Home ಬ್ರೇಕಿಂಗ್ ಸುದ್ದಿ ಬಿ.ಆರ್.ಎಸ್ ಮತ್ತು ಡಿಎಂಕೆ ನಾಯಕರ ಮೇಲೆ ಐಟಿ ಇಡಿ ದಾಳಿ ; ಬಿಜೆಪಿ ಸೇಡಿನ ರಾಜಕೀಯವೇ?

ಬಿ.ಆರ್.ಎಸ್ ಮತ್ತು ಡಿಎಂಕೆ ನಾಯಕರ ಮೇಲೆ ಐಟಿ ಇಡಿ ದಾಳಿ ; ಬಿಜೆಪಿ ಸೇಡಿನ ರಾಜಕೀಯವೇ?

0

ಮಂಗಳವಾರದ ದಿನ ಆದಾಯ ತೆರಿಗೆ ಇಲಾಖೆ ಹೈದರಾಬಾದ್ ನ ಇಬ್ಬರು ಪ್ರಮುಖ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕರ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದೆ. ಹಾಗೆಯೇ ತಮಿಳುನಾಡು ಇಂಧನ ಸಚಿವ ಸೆಂಥಿಲ್ ಬಾಲಾಜಿ ಮೇಲೂ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದು ಏಕಾಏಕಿ ಬಂಧನವಾಗಿದೆ. ಈ ವೇಳೆ ಅಸ್ವಸ್ಥರಾಗಿದ್ದ ಬಾಲಾಜಿ ಅವರನ್ನು ಬುಧವಾರ ಮುಂಜಾನೆ ಚೆನ್ನೈನ ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿದೆ.

ಹೈದರಾಬಾದ್ ನಲ್ಲಿ ಏಕಕಾಲಕ್ಕೆ ಮೆಡಕ್‌ ಲೋಕಸಭಾ ಕ್ಷೇತ್ರದ ಸಂಸದ ಕೆ ಪ್ರಭಾಕರ್ ರೆಡ್ಡಿ ಮತ್ತು ಭೋಂಗಿರ್ ವಿಧಾನಸಭಾ ಕ್ಷೇತ್ರದ ಶಾಸಕ ಪೈಲ್ಲಾ ಶೇಖರ್ ರೆಡ್ಡಿ ಮೇಲೆ ದಾಳಿ ನಡೆಸಲಾಗಿದೆ. ಕೊಂಡಾಪುರದಲ್ಲಿರುವ ಸಂಸದರ ನಿವಾಸ, ಎಸ್‌ಎಲ್‌ಎನ್ ಟರ್ಮಿನಸ್ ವಿಲ್ಲಾದಲ್ಲಿ ಮುಂಜಾನೆಯಿಂದಲೇ ಶೋಧ ನಡೆಸಲಾಗುತ್ತಿದೆ.

ತೀರ್ಥ ಗ್ರೂಪ್ ಹೆಸರಿನಲ್ಲಿ ರಿಯಲ್ ಎಸ್ಟೇಟ್, ಗಣಿಗಾರಿಕೆ, ಸೌರಶಕ್ತಿ ಮತ್ತು ಲಿಥಿಯಂ ಬ್ಯಾಟರಿ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವ ಶಾಸಕ ಶೇಖರರೆಡ್ಡಿ, ಹೈದರಾಬಾದ್ ಕರ್ನಾಟಕದಲ್ಲಿ ಹಲವು ವಸತಿ ಮತ್ತು ವಾಣಿಜ್ಯ ಯೋಜನೆಗಳನ್ನು ಪೂರ್ಣಗೊಳಿಸಿದ್ದಾರೆ. ಕಂಪನಿಯು ದಕ್ಷಿಣ ಆಫ್ರಿಕಾದಲ್ಲಿ ಗಣಿಗಾರಿಕೆ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. 12 ಸ್ಥಳಗಳಲ್ಲಿ ಏಕಕಾಲಕ್ಕೆ ಐಟಿ ಶೋಧ ನಡೆಯುತ್ತಿದ್ದು, ಆದಾಯ ತೆರಿಗೆ ಪಾವತಿಯಲ್ಲಿನ ಅಕ್ರಮಗಳ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಬುಧವಾರ ಬೆಳಗ್ಗೆಯಿಂದಲೇ ಬಿಆರ್‌ಎಸ್‌ ಶಾಸಕ ಶೇಖರ್‌ ರೆಡ್ಡಿ ಮತ್ತು ಅವರ ಸಿಬ್ಬಂದಿಯ ನಿವಾಸಗಳಲ್ಲಿ ಶೋಧ ಕಾರ್ಯ ಆರಂಭಿಸಲಾಗಿದೆ. ಒಟ್ಟು 70 ತಂಡಗಳು ಈ ಶೋಧ ಕಾರ್ಯದಲ್ಲಿ ಭಾಗವಹಿಸಿವೆ. ಶೋಧ ಕಾರ್ಯಾಚರಣೆಯು ಮೂರು ದಿನಗಳ ಕಾಲ ಮುಂದುವರಿಯುವ ನಿರೀಕ್ಷೆಯಿದೆ.

ಇನ್ನು ಡಿಎಂಕೆ ಸಚಿವರಾದ ಸೆಂಥಿಲ್ ಬಾಲಾಜಿ ಅವರ ‘ಉದ್ಯೋಗ ಹಗರಣ‘ಕ್ಕೆ ಸಂಬಂಧಿಸಿದಂತೆ ಪೊಲೀಸ್ ಮತ್ತು ಇ.ಡಿ ತನಿಖೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ಮಂಗಳವಾರ ಚೆನ್ನೈ, ಕರೂರ್ ಮತ್ತು ಈರೋಡ್‌ನಲ್ಲಿ ಇರುವ ಸೆಂಥಿಲ್ ಬಾಲಾಜಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಇ.ಡಿ ಹುಡುಕಾಟವನ್ನು ಪ್ರಾರಂಭಿಸಿದೆ. ಈ ವೇಳೆ ಬಾಲಾಜಿ ಅವರ ಆರೋಗ್ಯ ಹದಗೆಟ್ಟಿತ್ತು. ಅವರಿಗೆ ಇ.ಡಿ ಅಧಿಕಾರಿಗಳು ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಮತ್ತೋರ್ವ ಡಿಎಂಕೆ ಸಚಿವ ಪಿ.ಕೆ. ಶೇಕರ್ ಬಾಬು ಆರೋಪಿಸಿದ್ದಾರೆ.

ಹಾಗೆಯೇ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕೂಡಾ ಇಡಿ ಮತ್ತು ಐಟಿ ದಾಳಿ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದು, ‘ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ ನಂತರವೂ ಸಚಿವ ಸೆಂಥಿಲ್ ಬಾಲಾಜಿ ಅವರಿಗೆ ಎದೆನೋವು ಬರುವಂತೆ ಚಿತ್ರಹಿಂಸೆ ನೀಡಿದ ಜಾರಿ ನಿರ್ದೇಶನಾಲಯದ ಉದ್ದೇಶವೇನು? ಪ್ರಕರಣಕ್ಕೆ ಅಗತ್ಯವಾದ ಕಾನೂನು ಕಾರ್ಯವಿಧಾನಗಳನ್ನು ಉಲ್ಲಂಘಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಮಾನವೀಯ ರೀತಿಯಲ್ಲಿ ವರ್ತಿಸುವುದು ಒಪ್ಪುವಂತದ್ದಲ್ಲ? ಬಿಜೆಪಿಯ ಈ ಬೆದರಿಕೆಗಳಿಗೆ ಡಿಎಂಕೆ ಮಣಿಯುವುದಿಲ್ಲ. ಭಯಪಡುವ ಅಗತ್ಯವಿಲ್ಲ. 2024ರ ಚುನಾವಣೆಯಲ್ಲಿ ಜನರೇ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಟ್ವಿಟ್ ಮಾಡಿದ್ದಾರೆ.

You cannot copy content of this page

Exit mobile version