ಹಾಸನ : ಧರ್ಮಸ್ಥಳದಲ್ಲಿ ಸೌಜನ್ಯ ಕೊಲೆಯಾಗಿ ಅಕ್ಟೋಬರ್ 09 ರಂದು 13 ವರ್ಷಗಳು ಸಂದುತ್ತಿದ್ದು, ಇನ್ನೂ ನೈಜ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಮತ್ತು ಧರ್ಮಸ್ಥಳದಲ್ಲಿ ದಾಖಲಾದ ನೂರಾರು ಅಸಹಜ ಸಾವು, ಕೊಲೆ, ಅತ್ಯಾಚಾರ, ಭೂ ಹಗರಣ, ದಲಿತರಿಗೆ ಸೇರಿದ ಭೂಮಿಯ ಕಬಳಿಕೆ, ಬಡ್ಡಿ ದಂಧೆಯ ಸಂತ್ರಸ್ತರಿಗೆ ನ್ಯಾಯ ದೊರಕದ ಹಿನ್ನಲೆಯಲ್ಲಿ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯು ರಾಜ್ಯವ್ಯಾಪಿ ‘ನ್ಯಾಯಕ್ಕಾಗಿ ಜನಾಗ್ರಹ’ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು ಇದರ ಭಾಗವಾಗಿ ಹಾಸನದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಮಹವೀರ ಸರ್ಕಲ್ ಬಳಿ ಪ್ರತಿಭಟನಾ ಧರಣಿಯನ್ನು ನಡೆಸಲಾಯಿತು.
2012 ಅಕ್ಟೋಬರ್ 09 ರಂದು ಧರ್ಮಸ್ಥಳದ ಪಾಂಗಳ ನಿವಾಸಿಯಾಗಿರುವ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಿದ್ಯಾರ್ಥಿ 17 ವರ್ಷ ಪ್ರಾಯದ ಸೌಜನ್ಯ ಅತ್ಯಾಚಾರ-ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಧರ್ಮಸ್ಥಳಕ್ಕೆ ಸಂಬಂಧಪಟ್ಟ ಮೂವರು ವ್ಯಕ್ತಿಗಳು ಸಂತೋಷ್ ರಾವ್ ಎಂಬ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಪೊಲೀಸರಿಗೆ ಹಿಡಿದುಕೊಟ್ಟ ಹಿನ್ನಲೆಯಲ್ಲಿ ಪೊಲೀಸರು ಸಂತೋಷ್ ರಾವ್ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಆ ಬಳಿಕ ನೈಜ ಆರೋಪಿಗಳನ್ನು ಬಂಧಿಸಲು ನಡೆದ ತೀವ್ರ ಹೋರಾಟದ ಹಿನ್ನಲೆಯಲ್ಲಿ ಅಂದಿನ ಬಿಜೆಪಿ ಸರ್ಕಾರವು ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಬಳಿಕ 2013 ರಲ್ಲಿ ಸಿದ್ದರಾಮಯ್ಯ ಸರ್ಕಾರವು ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಸಿಬಿಐ ಕೂಡಾ ಸಂತೋಷ್ ರಾವ್ ವಿರುದ್ಧ ಚಾರ್ಜ್ಶೀಟ್ ಹಾಕಿತ್ತು. ಆದರೆ ವಿಶೇಷ ಕೋರ್ಟ್ ವಿಚಾರಣೆ ನಡೆಸಿ ‘ಪೊಲೀಸರು ನೈಜ ಆರೋಪಿಯನ್ನು ಬಂಧಿಸಿಲ್ಲ. ಸಂತೋಷ್ ರಾವ್ ಗೂ ಘಟನೆಗೂ ಸಂಬಂಧವೇ ಇಲ್ಲ. ವೈಧ್ಯಕೀಯ ವಿಧಿವಿಜ್ಞಾನ ತನಿಖೆಯೇ ಸೂಕ್ತ ರೀತಿಯಲ್ಲಿ ನಡೆದಿಲ್ಲ’ ಎಂಬ ಅರ್ಥದ ಉಲ್ಲೇಖವನ್ನು ನೀಡಿ ಸಂತೋಷ್ ರಾವ್ ರನ್ನು ಪ್ರಕರಣದಿಂದ ಖುಲಾಸೆಗೊಳಿಸಿತ್ತು. ಇದೀಗ ಸೌಜನ್ಯ ಅತ್ಯಾಚಾರ-ಕೊಲೆ ಆಗಿ 09 ಅಕ್ಟೋಬರ್ 2025 ಕ್ಕೆ 13 ವರ್ಷಗಳಾಗುತ್ತಿದೆ. ಇನ್ನೂ ಕೂಡಾ ಸೌಜನ್ಯ ಅತ್ಯಾಚಾರಿ-ಹಂತಕರಾದ ನೈಜ ಆರೋಪಿಗಳನ್ನು ಬಂಧಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈ ಹಿನ್ನಲೆಯಲ್ಲಿ ದಲಿತ, ಎಡ, ವಿದ್ಯಾರ್ಥಿ, ಯುವಜನ, ಮಹಿಳಾ, ಮಾನವ ಹಕ್ಕು ಸಂಘಟನೆಗಳ ಒಕ್ಕೂಟವಾಗಿರುವ ‘ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ’ಯು ರಾಜ್ಯಾದ್ಯಂತ ನ್ಯಾಯಕ್ಕಾಗಿ ಜನಾಗ್ರಹ ಕಾರ್ಯಕ್ರಮದ ಅಂಗವಾಗಿ ಹಾಸನದಲ್ಲಿಯೂ ಪ್ರತಿಭಟನಾ ಧರಣಿ ನಡೆಸಲಾಯಿತು ಈ ಧರಣಿಯಲ್ಲಿ ಹೋರಾಟಗಾರರಾದ ಧರ್ಮೇಶ್ , ಸಾಹಿತಿ ರೂಪ ಹಾಸನ್, ಸಿಐಟಿಯು ಅರವಿಂದ್ ಪುಷ್ಟಾ ಎಂ.ಬಿ ಸಾಹಿತಿ ಜ.ನಾ ತೇಜಶ್ರಿ, ಮಮತಾಶಿವು, ರಮೇಶ್ ಹಾಸನ್, ವಿವೇಕ್ ಮಧು ಇನ್ನತರು ಉಪಸ್ಥಿತರಿದ್ದರು.