ಬೆಂಗಳೂರು: ಶಿಕ್ಷಕರ ನೇಮಕಾತಿಯಲ್ಲಿನ ಅವ್ಯವಹಾರಗಳ ಕುರಿತು ತನಿಖೆ ನಡೆಸುತ್ತಿರುವ ಕರ್ನಾಟಕದ ಅಪರಾಧ ತನಿಖಾ ಇಲಾಖೆಯು(ಸಿಐಡಿ) ನಾಲ್ಕು ಜಿಲ್ಲೆಗಳ 51 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ 38 ಜನ ಶಿಕ್ಷಕರನ್ನು ಬಂಧಿಸಿದೆ.
2012-13 ಹಾಗೂ 2014-15ನೇ ಸಾಲಿನ ಶಿಕ್ಷಕರ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಎರಡು ತಿಂಗಳ ಹಿಂದೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ದೂರು ನೀಡಿದ್ದು, ದೂರಿನ ಮೇರೆಗೆ ಸಿಐಡಿ ಬುಧವಾರ ಶಿಕ್ಷಕರ ಮೇಲೆ ದಾಳಿ ನಡೆಸಿದೆ.
ಪ್ರಕರಣದ ಗಂಭೀರತೆಯನ್ನು ಗಮನಿಸಿ ಕರ್ನಾಟಕ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿದೆ. ನಂತರ ತನಿಖೆ ಆರಂಭದಲ್ಲಿ ಸಿಐಡಿ ತಂಡ 22 ಜನರನ್ನು ಬಂಧಿಸಿದೆ. ಆದರೆ ಅಕ್ರಮವಾಗಿ ಕೆಲಸ ಪಡೆದ ಇನ್ನೂ ಕೆಲವು ಶಿಕ್ಷಕರಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ(ಡಿಪಿಐ) ತನ್ನ ವರದಿಯಲ್ಲಿ ತಿಳಿಸಿದೆ.
ದೂರಿನ ಮೇರೆಗೆ ಸಿಐಡಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿ ಕೋಲಾರದಿಂದ 24, ಬೆಂಗಳೂರು ದಕ್ಷಿಣದಿಂದ ಐವರು, ಚಿಕ್ಕಬಳ್ಳಾಪುರದಿಂದ ಮೂವರು ಮತ್ತು ಚಿತ್ರದುರ್ಗದಿಂದ ಐವರನ್ನು ಸೇರಿ ಒಟ್ಟು 38 ಜನ ಶಿಕ್ಷಕರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.