Home ವಿದೇಶ ಹಾರ್ಮುಜ್ ಜಲಸಂಧಿ ಮತ್ತೆ ಬಂದ್: ಲೆಬನಾನ್ ಮೇಲೆ ದಾಳಿ ಮುಂದುವರಿದರೆ ಒಪ್ಪಂದದಿಂದ ಹೊರಬರುವುದಾಗಿ ಇರಾನ್ ಎಚ್ಚರಿಕೆ

ಹಾರ್ಮುಜ್ ಜಲಸಂಧಿ ಮತ್ತೆ ಬಂದ್: ಲೆಬನಾನ್ ಮೇಲೆ ದಾಳಿ ಮುಂದುವರಿದರೆ ಒಪ್ಪಂದದಿಂದ ಹೊರಬರುವುದಾಗಿ ಇರಾನ್ ಎಚ್ಚರಿಕೆ

0

ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಪಶ್ಚಿಮ ಏಷ್ಯಾದಲ್ಲಿ ಮತ್ತೆ ಉದ್ವಿಗ್ನತೆ ಮಿತಿಮೀರಿದೆ. ಬುಧವಾರ ಇರಾನ್ ಸರ್ಕಾರವು ಹಾರ್ಮುಜ್ ಜಲಸಂಧಿಯನ್ನು (Strait of Hormuz) ಮತ್ತೆ ಮುಚ್ಚಿದ್ದು, ಹಡಗುಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಇದರೊಂದಿಗೆ, “ಲೆಬನಾನ್ ಮೇಲೆ ಇಸ್ರೇಲ್ ತನ್ನ ದಾಳಿಯನ್ನು ನಿಲ್ಲಿಸದಿದ್ದರೆ ಅಮೆರಿಕ ಜೊತೆಗಿನ ಕದನ ವಿರಾಮ ಒಪ್ಪಂದದಿಂದ ಹೊರಬರುವುದಾಗಿ” ಇರಾನ್ ಕಠಿಣ ಎಚ್ಚರಿಕೆ ನೀಡಿದೆ.

ರಾಯಿಟರ್ಸ್ ಸುದ್ದಿಸಂಸ್ಥೆಯ ವರದಿಯ ಪ್ರಕಾರ, ಇರಾನ್ ನೌಕಾಪಡೆಯು ಜಲಸಂಧಿಯಲ್ಲಿ ಸಾಗುತ್ತಿದ್ದ ಹಡಗುಗಳಿಗೆ ಸಂಚಾರ ಸ್ಥಗಿತಗೊಳಿಸುವಂತೆ ನೋಟಿಸ್ ನೀಡಿದೆ. ಇದರಿಂದಾಗಿ ಹಲವಾರು ಸರಕು ಸಾಗಣೆ ಹಡಗುಗಳು ಮತ್ತು ತೈಲ ಟ್ಯಾಂಕರ್‌ಗಳು ಸಮುದ್ರದ ಮಧ್ಯದಲ್ಲೇ ಸಿಲುಕಿಕೊಂಡಿವೆ. ಕದನ ವಿರಾಮದ ಪ್ರಮುಖ ಷರತ್ತೇ ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡುವುದು ಎಂದಿದ್ದ ಟ್ರಂಪ್ ಆಡಳಿತಕ್ಕೆ ಇದು ಭಾರಿ ಹಿನ್ನಡೆಯಾಗಿದೆ.

ಈ ಸಂಘರ್ಷಕ್ಕೆ ಮುಖ್ಯ ಕಾರಣವೆಂದರೆ ಕದನ ವಿರಾಮದ ವ್ಯಾಪ್ತಿ. ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಇರಾನ್ ಜೊತೆಗಿನ ಒಪ್ಪಂದವನ್ನು ಸಮರ್ಥಿಸಿಕೊಂಡಿದ್ದರೂ, ಇಸ್ರೇಲ್ ಮಾತ್ರ “ಲೆಬನಾನ್‌ನಲ್ಲಿರುವ ಹಿಜ್ಬೊಲ್ಲಾ ಉಗ್ರರ ವಿರುದ್ಧದ ನಮ್ಮ ಕಾರ್ಯಾಚರಣೆ ಮುಂದುವರಿಯಲಿದೆ, ಈ ಕದನ ವಿರಾಮ ಲೆಬನಾನ್‌ಗೆ ಅನ್ವಯಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದೆ. ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಕೂಡ “ಲೆಬನಾನ್ ಈ ಒಪ್ಪಂದದ ಭಾಗವಲ್ಲ” ಎಂದು ದೃಢಪಡಿಸಿರುವುದು ಇರಾನ್ ಅನ್ನು ಕೆರಳಿಸಿದೆ.

ಪರಿಸ್ಥಿತಿ ಕೈಮೀರುತ್ತಿರುವ ಹಿನ್ನೆಲೆಯಲ್ಲಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು ಮಧ್ಯಸ್ಥಿಕೆ ವಹಿಸಿದ್ದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರಿಗೆ ಬುಧವಾರ ಫೋನ್ ಮಾಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಇರಾನ್ ಮತ್ತು ಲೆಬನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ಸತತ ದಾಳಿಗಳು ಕದನ ವಿರಾಮದ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇಸ್ರೇಲ್ ಅನ್ನು ನಿಯಂತ್ರಿಸದಿದ್ದರೆ ತಾವು ಒಪ್ಪಂದದಿಂದ ಹಿಂದೆ ಸರಿಯುವುದು ಅನಿವಾರ್ಯ ಎಂದು ಅರಾಗ್ಚಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾರ್ಮುಜ್ ಬಂದ್ ಆಗಿರುವುದರಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಮತ್ತೆ ಆತಂಕ ಮನೆಮಾಡಿದೆ.

You cannot copy content of this page

Exit mobile version