ಗಾಜಾದಲ್ಲಿ ಇಸ್ರೇಲ್ ಭೀಕರ ವಾಯುದಾಳಿಗಳನ್ನು ನಡೆಸಿದೆ. ಇತ್ತೀಚೆಗೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ 100ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ಟೈನ್ ಆರೋಗ್ಯ ಸಚಿವಾಲಯದ ವಕ್ತಾರ ಜಹೆರ್ ಅಲ್-ವಾಹಿದಿ ಹೇಳಿದ್ದಾರೆ.
ಇಸ್ರೇಲಿ ಸೇನೆಯ ದಾಳಿಗೆ ಸಂಬಂಧಿಸಿದಂತೆ, ಗಾಜಾದ ತುಫಾದಲ್ಲಿರುವ ಶಾಲೆಯಿಂದ 14 ಮಕ್ಕಳು ಮತ್ತು 5 ಮಹಿಳೆಯರ ಶವಗಳು ಪತ್ತೆಯಾಗಿವೆ. ಗಾಯಗೊಂಡ 70 ಜನರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.
ಹಮಾಸ್ ಮೇಲೆ ಒತ್ತಡ ಹೇರಿ ಅದನ್ನು ಗಾಜಾದಿಂದ ಓಡಿಸುವುದು ಇಂತಹ ಕ್ರಮ ಕೈಗೊಳ್ಳುವ ಉದ್ದೇಶ ಎಂಬುದು ಇಸ್ರೇಲ್‌ನ ಸ್ಪಷ್ಟ ದೃಷ್ಟಿಕೋನ. ಇತ್ತೀಚೆಗೆ, ಇಸ್ರೇಲಿ ಸೇನೆಯು ಉತ್ತರ ಗಾಜಾದ ಕೆಲವು ಭಾಗಗಳಲ್ಲಿ ವಾಸಿಸುವ ಜನರಿಗೆ ಒಂದು ಅಂತಿಮ ಎಚ್ಚರಿಕೆಯನ್ನು ನೀಡಿತ್ತು ಮತ್ತು ಆ ಪ್ರದೇಶವನ್ನು ಖಾಲಿ ಮಾಡುವಂತೆ ಆದೇಶಿಸಿತ್ತು.
ಗಾಝಾದಲ್ಲಿ ಸುಮಾರು 2 ತಿಂಗಳ ಕದನ ವಿರಾಮ ಒಪ್ಪಂದವನ್ನು ಮುರಿದಿದ್ದ ಇಸ್ರೇಲ್ ಮಾರ್ಚ್ ಮಧ್ಯಭಾಗದಲ್ಲಿ ಗಾಝಾದಲ್ಲಿ ಭೂ ಕಾರ್ಯಾಚರಣೆ ಮರು ಆರಂಭಿಸಿದೆ. ಗಾಝಾದಲ್ಲಿ ಇನ್ನೂ ಬಂಧನದಲ್ಲಿರುವ 59 ಒತ್ತೆಯಾಳುಗಳನ್ನು ಕರೆತರಲು ಮಿಲಿಟರಿ ಒತ್ತಡ ಪ್ರಯೋಗ ಅತ್ಯುತ್ತಮ ಮಾರ್ಗ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.