್ನು ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಗುರುತಿಸುತ್ತಾರೆ. 1931 ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಬಿಎಸ್‌ಸಿ ಪದವಿ ಪಡೆದುಕೊಳ್ಳುತ್ತಾರೆ. ಆ ಕಾಲದಲ್ಲಿ ಅವರು ತಾರತಮ್ಯಗಳನ್ನು ಎತ್ತಿ ತೋರಿಸುವ ಸಮ್ಮೇಳನಗಳನ್ನು ಆಯೋಜಿಸುತ್ತಾರೆ. ಗಾಂಧೀಜಿಯವರ ಅಸ್ಪೃಶ್ಯತಾ ವಿರೋಧಿ ಚಳುವಳಿಯಲ್ಲಿ ಭಾಗವಹಿಸುತ್ತಾರೆ.

1934 ರ ಬಿಹಾರ ಭೂಕಂಪದ ಸಂದರ್ಭದಲ್ಲಿ ಅವರು ಪರಿಹಾರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತಾರೆ. 1935 ರಲ್ಲಿ ಬಂದ ಜನಪ್ರಿಯ ಆಡಳಿತ ಸುಧಾರಣಾ ಕಾಯ್ದೆಯ ಸಮಯದಲ್ಲಿ, ಬಿಹಾರದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಕುರಿತು ಅವರಿಗಿದ್ದ ಜ್ಞಾನದ ಕಾರಣದಿಂದ ಅವರ ಸಲಹೆಯನ್ನು ಪಡೆಯಲಾಗಿತ್ತು. ಕಾಂಗ್ರೆಸ್‌ ಸೇರಿದ ಅವರು ನಂತರ ಬಿಹಾರ ವಿಧಾನ ಪರಿಷತ್ತಿಗೆ ನಾಮನಿರ್ದೇಶನಗೊಳ್ಳುತ್ತಾರೆ. ನಂತರ 1937 ರಲ್ಲಿ ಬಿಹಾರ ವಿಧಾನಸಭೆಗೂ ಆಯ್ಕೆಯಾಗುತ್ತಾರೆ. ಆದರೆ, ನೀರಾವರಿ ಸೆಸ್‌ ವಿಚಾರದಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ.

1934 ರಲ್ಲಿ ಕಲ್ಕತ್ತಾದಲ್ಲಿ ದಲಿತರ ಸಮಾನ ಹಕ್ಕುಗಳಿಗೆಂದು ಅವರು ಅಖಿಲ ಭಾರತೀಯ ರವಿದಾಸ ಮಹಾಸಭಾ ಮತ್ತು ಆಲ್‌ ಇಂಡಿಯಾ ಡಿಪ್ರಸ್ಡ್‌ ಕ್ಲಾಸ್‌ ಲೀಗ್‌ ಸಂಘಟನೆಗಳನ್ನು ಸ್ಥಾಪಿಸುತ್ತಾರೆ. ರವಿದಾಸ ಸಮ್ಮೇಳನಗಳನ್ನು ಆಯೋಜಿಸುವ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಶೋಷಿತ ವರ್ಗಗಳನ್ನು ಒಳಗೊಳ್ಳಿಸುವ ಮೂಲಕ ಕಲ್ಕತ್ತದಾದ್ಯಂತ ರವಿದಾಸ ಜಯಂತಿಯನ್ನು ಆಚರಿಸುತ್ತಾರೆ. ದಲಿತ ನಾಯಕರು ಸಾಮಾಜಿಕ ಸುಧಾರಣೆಗಳಿಗಾಗಿ ಹೋರಾಡುವುದರ ಜೊತೆಗೆ ರಾಜಕೀಯ ಪ್ರಾತಿನಿಧ್ಯವನ್ನೂ ಗಳಿಸಬೇಕು ಎಂಬುದು ಅವರ ಯೋಚನೆಯಾಗಿತ್ತು. 1935 ಅಕ್ಟೋಬರ್‌ 19 ರಂದು ರಾಂಚಿಯ ಹ್ಯಾಂಡ್‌ ಆಯೋಗದ ಮುಂದೆ ಹಾಜರಾಗುವ ಅವರು ಮೊಟ್ಟ ಮೊದಲ ಬಾರಿಗೆ ದಲಿತರಿಗೆ ಮತದಾನದ ಹಕ್ಕನ್ನು ಆಗ್ರಹಿಸುತ್ತಾರೆ.

ಗಾಂಧೀಜಿಯವರಿಂದ ಪ್ರೇರಿತರಾಗಿದ್ದ ಜಗಜೀವನ್‌ ರಾಮ್‌ ಸ್ವಾತಂತ್ರ್ಯ ಹೋರಾಟದಲ್ಲಿ ಕೂಡ ನಿರ್ಣಾಯಕ ಪಾತ್ರ ವಹಿಸಿದ್ದರು. 1940 ಡಿಸೆಂಬರ್‌ 10 ಮತ್ತು 1942 ಆಗಸ್ಟ್‌ 19 ರಂದು ಕ್ವಿಟ್‌ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ ಕಾರಣಕ್ಕೆ ಅವರನ್ನು ಬಂಧಿಸಲಾಗಿತ್ತು.

1946 ರಲ್ಲಿ ಭಾರತದ ಸಂವಿಧಾನ ರಚನಾ ಸಭೆಗೆ ಅವರು ಅವಿರೋಧವಾಗಿ ಆಯ್ಕೆಯಾಗುತ್ತಾರೆ. ದಲಿತರ ಹಕ್ಕುಗಳಿಗಾಗಿ ಮತ್ತು ಆ ಕುರಿತ ಗಟ್ಟಿಯಾದ ಕ್ರಮಗಳಿಗಾಗಿ ಅವರು ಆಗ್ರಹಪಡಿಸುತ್ತಲೇ ಬಂದರು. 1946 ಆಗಸ್ಟ್‌ 30 ರಂದು ಮಧ್ಯಂತರ ಸರಕಾರದಲ್ಲಿ ಕಾರ್ಮಿಕ ಸಚಿವಾಲಯದ ಜವಾಬ್ದಾರಿಯನ್ನು ನಿರ್ವಹಿಸಲು ಅವರ ಬಳಿ ಕೋರಲಾಗಿತ್ತು. ಆ ಸಂಪುಟದಲ್ಲಿದ್ದ ಏಕೈಕ ದಲಿತ ಜಗಜೀವನ್‌ ರಾಮ್‌ ಮಾತ್ರವೇ ಆಗಿದ್ದರು. ಜವಾರಲಾಲ್‌ ನೆಹರೂ ಅವರ ಮಧ್ಯಂತರ ಸರಕಾರದಲ್ಲಿ ಅತ್ಯಂತ ಕಿರಿಯ ಸಚಿವ ಅವರೇ ಆಗಿದ್ದರು. ಸಂವಿಧಾನದಲ್ಲಿ ಸಾಮಾಜಿಕ ನ್ಯಾಯವನ್ನು ತರಲಾಗಿದೆ ಎಂಬುದನ್ನು ಅವರು ಖಚಿತಪಡಿಸಿಕೊಂಡರು.

ಕಾರ್ಮಿಕ ಸಚಿವರಾಗಿದ್ದುಕೊಂಡು ಹಲವು ಕಾರ್ಮಿಕರ ಕಲ್ಯಾಣ ನೀತಿಗಳಿಗೆ ಅಡಿಪಾಯ ಹಾಕಿಕೊಟ್ಟರು. 1947 ಆಗಸ್ಟ್‌ 16 ರಂದು ಜಿನೆವಾದಲ್ಲಿ ನಡೆದ ಅಂತರಾಷ್ಟ್ರೀಯ ಕಾರ್ಮಿಕ ಒಕ್ಕೂಟ (ಐಎಲ್‌ಓ) ಸಮ್ಮೇಳನದಲ್ಲಿ ಭಾಗವಹಿಸಿದ್ದರು. ನಂತರದ ಕೆಲವೇ ದಿನಗಳಲ್ಲಿ ಅವರು ಐಎಲ್‌ಓನ ಅಂತರರಾಷ್ಟ್ರೀಯ ಕಾರ್ಮಿಕ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. 1952 ರ ತನಕ ಅವರು ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅದರ ನಂತರ ಮಾಹಿತಿ ವಿನಿಮಯ (1952-56), ಸಾರಿಗೆ ಮತ್ತು ರೈಲ್ವೇ (1956-62), ಸಾರಿಗೆ ಮತ್ತು ಮಾಹಿತಿ ವಿನಿಮಯ (1962-63) ಸಚಿವರಾಗಿಯೂ ಅವರು ಸೇವೆ ಸಲ್ಲಿಸಿದ್ದರು.

ಜಗಜೀವನ್‌ ರಾಮ್‌ ದಶಕಗಳ ಕಾಲ ಕಾಮಗ್ರೆಸ್‌ ಪಕ್ಷದಲ್ಲಿದ್ದುಕೊಂಡು ಹಲವು ಸಚಿವಾಲಯಗಳನ್ನು ನಿಭಾಯಿಸಿದವರು. ಇಂದಿರಾ ಗಾಂಧಿಯವರ ಸರಕಾರದಲ್ಲಿ ಕಾರ್ಮಿಕ, ಉದ್ಯೋಗ ಮತ್ತು ಪುನರ್ವಸತಿ (1966-67) ಮತ್ತು ಕೇಂದ್ರ ಆಹಾರ ಮತ್ತು ಕೃಷಿ ಸಚಿವರಾಗಿ (1967-70) ಸೇವೆ ಸಲ್ಲಿಸಿದ್ದರು. ಆ ಕಾಲದಲ್ಲಿ ಅವರು ಹಸಿರು ಕ್ರಾಂತಿಯನ್ನು ಮುನ್ನಡೆಸಿದ್ದರು.

1969 ರಲ್ಲಿ ಕಾಂಗ್ರೆಸ್‌ ಇಬ್ಭಾಗವಾದಾಗ ಅವರು ಇಂದಿರಾ ಗಾಂಧಿಯವರ ಬಣ ಸೇರಿಕೊಂಡು ಅದರ ಅಧ್ಯಕ್ಷರೂ ಆಗುತ್ತಾರೆ. ನಂತರ ರಕ್ಷಣಾ ಸಚಿವರಾಗಿ (1970-74), ಕೃಷಿ ಮತ್ತು ನೀರಾವರಿ ಸಚಿವರಾಗಿ (1974-77) ಸೇವೆ ಸಲ್ಲಿಸುತ್ತಾರೆ. 1971 ರಲ್ಲಿ ಬಾಂಗ್ಲಾದೇಶದ ಹುಟ್ಟಿಗೆ ಕಾರಣವಾದ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

1937 ರಿಂದಲೂ ಅವರು ಕಾಂಗ್ರೆಸ್‌ ಪಕ್ಷದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲಿ ಅವರು ಹಲವು ಹುದ್ದೆಗಳನ್ನು ಅಲಂಕರಿಸಿದ್ದರು. 1940 ರಿಂದ 1977 ರವರೆಗೆ ಆಲ್‌ ಇಂಡಿಯಾ ಕಾಂಗ್ರೆಸ್‌ ಕಮಿಟಿಯ ಸದಸ್ಯರಾಗಿದ್ದರು. 1948 ರಿಂದ 1977 ರವರೆಗೆ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. ತನ್ನ ರಾಜಕೀಯ ಚತುರತೆಯ ಕಾರಣದಿಂದ ನೆಹರೂ ಮತ್ತು ಇಂದಿರಾ ಗಾಂಧಿ ಅವರಂತಹ ನಾಯಕರುಗಳ ಗೌರವಕ್ಕೆ ಪಾತ್ರರಾಗಿದ್ದರು. ದೇಶದ ಅತಿ ದೀರ್ಘ ಕಾಲದ ಕ್ಯಾಬಿನೆಟ್‌ ಸಚಿವರಾಗಿ ಸೇವೆ ಸಲ್ಲಿಸಿದ ದಾಖಲೆಯನ್ನು ಜಗಜೀವನ್‌ ರಾಮ್‌ ಹೊಂದಿದ್ದಾರೆ.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾ ಗಾಂಧಿಯವರನ್ನು ಬೆಂಬಲಿಸುತ್ತಾರಾದರೂ, 1977 ರಲ್ಲಿ ಕಾಂಗ್ರೆಸ್‌ ತೊರೆಯುತ್ತಾರೆ. ಕಾಂಗ್ರೆಸ್‌ ಫಾರ್‌ ಡೆಮಾಕ್ರಸಿ ಪಕ್ಷವನ್ನು ಸ್ಥಾಪಿಸುವ ಅವರು ಜನತಾ ಪಕ್ಷದ ಮೈತ್ರಿಕೂಟವನ್ನು ಸೇರಿಕೊಳ್ಳುತ್ತಾರೆ. ರಕ್ಷಣಾ ಮಂತ್ರಿಯಾಗಿ (1977-79) ಅವರು ಮಿಲಿಟರಿ ನೀತಿಗಳು ಮತ್ತು ಸುಧಾರಣೆಗಳ ಕಡೆಗೆ ಹೆಚ್ಚು ಗಮನ ನೀಡಿದರು. 1980 ರಲ್ಲಿ ಜನತಾ ಪಕ್ಷ ವಿಭಜನೆಯಾಗಿ ಚುನಾವಣೆ ನಡೆಯುತ್ತದೆ. ಜಗಜೀವನ್‌ ರಾಮ್‌ ಜನತಾ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ. ಆದರೆ, ಆ ಚುನಾವಣೆಯಲ್ಲಿ ಜನತಾ ಪಕ್ಷವು ಕೇವಲ 31 ಸ್ಥಾನಗಳನ್ನು ಮಾತ್ರವೇ ಪಡೆದುಕೊಳ್ಳುತ್ತದೆ. ಹತಾಶೆಗೊಳ್ಳುವ ಅವರು ದೇವರಾಜ ಅರಸರ ಕಾಂಗ್ರೆಸ್‌ (ಅರಸ್) ಬಣ‌ ಸೇರಿಕೊಳ್ಳುತ್ತಾರೆ. ಅದರ ನಂತರ 1981 ರಲ್ಲಿ ಕಾಂಗ್ರೆಸ್‌ (ಜೆ) ಸ್ಥಾಪಿಸುತ್ತಾರೆ.

1952 ರಿಂದ 1986 ರಲ್ಲಿ ಅವರು ನಿಧನರಾಗುವ ತನಕವೂ ಸಂಸತ್ತಿನಲ್ಲಿ ಬಿಹಾರದ ಸಸಾರಾಮ್‌ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಸಂಸತ್ತಿನಲ್ಲಿ 1936 ರಿಂದ 1986 ರ ತನಕದ ಅವರ ಸುದೀರ್ಘ ಹಾಜರಾತಿಯು ಒಂದು ವಿಶ್ವದಾಖಲೆಯೂ ಹೌದು.

ಅವರ ತತ್ವ ಸಿದ್ಧಾಂತಗಳನ್ನು ಪ್ರಚಾರ ಮಾಡಲೆಂದು ಭಾರತ ಸರಕಾರವು ಸಾಮಾಜಿಕ ನ್ಯಾಯ ಸಚಿವಾಲಯದಡಿಯಲ್ಲಿ ದೆಹಲಿಯಲ್ಲಿ “ಬಾಬು ಜನಜೀವನ್‌ ರಾಮ್ ಪ್ರತಿಷ್ಠಾನ”ವನ್ನು ಸ್ಥಾಪಿಸಿದೆ.

1935 ರಲ್ಲಿ ಜಗಜೀವನ್‌ ರಾಮ್‌ ಅವರು ಸ್ವಾತಂತ್ರ್ಯ ಹೋರಾಟಗಾರ್ತಿಯೂ ಶಿಕ್ಷಣ ತಜ್ಞೆಯೂ ಆಗಿದ್ದ ಇಂದ್ರಾಣಿ ದೇವಿ ಅವರನ್ನು ವಿವಾಹವಾಗುತ್ತಾರೆ. ಅವರಿಗೆ ಸುರೇಶ್‌ ಕುಮಾರ್‌ (ಜನನ 1938) ಎಂಬ ಮಗ ಮತ್ತು ಮೀರಾ ಕುಮಾರ್‌ (ಜನನ 1945) ಎಂಬ ಮಗಳಿದ್ದರು.

1986 ರಂದು ಲೋಕಸಭಾ ಸದಸ್ಯರಾಗಿ ಸೇವೆಯಲ್ಲಿದ್ದಾಗಲೇ ಬಾಬು ಜಗಜೀವನ್‌ ರಾಮ್‌ ನಿಧನರಾಗುತ್ತಾರೆ. ಅವರ ಸಮಾಧಿಯು ಸಮತಾ ಸ್ಥಳ ಎಂಬ ಸ್ಮಾರಕವಾಗಿದೆ. ಪ್ರತಿ ವರ್ಷ ಏಪ್ರಿಲ್‌ 5 ರಂದು ದೇಶವು ಅವರ ಗೌರವಾರ್ಥವಾಗಿ ಸಮತಾ ದಿನವನ್ನು ಆಚರಿಸುತ್ತದೆ.

You cannot copy content of this page

Exit mobile version