Home ಅಂಕಣ ಭಾರತದಲ್ಲಿ ವೈಜ್ಞಾನಿಕತೆ ಜೀವಂತವಿದೆಯೇ?

ಭಾರತದಲ್ಲಿ ವೈಜ್ಞಾನಿಕತೆ ಜೀವಂತವಿದೆಯೇ?

0
ವೈಜ್ಞಾನಿಕ ಚಿಂತನೆ ಮತ್ತು ಅದನ್ನು ಪಾಲಿಸುವುದು ಒಂದು ಸಮಾಜದ ಬೌದ್ಧಿಕ ಪ್ರಗತಿಯನ್ನು ರೂಪಿಸುವ ಪ್ರಮುಖ ಅಂಶವಾಗಿದೆ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ, ವೈಜ್ಞಾನಿಕ ಮನೋಭಾವ, ಧಾರ್ಮಿಕ ಮೌಲ್ಯಗಳು, ಸಂಸ್ಕೃತಿಯ ಪ್ರಭಾವ ಮತ್ತು ರಾಜಕೀಯ ಒತ್ತಡಗಳ ನಡುವೆ ತೊಳಲಾಡುತ್ತಿದೆ. "Are We Indians Scientific? Nope" ಎಂಬ ಕುನಾಲ್ ಕಮ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ಖ್ಯಾತ ವಿಜ್ಞಾನಿ ಹಾಗೂ ಸಾಹಿತಿ ಗೌಹರ್ ರಾಝಾ ಈ ಗಂಭೀರ ವಿಷಯದ ಬಗ್ಗೆ ಮಾತನಾಡಿದ್ದಾರೆ. ಇದರ ಸಾರಾಂಶವನ್ನು ಇಲ್ಲಿ ನೀಡಲಾಗಿದೆ

ವೈಜ್ಞಾನಿಕ ಚಿಂತನೆ ಎಂದರೇನು?
ವೈಜ್ಞಾನಿಕ ಚಿಂತನೆ ಎನ್ನುವುದು ಕೇವಲ ಪ್ರಯೋಗಾಲಯಗಳಲ್ಲಿ ನಡೆಯುವ ವಿಜ್ಞಾನಿಗಳ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿ ಪ್ರಶ್ನೆ ಮಾಡುವ, ಪುರಾವೆಗಳ ಆಧಾರದ ಮೇಲೆ ನಂಬಿಕೆಗಳನ್ನು ಕಟ್ಟುವ, ಮತ್ತು ತಪ್ಪುಗಳನ್ನು ಗುರುತಿಸಿ ಸರಿ ಮಾಡುವ ಒಂದು ಸಾಮರ್ಥ್ಯ. ವೈಜ್ಞಾನಿಕ ಮನೋಭಾವವು ಮಕ್ಕಳಲ್ಲಿ ಹುಟ್ಟುವ, “ನಕ್ಷತ್ರಗಳು ಏಕೆ ಹೊಳೆಯುತ್ತವೆ?”, “ನಾವು ಎಲ್ಲಿಂದ ಬಂದೆವು?” ಮೊದಲಾದ ಪ್ರಶ್ನೆಗಳಿಂದ ಆರಂಭವಾಗುತ್ತದೆ.

ವೈಜ್ಞಾನಿಕ ಚಿಂತನೆಯ ಪಥ
ವಿಜ್ಞಾನ ಎಂದರೆ ಪ್ರಶ್ನೆಗಳೊಂದಿಗೆ ಆರಂಭವಾಗುವ ಪ್ರಯಾಣ. “ಹೇಗೇ?” ಎಂಬ ಪ್ರಶ್ನೆಯೇ ವೈಜ್ಞಾನಿಕ ಚಿಂತನೆಯ ಮೊದಲ ಹೆಜ್ಜೆ. ಇದು “ಏಕೆ?” ಎಂಬ ಧಾರ್ಮಿಕ ಅಥವಾ ತತ್ತ್ವಶಾಸ್ತ್ರೀಯ ಪ್ರಶ್ನೆಗಿಂತ ಭಿನ್ನವಾಗಿದೆ. “ಏಕೆ?” ಎಂಬ ಮತೀಯವಾದದ ಪ್ರಶ್ನೆ ದೇವರೇ ಕಾರಣ ಎಂಬಲ್ಲಿಗೆ ಅವಸಾನವಾಗುತ್ತದೆ. ಆದರೆ “ಹೇಗೇ?” ಎಂಬ ವಿಜ್ಞಾನ ಪ್ರಶ್ನೆ ಪ್ರತೀ ಬಾರಿ ಉತ್ತರಗಳನ್ನು ಕಂಡುಕೊಳ್ಳುತ್ತಾ, ಹಳೆಯ ಉತ್ತರ ತಿರಸ್ಕಾರವಾಗಿ ಹೊಸ ಉತ್ತರದೊಂದಿಗೆ ನವೀನವಾಗುತ್ತಾ ಹೋಗುತ್ತದೆ.

ಧರ್ಮ ತನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸಾವಿರಾರು ವರ್ಷಗಳ ಹಿಂದೆ ಬರೆದ ಓಟ್‌ಡೇಟೆಡ್‌ ಪುಸ್ತಕದ ಮೊರೆ ಹೋದರೆ, ವಿಜ್ಞಾನಕ್ಕೆ ನಿನ್ನೆಯ ದಿನ ಬಂದ ವೈಜ್ಞಾನಿಕ ಸಂಶೋಧನೆಯೇ ಮುಖ್ಯವಾಗುತ್ತದೆ.

ಹಾಗಾಗಿ, ಹಳೆಯ ನಂಬಿಕೆಗಳನ್ನು ಪ್ರಶ್ನಿಸುವವರ ಕೊಲೆಯಾಗಬಹುದು, ಮನೆಗಳಿಗೆ ಬೆಂಕಿ ಬೀಳಬಹುದು. ಸಂಪ್ರದಾಯವಾದಿಗಳಿಂದ ಈ ಜಗತ್ತಿನಲ್ಲಿ ರಕ್ತ ಹರಿದಿದೆಯೇ ಹೊರತು, ವಿಜ್ಞಾನಿಗಳಿಂದಲ್ಲ.

ತಮ್ಮ ನಂಬಿಕೆ ಶ್ರೇಷ್ಟ ಎಂದು ಸಾಬೀತು ಮಾಡಲು ಅವರು ಇನ್ನೊಂದು ಧರ್ಮವನ್ನು ನಿಸ್ಕೃಷ್ಟ ಎಂದು ತೋರಿಸಬೇಕು. ಹಾಗಾಗಿ, ಇನ್ನೊಂದು ಧರ್ಮ ಇಲ್ಲದೇ ಒಂದು ಧರ್ಮಕ್ಕೆ ಮೇಲು-ಕೀಳು ಅಸ್ತಿತ್ವವೇ ಇರುವುದಿಲ್ಲ. ಹಾಗಾಗಿ, ಪರಸ್ಪರ ಧರ್ಮಗಳು ಕಾದಾಡಿ ಜನರ ರಕ್ತ ಹರಿಸುತ್ತವೆ.

ಧರ್ಮದಲ್ಲಿ ಹಳೆಯ ನಂಬಿಕೆ ಸುಳ್ಳು ಎಂದು ಸಾಬೀತು ಆದರೆ ಅಲ್ಲಿ ಒಂದು ಕೊಲೆಯಾಗುತ್ತದೆ, ಜನ ದೊಂಬಿ ಏಳುತ್ತಾರೆ. ಆದರೆ ವಿಜ್ಞಾನದಲ್ಲಿ ಹಳೆಯ ಥಿಯೆರಿಗಳು ಸರಿ ಇಲ್ಲ ಎಂದು ಸಾಬೀತಾಗಿ, ಹೊಸ ಥಿಯೆರಿ ಬಂದಾಗ ವಿಜ್ಞಾನಿಗಳು ಸಂಭ್ರಮಿಸುತ್ತಾರೆ, ಆ ಹೊಸ ಅನ್ವೇಷಣೆಗಾಗಿ ನೋಬೆಲ್‌ನಂತಹ ಪ್ರಶಸ್ತಿಗಳು ಸಿಗುತ್ತವೆ.

ಉದಾಹರಣೆಗೆ, ನ್ಯೂಟನ್‌ನ ಗುರುತ್ವಾಕರ್ಷಣ ಸಿದ್ಧಾಂತವನ್ನು ಐನ್‌ಸ್ಟೈನ್ ಪ್ರಶ್ನಿಸಿದರು. ಥಿಯೆರಿ ಆಫ್‌ ರಿಲೇಟಿವಿಟಿಯನ್ನು ತಂದರು. ನ್ಯೂಟನ್‌ನ ಚಲನೆಯ ನಿಯಮಗಳ ಬಗ್ಗೆ ಐನ್‌ಸ್ಟೈನ್ ಎತ್ತಿದ ಈ ಪ್ರಶ್ನೆಯೇ ವಿಜ್ಞಾನವನ್ನು ಮುಂದಕ್ಕೆ ಕೊಂಡೊಯ್ತು.

ಆದರೆ, “ಓ… ಐನ್‌ಸ್ಟೈನ್ ನಮ್ಮ ನ್ಯೂಟನ್ನರ ವಾದವನ್ನು ಸರಿ ಇಲ್ಲ ಎಂದರು!” ಎಂದು ನ್ಯೂಟನ್‌ನನ್ನು ಒಪ್ಪುವ ಜನರ ಗ್ಯಾಂಗ್‌ ಐನ್‌ಸ್ಟೈನ್ ಮನೆಗೆ ಹೋಗಿ ಕಲ್ಲುಹೊಡೆಯಲಿಲ್ಲ. ಆದರೆ ಧರ್ಮದಲ್ಲಿ ಹಳೆಯ ನಂಬಿಕೆಯನ್ನು ಪ್ರಶ್ನಿಸುವುದೇ ಅಪರಾಧ!

ವೈಜ್ಞಾನಿಕತೆ ಮತ್ತು ಧರ್ಮದ ನಡುವಿನ ಸಂಘರ್ಷ
ಭಾರತೀಯ ಸಮಾಜದಲ್ಲೂ ಪ್ರಶ್ನೆಗಳನ್ನು ಎತ್ತುವ ಸಂಸ್ಕೃತಿ ಇತ್ತು. ಗೌಹರ್ ರಾಝಾ ಅವರು ಭಾರತದ ತತ್ತ್ವಶಾಸ್ತ್ರದ ವಿಚಾರವಾಗಿ ಚಾರ್ವಾಕ ಮತ್ತು ಬುದ್ಧನ ಉಲ್ಲೇಖ ಮಾಡುತ್ತಾರೆ. ಚಾರ್ವಾಕನು “ಇಂದ್ರಿಯಗಳಿಗೆ ಗೋಚರವಾಗದ್ದನ್ನು ನಂಬಬೇಡಿ” ಎಂದು ಹೇಳಿದ. ಬುದ್ಧನು “ಯಾರಾದರೂ ಹೇಳಿದ್ದು ನಿಜವೆಂದು ನಂಬಬೇಡಿ, ಮೊದಲು ಆಲೋಚಿಸಿ, ಪರೀಕ್ಷಿಸಿ, ಆಮೇಲೆ ನಂಬಿ, ಅದನ್ನು ಜನರ ಒಳಿತಿಗಾಗಿ ಬಳಸಿ,” ಎಂದು ಬೋಧಿಸಿದ. ಈ ಎರಡು ದೃಷ್ಠಿಕೋನಗಳೂ ವೈಜ್ಞಾನಿಕ ಚಿಂತನೆಗೆ ಗಟ್ಟಿತನವನ್ನು ನೀಡುತ್ತವೆ.

ಗೌಹರ್ ರಾಝಾ ಅವರು ಋಗ್ವೇದದ ಹತ್ತನೆಯ ಮಂಡಲದಲ್ಲಿ ಉಕ್ತವಾಗಿರುವ 179 ನೇ ಸೂಕ್ತವಾದ ನಾಸದೀಯ ಸೂಕ್ತವನ್ನು ಈ ವಿವೇಚನಾ ಸಂಸ್ಕೃತಿಯ ಬಗ್ಗೆ ಮಾತನಾಡಲು ಬಳಸುತ್ತಾರೆ.

“ಜಗತ್ತಿನ ಸೃಷ್ಟಿಯ ರಹಸ್ಯವನ್ನು ಯಾರು ತಿಳಿದವರು ಎಂಬ ಪ್ರಶ್ನೆಯನ್ನು ಇದರಲ್ಲಿ ಎತ್ತಿಕೊಳ್ಳುತ್ತಾರೆ.  ಆ ರಹಸ್ಯವನ್ನು ನಿಜವಾಗಿ ಬಲ್ಲವರು ಯಾರೆಂಬ ಸಂಶಯ ಬಂದಾಗ, ದೇವತೆಗಳು ಇರಬಹುದೇ ಎಂಬ ಸಂಶಯ ಬರುತ್ತದೆ. ಆದರೆ, ದೇವತೆಗಳು ಸೃಷ್ಟಿಯ ನಂತರ ಬಂದವರಾದ್ದರಿಂದ ಅವರಿಗೂ ಇದು ತಿಳಿದಿಲ್ಲ.”

ನಾಸದೀಯ ಸೂಕ್ತದ ಈ ಪ್ರಶ್ನೋತ್ತರವು ಮನುಷ್ಯನ ವಿವೇಚನಾ ಶಕ್ತಿಯೇ ಆಗಿದೆ. ಆದರೆ ಕಾಲ ಕಳೆದಂತೆ ಪ್ರಶ್ನಿಸುವುದನ್ನು ಧರ್ಮಗಳು ಘನಘೋರ ಅಪರಾಧವಾಗಿ ಕಂಡವು, ಈಗಲೂ ಕಾಣುತ್ತಿದ್ದಾವೆ.

ಆದರೆ, ನಾವು ಭಯಯಿಂದ, ನಂಬಿಕೆಗಳಿಂದ, ಮತ್ತು ಅಜ್ಞಾನದ ಮೂಲಕ ನಮ್ಮ ಮುಂದಿನ ತಲೆಮಾರಿಗೆ ಇಂತಹ ಪರಂಪರೆಯ ಬದಲು ಯಾವುದನ್ನು ಕೊಡಲು ಹೊರಟಿದ್ದೇವೆ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕಾಗಿದೆ.

ಭಾರತೀಯ ಸಮಾಜದಲ್ಲಿ ಧಾರ್ಮಿಕ ನಂಬಿಕೆಗಳು ವೈಜ್ಞಾನಿಕ ಸತ್ಯಗಳೊಂದಿಗೆ ಡಿಕ್ಕಿ ಹೊಡೆಯುವ ಹಲವಾರು ಉದಾಹರಣೆಗಳು ನಮಗೆ ಕಾಣಸಿಗುತ್ತವೆ. ಕೆಲವೊಮ್ಮೆ ಪುರಾತನ ಶಾಸ್ತ್ರಗಳಲ್ಲಿ, ಧರ್ಮಗ್ರಂಥಗಳಲ್ಲಿ ಉಲ್ಲೇಖಿತವಾದ ವಿಚಾರಗಳನ್ನು ವೈಜ್ಞಾನಿಕ ಎಂದು ಘೋಷಿಸುವ ಪ್ರಯತ್ನಗಳು ನಡೆಯುತ್ತವೆ — ಉದಾಹರಣೆಗೆ, ಪ್ಲಾಸ್ಟಿಕ್ ಸರ್ಜರಿ ಪ್ರಾಚೀನ ಭಾರತದಲ್ಲೇ ಇದ್ದಿತೆಂಬ ಅರ್ಥಹೀನ ಹೇಳಿಕೆಗಳು. ಈ ರೀತಿಯ ‘ಸುಳ್ಳು ವಾದ’ಗಳು ಸಮಾಜದಲ್ಲಿ ವೈಜ್ಞಾನಿಕತೆಯ ನಿಜವಾದ ಅರ್ಥವನ್ನು ನಾಶ ಮಾಡುತ್ತಿವೆ. ಸ್ವತಃ ಪ್ರಧಾನಿ ಮೋದಿಯವರು ಗಣಪತಿಯನ್ನು ಪ್ಲಾಸ್ಟಿಕ್‌ ಸರ್ಜರಿಯಿಂದ ಹುಟ್ಟಿದವನು ಎಂದು ಹೇಳಿದರು. ಆದರೆ ಕುಲಶಾಸ್ತ್ರೀಯವಾಗಿ, ಧಾರ್ಮಿಕ ಪಠ್ಯಗಳಲ್ಲಿ ಈ ಆನೆ ತಲೆಗೆ ಬೇರೆಯೇ ಅರ್ಥಗಳು ಇವೆ. ಮೋದಿಯವರ ಹೇಳಿಕೆಯಿಂದ ವಿಜ್ಞಾನಕ್ಕೆ ಮಾತ್ರ ಅವಮಾನವಲ್ಲ, ಗಣಪತಿಗೂ ಅವಮಾನ ಆಯ್ತು.

ಶಿಕ್ಷಣ ವ್ಯವಸ್ಥೆಯಲ್ಲಿ ವೈಜ್ಞಾನಿಕ ಚಿಂತನೆಯ ಕೊರತೆ

ಭಾರತದ ಶೈಕ್ಷಣಿಕ ವ್ಯವಸ್ಥೆಯಲ್ಲಿ ವೈಜ್ಞಾನಿಕ ಮನೋಭಾವಕ್ಕೆ ಸಾಕಷ್ಟು ಪ್ರಾಧಾನ್ಯತೆ ನೀಡಲಾಗುತ್ತಿಲ್ಲ.  ವಿದ್ಯಾರ್ಥಿಗಳು ಪರೀಕ್ಷೆ ಪಾಸ್ ಆಗುವುದು ಮುಖ್ಯ ಎಂಬ ಒತ್ತಡವನ್ನು ಸೃಷ್ಟಿಸಿಕೊಂಡಿರುವುದರಿಂದ, ಪ್ರಶ್ನೆಗಳನ್ನು ಕೇಳುವ ಸಂಸ್ಕೃತಿಕ ಕಮ್ಮಿಯಾಗುತ್ತಿದೆ. “ನೀವು ಪ್ರಶ್ನೆ ಕೇಳದಿದ್ದರೆ, ನೀವು ಮತ್ತೆ ಮನುಷ್ಯನಿಂದ ಪ್ರಾಣಿಯೆ ಆಗುತ್ತೀರಿ,” ಎಂದು ಗೌಹರ್ ರಾಝಾ ಈ ಬಗ್ಗೆ ತೀವ್ರವಾಗಿ ಚಿಂತೆ ವ್ಯಕ್ತಪಡಿಸುತ್ತಾರೆ.

ನಮ್ಮ ಪಠ್ಯಪುಸ್ತಕಗಳಿಂದ ಡಾರ್ವಿನ್‌ನ ವಿಕಾಸವಾದವನ್ನು ತೆಗೆದುಹಾಕಲಾಗಿದೆ. ಸರಿ, ಆ ವಾದದ ಬಗ್ಗೆ ಇನ್ನೂ ವಿವಾದಗಳಿಗೆ, ಒಪ್ಪೋಣ. ಆದರೆ ಆವರ್ತಕ ಕೋಷ್ಟಕ (ಪೀರಿಯಾಡಿಕ್‌ ಟೇಬಲ್‌) ವನ್ನೂ ತೆಗೆದುಹಾಕಿದ್ದಾರೆ. ಯಾಕೆ?

ಯಾಕೆಂದರೆ, ಇದನ್ನು ಓದಿದ ಮಕ್ಕಳು ಬಾಬಾ-ಸ್ವಾಮಿಗಳು ಸೃಷ್ಟಿಯ ಬಗ್ಗೆ ನೀಡುವ ಅವೈಜ್ಞಾನಿಕ, ಸುಳ್ಳು ಪ್ರವಚನಗಳನ್ನು ಪ್ರಶ್ನಿಸದೇ ಇರಲೆಂದು! ಅವರು ಈ ಭೂಮಿ ಪಂಚಭೂತಗಳಿಂದ ಆಗಿದೆ ಎಂದು ಇಂದಿಗೂ ನಂಬುತ್ತಾರೆ, ಆದರೆ ಮ್ಯಾಂಡಲೀವನ ಆವರ್ತಕ ಕೋಷ್ಟಕವು ಇಲ್ಲಿಯ ವರೆಗೆ ಪತ್ತೆಯಾಗಿರುವ 119 ಅಂಶಗಳಿವೆ, ಇವುಗಳಿಂದ ಸೃಷ್ಟಿ ಆಗಿದೆ ಎಂದು ಹೇಳುತ್ತದೆ.

ಬಾಬಾಗಳು-ಮುಲ್ಲಾಗಳು-ಸ್ವಾಮಿಗಳು ಅವರ ಅಂಗಡಿಯ ಬಾಗಿಲು ಪರ್ಮನೆಂಟಾಗಿ ಮುಚ್ಚುವುದನ್ನು ತಡೆಯಲು ಅವರ ಕೈಯಲ್ಲಿರುವ ಸರ್ಕಾರ ಈ ಪೀರಿಯಾಡಿಕ್‌ ಟೇಬಲ್‌ನಂತರ ಮಹತ್ವದ ಪಾಠಗಳನ್ನು ವಿಜ್ಞಾನದ ಪಾಠಪುಸ್ತಕಗಳಿಂದ ಕಿತ್ತುಹಾಕಿದೆ.

ತಂತ್ರಜ್ಞಾನ ಮತ್ತು ವಿಜ್ಞಾನ — ಸ್ಪಷ್ಟ ಭಿನ್ನತೆ
ತಂತ್ರಜ್ಞಾನವನ್ನು ಅಳವಡಿಸಿಕೊಂಡು, ವೈಜ್ಞಾನಿಕತೆಯನ್ನು ನಿರಾಕರಿಸುವ ಒಂದು ವಿಚಿತ್ರ ಪ್ರವೃತ್ತಿ ಭಾರತದಲ್ಲಿ ಕಾಣಸಿಗುತ್ತದೆ. ಮುಲ್ಲಾಗಳು ಅಥವಾ ಸ್ವಾಮಿಗಳ ಪ್ರವಚನಗಳಲ್ಲಿ ವೈಜ್ಞಾನಿಕ ಸಾಧನೆಗಳ ಕುರಿತಾಗಿ ತಾತ್ವಿಕ ವಿರೋಧ ಕಂಡುಬರುತ್ತದೆ.

ಸಂಪ್ರದಾಯವಾದಿಗಳಿಗೆ ತಂತ್ರಜ್ಞಾನ ಬೇಕು, ವಿಜ್ಞಾನ ಬೇಡ. ವಿಜ್ಞಾನ ಒಂದು ಅರಿವು, ತಂತ್ರಜ್ಞಾನ ಎಂಬುದು ಆ ಅರಿವನ್ನು ಬಳಸಿಕೊಂಡು ಮಾನವೇಂದ್ರಿಯಗಳ ಅನುಕೂಲಕ್ಕೆ ಸಾಧನಗಳನ್ನು ಉತ್ಪಾಸಿಸುವ ಕ್ಷೇತ್ರ ಅಷ್ಟೇ. ಹಾಗಾಗಿ, ಬಾಬಾ- ಮುಲ್ಲಾಗಳಿಗೆ ತಂತ್ರಜ್ಞಾನದಿಂದ ಹುಟ್ಟಿದ ಸಾಧನಗಳು ಬೇಕು, ಆದರೆ ವಿಜ್ಞಾನ ಬೇಡ. ವಿಜ್ಞಾನ ಅವರು ಕೊಡುವ ಧಾರ್ಮಿಕ ಪ್ರವಚನಕ್ಕೆ ಸವಾಲನ್ನು ಒಡ್ಡುತ್ತದೆ.

ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಜನರು, ಮುಖ್ಯವಾಗಿ ಸ್ತ್ರೀಯರು, ಫೋಟೋ ತೆಗೆಸಿಕೊಳ್ಳುವುದನ್ನು, ಟಿವಿ ನೋಡುವುದನ್ನು, ವಿಡಿಯೋ ಮಾಡುವುದನ್ನು ನಿಷೇಧಿಸಿದರು. ಆದರೆ ಅದೇ ತಾಲಿಬಾನಿ ನಾಯಕರು ಕ್ಯಾಮರಾದ ಮುಂದೆ ಬಂದು ಪತ್ರಿಕಾಗೋಷ್ಟಿ ನಡೆಸುತ್ತಾರೆ. ಇದು ತಂತ್ರಜ್ಞಾನ ಎಂಬ ವಿಜ್ಞಾನದ ಕೂಸು ಮತೀಯವಾದಿಗಳ ಕೈಗೆ ಬಂದರೆ ಏನಾಗುತ್ತದೆ ಎಂಬುದನ್ನು ತೋರಿಸುತ್ತದೆ.

ಈ ನಿಖರ ವ್ಯತ್ಯಾಸವನ್ನು ತಿಳಿಯದಿದ್ದರೆ, ನಾವು ವೈಜ್ಞಾನಿಕ ಮನೋಭಾವವನ್ನು ಶ್ರದ್ದೆ ಅಥವಾ ಭಕ್ತಿಯನ್ನು ಇಟ್ಟು ಗೊಂದಲಕ್ಕೊಳಗಾಗುತ್ತೇವೆ.

ವೈಜ್ಞಾನಿಕತೆಯ ರಾಜಕೀಯಕರಣ
ವೈಜ್ಞಾನಿಕ ವಿಚಾರಗಳನ್ನು ರಾಜಕೀಯ ಲಾಭಕ್ಕಾಗಿ ಬಳಸುವ ಅಥವಾ ನಿರಾಕರಿಸುವ ಉದಾಹರಣೆಗಳು ಹೆಚ್ಚುತ್ತಿರುವ ಈ ಕಾಲದಲ್ಲಿ, ವಿಜ್ಞಾನಿಗಳ ಧ್ವನಿಯನ್ನು ಹತ್ತಿಕ್ಕುವ ಅಪಾಯವಿದೆ. ಗೌಹರ್ ರಾಝಾ ಈ ಬಗ್ಗೆ, “ಇದು ರಾಜಕೀಯಕ್ಕಾಗಿ ವೈಜ್ಞಾನಿಕ ಸತ್ಯವನ್ನು ಬಳಕೆ ಮಾಡುವುದು” ಎಂದು ಎಚ್ಚರಿಕೆ ನೀಡುತ್ತಾರೆ.

ವೈಜ್ಞಾನಿಕ ಶಕ್ತಿ ಮತ್ತು ಪ್ರಗತಿಯ ಪರಿಪೂರ್ಣ ಸಂಬಂಧ
ವೈಜ್ಞಾನಿಕ ಮನೋಭಾವವು ಒಂದು ರಾಷ್ಟ್ರದ ಪ್ರಗತಿಯ ಮೂಲ ಆಧಾರವಾಗಿದೆ. ತಂತ್ರಜ್ಞಾನ ಅಭಿವೃದ್ಧಿಯ ಹಿಂದೆ ಇರುವ ವಿಜ್ಞಾನಕ್ಕೆ ಮಾನ್ಯತೆ ನೀಡದೆ ಕೇವಲ ಅದರಿಂದ ಉತ್ಪಾದಿಸಲ್ಪಟ್ಟ ಸಾಧನೆಗಳನ್ನು  ಸಂಭ್ರಮಿಸುವ ನಕಲಿ ರಾಷ್ಟ್ರೀಯತೆಯು ಯಾವುದೇ ಹೊಸ ಸಂಶೋಧನೆಗೆ ದಾರಿ ಮಾಡಿಕೊಡದು.

ಈ ಪಾಡ್‌ಕಾಸ್ಟ್‌ನಲ್ಲಿ ಕುನಾಲ್‌ ಕಾಮ್ರಾ ಅವರು ಗೌಹರ್ ರಾಝಾ ಅವರೊಂದಿಗೆ ಸುದೀರ್ಘ ಮತ್ತು ಆಳವಾದ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ವೈಜ್ಞಾನಿಕತೆ ಹೇಗೆ ಧರ್ಮ, ರಾಜಕೀಯ ಮತ್ತು ಶಿಕ್ಷಣದೊಂದಿಗೆ ಸಂಘರ್ಷ ಮಾಡಿದೆ ಎಂಬುದರ ಮೇಲೆ ಅವರು ಬೆಳಕು ಚೆಲ್ಲುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ — “ಪ್ರಶ್ನೆಗಳು ತಪ್ಪಾಗುವುದಿಲ್ಲ, ಉತ್ತರಗಳು ತಪ್ಪಾಗಬಹುದು.”

ಕುನಾಲ್‌ ಕಾಮ್ರಾ ಮತ್ತು ಗೌಹರ್‌ ರಾಝಾ ಅವರ ಸಂವಾದವನ್ನು ವೀಕ್ಷಿಸಲು: Are We 🇮🇳 Indians Scientific? | Nope ft. Gauhar Raza | Episode 001


You cannot copy content of this page

Exit mobile version