Home ಅಂಕಣ ಹುಟ್ಟುಹಬ್ಬ, ಕಾನೂನು ಸಮರ ಮತ್ತು ಖುಲಾಸೆ: ಒಂದು ಸುಳ್ಳು ಮತಾಂತರ ಕಥೆ

ಹುಟ್ಟುಹಬ್ಬ, ಕಾನೂನು ಸಮರ ಮತ್ತು ಖುಲಾಸೆ: ಒಂದು ಸುಳ್ಳು ಮತಾಂತರ ಕಥೆ

0

ಭಜರಂಗದಳ ದಾಖಲಿಸಿದ್ದ ಎಫ್‌ಐಆರ್ ಕಾನೂನುಬಾಹಿರವೆಂದು ನ್ಯಾಯಾಲಯ ಪರಿಗಣಿಸುತ್ತದೆ.
ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಜಾರ್ಖಂಡ್‌ಗಳಲ್ಲಿ ಬಿಜೆಪಿ ಸರ್ಕಾರಗಳು ಜಾರಿಗೆ ತಂದ ಮತಾಂತರ ನಿಷೇಧ ಕಾನೂನಿನಡಿಯಲ್ಲಿ ಸುಳ್ಳು ಆರೋಪ ಹೊರಿಸಿ ಕಾನೂನು ಹೋರಾಟಗಳಲ್ಲಿ ಗೆದ್ದ ಜನರ ಕುರಿತಾದ ಓಮರ್ ರಷೀದ್ ಬರೆದ ವರದಿಗಳ ಸರಣಿಯಲ್ಲಿ ಇದು ಮೂರನೇ ಲೇಖನವಾಗಿದೆ.

ಭಾಗ 1 | ತಪ್ಪದೇ ಓದಿ

ಭಾಗ 2 | ತಪ್ಪದೇ ಓದಿ

ನವದೆಹಲಿ: ಅಂದು ಮಗುವಿನ ಹುಟ್ಟುಹಬ್ಬವನ್ನು ಆಚರಿಸುವ ಸಲುವಾಗಿ ಒಂದು ಪ್ರಾರ್ಥನಾ ಸೇವೆಯನ್ನು ನಡೆಸಲು ಅವರೆಲ್ಲ ತೀರ್ಮಾನಿಸಿದ್ದರು. ಆದರೆ ನಡೆದದ್ದು ಮಾತ್ರ ಬೇರೆ. ಉತ್ತರ ಪ್ರದೇಶದ ಮತಾಂತರ ನಿಷೇಧ ಕಾನೂನಿಡಿಯಲ್ಲಿ ಮೂವರು ದಲಿತರು ಜೈಲು ಸೇರಿದ್ದರು.

ಅವರಲ್ಲಿ ಒಬ್ಬರು 41 ವರ್ಷ ದುರ್ಗಾ ಪ್ರಸಾದ್(ಹೆಸರು ಬದಲಿಸಿದೆ). ಬಡ ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಿದ ಆರೋಪದ ಮೇಲೆ ಪಶ್ಚಿಮ ಯುಪಿಯ ಅಮ್ರೋಹಾ ನಿವಾಸಿ ದುರ್ಗಾ ಪ್ರಸಾದ್ ಮತ್ತು ಇತರ ಇಬ್ಬರನ್ನು ಫೆಬ್ರವರಿ 2023ರಲ್ಲಿ ಬಂಧಿಸಲಾಗುತ್ತದೆ. ವಿವಾದಾತ್ಮಕ ತೀವ್ರ ಹಿಂದುತ್ವ ಸಂಘಟನೆಯಾದ ಬಜರಂಗದಳದ ಸದಸ್ಯರೊಬ್ಬರು ದಾಖಲಿಸಿದ ದೂರಿನ ಮೇರೆಗೆ ಅವರ ಬಂಧನ ನಡೆಯುತ್ತದೆ. ಉತ್ತರ ಪ್ರದೇಶದಲ್ಲಿ 2020ರಲ್ಲಿ ಜಾರಿಗೆ ಬಂದ ಅಕ್ರಮ ಮತಾಂತರ ನಿಷೇಧವೆಂಬ ಹೊಸ ಕಾನೂನಿನಡಿಯಲ್ಲಿ 2022ರಲ್ಲಿ ಮೊದಲ ಶಿಕ್ಷೆ ಘೋಷಣೆಯಾಗುವುದು ಕೂಡ ಇದೇ ಅಮ್ರೋಹಾದಲ್ಲಿ. ತನ್ನ ಧಾರ್ಮಿಕ ಹಿನ್ನೆಲೆಯನ್ನು ಮುಚ್ಚಿಟ್ಟುಕೊಂಡು ಸುಳ್ಳು ಹೆಸರಿನಲ್ಲಿ ಹಿಂದೂ ಹುಡುಗಿಯನ್ನು ಮದುವೆಯಾಗಲು ಪ್ರಯತ್ನಿಸಿದ್ದ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಪ್ರಸಾದ್ ಮತ್ತು ಇತರ ಇಬ್ಬರ ವಿರುದ್ಧ ಬಜರಂಗ ದಳ ಕಾರ್ಯಕರ್ತ ಕುಶಾಲ್ ಚೌಧರಿ ನೀಡಿದ ದೂರು ಕ್ಷಲ್ಲಕ ಮತ್ತು ಅಸ್ಪಷ್ಟ ಆರೋಪಗಳಿಂದ ಕೂಡಿತ್ತು. ಆದರೆ ಪೊಲೀಸರಿಗೆ ಎಫ್‌ಐಆರ್‌ ದಾಖಲಿಸಲು ಆ ದೂರ ಧಾರಾಳವಾಗಿ ಸಾಕಾಗಿತ್ತು. ಕೊನೆಗೆ ಜಾತವ್ ದಲಿತ ಸಮುದಾಯಕ್ಕೆ ಸೇರಿದ ಆ ಮೂವರೂ ಎಲ್ಲಾ ಆರೋಪಗಳಿಂದ ದೋಷಮುಕ್ತರಾಗುತ್ತಾರೆ. ಆದರೆ ಅದಕ್ಕಾಗಿ ಅವರು 21 ತಿಂಗಳ ಕಾಲ ಅನಿಶ್ಚಿತ ಕಾನೂನು ಹೋರಾಟವನ್ನು ನಡೆಸಬೇಕಾಗಿ ಬಂದಿತ್ತು. ಕಳೆದ ವರ್ಷ, ಅಮ್ರೋಹಾದ ನ್ಯಾಯಾಲಯವು ಅವರ ವಿರುದ್ಧದ ಅಕ್ರಮ ಮತಾಂತರದ ಆರೋಪಗಳನ್ನು ತಳ್ಳಿ ಹಾಕಿತ್ತು. ಅದರ ಜೊತೆಗೆ ಚೌಧರಿಗೆ ಬೆದರಿಕೆ ಹಾಕಿದ ಆರೋಪದಿಂದಲೂ ಅವರನ್ನು ಖುಲಾಸೆಗೊಳಿಸಿತ್ತು.

ಹುಟ್ಟುಹಬ್ಬದ ಸಂಭ್ರಮದಲ್ಲಿ ಗಲಭೆ
ಆ ದಿನ ಫೆಬ್ರವರಿ 20, 2023. ದುರ್ಗಾ ಪ್ರಸಾದ್ ತಮ್ಮ ಗೆಳೆಯ ಶಿವಕುಮಾರ್ ಜೊತೆಗೆ ಸ್ಥಳೀಯ ನಿವಾಸಿ ಆಜಾದ್ ಸಿಂಗ್ ಅವರ ಮನೆಗೆ ಪ್ರಾರ್ಥನಾ ಸೇವೆಗಾಗಿ ಬಂದಿದ್ದರು. “ನಾವು ಆಜಾದ್ ಅವರ ಮನೆಯಲ್ಲಿ ನಡೆದ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಲು ಬಂದಿದ್ದೆವು. ಇದೆಲ್ಲ ನಡೆಯುವಾಗ ನಾವು ಊಟ ಮಾಡಿ ಹೊರಡುತ್ತಿದ್ದೆವು” ಎಂದು ದುರ್ಗಾ ಪ್ರಸಾದ್ ದಿ ವೈರ್‌ಗೆ ತಿಳಿಸಿದರು.

ಬಜರಂಗದಳಕ್ಕೆ ಸೇರಿದ ಬಲಪಂಥೀಯ ಕಾರ್ಯಕರ್ತರು ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ನುಗ್ಗಿ ಗಲಭೆ ಸೃಷ್ಟಿಸಿದ್ದರು. ನೆರೆಹೊರೆಯ ಬಡ ಹಿಂದೂಗಳಿಗೆ ಆಮಿಷಗಳನ್ನು ಒಡ್ಡುವ ಮೂಲಕ ಮತ್ತು ದಾರಿ ತಪ್ಪಿಸುವಂತಹ ವಿಚಾರಗಳನ್ನು ಪ್ರಚಾರ ಮಾಡುವ ಮೂಲಕ ಅವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲು ದುರ್ಗಾ ಪ್ರಸಾದ್ ಮತ್ತು ಶಿವಕುಮಾರ್ ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು. ಚೌಧರಿಯ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗುತ್ತದೆ. ಮೂವರ ಮೇಲೆ ಉತ್ತರ ಪ್ರದೇಶ ಅಕ್ರಮ ಮತಾಂತರ ನಿಷೇಧ ಕಾಯ್ದೆ, 2021ರ ಸೆಕ್ಷನ್ 3 ಮತ್ತು 5 (1) ರ ಅಡಿಯಲ್ಲಿ ಪ್ರಕರಣ ದಾಖಲಾಗುತ್ತದೆ.

ಹಿಂದೂಗಳಾಗಿದ್ದು ಕೂಡ ಯೇಸುವಿನ ಪ್ರಾರ್ಥನಾ ಸಭೆಗಳು, ಹಬ್ಬಗಳು ಮತ್ತು ಆಚರಣೆಗಳಲ್ಲಿ ಭಾಗವಹಿಸುವುದು ದೇಶದ ಬಹುತೇಕ ಕಡೆಗಳಲ್ಲಿ ಸಾಮಾನ್ಯ ಸಂಗತಿ. ಇಂತಹ ಜನರಲ್ಲಿ ಹೆಚ್ಚಿನವರು ಅಂಚಿನ ಸಮುದಾಯಗಳಿಗೆ ಸೇರಿದವರು ಎಂಬುದು ಕೂಡ ವಾಸ್ತವ. ಅಂತಹ ಜನರು ಔಪಚಾರಿಕವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವುದಿಲ್ಲ. ಆದರೆ, ಕ್ರಿಸ್ತನ ಮಹಿಮೆಯಲ್ಲಿ ನಂಬಿಕೆಯಿಡುತ್ತಾರೆ. ಹಬ್ಬಹರಿದಿನಗಳಂದು, ಭಾನುವಾರ ಮತ್ತು ಮಂಗಳವಾರಗಳಂದು ಪಾದ್ರಿಗಳನ್ನು ಮನೆಗೆ ಕರೆಸಿಕೊಂಡು ಅವರಿಂದ ಧರ್ಮೋಪದೇಶ ಮತ್ತು ಪ್ರಾರ್ಥನೆಗಳನ್ನು ನಡೆಸುತ್ತಾರೆ. ಕ್ರೈಸ್ತನೆಡೆಗೆ ಆಕರ್ಷಿತರಾಗುವ ಬಹುತೇಕ ದಲಿತರು ತಮ್ಮ ಹಿಂದೂ ಅಸ್ಮಿತೆಯನ್ನು ಬಿಟ್ಟುಕೊಡುವುದಿಲ್ಲ. ಅವರು ತಮ್ಮ ಹಿಂದೂ ದಲಿತ ಜಾತಿ ಪ್ರಮಾಣಪತ್ರಗಳನ್ನೇ ಬಳಸುತ್ತಾರೆ. ಕ್ರೈಸ್ತ ಅಥವಾ ಮುಸ್ಲಿಂ ಧರ್ಮಕ್ಕೆ ಮತಾಂತರವಾದರೆ, ಆ ಧರ್ಮಗಳಲ್ಲಿ ಸಮಾನ ಜಾತಿಗಳಲ್ಲಿದ್ದರೂ ಕೂಡ ತಮ್ಮ ಹಿಂದೂ ದಲಿತ ಮೀಸಲಾತಿ ಮತ್ತು ಇತರ ಸೌಲಭ್ಯಗಳನ್ನು ಕಳೆದುಕೊಳ್ಳುವ ಭಯದಿಂದ ಅವರು ಹಾಗೆ ಮಾಡುತ್ತಾರೆ.

2020ರಲ್ಲಿ ಬಿಜೆಪಿ ಸರ್ಕಾರವು ಮತಾಂತರದ ವಿರುದ್ಧ ಹೊಸ ಕಾನೂನನ್ನು ಜಾರಿಗೆ ತಂದ ನಂತರ ಈ ಸಂಕೀರ್ಣ ಧಾರ್ಮಿಕ ನಂಬಿಕೆಯನ್ನು ಬಲಪಂಥೀಯ ಕಾರ್ಯಕರ್ತರು ವ್ಯಾಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಈ “ಮೂರನೇ ಶಕ್ತಿಗಳು” ತಾವು ಯಾವ ರೀತಿಯ ತೊಂದರೆಯನ್ನು ಅನುಭವಿಸಿಲ್ಲದಿದ್ದರೂ ಕೂಡ ಬಲವಂತವಾಗಿ ಮಧ್ಯಪ್ರವೇಶಿಸಿ ಈ ಕಾಯ್ದೆಯ ಅಡಿಯಲ್ಲಿ ಕಾನೂನುಬಾಹಿರವಾಗಿ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ.

ಅಮ್ರೋಹಾದ ಬಚ್ರಾವನ್ ಪ್ರದೇಶದ ಧಾಕಿಯಾ ಗ್ರಾಮದ ನಿವಾಸಿ ಚೌಧರಿ, ಫೆಬ್ರವರಿ 20, 2023ರಂದು ತಾನು ಶಹಾಪುರ್ ರಾಜೇಡಾ ಗ್ರಾಮದಲ್ಲಿ ಅಭಿಷೇಕ್ ಮತ್ತು ಗೌರವ್ ಎಂಬ ಇಬ್ಬರು ಸ್ನೇಹಿತರ ಜೊತೆಗೆ ತನ್ನ ಸಂಬಂಧಿಕರ ಮನೆಗೆ ತೆರಳಿದ್ದೆ ಎಂದು ತಮ್ಮ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾನೆ. ಪ್ರಸಾದ್ ಮತ್ತು ಕುಮಾರ್ ಅವರ ಹೆಸರುಗಳನ್ನು ಉಲ್ಲೇಖಿಸಿ, “ಕೆಲವು ಕ್ರಿಶ್ಚಿಯನ್ ಮಿಷನರಿಗಳು” ಆಜಾದ್ ಸಿಂಗ್ ಎಂಬವರ ಮನೆಯಲ್ಲಿ “ಚಂಗಾಯಿ ಪ್ರಾರ್ಥನೆ” ಅಥವಾ ಚಿಕಿತ್ಸಕ ಪ್ರಾರ್ಥನಾ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ಆತ ಆರೋಪಿಸಿದ್ದ. ಸಹಜ ಕುತೂಹಲದಿಂದ ಅವರ ಮನೆಯ ಅಂಗಳಕ್ಕೆ ತೆರಳಿದಾಗ ಹಸನ್‌ಪುರದ ಚರ್ಚ್‌ನಿಂದ ಬಂದಿದ್ದ ದುರ್ಗಾ ಪ್ರಸಾದ್ ಮತ್ತು ಶಿವಕುಮಾರ್ ಎಂಬಿಬ್ಬರು ಅಲ್ಲಿನ ಕೆಲವು ಜನರನ್ನು ಹಿಂದೂ ಧರ್ಮ ತ್ಯಜಿಸುವಂತೆ ಪ್ರೇರೇಪಿಸುತ್ತಿರುವುದನ್ನು ಕಂಡೆ ಎಂದು ಚೌದರಿ ಹೇಳುತ್ತಾನೆ. ಅವರಿಬ್ಬರು ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ಪ್ರೇರೇಪಿಸುತ್ತಿದ್ದರು. ಅವರು ನಂಬಿಕೆಯಿಟ್ಟು “ಇಸಾ ಮಸೀಹನ ಸೇವೆಯಲ್ಲಿ ನಿರತರಾದರೆ”, ಸಂಘಟನೆಯು ಅವರಿಗೆ ಎಲ್ಲಾ ರೀತಿಯ ಆರ್ಥಿಕ ಮತ್ತು ಸಾಮಾಜಿಕ ಸಹಾಯವನ್ನು ಒದಗಿಸುತ್ತದೆಯೆಂದೂ ಅವರ ಮಕ್ಕಳ ಶಿಕ್ಷಣ, ಆರೋಗ್ಯ ಸೇವೆ ಮತ್ತು ಅವರಿಗೆ ಉದ್ಯೋಗವನ್ನು ಒದಗಿಸುತ್ತದೆ ಎಂದೂ ಭರವಸೆ ನೀಡುತ್ತಿದ್ದರು ಎಂಬುದು ಚೌಧರಿಯ ಆರೋಪ. “ಇಸಾ ಮಸೀಹ ಅವರ ಎಲ್ಲಾ ಕಾಯಿಲೆಗಳನ್ನು ಗುಣಪಡಿಸುತ್ತಾನೆ ಮತ್ತು ಅವರ ನೋವುಗಳಿಂದ ಪರಿಹಾರ ನೀಡುತ್ತಾನೆ ಎಂದು ಅವರು ಅಲ್ಲಿದ್ದ ಜನರಿಗೆ ಹೇಳುತ್ತಿದ್ದರು” ಎಂದು ಚೌಧರಿ ಹೇಳುತ್ತಾನೆ.

ಹಿಂದೂಗಳನ್ನು ಮತಾಂತರಿಸಲು ಪ್ರಯತ್ನಿಸುತ್ತಿದ್ದಾಗ ತಾನು ಅವರನ್ನು ತಡೆಯಲು ಪ್ರಯತ್ನಿಸಿದೆ. ಆಗ ಅವರು ತನಗೆ ಬೆದರಿಕೆ ಹಾಕಿದರು ಎಂಬ ಚೌಧರಿಯ ಆರೋಪದ ಮೇಲೆ, ಈ ಮೂವರ ವಿರುದ್ಧ ಕ್ರಿಮಿನಲ್ ಬೆದರಿಕೆಯ ಆರೋಪವನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506ರ ಪ್ರಕಾರ ಹೆಚ್ಚುವರಿಯಾಗಿ ದಾಖಲಿಸಲಾಗುತ್ತದೆ. ಹತ್ತಿರತ್ತಿರ ಎರಡು ವಾರಗಳ ಜೈಲು ವಾಸದ ನಂತರ ದುರ್ಗಾ ಪ್ರಸಾದ್ ಮತ್ತು ಶಿವಕುಮಾರ್ ಜಾಮೀನಿನ ಮೇಲೆ ಬಿಡುಗಡೆಯಾಗುತ್ತಾರೆ. ಕಾರ್ಯಕ್ರಮ ಏರ್ಪಡಿಸಿದ್ದ ಸಿಂಗ್‌ ಅವರು ಆರು ವಾರಗಳ ನಂತರ ಜಾಮೀನಿನ ಮೇಲೆ ಹೊರ ಬರುತ್ತಾರೆ.

ಹುಟ್ಟುಹಬ್ಬದ ಪಾರ್ಟಿ ನಡೆಯುತ್ತಿದ್ದಾಗ ಸಿಂಗ್ ಅವರ ನೆರೆಮನೆಯ ಕುಡುಕನೊಬ್ಬ ತನಗೆ ಮದ್ಯ ಕೊಡಿಸುವಂತೆ ಕೇಳಿಕೊಂಡಿದ್ದ. ಅದರ ನಂತರವೇ ಇಷ್ಟೆಲ್ಲ ರಾದ್ಧಾಂತ ನಡೆಯಿತು ಎಂದು ಪ್ರಸಾದ್‌ ನೆನೆಯುತ್ತಾರೆ. ಆ ಬೇಡಿಕೆಯನ್ನು ನಿರಾಕರಿಸಿದಾಗ ಅಲ್ಲಿ ಸಣ್ಣದೊಂದು ವಾಗ್ವಾದ ನಡೆಯುತ್ತದೆ. “ನಂತರ ಆ ವ್ಯಕ್ತಿ ಹೋಗಿ ಬಜರಂಗದಳದ ಯಾರನ್ನೋ ಕರೆದುಕೊಂಡು ಬಂದರು, ನಮ್ಮ ಮೇಲೆ ಪ್ರಕರಣ ದಾಖಲಿಸಿದರು” ಎಂದು ದುರ್ಗಾ ಪ್ರಸಾದ್ ಹೇಳುತ್ತಾರೆ.

ಬಲಪಂಥೀಯ ಕಾರ್ಯಕರ್ತರಿಗೆ ತಮ್ಮ ಪ್ರಾರ್ಥನಾ ಸಭೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಮೊದಲೇ ತಿಳಿದಿದ್ದರಿಂದ, ಈ ಗಲಾಟೆಯು ಮತಾಂತರದ ಸುಳ್ಳು ಆರೋಪಗಳನ್ನು ದಾಖಲಿಸಲು ಅವರಿಗೊಂದು ಅವಕಾಶವನ್ನು ಸೃಷ್ಟಿಸಿತು ಎಂದು ದುರ್ಗಾ ಪ್ರಸಾದ್ ಭಾವಿಸುತ್ತಾರೆ. ಈ ಘಟನೆ ನಡೆಯುವಾಗ ಹನಸ್‌ಪುರದ ಒಂದು ಚರ್ಚಿನಲ್ಲಿ ಶಾಲೆಯನ್ನು ನಡೆಸುತ್ತಾ ಪ್ರಾರ್ಥನೆಗಳನ್ನು ನೋಡಿಕೊಳ್ಳುತ್ತಿದ್ದ ಪ್ರಸಾದ್‌ “ಅವರು ಹೊಂಚು ಹಾಕಿ ದಾಳಿ ಮಾಡಲು ಕಾಯುತ್ತಿದ್ದರು” ಎಂದು ಹೇಳುತ್ತಾರೆ.

ಪ್ರಕರಣವನ್ನು ರದ್ದುಗೊಳಿಸದ ಹೈಕೋರ್ಟ್
ಈ ಮೂವರು ವ್ಯಕ್ತಿಗಳು ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರುತ್ತಾರೆ. ತಮ್ಮ ಮೇಲಿನ ಆರೋಪಪಟ್ಟಿ ಮತ್ತು ಜನವರಿ 1, 2024ರ ಸಮನ್ಸ್ ಆದೇಶ ಸೇರಿದಂತೆ ತಮ್ಮ ಮೇಲಿನ ಪ್ರಕರಣದ ಸಂಪೂರ್ಣ ವಿಚಾರಣೆಯನ್ನು ರದ್ದುಗೊಳಿಸುವಂತೆ ಅವರು ಕೋರಿಕೊಳ್ಳುತ್ತಾರೆ. ಪ್ರಕರಣವು ಹೆಚ್ಚುವರಿ ಸಿಜೆಎಂ ಮುಂದೆ ವಿಚಾರಣೆಯಲ್ಲಿರುವ ಹಂತದಲ್ಲಿ ಫೆಬ್ರವರಿ 13, 2024ರಂದು ದೂರುದಾರರೊಂದಿಗೆ ತಾವು ರಾಜಿ ಮಾಡಿಕೊಂಡಿದ್ದೇವೆ ಎಂದು ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸುತ್ತಾರೆ.

ಮಾರ್ಚ್ 2024ರಲ್ಲಿ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಅವರ ಪೀಠವು ಈ ಮೂವರ ಅರ್ಜಿಯನ್ನು ಅನರ್ಹವೆಂದು ಪರಿಗಣಿಸಿ ವಜಾಗೊಳಿಸುತ್ತದೆ. “ದಾಖಲೆಗಳನ್ನು ಪರಿಶೀಲಿಸಿದರೆ ಆ ಪ್ರದೇಶದ ಜನರನ್ನು ಕಾನೂನುಬಾಹಿರ ಮತಾಂತರಗೊಳಿಸುವಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆಂದು ಕಾಣುತ್ತದೆ. ಇದು ಸಾಮಾಜಿಕ ಅಪರಾಧವಾಗಿದೆ. ಹಾಗಾಗಿ ಇಲ್ಲಿ ರಾಜಿ ಮಾಡಿಕೊಳ್ಳಲಾಗುವುದಿಲ್ಲ” ಎಂದು ನ್ಯಾಯಾಧೀಶರು ಅಭಿಪ್ರಾಯ ಪಡುತ್ತಾರೆ. ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮುಂದುವರಿದು, “ರಾಜಿ ಮಾಡಿಕೊಂಡ ಆಧಾರದ ಮೇಲೆ ಅರ್ಜಿದಾರರಿಗೆ ಯಾವುದೇ ಕ್ಷಮೆ ನೀಡಲು ಇಲ್ಲಿ ನನಗೆ ಸಕಾರಣ ಕಾಣಿಸುತ್ತಿಲ್ಲ. ಆದ್ದರಿಂದ, ಪ್ರಸ್ತುತ ಅರ್ಜಿಯು ವಜಾಗೊಳಿಸಲು ಅರ್ಹವಾಗಿದೆ” ಎಂದು ಹೇಳುತ್ತಾರೆ.

ಇದರ ನಡುವೆ, ಈ ಮೂವರು ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣವನ್ನು ಕೈಬಿಡುವಂತೆ ಸಿಆರ್‌ಪಿಸಿ ಸೆಕ್ಷನ್ 227ರ ಅಡಿಯಲ್ಲಿ ಅರ್ಜಿ ಸಲ್ಲಿಸುತ್ತಾರೆ. ತಮ್ಮ ಮೇಲಿನ ಪ್ರಕರಣಕ್ಕೆ ಯಾವುದೇ ಆಧಾರವಿಲ್ಲ ಎಂದು ಅವರು ಬಲವಾಗಿ ನಂಬಿದ್ದರು. ಚೌಧರಿ ರಾಜಕೀಯವಾಗಿ ಸಕ್ರಿಯ ವ್ಯಕ್ತಿಯಾಗಿದ್ದು, ರಾಜಕೀಯ ಲಾಭಕ್ಕಾಗಿ ತಮ್ಮ ಮೇಲೆ ವಿನಾಕಾರಣ ಆರೋಪ ಹೊರಿಸಿದ್ದಾರೆ ಎಂದು ಅವರು ಮೂವರೂ ನ್ಯಾಯಾಲಯದಲ್ಲಿ ವಾದಿಸುತ್ತಾರೆ. ತಾವುಗಳು ಜಾತವ್ ಎಂಬ ದಲಿತ ಜಾತಿಗೆ ಸೇರಿದವರು ಮತ್ತು ತಮ್ಮನ್ನು ಕ್ರಿಶ್ಚಿಯನ್ನರು ಎಂದು ತಪ್ಪಾಗಿ ಕರೆಯುತ್ತಿದ್ದಾರೆ ಎಂದು ಅವರು ನ್ಯಾಯಾಲಯದ ಮುಂದೆ ತೋರಿಸಿಕೊಡುತ್ತಾರೆ. 2021ರ ಕಾಯ್ದೆಯ ಸೆಕ್ಷನ್ 4 “ಯಾವುದೇ ನೊಂದ ವ್ಯಕ್ತಿ, ಅಥವಾ ಅವನ/ಳ ಪೋಷಕರು, ಸಹೋದರ, ಸಹೋದರಿ ಅಥವಾ ರಕ್ತಸಂಬಂಧ, ಮದುವೆ ಅಥವಾ ದತ್ತು ಸ್ವೀಕಾರದ ಮೂಲಕ ಅವನಿ/ಳಿಗೆ ಸಂಬಂಧಿಸಿದ ಯಾವುದೇ ವ್ಯಕ್ತಿ” ಮಾತ್ರವೇ ದೂರು ದಾಖಲಿಸಲು ಅರ್ಹರೆಂದು ಹೇಳಲಾಗಿರುವುದರಿಂದ, ಚೌಧರಿ ದಾಖಲಿಸಿರುವ ಎಫ್‌ಐಆರ್ ಬಗ್ಗೆ ಅವರು ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸುತ್ತಾರೆ.

ಆದರೆ ಸರ್ಕಾರಿ ವಕೀಲರು ಅವರ ಅರ್ಜಿಯನ್ನು ವಿರೋಧಿಸುತ್ತಾರೆ. ಚೌಧರಿಗೆ ದೂರು ದಾಖಲಿಸಲು ಇರುವ ಹಕ್ಕನ್ನು ಸಮರ್ಥಿಸಿಕೊಳ್ಳುತ್ತಾರೆ. ಆರೋಪಿಗಳು ಬಹುಸಂಖ್ಯಾತ ಸಮುದಾಯದ ಜನರನ್ನು ಮತಾಂತರಿಸಲು ಆಮಿಷಗಳನ್ನು ಒಡ್ಡಿರುವ ಕಾರಣದಿಂದ ಯಾರು ಬೇಕಾದರೂ ದೂರು ದಾಖಲಿಸಬಹುದು ಎಂದು ವಕೀಲರು ವಾದಿಸುತ್ತಾರೆ.

ಜುಲೈ 10, 2024ರಂದು, ಅಮ್ರೋಹಾದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಂಜಯ್ ಚೌಧರಿ ಅವರು ದುರ್ಗಾ ಪ್ರಸಾದ್ ಮತ್ತು ಇತರರ ಪರವಾಗಿ ತೀರ್ಪು ನೀಡುತ್ತಾರೆ. ಕಾನೂನಿನ ಪ್ರಕಾರ ಈ ಮೂವರ ವಿರುದ್ಧದ ಆರೋಪಗಳು ಸಮರ್ಥನೀಯವಲ್ಲ ಎಂದು ನ್ಯಾಯಾಧೀಶ ಸಂಜಯ್‌ ಚೌಧರಿ ತೀರ್ಮಾನಿಸುತ್ತಾರೆ. ಅವರ ವಿರುದ್ಧ ಸಲ್ಲಿಸಲಾದ ಆರೋಪಪಟ್ಟಿಯು “ಕಾನೂನುಬಾಹಿರ ಎಫ್‌ಐಆರ್” ಅನ್ನು ಆಧರಿಸಿದೆ ಎಂದೂ ನ್ಯಾಯಾಧೀಶರು ಬೊಟ್ಟು ಮಾಡುತ್ತಾರೆ. ಚೌಧರಿಗೆ ಮತಾಂತರಗೊಳ್ಳಲು ಆಮಿಷ ಒಡ್ಡಲಾಗಿತ್ತು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲವೆಂದೂ ಚೌದರಿಯನ್ನು ಆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು ಎಂಬುದಕ್ಕೂ ಸಾಕ್ಷಿಯಿಲ್ಲವೆಂದು ನ್ಯಾಯಾಲಯ ಕಂಡುಕೊಳ್ಳುತ್ತದೆ.

‘ಮೂರನೇ ವ್ಯಕ್ತಿಯ’ ದೂರುಗಳ ಬಗ್ಗೆ ಸ್ಪಷ್ಟ ಕಾನೂನು
ನ್ಯಾಯಾಧೀಶ ಸಂಜಯ್‌ ಚೌಧರಿ ಆರೋಪಿಗಳನ್ನು ಖುಲಾಸೆಗೊಳಿಸುವಾಗ, 2023ರಲ್ಲಿ ಅಲಹಾಬಾದ್ ಹೈಕೋರ್ಟ್‌ನ ಭಿನ್ನ ಪೀಠಗಳು ಮಾಡಿದ ಎರಡು ಮಹತ್ವದ ಅವಲೋಕನಗಳನ್ನು ಉಲ್ಲೇಖಿಸುತ್ತಾ, ಅನ್ಯಾಯಕ್ಕೊಳಗಾಗದ ಅಥವಾ ಅದಕ್ಕೆ ಸಂಬಂಧವಿಲ್ಲದ ವ್ಯಕ್ತಿ ಅಕ್ರಮ ಮತಾಂತರದ ವಿರುದ್ಧ ಎಫ್‌ಐಆರ್ ದಾಖಲಿಸಲು ಅನರ್ಹ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತಾರೆ. “ಮೂರನೇ ಶಕ್ತಿಗಳು” ಮಧ್ಯಪ್ರವೇಶಿಸಿ ಅಂಚಿನಲ್ಲಿರುವ ಸಮುದಾಯಗಳಿಗೆ ಸೇರಿದ ವ್ಯಕ್ತಿಗಳ ಮೇಲೆ ಇಲ್ಲದ ಆರೋಪಗಳನ್ನು ಹೊರಿಸುತ್ತಿರುವುದು ಈ ಕಾನೂನಿನ ಬಗ್ಗೆ ಇರುವ ಪ್ರಮುಖ ವಿವಾದವಾಗಿ ಮುಂದುವರಿದಿದೆ.

ಫೆಬ್ರವರಿ 17, 2023ರಂದು, ನ್ಯಾಯಮೂರ್ತಿಗಳಾದ ಅಂಜನಿ ಕುಮಾರ್ ಮಿಶ್ರಾ ಮತ್ತು ಗಜೇಂದ್ರ ಕುಮಾರ್ ಅವರ ಹೈಕೋರ್ಟ್ ವಿಭಾಗೀಯ ಪೀಠವು, ಮತಾಂತರ ನಿಷೇಧ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಲ್ಪಟ್ಟ ಫತೇಪುರದ ಜೋಸ್ ಪ್ರಕಾಶ್ ಜಾರ್ಜ್ ಮತ್ತು ಇತರ 36 ಜನರು ಸಲ್ಲಿಸಿದ ಅರ್ಜಿಯನ್ನು ಆಲಿಸಿತ್ತು. ಆ ಪ್ರಕರಣದಲ್ಲಿ ಅಕ್ರಮ ಮತಾಂತರ ಅಪರಾಧದ ಅಡಿಯಲ್ಲಿ (ಸೆಕ್ಷನ್‌ 3) ಯಾರು ಎಫ್‌ಐಆರ್ ದಾಖಲಿಸಬಹುದು ಎಂಬ ಸೆಕ್ಷನ್ 4ರ ವಿವರಣೆಯು ಪರಿಪೂರ್ಣವಾಗಿದೆ ಎಂದು ವಿಭಾಗೀಯ ಪೀಠವು ತೀರ್ಪು ನೀಡಿತ್ತು. ಜಾರ್ಜ್ ಮತ್ತು ಇತರರ ವಿರುದ್ಧ ಎರಡು ಎಫ್‌ಐಆರ್‌ಗಳು ದಾಖಲಾಗಿದ್ದವು. ಮೊದಲನೆಯದು ಜನವರಿ 2023ರಲ್ಲಿ ಅಕ್ರಮ ಮತಾಂತರಕ್ಕೊಳಗಾದ ವ್ಯಕ್ತಿಯ ಆರೋಪದ ಮೇಲೆ ದಾಖಲಾದ ಪ್ರಕರಣ. ಎರಡನೆಯದು ಏಪ್ರಿಲ್ 2022ರಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತನಿಂದ ದಾಖಲಾಗಿದ್ದ ಪ್ರಕರಣ. ಈ ಎಫ್‌ಐಆರ್‌ಗಳು ಸಾಮೂಹಿಕ ಮತಾಂತರಕ್ಕೆ ಸಂಬಂಧಿಸಿದ್ದವು.

ವಿಎಚ್‌ಪಿ ಕಾರ್ಯಕರ್ತ ಎಫ್‌ಐಆರ್ ದಾಖಲಿಸಲು ಅರ್ಹನಲ್ಲವೆಂದು ನ್ಯಾಯಾಲಯ ತೀರ್ಪು ನೀಡಿತ್ತು. “ಯಾವುದೇ ನೊಂದ ವ್ಯಕ್ತಿ” ಎಂಬುದು ಅದರ ನಂತರ ಬರುವ “ಅವನ/ಳ ಪೋಷಕರು, ಸಹೋದರ, ಸಹೋದರಿಯರು ಅಥವಾ ಮದುವೆ, ದತ್ತು ಸ್ವೀಕಾರ, ರಕ್ತ ಸಂಬಂಧಗಳು ಇತ್ಯಾದಿಗಳ ಮೂಲಕ ನೊಂದ ವ್ಯಕ್ತಿಗೆ ಸಂಬಂಧಿಸಿದ ವ್ಯಕ್ತಿಗಳು” ಎಂಬ ಪದಗಳಿಂದಲೇ ಅರ್ಹತೆ ಪಡೆಯುತ್ತದೆ. “ಆದ್ದರಿಂದ, ‘ಯಾವುದೇ ನೊಂದ ವ್ಯಕ್ತಿ’ ಎಂಬ ಪದಗಳನ್ನು ಮಾತ್ರ ಪರಿಗಣಿಸಲಾಗುವುದಿಲ್ಲ. ಅದು ಅತ್ಯಂತ ವಿಶಾಲಾರ್ಥವನ್ನು ಹೊಂದಿದೆ. ಈ ಪದದ ವ್ಯಾಪ್ತಿಯನ್ನು ನಂತರ ಬರುವ ವರ್ಗೀಕರಣಗಳಿಂದ ಸ್ಪಷ್ಟಪಡಿಸಲಾಗಿದೆ. ಆದ್ದರಿಂದ, ಯಾವುದೇ ನೊಂದ ವ್ಯಕ್ತಿ ಎಂದು ಹೇಳುವಾಗ ವೈಯಕ್ತಿಕವಾಗಿ ಬಾಧಿತರಾಗಿರಬೇಕು. ಅಥವಾ ಅದು ಸಾಮೂಹಿಕ ಮತಾಂತರದ ಮೂಲಕವಾದರೂ ಆತ/ಆಕೆ ವೈಯಕ್ತಿಕವಾಗಿ ಬಾಧಿತರಾಗಿರಬೇಕು. ಇದಕ್ಕೆ ವಿರುದ್ಧವಾದ ಯಾವುದೇ ವ್ಯಾಖ್ಯಾನವು ಸೆಕ್ಷನ್ 4ರ “ಯಾವುದೇ ನೊಂದ ವ್ಯಕ್ತಿ” ಎಂಬುದರ ನಂತರ ಬರುವ ಉಳಿದ ಭಾಗವನ್ನು ಸಂಪೂರ್ಣವಾಗಿ ಅಪ್ರಸ್ತುತಗೊಳಿಸುತ್ತದೆ ಮತ್ತು ಸೆಕ್ಷನನ್ನು ಸಂಪೂರ್ಣವಾಗಿ ಅರ್ಥಹೀನಗೊಳಿಸುತ್ತದೆ” ಎಂದು ವಿಭಾಗೀಯ ಪೀಠ ಸ್ಪಷ್ಟವಾಗಿ ಹೇಳಿತ್ತು.

ಜೋಸ್ ಪಾಪಚೆನ್ ಎಂಬವರ ಮೇಲೆ ದಾಖಲಾಗಿದ್ದ ಇನ್ನೊಂದು ಪ್ರಕರಣದಲ್ಲಿ, ಸೆಪ್ಟೆಂಬರ್ 2023ರಲ್ಲಿ ನ್ಯಾಯಮೂರ್ತಿ ಶಮೀಮ್ ಅಹ್ಮದ್ ಕೂಡ ಇದೇ ವಿಷಯವನ್ನು ಸ್ಪಷ್ಟ ಪಡಿಸಿದ್ದರು. ಅಂಬೇಡ್ಕರ್ ನಗರ ಜಿಲ್ಲೆಯ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಚಂದ್ರಿಕಾ ಪ್ರಸಾದ್ ಕಾನೂನುಬಾಹಿರ ಮತಾಂತರದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದರು. ಆದರೆ ಅವರು ಹಾಗೆ ಎಫ್‌ಐಆರ್‌ ದಾಖಲಿಸಲು ಅರ್ಹ ವ್ಯಕ್ತಿಯಲ್ಲ ಎಂದು ನ್ಯಾಯಮೂರ್ತಿ ಶಮೀಮ್‌ ಅಹ್ಮದ್‌ ತೀರ್ಪು ನೀಡಿದ್ದರು. ಪಾಪಚೆನ್ ಮತ್ತು ಇನ್ನೊಬ್ಬ ಮಹಿಳೆ ಸೇರಿಕೊಂಡು, ಪ್ರಚೋದನೆ ಮತ್ತು ಆಮಿಷಗಳ ಮೂಲಕ ದಲಿತರನ್ನು ಮತಾಂತರಿಸುತ್ತಿದ್ದಾರೆ ಎಂದು ಚಂದ್ರಿಕಾ ಪ್ರಸಾದ್ ಎಫ್‌ಐಆರ್‌ನಲ್ಲಿ ಆರೋಪಿಸಿದ್ದರು. ಕಾನೂನಿನ ಸೆಕ್ಷನ್ 4ರ ಪ್ರಕಾರ ಎಫ್‌ಐಆರ್ ದಾಖಲಿಸಲು ಸದರಿ ದೂರುದಾರರಿಗೆ “ಯಾವುದೇ ಅರ್ಹತೆ” ಇಲ್ಲ ಎಂದು ನ್ಯಾಯಮೂರ್ತಿ ಅಹ್ಮದ್ ಹೇಳಿದ್ದರು.

ನ್ಯಾಯಾಧೀಶ ಸಂಜಯ್‌ ಚೌಧರಿ ದುರ್ಗಾ ಪ್ರಸಾದ್ ಅವರ ಪ್ರಕರಣದಲ್ಲಿ ತೀರ್ಪು ಪ್ರಕಟಿಸುವಾಗ ಈ ಉಲ್ಲೇಖಗಳನ್ನು ಬಳಸಿಕೊಳ್ಳುತ್ತಾರೆ. ಕಾರಣ, ಇಲ್ಲೂ ಕೂಡ ಎಫ್‌ಐಆರನ್ನು ಕಾನೂನುಬಾಹಿರವೆಂದು ಪರಿಗಣಿಸಬೇಕು ಎಂಬ ವಾದವನ್ನು ಮುಂದಿಡಲಾಗಿತ್ತು.

ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸುವಾಗ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹೇರಲ್ಪಟ್ಟಿದ್ದ ವ್ಯಕ್ತಿಯು ದೂರುದಾರ ಕುಶಾಲ್ ಚೌಧರಿ ಅಲ್ಲವೆಂದೂ ಅವರ ಯಾವುದೇ ಸಂಬಂಧಿಕರನ್ನು ಕೂಡ ಮತಾಂತರಿಸಲಾಗಿಲ್ಲ ಎಂಬುದೂ ಸ್ಪಷ್ಟವಾಗಿದೆ ಎಂದು ನ್ಯಾಯಾಲಯ ಹೇಳುತ್ತದೆ. ಪ್ರಕರಣದ ಸಮಯದಲ್ಲಿ ದುರ್ಗಾ ಪ್ರಸಾದ್ ಇದ್ದ ಗ್ರಾಮದ ನಿವಾಸಿಯೂ ಅಲ್ಲದ ಚೌಧರಿ ಅವರಿಗೆ ಎಫ್‌ಐಆರ್ ದಾಖಲಿಸಲು ಅಧಿಕಾರವೇ ಇಲ್ಲವೆಂದು ಸ್ಪಷ್ಟವಾಗಿ ನ್ಯಾಯಾಲಯ ತೀರ್ಮಾನಿಸುತ್ತದೆ.

ದೀರ್ಘ ಕಾನೂನು ಹೋರಾಟದಲ್ಲಿ ಸಿಕ್ಕ ಗೆಲುವು
ಜನರನ್ನು ಮತಾಂತರಿಸುವ ಅಥವಾ ವಂಚನೆಯ ಆರೋಪಗಳನ್ನು ದುರ್ಗಾ ಪ್ರಸಾದ್ ನಿರಾಕರಿಸುತ್ತಾರೆ. ಯೇಸುಕ್ರಿಸ್ತನೊಂದಿಗಿನ ಅನುಭೂತಿ ಹೊಂದಿರುವುದರಿಂದ ಒಂದು ದಶಕಕ್ಕೂ ಹೆಚ್ಚು ಕಾಲ ಈ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಅವರು ಹೇಳುತ್ತಾರೆ. “ಈಗ ಆನಂದ ಮತ್ತು ಬೆಳಕು ಮೂಡಿದೆ. ಹಿಂದೆ, ಎಲ್ಲವೂ ಅಂಧಕಾರವಾಗಿತ್ತು” ಎಂದು ಅವರು ಹೇಳುತ್ತಾರೆ. ಇಂತಹ ಪ್ರಾರ್ಥನಾ ಸಭೆಗಳನ್ನು ಆಯೋಜಿಸಲು ಮತ್ತು ಜನರಿಗೆ ಅದರಲ್ಲಿ ಪಾಲ್ಗೊಳ್ಳಲು ಇರುವ ಹಕ್ಕನ್ನು ಪ್ರಸಾದ್ ಸಮರ್ಥಿಸುತ್ತಾರೆ. “ಜನರು ಪ್ರೀತಿ ಮತ್ತು ಗೌರವದ ಕಾರಣಕ್ಕಾಗಿ ಬರುತ್ತಾರೆ. ಈ ಸಭೆಗಳಿಗೆ ಹಾಜರಾಗಲು ಯಾರೂ ಯಾರನ್ನೂ ಒತ್ತಾಯಿಸುವುದಿಲ್ಲ” ಎಂದು ಜನರನ್ನು ಮತಾಂತರಗೊಳ್ಳಲು ಪ್ರೇರೇಪಿಸುತ್ತಾರೆ ಎಂಬ ಆರೋಪಗಳನ್ನು ತಳ್ಳಿಹಾಕುತ್ತಾ ಅವರು ಹೇಳುತ್ತಾರೆ. “ಯಾರು ಯಾವುದರ ಮೇಲೆ ಬೇಕಾದರೂ ನಂಬಿಕೆಯನ್ನು ಇಟ್ಟುಕೊಳ್ಳಬಹುದು. ಸಂವಿಧಾನವು ನಮಗೆ ಬೇಕಾದ ನಂಬಿಕೆಯನ್ನು ಆಯ್ದುಕೊಳ್ಳುವ ಹಕ್ಕು ನೀಡುತ್ತದೆ.”

ಈ ಕ್ರಿಮಿನಲ್ ಪ್ರಕರಣದಿಂದಾಗಿ ಕೆಲಸ ಕಳೆದುಕೊಂಡಿದ್ದರಿಂದ ಅವರ ಬದುಕು ಮತ್ತು ಹಣಕಾಸಿನ ಮೇಲೆ ದೊಡ್ಡ ಹೊಡೆತ ಬಿದ್ದಿತು. ಅಕ್ರಮ ಮತಾಂತರದ ವಿರುದ್ಧದ ಮೊಕದ್ದಮೆಯು ವಜಾಗೊಳ್ಳುವುದರಿಂದ ಅವರ ಕಾನೂನು ಹೋರಾಟ ಕೊನೆಗೊಳ್ಳುವುದಿಲ್ಲ. ಮತ್ತೂ ಕೆಲಕಾಲ ಈ ಮೂವರು ಕ್ರಿಮಿನಲ್ ಬೆದರಿಕೆಯ ಆರೋಪಗಳನ್ನು ಎದುರಿಸಿದ್ದರು. ಸೆಷನ್ಸ್ ನ್ಯಾಯಾಲಯವು ಆ ಆರೋಪವನ್ನು ವಿಚಾರಣೆಗೆ ಅರ್ಹವೆಂದು ಪರಿಗಣಿಸಿತ್ತು. ಪ್ರಾಸಿಕ್ಯೂಷನ್ ಅವರ ವಿರುದ್ಧ ಒಬ್ಬ ಸಾಕ್ಷಿಯನ್ನು ಮಾತ್ರ ಹಾಜರುಪಡಿಸಿತ್ತು. ಅದು ಬಜರಂಗದಳದ ಕಾರ್ಯಕರ್ತ ಮತ್ತು ಪ್ರಕರಣದಲ್ಲಿ ದೂರುದಾರನಾಗಿದ್ದ ಕುಶಾಲ್ ಚೌಧರಿಯಲ್ಲದೆ ಬೇರೆ ಯಾರೂ ಅಲ್ಲ.

ಸಿವಿಲ್ ನ್ಯಾಯಾಧೀಶ ನಸೀಮ್ ಅಹ್ಮದ್ ಅವರು, ಚೌಧರಿ ತನ್ನ ಮುಖ್ಯ ವಿಚಾರಣೆ ಮತ್ತು ಮರು ವಿಚಾರಣೆಯಲ್ಲಿ ನೀಡಿದ ಹೇಳಿಕೆಗಳ ನಡುವಿನ ಪ್ರಮುಖ ವಿರೋಧಾಭಾಸಗಳನ್ನು ಗಮನಿಸುತ್ತಾರೆ. ಆದ್ದರಿಂದ ಘಟನೆ ಅನುಮಾನಾಸ್ಪದವಾಗಿದೆ ಎಂದು ನ್ಯಾಯಾಧೀಶರು ತೀರ್ಪು ನೀಡುತ್ತಾರೆ. ಕೊನೆಗೆ ಚೌಧರಿ ತನ್ನ ಹೇಳಿಕೆಯನ್ನು ಹಿಂಪಡೆಯುತ್ತಾನೆ. ಸಿಂಗ್ ಅವರ ಮನೆಯಲ್ಲಿ ಸಾಮಾಜಿಕ ಕಾರ್ಯಕ್ರಮವೊಂದು ನಡೆಯುತ್ತಿತ್ತು ಮತ್ತು ಅವರು ತನಗೆ ಯಾವುದೇ ಬೆದರಿಕೆಯನ್ನು ಹಾಕಿಲ್ಲ ಎಂದು ಚೌಧರಿ ತನ್ನ ವಿಚಾರಣಾ ಅಫಿಡವಿಟ್‌ನಲ್ಲಿ ಹೇಳಿಕೊಳ್ಳುತ್ತಾನೆ. ನವೆಂಬರ್ 21, 2024ರಂದು, ನ್ಯಾಯಾಧೀಶ ಅಹ್ಮದ್ ದುರ್ಗಾ ಪ್ರಸಾದ್, ಸಿಂಗ್ ಮತ್ತು ಶಿವಕುಮಾರ್ ಅವರನ್ನು ಕ್ರಿಮಿನಲ್ ಬೆದರಿಕೆ ಆರೋಪದಿಂದಲೂ ಖುಲಾಸೆಗೊಳಿಸುತ್ತಾರೆ.
ಅನಾಮಧೇಯತೆ ಕಾಯ್ದುಕೊಳ್ಳಲು ಹೆಸರುಗಳನ್ನು ಬದಲಿಸಲಾಗಿದೆ.

You cannot copy content of this page

Exit mobile version